Life Today Review: ಮೊದಲಾರ್ಧ ಪ್ರೇಮದಲ್ಲಿ ಕಳೆಯುತ್ತದೆ. ಆಮೇಲೆ ಕೊಂಚ ವಿಷಾದ. ನಂತರದ್ದು ಹಾವು ಏಣಿಯಾಟ. ಬದುಕು ಏರುಪೇರಿನ ಹಾದಿ. ಘರ್ಷಣೆಯಲ್ಲಿಯೇ ಬಹುತೇಕ ದ್ವಿತೀಯಾರ್ಧ ಮುಗಿಯುತ್ತದೆ.

ರಾಜ್

ತಾರುಣ್ಯದ ಪ್ರೇಮ ಮತ್ತು ಅಪ್ಪ ಅಮ್ಮನ ವಾತ್ಸಲ್ಯದ ಮಧ್ಯೆ ನಡೆಯುವ ತಾಕಲಾಟವೇ ಈ ಕತೆಯ ಪ್ರಧಾನ ಅಂಶ. ಕತೆ ಶುರುವಾಗುವುದು ಪ್ರೇಮದಿಂದ. ಒಬ್ಬ ಅನಾಥ, ಶಕ್ತಿಶಾಲಿ ಯುವಕನನ್ನು ಕಂಡು ಮಧ್ಯಮ ವರ್ಗದ ಕುಟುಂಬದ ಹುಡುಗಿಯೊಬ್ಬಳಿಗೆ ಪ್ರೇಮವಾಗುತ್ತದೆ. ಅವನೋ ಅಮಾಯಕ. ಪ್ರೀತಿ- ಪ್ರೇಮದಿಂದ ದೂರ ಇರುವ ದೃಢ ನಿರ್ಧಾರದ ಯುವಕ. ಅವಳು ತಾರುಣ್ಯದ ಹುಚ್ಚು ಹೊಳೆ. ಅವನನ್ನು ಪ್ರೀತಿಸುತ್ತಾಳೆ ಮತ್ತು ಪ್ರೀತಿಗೆ ಸೆಳೆಯುತ್ತಾಳೆ. ಅವನು ಅವಳ ಪ್ರೇಮದ ರಭಸಕ್ಕೆ ಸಿಕ್ಕಿದ ತರಗೆಲೆ.

ಅಲ್ಲಿಂದ ಕತೆಯಾರಂಭ. ಕಿರಣ್ ಆದಿತ್ಯ ಮತ್ತು ಲೇಖಾ ಚಂದ್ರ ಯುವ ಪ್ರೇಮಿಗಳ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದಾರೆ. ಅವಳ ತಂದೆಯ ಪಾತ್ರಧಾರಿ ತಬಲಾ ನಾಣಿ ಪ್ರವೇಶದಿಂದ ಕತೆ ಬೇರೊಂದು ತಿರುವು ಪಡೆದುಕೊಳ್ಳುತ್ತದೆ. ಮುಂದೇನು ನಡೆಯುತ್ತದೆ ಅನ್ನುವುದು ಕತೆ.

ಮೊದಲಾರ್ಧ ಪ್ರೇಮದಲ್ಲಿ ಕಳೆಯುತ್ತದೆ. ಆಮೇಲೆ ಕೊಂಚ ವಿಷಾದ. ನಂತರದ್ದು ಹಾವು ಏಣಿಯಾಟ. ಬದುಕು ಏರುಪೇರಿನ ಹಾದಿ. ಘರ್ಷಣೆಯಲ್ಲಿಯೇ ಬಹುತೇಕ ದ್ವಿತೀಯಾರ್ಧ ಮುಗಿಯುತ್ತದೆ. ಇದೊಂದು ಪ್ರೇಮ, ವಿರಹ, ವಿಧಿ ವಿಪರ್ಯಾಸದ ಕತೆ. ತುಂಬಾ ಹೊಸತು ಅಂತೇನೂ ಇಲ್ಲ. ಇರುವ ಕತೆಯನ್ನು ಅಚ್ಚುಕಟ್ಟಾಗಿ ಹೇಳಿದ್ದಾರೆ. ಅದಕ್ಕೆ ಪಾತ್ರಧಾರಿಗಳು ಸಾಥ್ ನೀಡಿದ್ದಾರೆ.

ಚಿತ್ರ: ಲೈಫ್‌ ಟುಡೇ

ನಿರ್ದೇಶನ: ಕಾಂತ ಕನ್ನಲ್ಲಿ

ತಾರಾಗಣ: ಕಿರಣ್‌ ಆದಿತ್ಯ, ಲೇಖಾ ಚಂದ್ರ, ತಬಲಾ ನಾಣಿ, ರಥರ್ವ್ ಪೊನ್ನಣ್ಣ, ಜಗಪ್ಪ

ರೇಟಿಂಗ್: 3

ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ನೂರು ಬಾರಿ ಆಲೋಚಿಸಬೇಕು ಅನ್ನುವುದು ಒಂದು ಸಂದೇಶ. ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಇರಬೇಕು ಅನ್ನುವುದು ಮತ್ತೊಂದು ಸಂದೇಶ. ಇವೆರಡು ಅಂಶಗಳ ಮಧ್ಯೆ ಕತೆ ಇದೆ. ಪ್ರಯತ್ನ ಉತ್ತಮ.