ಈ ಎರಡು ಸಾವುಗಳ ಹಿಂದೆ ಏನಾಗಿರುತ್ತದೆ ಎನ್ನುವ ರಹಸ್ಯಗಳು ಈಗ ತೆರೆದುಕೊಳ್ಳುತ್ತದೆ. ಒಂದು ಕೊಲೆಗೆ ಆರೋಪಿ, ಮತ್ತೊಂದು ಕೊಲೆಗೆ ಸಾಕ್ಷಿ ಆಗಿರುವ ಪ್ರವೀಣ್‌ನನ್ನು ತನಿಖೆ ಮಾಡುವಾಗ ಈ ‘ಅನಾಮಧೇಯ ಅಶೋಕ್ ಕುಮಾರ್’ ಯಾರು ಎನ್ನುವ ಕುತೂಹಲ ಹುಟ್ಟಿಕೊಳ್ಳುತ್ತದೆ.
ಆರ್.ಕೆ.
ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆ ತನಕ ನಡೆಯುವ ಕತೆ ಇದು. ಈ 12 ಗಂಟೆಗಳ ಅವಧಿಯಲ್ಲಿ ಏನೆಲ್ಲಾ ಸಂಭವಿಸುತ್ತದೆ ಎಂಬುದು ಚಿತ್ರದ ಕತೆ. ಪ್ರಜ್ಞೆ ತಪ್ಪಿಬಿದ್ದಿದ್ದ ಪತ್ರಕರ್ತ ಪ್ರವೀಣ್ ರಾಜಶೇಖರ್ ಅವರಿಗೆ ಪ್ರಜ್ಞೆ ಬಂದಾಗ ತಾನು ಸಂದರ್ಶನ ಮಾಡುವುದಕ್ಕೆ ಬಂದಿದ್ದ ಪ್ರಖ್ಯಾತ ಕ್ರಿಮಿನಲ್ ಲಾಯರ್ ಆನಂದ್ ಭಟ್ ಕೊಲೆ ಆಗಿರುತ್ತದೆ. ಈ ನಡುವೆ ಅದೇ ಜಾಗದಲ್ಲಿ ತನ್ನ ಆತ್ಮ ರಕ್ಷಣೆಗಾಗಿ ಒಬ್ಬನನ್ನು ಕೊಲೆ ಮಾಡುತ್ತಾನೆ. ಪ್ರವೀಣ್‌ನಿಂದ ಕೊಲೆಯಾದವ ಮಾಜಿ ಪೊಲೀಸ್ ಕಮಿಷನರ್.
ಈ ಎರಡು ಸಾವುಗಳ ಹಿಂದೆ ಏನಾಗಿರುತ್ತದೆ ಎನ್ನುವ ರಹಸ್ಯಗಳು ಈಗ ತೆರೆದುಕೊಳ್ಳುತ್ತದೆ. ಒಂದು ಕೊಲೆಗೆ ಆರೋಪಿ, ಮತ್ತೊಂದು ಕೊಲೆಗೆ ಸಾಕ್ಷಿ ಆಗಿರುವ ಪ್ರವೀಣ್‌ನನ್ನು ತನಿಖೆ ಮಾಡುವಾಗ ಈ ‘ಅನಾಮಧೇಯ ಅಶೋಕ್ ಕುಮಾರ್’ ಯಾರು ಎನ್ನುವ ಕುತೂಹಲ ಹುಟ್ಟಿಕೊಳ್ಳುತ್ತದೆ. ಇದು ಗೊತ್ತಾಗಬೇಕಾದರೆ ನೀವು ಚಿತ್ರ ನೋಡಬೇಕು. ನಿರ್ದೇಶಕ ಸಾಗರ್ ಕುಮಾರ್ ಮೊದಲ ಪ್ರಯತ್ನದಲ್ಲೇ ತಂತ್ರ- ಪ್ರತಿತಂತ್ರದ ಕತೆಯನ್ನು ಕಟ್ಟಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಆಗಾಗ ನಿಧಾನ ಎನಿಸಿದರೂ ಸಂಭಾಷಣೆ, ಸನ್ನಿವೇಶ ಹಾಗೂ ಇರುವ ಕೆಲವೇ ಪಾತ್ರಗಳನ್ನು ತಮ್ಮ ಕತೆಗೆ ಅಗತ್ಯಕ್ಕೆ ತಕ್ಕಷ್ಟು ಬಳಸಿಕೊಂಡಿರುವುದು ಚಿತ್ರದ ಪ್ಲಸ್ ಪಾಯಿಂಟ್.
ಚಿತ್ರ: ಅನಾಮಧೇಯ ಅಶೋಕ್ ಕುಮಾರ್
ತಾರಾಗಣ: ಕಿಶೋರ್, ಸುಧೀಂದ್ರನ್ ನಾಯರ್, ಹರ್ಷಿಲ್ ಕೌಶಿಕ್
ನಿರ್ದೇಶನ: ಸಾಗರ್ ಕುಮಾರ್
ರೇಟಿಂಗ್: 3
ಪ್ರವೀಣ್ ರಾಜಶೇಖರ್ ಪಾತ್ರಧಾರಿ ದುನಿಯಾ ಕಿಶೋರ್ ಹಾಗೂ ತನಿಖಾಧಿಕಾರಿ ಪಾತ್ರಧಾರಿ ಹರ್ಷಿಲ್ ಕೌಶಿಕ್ ಈ ಇಬ್ಬರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದ್ಭುತ ಚಿತ್ರವಲ್ಲದಿದ್ದರೂ, ನೋಡಿಸಿಕೊಳ್ಳುವ ಗುಣವಂತೂ ಇದೆ. ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಚಿತ್ರ ಮಜಾ ಕೊಡುತ್ತದೆ.
