Film Review: ಟಾಮ್ ಆಂಡ್ ಜೆರ್ರಿ
ತಾವು ಅಂದುಕೊಂಡಂತೆ, ತಾವು ಕನಸು ಕಟ್ಟಿಕೊಂಡಂತೆ, ಸಮಾಜ- ಮನೆ, ಸಂಬಂಧಗಳ ಜವಾಬ್ದಾರಿಯೂ ಇಲ್ಲದೆ ಒಂದು ರೀತಿಯಲ್ಲಿ ಅಧುನಿಕ ಜಂಗಮರಂತೆ ಬದುಕಬೇಕು ಎಂದುಕೊಳ್ಳುವುದು ಈಗಿನ ಜನರೇಷನ್‌ನ ಬಹಳಷ್ಟುಜನರ ಯೋಚನೆ.
- ಆರ್. ಕೇಶವಮೂರ್ತಿ
ಇಂಥವರನ್ನು ಪ್ರತಿನಿಧಿಸುವ ನಾಯಕ, ನಾಯಕಿ, ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುವ ಹೆತ್ತವರು, ಪಯಣದ ದಾರಿಯಲ್ಲಿ ವಿಚಾರಗಳ ಮುಖಾಮುಖಿ ಆದರೆ ಹೇಗಿರುತ್ತದೆ ಎಂಬುದೇ ‘ಟಾಮ್ ಆಂಡ್ ಜೆರ್ರಿ’ ಚಿತ್ರದ ಒಳಸುಳಿ. ಕತೆಯನ್ನು ಒಂದು ಸಾಲಿನಲ್ಲಿ ಹೇಳಿದಷ್ಟುಸರಳವಾಗಿಲ್ಲ ಇಡೀ ಸಿನಿಮಾ ಎಂಬುದು ಈ ಚಿತ್ರದ ಪ್ಲಸ್ ಹಾಗೂ ಮೈನಸ್. ಆದರೂ ಕಾಮಿಕ್ ಟೈಟಲ್ ಇಟ್ಟುಕೊಂಡರೂ ತೀರಾ ಕಾಮಿಡಿ ಕತೆ ಹೇಳದೆ ಪ್ರಸ್ತುತ ಯಂಗ್ ಜನರೇಷನ್‌ನ ಯೋಚನೆಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿರುವುದು ನಿರ್ದೇಶಕ ರಾಘವ್ ವಿನಯ್ ಅವರ ಪ್ರತಿಭೆಗೆ ಹಿಡಿದ ಸಾಕ್ಷಿ.
ತಾರಾಗಣ: ನಿಶ್ಚಿತ್ ಕರೋಡಿ, ಚೈತ್ರಾರಾವ್, ಜೈಜಗದೀಶ್, ತಾರಾ ಅನುರಾಧಾ, ರಾಕ್‌ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು, ಸಂಪತ್ ಮೈತ್ರೇಯ
ನಿರ್ದೇಶನ: ರಾಘವ್ ವಿನಯ್
ನಿರ್ಮಾಣ: ರಾಜು ಶೇರಿಗಾರ್
ಸಂಗೀತ: ಮ್ಯಾಥ್ಯೂಸ್ ಮನು
ಛಾಯಾಗ್ರಹಣ: ಸಂಕೇತ್
ಸ್ಟಾರ್ 3
ಚಿತ್ರದ ಮೊದಲ ಭಾಗ ತೀರಾ ಕಾಂಪ್ಲಿಕೇಟ್ ಆಗಿ ಸಾಗಿದರೆ, ವಿರಾಮದ ನಂತರ ಚಿತ್ರಕಥೆಗೆ ಚುರುಕತನ ಸೇರಿಕೊಳ್ಳುತ್ತದೆ. ‘ಸೆಲೆಬ್ರಿಟಿಯಾಗೋಣ ಅಂದುಕೊಂಡೆ ಆದರೆ, ಇರೋ ಬದುಕನ್ನೇ ಸೆಲೆಬ್ರೇಟ್ ಮಾಡಬೇಕು ಅಂತ ಗೊತ್ತಿರಲಿಲ್ಲ. ಶ್ರೀಮಂತನಾಗಬೇಕು ಅಂದುಕೊಂಡೇ ಇರೋ ಜೀವನವನ್ನೇ ಅನುಭವಿಸೋದು ಶ್ರೀಮಂತಿಕೆ ಅಂದುಕೊಳ್ಳಲಿಲ್ಲ’ ಎನ್ನುವಂತಹ ಸಂಭಾಷಣೆಗಳ ಮೂಲಕ ಬೋಧನೆಯ ನೆರಳಿನಲ್ಲೇ ಬದುಕಿನ ದಾರಿಗಳನ್ನು ಹುಡುಕುತ್ತಾರೆ ನಿರ್ದೇಶಕರು. ಇಬ್ಬರು ಅನಾಥ ಮಕ್ಕಳು. ಇವರೇ ನಾಯಕ ಮತ್ತು ನಾಯಕಿ. ಇಬ್ಬರು ಶ್ರೀಮಂತರ ಕುಟುಂಬಗಳ ಕುಡಿಗಳಾಗುವುದು, ನಾಯಕನ ಕುಟುಂಬ ಆರ್ಥಿಕ ನಷ್ಟಅನುಭವಿಸಿ ಬೀದಿಗೆ ಬರುವುದು, ಇದರಿಂದ ಬೇಸತ್ತು ನಾಯಕ ಹೆತ್ತವರ ಮೇಲೆ ರೇಗಾಡುವುದು, ನಾಯಕನ ತಾಯಿ ಸಾವು, ಈ ನಡುವೆ ಆಗಾಗ ಬರುವ ಅರೆಹುಚ್ಚನ ಜೀವನ ರಹಸ್ಯಗಳು... ಇವೆಲ್ಲವೂ ‘ಟಾಮ್ ಆಂಡ್ ಜೆರ್ರಿ’ಯ ಪ್ರಮುಖ ಅಂಶಗಳು. ತಾಯಿ ಪಾತ್ರಧಾರಿ ತಾರಾ ಅವರ ನಟನೆ ಚಿತ್ರಕ್ಕೆ ಪ್ರಬುದ್ಧತೆ ತಂದುಕೊಟ್ಟರೆ ನಾಯಕ ನಿಶ್ಚಿತ್ ಕರೋಡಿ ಹಾಗೂ ಚೈತ್ರಾರಾವ್ ಜೋಡಿ ಮುದ್ದಾಗಿ ಕಾಣಿಸಿಕೊಂಡಿದೆ. ಸಂಪತ್ ಮೈತ್ರೇಯ ಪಾತ್ರ ಕತೆ ಪೂರಕವಾಗಿದೆ. ಛಾಯಾಗ್ರಾಹಣ ಹಾಗೂ ಸಂಭಾಷಣೆಗಳು ನಿರ್ದೇಶಕನ ಕನಸಿಗೆ ಬೆಂಬಲವಾಗಿ ನಿಲ್ಲುತ್ತವೆ.
Tom & Jerry: ಪ್ರೀತಿ ನೆಪದಲ್ಲಿ ಅಧ್ಯಾತ್ಮದ ಶೋಧ, ಇದು ಖಾಲಿ ರೊಮ್ಯಾನ್ಸ್ ಅಲ್ಲಮೊದಲ ನಿರ್ದೇಶನದ ಚಿತ್ರದಲ್ಲೇ ಎಲ್ಲವೂ ಹೇಳಿಬಿಡಬೇಕು ಎನ್ನುವ ಧಾವಂತ ಕಡಿಮೆ ಮಾಡಿಕೊಂಡು ಕತೆ ರೂಪಿಸಿದ್ದರೆ ‘ಟಾಮ್ ಆಂಡ್ ಜೆರ್ರಿ’ ಸಿನಿಮಾ ಮತ್ತಷ್ಟುಸರಳ ಮತ್ತು ಸಾಮಾನ್ಯ ಪ್ರೇಕ್ಷಕರ ಸಿನಿಮಾ ಆಗುವ ಸಾಧ್ಯತೆ ಇತ್ತು. ಇದರ ನಡುವೆಯೂ ಹೊಸತನದ ಆಲೋಚನೆಯಿಂದ ಕೂಡಿದ ಈ ಚಿತ್ರವನ್ನು ನೋಡಲು ಅಡ್ಡಿ ಇಲ್ಲ.