ಚಿತ್ರ ವಿಮರ್ಶೆ: ತಲಾಕ್ ತಲಾಕ್ ತಲಾಕ್
ಆಚರಣೆ, ನಂಬಿಕೆ ಮತ್ತು ಸಂಪ್ರದಾಯಗಳನ್ನು ಅವರವರ ಮೂಗಿನ ನೇರಕ್ಕೆ ತಪ್ಪಾಗಿ ಅರ್ಥ ಮಾಡಿಕೊಂಡರೆ ಏನೆಲ್ಲ ಕಷ್ಟಗಳು ಎದುರಿಸಬೇಕಾಗುತ್ತದೆ ಎನ್ನುವ ಕತೆಯನ್ನು ಹೇಳುವ ಚಿತ್ರವೇ ‘ತಲಾಕ್ ತಲಾಕ್ ತಲಾಕ್’.
ಆರ್. ಕೇಶವಮೂರ್ತಿ
ಒಂದು ಮಧ್ಯಮ ವರ್ಗದ ಮುಸ್ಲಿಂ ಕುಟುಂಬದಲ್ಲಿ ತಲಾಕ್ ಏನೆಲ್ಲ ತಿರುವುಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದು ಈ ಚಿತ್ರದಲ್ಲಿ ನೋಡಬಹುದು. ಸಾಕ್ಷ್ಯ ಚಿತ್ರ ಅಥವಾ ಒಂದು ವಿಷಯವನ್ನು ಗಂಭೀರವಾಗಿ ದಾಖಲಿಸುವಂತೆ ತೋರುವ ಈ ಚಿತ್ರದ ಕತೆ ಎಲ್ಲರಿಗೂ ಗೊತ್ತಿರುವುದು. ಮೂರು ಸಲ ತಲಾಕ್ ತಲಾಕ್ ತಲಾಕ್ ಎನ್ನುವ ಮೂಲಕ ಪತ್ನಿಗೆ ಪತಿ ವಿಚ್ಚೇದನ ಕೊಡುತ್ತಾರೆ.
ತಾರಾಗಾಣ: ಸುಚೇತನ್ ಸ್ವರೂಪ್ ವೈದ್ಯನಾಥ್, ಆರ್‌ಜೆ ನೇತ್ರ, ಶ್ರೀನಿವಾಸಮೂರ್ತಿ, ಶಿವಮೊಗ್ಗ ವೈದ್ಯ, ರವಿ ಭಟ್, ಲಕ್ಷ್ಮೀ, ಸೌಜನ್ಯ ಶೆಟ್ಟಿ, ಪಲ್ಲವಿ, ಶಮಂತ್ ವೈದ್ಯ
ನಿರ್ದೇಶನ: ಎನ್ ವೈದ್ಯನಾಥ್
ಛಾಯಾಗ್ರಾಹಣ: ಅಶೋಕ್ ಕಶ್ಯಪ್
ಸಂಗೀತ: ಪ್ರವೀಣ್ ಗೋಡ್ಕಿಂಡಿ
ಪ್ರೀತಿಸಿ ಮದುವೆಯಾದ ವ್ಯಕ್ತಿ ತನ್ನ ಪತ್ನಿಗೆ ಯಾವುದೋ ಸಿಟ್ಟಿನಲ್ಲಿ ಹೀಗೆ ತಲಾಕ್ ಹೇಳಿ ದೂರ ಆದ ಮೇಲೆ ಆತನಿಗೆ ಗೊತ್ತಾಗುವುದು, ತನ್ನ ಪತ್ನಿ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು. ಹೀಗಾಗಿ ಮತ್ತೆ ತಲಾಕ್ ಕೊಟ್ಟವಳನ್ನೇ ನಿಖಾ ಮಾಡಿಕೊಳ್ಳುವುದಕ್ಕೆ ಮುಂದಾಗುತ್ತಾನೆ. ಆದರೆ, ಇದಕ್ಕೆ ಧರ್ಮ ಗುರುಗಳು ಒಪ್ಪುವುದಿಲ್ಲ. ಒಮ್ಮೆ ವಿಚ್ಚೇದನ ಮಾಡಿಕೊಳ್ಳವಳನ್ನೇ ಮದುವೆ ಆಗಬೇಕು ಎಂದರೆ ನಿಖಾ ಹಾಲಲ್ ಮೂಲಕ ಕೈ ಹಿಡಿಯಬಹುದು ಎನ್ನುತ್ತಾರೆ ಧರ್ಮಗುರುಗಳು. ಅಂದರೆ ತಾನು ತಲಾಕ್ ಕೊಟ್ಟಮಾಜಿ ಪತ್ನಿಯನ್ನು ಬೇರೊಬ್ಬನಿಗೆ ಕೊಟ್ಟು ಮದುವೆ ಮಾಡಿಸಿ ಆತನಿಂದ ತಲಾಕ್ ಕೊಡಿಸಿದ ಮೇಲೆ ಮೊದಲಿನ ಪತಿ ಮದುವೆ ಆಗುವ ಪದ್ಧತಿ. ನಿಖಾ ಹಾಲಲ್ ಮೂಲಕ ವಿಚ್ಚೇದನ ಕೊಟ್ಟವಳನ್ನೇ ಮತ್ತೆ ವರಿಸಿದ ಮೇಲೆ ಏನೆಲ್ಲ ಆಗುತ್ತದೆ ಎಂಬುದು ಚಿತ್ರದ ಕತೆ.
ಆದರೆ, ಒಂದು ಸಂಪ್ರಾದಾಯಿಕ ಆಚರಣೆಯನ್ನು ಕೆಲವರು ಹೇಗೆಲ್ಲ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಜತೆಗೆ ತಲಾಕ್ ಹಾಗೂ ನಿಖಾ ಹಾಲಲ್ ಪದ್ಧತಿಯನ್ನು ಹೇಗೆ ತಪ್ಪಾಗಿ ಗ್ರಹಿಸಿಕೊಳ್ಳುತ್ತಿದ್ದಾರೆ ಎಂದು ತಿಳಿ ಹೇಳುವ ಮೂಲಕ ಚಿತ್ರ ಮುಕ್ತಾಯಗೊಳ್ಳುತ್ತಾರೆ. ಈ ನಡುವೆ ಮುಸ್ಲಿಂ ಕುಟುಂಬದ ನೋವು, ಸಂಕಷ್ಟ, ಸಮಾಜದ ಚುಚ್ಚು ಮಾತುಗಳು, ಹೆಣ್ಣಿನ ಅಂತರಂಗ, ಕುಟುಂಬದವರಿಗೆ ಆಗುವ ಅವಮಾನ, ಸಂಬಂಧಗಳ ನಡುವೆ ನುಸುಳುವ ಅನುಮಾನಗಳು... ಹೀಗೆ ಎಲ್ಲ ಅಂಶಗಳು ಕತೆಯಲ್ಲಿ ಬಂದು ಹೋಗುತ್ತವೆ. ಎಲ್ಲವನ್ನೂ ಮಾತಿನ ಕಟ್ಟೆಯಲ್ಲೇ ತೆರೆದಿಡುತ್ತಾರೆ ನಿರ್ದೇಶಕರು. ಸುಚೇತನ್ ಸ್ವರೂಪ್ ವೈದ್ಯನಾಥ್ ಹಾಗೂ ಆರ್‌ಜೆ ನೇತ್ರ ಜೋಡಿಯ ಮೂಲಕ ಇಜೀ ಕತೆ ಸಾಗುತ್ತದೆ. ತಲಾಕ್ ಎಂದರೆ ಏನು, ನಿಖಾ ಹಾಲಲ್ ಪದ್ಧತಿ ಬಗ್ಗೆ ತಿಳಿಯಬೇಕು ಎಂದರೆ ಸಿನಿಮಾ ನೋಡಬಹುದು.
ಆರ್‌ಜೆ ನೇತ್ರ ನಟನೆಯ ತಲಾಕ್ ತಲಾಕ್ ತಲಾಕ್; ವೈದ್ಯನಾಥ್ ನಿರ್ದೇಶನ, ಸುಭಾಷಿಣಿ ನಿರ್ಮಾಣ!
ಎಲ್ಲ ಕಲಾವಿದರು ನಿರ್ದೇಶಕರ ಅಣತಿಯಂತೆ ತೆರೆ ಮೇಲೆ ಬಂದು ಹೋಗುತ್ತಾರೆ. ಹಿರಿಯ ನಟ ಶ್ರೀನಿವಾಸ್‌ಮೂರ್ತಿ ಅವರು ಚಿತ್ರದ ಉದ್ದೇಶವನ್ನು ತೆರೆಡುವ ಪಾತ್ರದಲ್ಲಿ ಬಂದು ಗಮನ ಸೆಳೆಯುತ್ತಾರೆ. ಪ್ರವೀಣ್ ಗೋಡ್ಕಿಂಡಿ ಹಿನ್ನೆಲೆ ಸಂಗೀತ ಹಾಗೂ ಅಶೋಕ್ ಕಶ್ಯಪ್ ಛಾಯಾಗ್ರಾಹಣ ಚಿತ್ರದ ತಾಂತ್ರಿಕತೆಯ ಸೊಬಗನ್ನು ಹೆಚ್ಚಿಸುತ್ತದೆ.