ಆರ್‌ಜೆ ನೇತ್ರ ನಟನೆಯ ತಲಾಕ್ ತಲಾಕ್ ತಲಾಕ್; ವೈದ್ಯನಾಥ್ ನಿರ್ದೇಶನ, ಸುಭಾಷಿಣಿ ನಿರ್ಮಾಣ!
ಬಿಡುಗಡೆಗೆ ಸಜ್ಜಾಗಿರುವ ‘ತಲಾಕ್ ತಲಾಕ್ ತಲಾಕ್’ ಚಿತ್ರತಂಡ ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂತು. ಹಿರಿಯ ನಿರ್ದೇಶಕ ಎನ್ ವೈದ್ಯನಾಥ್ ನಿರ್ದೇಶನದ ಈ ಚಿತ್ರವನ್ನು ನಿರ್ದೇಶಕರ ಜತೆ ಸೇರಿ ಎಸ್ ಎಸ್ ಸುಭಾಷಿಣಿ ಅವರು ನಿರ್ಮಿಸಿದ್ದಾರೆ.
ಸುಚೇತನ್ ಸ್ವರೂಪ್ ವೈದ್ಯನಾಥ್, ಸುನೇತ್ರ ನಾಗರಾಜ್, ರವಿ ಭಟ್, ಶಿವಮೊಗ್ಗ ವೈದ್ಯ, ಆರ್ ಜೆ ನೇತ್ರ, ವೀಣಾ ಸುಂದರ್, ಕೆ ವಿ ಮಂಜಯ್ಯ ಚಿತ್ರದಲ್ಲಿ ನಟಿಸಿದ್ದಾರೆ.
ಆರ್‌ಜೆ ನೇತ್ರಾ ಧ್ವನಿ ಕೇಳಿರುತ್ತೀರಿ, ಆದ್ರೆ ಅವ್ರು ಹೇಗಿದ್ದಾರೆ ನೋಡಿದ್ದೀರಾ?
ಮೊದಲಿಗೆ ನಿರ್ದೇಶಕ ವೈದ್ಯನಾಥ್ ಮಾತಿಗೆ ನಿಂತರು. ‘ಸಾಕಷ್ಟುಕಟ್ಟಪಟ್ಟು ಪ್ರೀತಿಯಿಂದ ರೂಪಿಸಿರುವ ಸಿನಿಮಾ ಇದಾಗಿದ್ದು, ಚಿತ್ರೀಕರಣ ಮುಗಿಸಿದೆ. ಹೀಗಾಗಿ ಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಒಂದು ಮಧ್ಯಮ ವರ್ಗದ ಮುಸ್ಲಿಂ ಕುಟುಂಬದಲ್ಲಿ ನಡೆಯುವ ಕತೆಯನ್ನು ಈ ಚಿತ್ರದ ಮೂಲಕ ಹೇಳಿದ್ದೇನೆ. ಒಮ್ಮೆ ತಲಾಕ್ ಪಡೆದುಕೊಂಡ ಜೋಡಿ ಮತ್ತೆ ಜತೆಯಾಗಿ ಜೀವನ ಮಾಡಲು ಹೊರಟಾಗ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎಂಬುದು ಚಿತ್ರದ ಪ್ರಧಾನ ಅಂಶಗಳು’ ಇದು ನಿರ್ದೇಶಕರು ಚಿತ್ರದ ಬಗ್ಗೆ ಕೊಟ್ಟವಿವರಣೆ. ಪ್ರವೀಣ್ ಗೋಡ್ಕಿಂಡಿ ಸಂಗೀತ, ಅಶೋಕ್ ಕಶ್ಯಪ್ ಕ್ಯಾಮೆರಾ ಚಿತ್ರಕ್ಕಿದೆ.
‘ಈ ಚಿತ್ರದಲ್ಲಿ ನನ್ನ ಬಹಳ ಮುಖ್ಯವಾದ ಪಾತ್ರ. ಒಂದು ಒಳ್ಳೆಯ ಕತೆಗೆ ಜತೆಯಾದ ಖುಷಿ ಇದೆ. ಸದ್ಯದಲ್ಲೇ ತೆರೆ ಮೇಲೆ ಈ ಚಿತ್ರವನ್ನು ನೋಡುವ ಕುತೂಹಲ ಹೆಚ್ಚಾಗಿದೆ’ ಎಂದರು ಆರ್‌ಜೆ ನೇತ್ರ. ಶಿವಮೊಗ್ಗ ವೈದ್ಯ ಅವರದ್ದು ಕತೆಗೆ ಪೂರಕವಾದ ಪಾತ್ರ. ರಂಗಭೂಮಿಯ ಹಿನ್ನೆಲೆಯಿಂದ ಬಂದ ಅವರು ‘ತಲಾಕ್ ತಲಾಕ್ ತಲಾಕ್’ನಲ್ಲಿ ಮಹತ್ವದ ಪಾತ್ರ ಮಾಡಿದ್ದಾರಂತೆ.