Asianet Suvarna News Asianet Suvarna News

ಚಿತ್ರ ವಿಮರ್ಶೆ: ನಾನೊಂಥರ

ಸಿನಿಮಾ ಅರ್ಧ ಮುಗಿದು ಕಡೆಯ ಘಟ್ಟಕ್ಕೆ ತಲುಪುವ ವೇಳೆಗೆ ನಾಯಕಿ ರಕ್ಷಿಕಾ ನಾಯಕನ ತಂದೆಯ ಮುಂದೆ ನಿಂತು ‘ನಿಮ್ಮ ಮಗನ ಎದೆಯಲ್ಲಿ ಪ್ರೀತಿ ಇಲ್ಲ, ಅಲ್ಲಿ ಇರುವುದು ಕೇವಲ ಸಿಗರೇಟು, ಎಣ್ಣೆ ಮಾತ್ರ’ ಎಂದು ದುಃಖದಿಂದ ಹೇಳುತ್ತಾಳೆ. ಈ ಮಾತು ಅಪ್ಪಟ ಸತ್ಯ. ಕೇವಲ ನಾಯಕನ ಎದೆಯಲ್ಲಿ ಮಾತ್ರವಲ್ಲ ಇಡೀ ಚಿತ್ರದ ತುಂಬೆಲ್ಲಾ ಇರುವುದು ಕೇವಲ ಸಿಗರೇಟು ಮತ್ತು ಎಣ್ಣೆಯ ಘಾಟು

Kannada movie nanonthara film review vcs
Author
Bangalore, First Published Dec 19, 2020, 9:43 AM IST

ಕೆಂಡಪ್ರದಿ

ಮೂರು ಮುಕ್ಕಾಲು ಹೊತ್ತು ಕುಡಿದುಕೊಂಡು ಸುತ್ತಾಡುವ ನಾಯಕನಿಗೆ ಒಂದು ಹಂತದಲ್ಲಿ ಪ್ರೀತಿಯಾಗುತ್ತದೆ. ಅಲ್ಲಿಂದಾದರೂ ಆತನ ಬದುಕು ತಿರುವು ಪಡೆದುಕೊಳ್ಳುತ್ತದೆ ಎಂದು ಸಾಮಾನ್ಯವಾದ ಲೆಕ್ಕಾಚಾರ ಹಾಕಿಕೊಂಡರೆ ಅದು ತಪ್ಪಾಗುತ್ತದೆ. ಯಾಕೆಂದರೆ ಇದು ಅದಕ್ಕೂ ಮೀರಿದ ಸಿನಿಮಾ. ಅಷ್ಟರ ಮಟ್ಟಿಗೆ ನಿರ್ದೇಶಕ ಸಾಮಾನ್ಯವಾದ ಹಾದಿ ಬಿಟ್ಟು ತಮ್ಮದೇ ಹಾದಿ ತುಳಿದಿದ್ದಾರೆ. ಕುಡಿಯುವ, ಸಿಗರೇಟು ಸೇದುವ ಗಂಡನೇ ಬೇಡ ಎಂದುಕೊಂಡಿದ್ದ ನಾಯಕಿಗೆ ಕಂಠಪೂರ್ತಿ ಕುಡಿಯುವ ಗಂಡೇ ಸಿಗುತ್ತಾನೆ. ಅವನನ್ನು ಬದಲಾಯಿಸುವಲ್ಲಿ ನಾಯಕಿ ಯಶ ಕಾಣುತ್ತಾಳಾ, ಇಲ್ಲವಾ, ಚಿತ್ರ ಯಾವ ಘಟ್ಟಕ್ಕೆ ಹೋಗಿ ಕೊನೆಯಾಗುತ್ತದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಸಿನಿಮಾ ನೋಡಬೇಕು.

ತಾರಾಗಣ: ತಾರಕ್‌ ಶೇಖರಪ್ಪ, ರಕ್ಷಿಕಾ, ದೇವರಾಜ್‌, ಜೈಸನ್‌, ರಾಕ್‌ಲೈನ್‌ ಸುಧಾಕರ್‌

ನಿರ್ದೇಶನ: ರಮೇಶ್‌ ಕಗ್ಗಲ್‌

ನಿರ್ಮಾಣ: ಜಾಕ್ವೆಲಿನ್‌

ಸಂಗೀತ: ಸುನೀಲ್‌ ಸ್ಯಾಮ್ಯುಯಲ್‌

ಛಾಯಾಗ್ರಹಣ: ಸುದೀಪ್‌

ಸಂಕಲನ: ಸತೀಶ್‌ ಚಂದ್ರಯ್ಯ

ರೇಟಿಂಗ್‌: ***

ನಾಲ್ಕಾರು ಫೈಟ್‌ಗಳು, ನಾಲ್ಕು ಹಾಡುಗಳು, ಸಾಮಾನ್ಯವಾದ ಕತೆಗೆ ತಮ್ಮ ಪರಿಧಿಯ ಒಳಗೇ ಒಳ್ಳೆಯ ಚೌಕಟ್ಟು ಹಾಕಿಕೊಂಡು ತೆರೆಗೆ ಬಂದಿರುವ ಚಿತ್ರ ನಾನೊಂಥರ. ನಾಯಕ ತಾರಕ್‌ ಕಟ್ಟುಮಸ್ತಾದ ಮೈಕಟ್ಟು, ಒಳ್ಳೆಯ ಡ್ಯಾನ್ಸ್‌, ಫೈಟ್‌ಗೆ ಇಷ್ಟವಾಗುತ್ತಾರೆ. ನಟನೆಯಲ್ಲಿ ಇನ್ನೂ ಪಕ್ವವಾಗಬೇಕು. ಇನ್ನುಳಿದಂತೆ ಇಡೀ ತಾರಾಗಣ ಕತೆಗೆ ಜೀವ ತುಂಬುವ ಪ್ರಯತ್ನ ಮಾಡುತ್ತಾ ನೋಡುಗನನ್ನು ತಲುಪುತ್ತಾರೆ. ಇಡೀ ಚಿತ್ರ ಸೀಮಿತವಾದ ವೃತ್ತದೊಳಗೇ ಸುತ್ತುತ್ತಾ ಹೋಗುತ್ತದೆ ಎನ್ನುವುದು ಕೊಂಚ ಸಹನೆ ಪರೀಕ್ಷೆ ಮಾಡಿದರೂ ನಡುವಲ್ಲಿ ಹಾಡುಗಳು, ಫೈಟ್‌ಗಳು, ತಿರುವುಗಳು ಬಂದು ಕುತೂಹಲ ಕಾಪಿಟ್ಟುಕೊಳ್ಳುವಂತೆ ಮಾಡುತ್ತವೆ. ತಮ್ಮ ಶಕ್ತಿಯ ಮಿತಿಯಲ್ಲಿ ನಿರ್ಮಾಪಕರೂ ಚಿತ್ರವನ್ನು ಅಂದಗಾಣಿಸುವಲ್ಲಿ ಶ್ರಮಿಸಿದ್ದಾರೆ. ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ದೇವರಾಜ್‌ ಮತ್ತು ದಿ. ರಾಕ್‌ಲೈನ್‌ ಸುಧಾಕರ್‌ ಅವರು ಮುಖ್ಯವಾದ ಪಾತ್ರಗಳಲ್ಲಿ ಕಾಣಿಸಿಕೊಂಡು ಇಷ್ಟವಾಗುತ್ತಾರೆ. ನಾಯಕಿ ರಕ್ಷಿಕಾ ವೈದ್ಯರಾಗಿ ಇಡೀ ಕತೆಯ ಆಧಾರ ಸ್ಥಂಭವಾಗಿ ನಿಲ್ಲುತ್ತಾರೆ.

ಪುರ್‌ಸೋತ್‌ ಮಾಡ್ಕೊಂಡು ಪುರ್‌ಸೋತ್‌ರಾಮ ಸಿನಿಮಾ ನೋಡಿ...! 

ಕೆಲವೊಮ್ಮೆ ಚಿತ್ರ ದಾರಿ ತಪ್ಪುತ್ತಿದೆ, ಎಲ್ಲಿಂದೆಲ್ಲಿಗೆ ಸಂಬಂಧವಯ್ಯಾ ಎಂದುಕೊಳ್ಳಲು ಧಾರಾಳವಾದ ಅವಕಾಶಗಳೂ ಚಿತ್ರದಲ್ಲಿವೆ. ನಿರ್ದೇಶಕ ರಮೇಶ್‌ ಇನ್ನೂ ಹೆಚ್ಚು ಸಾಣೆ ಹಿಡಿದು ಚಿತ್ರವನ್ನು ಹರಿತ ಮಾಡಬಹುದಿತ್ತು. ಆದರೆ ಅದಾಗಿಲ್ಲ ಎನ್ನುವುದು ಬೇಸರ ತರಿಸುತ್ತದೆ. ಇವರ ಕಾರ್ಯಕ್ಕೆ ಸಂಗೀತ, ಡಿಓಪಿಗಳೂ ಇನ್ನೂ ಸಮರ್ಥವಾಗಿ ಕೈ ಜೋಡಿಸಬಹುದಿತ್ತು. ಇವುಗಳು ಕೊರತೆಗಳೇ ಅನ್ನಿಸಿದರೂ ಅವುಗಳನ್ನು ದಾಟಿ ನಿಲ್ಲುವ ಅಂಶಗಳೂ ನಾನೊಂಥರ ಸಿನಿಮಾದಲ್ಲಿ ಇವೆ.

Follow Us:
Download App:
  • android
  • ios