Film Review: ದ್ವಿಮುಖ
ದ್ವಿಮುಖ ಚಿತ್ರವನ್ನು ಮಧು ನಿರ್ದೇಶನ ಮಾಡಿದ್ದು ಕವಿತಾ ಜೊತೆ ಪ್ರವೀಣ್ ನಟಿಸಿದ್ದಾರೆ. ಇವರ ಜೊತೆ ವಿಜಯ್ ಚಂದ್ರ, ರಂಗಾಯಣ ರಘು ಮತ್ತು ನಯನಾ ಕೂಡ ದ್ವಿಮುಖ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಆರ್. ಕೇಶವಮೂರ್ತಿ
ನಡೆಯದ ಕೊಲೆಯ ಸುತ್ತ ಸಾಗುವ ಕತೆಯೇ ‘ದ್ವಿಮುಖ’. ಆರಂಭದಲ್ಲಿ ಇಬ್ಬರು ಹುಡುಗರು, ಒಬ್ಬ ಹುಡುಗಿಯ ಕತೆಯಾಗಿ ಸಿನಿಮಾ ಮೂಡುತ್ತದೆ. ಅಂದರೆ ತ್ರಿಕೋನ ಪ್ರೇಮ ಕತೆಯಂತೆ ತೋರಿಸುತ್ತಲೇ ಹೋಗುತ್ತಿರುವಾಗ ಇದು ಅದಲ್ಲ, ಎಂದು ಒಂದು ಕೊಲೆಯ ಕತೆ ತೆರೆದುಕೊಳ್ಳುತ್ತದೆ. ಅಲ್ಲಿಗೆ ಚಿತ್ರಕ್ಕೆ ಸಸ್ಪೆನ್ಸ್ ನೆರಳು ಆವರಿಸಿಕೊಳ್ಳುತ್ತದೆ. ಇದೆಲ್ಲವನ್ನು ಸಾಧ್ಯವಾದಷ್ಟುನಿಧಾನವಾಗಿಯೇ ಪ್ರಸ್ತುತ ಪಡಿಸುತ್ತ ಹೋಗುತ್ತಾರೆ ನಿರ್ದೇಶಕರು.
ತಾರಾಗಣ: ಪ್ರವೀಣ್ ಅಥರ್ವ, ಕವಿತಾ ಗೌಡ, ರಂಗಾಯಣ ರಘು, ವಿಜಯ್ ಚೆಂಡೂರು, ನಯನ, ವಿಜಯ್ ಚಂದ್ರ,
ನಿರ್ದೇಶನ: ಮಧು ಕೆ ಶ್ರೀಕಾರ್
ರೇಟಿಂಗ್: 3
ನಾಯಕಿ ಅಪ್ಪ- ಅಮ್ಮ ದುರಂತದಲ್ಲಿ ತೀರಿಕೊಂಡಿದ್ದಾರೆ. ನಾಯಕನ ಅಪ್ಪನೂ ಅದೇ ದುರಂತಕ್ಕೆ ಬಲಿಯಾಗಿದ್ದಾನೆ. ಇದಕ್ಕೆ ಕಾರಣ ಯಾರು? ಬೆಂಗಳೂರಿನಲ್ಲಿ ಒಂದು ಕಂಪನಿ. ಅಲ್ಲಿ ಮ್ಯಾನೇಜರ್‌ಗೆ ಟೀಮ್ ಲೀಡರ್ ಆಗಿರುವ ಹುಡುಗಿ ಮೇಲೆ ಪ್ರೀತಿ. ಇವರ ನಡುವೆ ಮತ್ತೊಬ್ಬನ ಪ್ರವೇಶ. ಕೆಲಸ ಹುಡುಕಿಕೊಂಡು ಬರುವ ಈತ ಮ್ಯಾನೇಜರ್ ಪ್ರೀತಿಸುತ್ತಿರುವ ಹುಡುಗಿಗೆ ಹತ್ತಿರವಾಗುತ್ತಾನೆ. ಸಹಿಸದ ಮ್ಯಾನೇಜರ್, ಅವನ ಮೇಲೆ ದ್ವೇಷ ಕಟ್ಟಿಕೊಳ್ಳುತ್ತಾನೆ. ಇಬ್ಬರ ದ್ವೇಷದಲ್ಲಿ ಹುಡುಗಿ ಯಾರಿಗೆ ಸಿಗುತ್ತಾಳೆ ಎಂದುಕೊಳ್ಳುವ ಹೊತ್ತಿಗೆ ಮತ್ತೊಂದು ತಿರುವು ಬರುತ್ತದೆ. ಅಲ್ಲಿಗೆ ಇಲ್ಲಿ ವಿಲನ್ ಯಾರು, ನಾಯಕನಾ, ನಾಯಕಿನಾ ಎನ್ನುವ ಕುತೂಹಲದ ಮೇಲೆ ಸಿನಿಮಾ ಸಾಗುತ್ತದೆ.
ಅದದೇ ಹಳೆಯ ಸೂತ್ರಗಳನ್ನೇ ನಂಬಿಕೊಂಡು ಮೂಡಿ ಬಂದಿರುವ ಸಿನಿಮಾ ‘ದ್ವಿಮುಖ’. ತಾಂತ್ರಿಕವಾಗಿಯೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಿನಿಮಾ ಸೋತಿದೆ. ಅದೇ ಹಳೆಯ ಸರಕು ಇಟ್ಟುಕೊಂಡು ಹೇಗೆ ಸಿನಿಮಾ ಮಾಡಬಹುದು ಎನ್ನುವುದಕ್ಕೆ ಈ ಚಿತ್ರವನ್ನು ಉದಾಹರಣೆಯಾಗಿ ಕೊಡಬಹುದು. ಕಾಮಿಡಿ ಎಂಬುದು ಆಟಕ್ಕೂ ಮತ್ತು ಲೆಕ್ಕಕ್ಕೂ ಇಲ್ಲ. ಕವಿತಾ ಗೌಡ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಇನ್ನು ಉಳಿದಂತೆ ತಾರಬಳಗ ತಮ್ಮತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.