ಚಿತ್ರ ವಿಮರ್ಶೆ: 19 ಏಜ್ ಈಸ್ ನಾನ್‌ಸೆನ್ಸ್
ನಿನ್ನ ವಯಸ್ಸಿಗೆ ತಕ್ಕಂತೆ ಯೋಚಿಸು ಎನ್ನುವ ಮಾತೊಂದು ಆಗಾಗ ಕೇಳುತ್ತಿರುತ್ತೇವೆ. ಆದರೆ, ಈ ಸಿನಿಮಾ ದೊಡ್ಡವರ ಮಾತು ಮೀರಿ ನಿಲ್ಲುತ್ತದೆ. ಯಾಕೆಂದರೆ ಆ ಹುಡುಗನ ವಯಸ್ಸು ತೀರಾ ಚಿಕ್ಕದು. ಆಕೆಯದ್ದು ಚಿಕ್ಕ ವಯಸ್ಸೇ. ಆದರೂ ಮದುವೆಯಾಗಿ ಒಂದು ಮಗುವಿನ ತಾಯಿ ಆಗಿದ್ದಾಳೆ. ಇವರ ಯೋಚನೆಗಳನ್ನು ಕಂಡು ದೊಡ್ಡವರೇ ಅಚ್ಚರಿಗೊಳ್ಳುತ್ತಾರೆ. ಇಷ್ಟಕ್ಕೂ ಅಂಥ ಯೋಚಿಸುವಂತಹ ಕತೆ ಎಲ್ಲಿದೆ ಎನ್ನುವ ಕುತೂಹಲ ನಿಮಗಿದ್ದರೆ ‘19 ಏಜ್ ಈಸ್ ನಾನ್ ಸೆನ್ಸ್’ ಎನ್ನುವ ಸಿನಿಮಾ ನೋಡುವ ಧೈರ್ಯ ಮಾಡಬೇಕಾಗುತ್ತದೆ!
ಆರ್ ಕೇಶವವೂರ್ತಿ
ನಿರ್ದೇಶಕ ರತ್ನಜ ಅವರು ತುಂಬಾ ಹಿಂದೆ 'ಹೊಂಗನಸು' ಚಿತ್ರದ ಮೂಲಕ ಅತ್ತಿಗೆ ಮತ್ತು ಮೈದುನನ ನಡುವಿನ ಸಲುಗೆಯನ್ನು ಹೇಳುವ ಸಿನಿಮಾ ರೂಪಿಸಿದ್ದರು. ಇಂಥ ಸಲುಗೆ, ಸಂಬಂಧಗಳು ಸ್ವಚ್ಚವಾಗಿದ್ದರೂ ಅಪಾರ್ಥಕ್ಕೆ ದಾರಿ ಮಾಡಿಕೊಳ್ಳುತ್ತದೆ ಎಂಬುದನ್ನು ಆಗಲೇ ಹೇಳಿದ್ದರು. ಅಂಥದ್ದೇ ಕತೆಯನ್ನು ಮತ್ತೊಂದು ರೀತಿಯಲ್ಲಿ ಹೇಳಿದ್ದಾರೆ ನಿರ್ದೇಶಕ ಗಿಣಿ.
ಆದರೆ, ಚಿತ್ರದ ಪಾತ್ರಧಾರಿಗಳಲ್ಲಿ ಬರುವ ಪ್ರಬುದ್ಧ ಯೋಚನೆಗಳು, ಕತೆ ನಿರೂಪಣೆ, ದೃಶ್ಯಗಳ ಸಂಯೋಜನೆಯಲ್ಲಿ ಇಲ್ಲದಿರುವುದೇ ಈ ಚಿತ್ರದ ದೊಡ್ಡ ಕೊರತೆ. ಇಲ್ಲಿ ಅತ್ತಿಗೆ ಚಿತ್ರದ ನಾಯಕಿ. ಮೈದುನ ನಾಯಕ. ನಾಯಕನ ಅಣ್ಣ ರಸ್ತೆ ಅಪಘಾತದಲ್ಲಿ ಸಾಯತ್ತಾರೆ. ಗಂಡನನ್ನು ಕಳೆದುಕೊಂಡ ಹುಡುಗಿಯದ್ದು ತೀರಾ ಸಣ್ಣ ವಯಸ್ಸು.
ಹೀಗಾಗಿ ಆಕೆಗೆ ಅತ್ತೆ ಮನೆಯವರೇ ಮತ್ತೊಂದು ಮದುವೆ ಮಾಡುವುದಕ್ಕೆ ಮುಂದಾಗುತ್ತಾರೆ. ಆದರೆ, ಅತ್ತಿಗೆ ತಮ್ಮ ಮನೆಯಲ್ಲೇ ಇರಬೇಕು ಎನ್ನುವ ಹಠ ನಾಯಕನದ್ದು. ಈತನ ಹಠ, ದೊಡ್ಡವರಿಗೆ ಹುಡುಗು ಬುದ್ಧಿಯಂತೆ ಕಾಣುತ್ತದೆ. ಹಾಗಾದರೆ ಮುಂದೇನು ಎಂದಾಗ ತಾನೇ ಅತ್ತಿಗೆಯನ್ನು ಮದುವೆ ಆಗುವುದಾಗಿ ನಾಯಕ ಹೇಳುವುದರೊಂದಿಗೆ ಚಿತ್ರ ಮೊದಲರ್ಧ ಮುಗಿಯುತ್ತದೆ.
ವಿರಾಮದ ನಂತರ ಅತ್ತಿಗೆಯನ್ನು ತನ್ನ ಮನೆಯಲ್ಲಿ ಉಳಿಸಿಕೊಳ್ಳುವ ಹದಿಹರೆಯದ ಹುಡುಗನ ಹಾಡು- ಪಾಡು ತೆರೆದುಕೊಳ್ಳುತ್ತದೆ. ಗಂಡ ಸತ್ತ ಮೇಲೆ ನಾಯಕಿ ಬಳೆ ಒಡೆಯುವುದು, ಕುಂಕುಮ ಅಳಿಸುವುದು, ತಾಳಿ ತೆಗೆದಿಡುವ ದೃಶ್ಯವನ್ನು ನೋಡಿದಾಗ ನಿರ್ದೇಶಕರು ಇನ್ನೂ ಯಾವ ಕಾಲದಲ್ಲಿದ್ದಾರೆ ಎನ್ನುವ ಕನಿಕರದ ಸಿಟ್ಟು ಪ್ರೇಕ್ಷಕನಲ್ಲಿ ಹುಟ್ಟಿಕೊಳ್ಳದೆ ಇರಲಾರದು. ಒಂದು ಸಣ್ಣ ತಯಾರಿಯೂ ಇಲ್ಲದೆ ಸಿನಿಮಾ ಮಾಡಿದಾಗ ಹೇಗಿರುತ್ತದೆ ಎಂಬುದಕ್ಕೆ '19 ಏಜ್ ಈಸ್ ನಾನ್ ಸೆನ್ಸ್' ಸಿನಿಮಾ ಅತ್ಯುತ್ತಮ ಅಧ್ಯಯನ ವಸ್ತುವಾಗಬಹುದು!
ಮೇಸ್ತ್ರಿ ಬಾಲು, ಮನುಷ್ ಹಾಗೂ ಮಧುಮಿತ ಹಾಗೂ ಪೂಜಾರಿ ಚಿತ್ರದಲ್ಲಿ ಹೈಲೈಟ್ ಆಗುವ ಪಾತ್ರಗಳು. ಇವರಲ್ಲಿ ಮಧುಮಿತ ತೆರೆ ಮೇಲೆ ನೋಡಲು ಚೆಂದ. ಉಳಿದ ಪಾತ್ರಗಳನ್ನು ಕತೆಗೆ ಪೂರಕವಾಗಿ ದುಡಿಸಿಕೊಳ್ಳುವುದಲ್ಲಿ ನಿರ್ದೇಶಕರು ಎಡವಿದ್ದಾರೆ.