Kambali Hula Review: ಮನ ಸೆಳೆಯುವ ಮಲೆನಾಡಿನ ಕಂಬ್ಳಿಹುಳ
ಅಂಜನ್ ನಾಗೇಂದ್ರ ಮತ್ತು ಅಶ್ವಿತಾ ಹೆಗಡೆ ನಟಿಸಿರುವ ಕಂಬ್ಳಿಹುಳ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕಥೆ ಹೇಗಿದೆ? ಮೇಕಿಂಗ್ ಹೇಗಿದೆ? ವಿಮರ್ಶೆ ಇಲ್ಲಿದೆ ನೋಡಿ...
ಆರ್ ಕೇಶವಮೂರ್ತಿ
ಹುಡುಗಿಯ ಪ್ರೀತಿಗಾಗಿ ಹಂಬಲಿಸುವ ಹುಡುಗ, ಹೆತ್ತ ತಾಯಿಯನ್ನೇ ದ್ವೇಷಿಸುವ ಮಗ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೂ ಬಾಲ್ಯದ ಸ್ನೇಹದ ಅಕೌಟ್‌ನಲ್ಲಿ ಬಹು ದೊಡ್ಡ ಪ್ರೀತಿಯ ಗಂಟು ಕಟ್ಟಿಕೊಂಡಿರುವ ಆಟೋ ಡ್ರೈವರ್, ಒಂದು ಸಂಬಂಧಕ್ಕಾಗಿ ಹಾತೊರೆಯುವ 40ರ ವಯಸ್ಸಿನ ವ್ಯಕ್ತಿ... ಇಂಥ ಪ್ರಬುದ್ಧ ತಿರುವುಗಳನ್ನು ಅಷ್ಟೇ ಆಪ್ತವಾಗಿ ಮತ್ತು ತಿಳಿಯಾಗಿ ‘ಕಂಬ್ಳಿಹುಳ’ ಕಟ್ಟಿಕೊಡುತ್ತ ಹೋಗುತ್ತದೆ.
ತಾರಾಗಣ: ಅಂಜನ್ ನಾಗೇಂದ್ರ, ಅಶ್ವಿತಾ ಹೆಗಡೆ, ರೋಹಿತ್ ಕುಮಾರ್
ನಿರ್ದೇಶನ: ನವನ್ ಶ್ರೀನಿವಾಸ್
ರೇಟಿಂಗ್: 4
ಸಿನಿಮಾ ಆರಂಭವಾದಾಗ ನಗಲು ಶುರು ಮಾಡುತ್ತೇವೆ. ನಗುವಿನ ಜತೆಗೆ ಇಲ್ಲಿ ಯಾವುದೋ ಸ್ಕಾ್ಯಂಡಲ್ ನಡೆಯುತ್ತಿದೆಯಲ್ಲ ಎನ್ನುವ ಕುತೂಹಲ ಬೆಳೆಸಿಕೊಳ್ಳುತ್ತೇವೆ, ಮರೆತು ಹೋದ ಹೈಸ್ಕೂಲ್ ದಿನಗಳ ಲವ್ ಸ್ಟೋರಿ ನೆನಪಾಗುತ್ತದೆ. ಸ್ಕಾ್ಯಮ್, ಮನರಂಜನೆ, ಪ್ರೀತಿಯ ಗುಂಗಿನಲ್ಲಿದ್ದಾಗಲೇ ಎದುರಾಗುವ ಎಮೋಷನ್ ತಿರುವು ನೋಡುಗನ ಕಣ್ಣು ತೇವಗೊಳ್ಳುತ್ತದೆ. ಅದು ತಾಯಿಯ ಮಮಕಾರಕ್ಕೆ ಇರುವ ಶಕ್ತಿ. ಮಗನ ಒಳಗಿರುವ ನೋವಿನ ಸಂಕಟ. ನಿರ್ದೇಶಕ ನವನ್ ಶ್ರೀನಿವಾಸ್, ಮೊದಲ ಚಿತ್ರದಲ್ಲೇ ಅಪ್ಪಟ ಕನ್ನಡತನದ ಮತ್ತು ಪ್ರೇಕ್ಷಕನಿಗೆ ಇಷ್ಟವಾಗುವ ಸಿನಿಮಾ ಮಾಡಿದ್ದಾರೆ. ಅಬ್ಬರದ ಸದ್ದುಗಳು, ಬೆಂಕಿ, ಬ್ಲಾಕ್ ಡೆಸ್ಟು, ಹೈ ವೋಲ್ಟೇಜ್ ಬಿಜಿಎಂಗಳು, ನಾಲ್ಕೈದು ಕ್ರಿಕೆಟ್ ಟೀಮ್‌ಗೆ ಆಗುವಷ್ಟುರೌಡಿಗಳು ಮತ್ತು ಅವರ ರಕ್ತಪಾತವಿಲ್ಲದೆ ಮನಸ್ಸಿನಿಂದ ನೋಡಬಯಸುವ ಸಿನಿಮಾಗಾಗಿ ಕಾಯುತ್ತಿದ್ದವರಿಗೆ ‘ಕಂಬ್ಳಿಹುಳ’ ಅತ್ಯುತ್ತಮ ಆಯ್ಕೆ. ಎಲ್ಲಕ್ಕಿಂತ ಮುಖ್ಯವಾಗಿ ಕತೆ ಪರಿಸರ. ಅತ್ಯಂತ ಸಹಜವಾಗಿ ಸಾಗುವ ಈ ಕತೆ ತೀರ್ಥಹಳ್ಳಿ ಹಾಗೂ ಮಲೆನಾಡಿನ ಹಿನ್ನೆಲೆಯಲ್ಲಿ ಸಾಗುತ್ತದೆ. ಪ್ರೇಕ್ಷಕನಿಗೆ ಕತೆ, ಪಾತ್ರ ಮತ್ತು ಊರು ಅಪರಿಚಿತ ಎನಿಸಲ್ಲ.
BANARAS REVIEW: ಚದುರಿದ ಚಿತ್ರಗಳಾಗಿ ಉಳಿಯುವ ಬನಾರಸ್
ಇನ್ನೂ ಆ ಪಾತ್ರಧಾರಿಗಳ ಉದ್ಯೋಗ ಆಟೋ ಡ್ರೈವಿಂಗ್, ಲೈನ್‌ಮನ್, ರಸ್ತೆ ರಿಪೇರಿ ಕೆಲಸ, ಹೋಟೆಲ್ ಸಪ್ಲೆಯರ್ ಮಾಡಿಕೊಂಡಿರುವ ಪಾತ್ರಧಾರಿಗಳನ್ನು ನೋಡುತ್ತಿರುವಾಗ ನಮ್ಮ ಜತೆ, ನಮ್ಮ ನಡುವೆ ಇದ್ದವರು ತೆರೆ ಮೇಲೆ ಬಂದಿದ್ದಾರಲ್ಲ ಅನಿಸುವುದು ಚಿತ್ರದ ಪ್ಲಸ್ ಪಾಯಿಂಟ್. ನೆನಪು ಮತ್ತು ಪಯಣದ ದಾರಿಯಲ್ಲಿ ಸಾಗುವ ಈ ಚಿತ್ರದ ಕ್ಲೈಮ್ಯಾಕ್ಸ್ ನೀವು ಅಂದುಕೊಂಡಂತೆ ಇರಲ್ಲ.
ಸಂಗೀತ, ಕ್ಯಾಮೆರಾ ನಿರ್ದೇಶಕನ ಸ್ಕ್ರೀನ್ ಪ್ಲೇ ಆಟಕ್ಕೆ ಬೆಂಬಲವಾಗಿ ನಿಂತಿವೆ. ಎಲ್ಲ ಕಲಾವಿದರ ನಟನೆ ಮತ್ತು ಪಾತ್ರ ಪೋಷಣೆ ಕತೆಗೆ ಪೂರಕವಾಗಿದೆ. ಆದರೆ, ಕಪ್ಪೆಗಳ ಸ್ಕಾ್ಯಮ್ ಚಿತ್ರಕ್ಕೆ ಅಗತ್ಯ ಇರಲಿಲ್ಲ. ಅದನ್ನು ಚಿತ್ರದಲ್ಲಿ ತಂದು ಅರೆಬರೆಯಾಗಿ ಮುಕ್ತಾಯ ಮಾಡಿದ್ದಾರೆ ಎನ್ನುವ ಸಣ್ಣ ದೂರಿನ ಹೊರತಾಗಿ ‘ಕಂಬ್ಳಿಹುಳ’ ನೋಡಲು ಅಡ್ಡಿ ಇಲ್ಲ.