‘ಸ್ನೇಹಿತರಾಗಿ ಚಿತ್ರರಂಗಕ್ಕೆ ಬಂದು ಸ್ನೇಹಿತರಿಗಾಗಿ, ಸ್ನೇಹಿತರೆಲ್ಲರು ಸೇರಿ ಮಾಡಿರುವ ಸಿನಿಮಾ ಇದು. ಶಂಕರ್ ಗುರು ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಹೊಸ ರೀತಿಯ ಸಿನಿಮಾ ಇದು’ ಎಂದು ನಟ ಕಮ್ ನಿರ್ದೇಶಕ ಧನಂಜಯ್ ಹೇಳಿದ್ದಾರೆ.  

 ರಾಜೇಶ್‌ ಶೆಟ್ಟಿ

ಮಧ್ಯಮ ವರ್ಗದ ಕುಟುಂಬದ ಸಾಹಸಮಯ ಬದುಕು, ಸ್ವಾಭಿಮಾನದಿಂದ ಬದುಕಬೇಕು ಅನ್ನುವ ಹುಡುಗರ ಛಲ, ಮಕ್ಕಳಿಗಾಗಿ ಅಪ್ಪ ಅಮ್ಮಂದಿರು ಮಾಡುವ ತ್ಯಾಗ, ಅಲ್ಲೊಂದು ಬ್ರೇಕಪ್ಪು, ಇಲ್ಲೊಂದು ಲವ್ವು, ಮಧ್ಯದಲ್ಲಿ ಎಣ್ಣೆ ಹಾಡು, ಆರಂಭದಲ್ಲಿ ಪ್ರೇಮ ಕಾವ್ಯ, ಕಡೆಗೊಂದು ವಿರಹ ಗೀತೆ, ನೆಂಚಿಕೊಳ್ಳಲು ಒಂದೆರಡು ಫೈಟು, ಬದುಕು ಬದಲಿಸುವ ಹಂಬಲದ ಉದ್ದುದ್ದ ಡೈಲಾಗ್ಸು ಎಲ್ಲವೂ ಇರುವ ಒಂದು ಸರಳ ಹಗುರ ಸಿನಿಮಾ ಬಡವ ರಾಸ್ಕಲ್‌.

ನಿರ್ದೇಶನ: ಶಂಕರ್‌ ಗುರು

ತಾರಾಗಣ: ಧನಂಜಯ್‌, ಅಮೃತಾ ಅಯ್ಯಂಗಾರ್‌, ನಾಗಭೂಷಣ, ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ಪೂರ್ಣಚಂದ್ರ ಮೈಸೂರು

ರೇಟಿಂಗ್‌: 3

ಸಂಕೀರ್ಣ ವಿಚಾರಗಳನ್ನು ಹೇಳಿಯೂ ಹೇಳದಂತಿರುವ, ಯಾವುದೋ ಒಂದು ಹಾದಿಯಲ್ಲಿ ಯಾವುದೋ ಒಂದು ಹೂವಿನ ಪರಿಮಳ ತಾಕಿ ಹೋದಂತೆ, ಯಾವುದೋ ಜಾಗದಲ್ಲಿ ಗೊತ್ತಿರದ ಯಾರೋ ಒಬ್ಬರ ಮಾತು ಮನಸ್ಸು ತಾಕಿದಂತೆ ಅನ್ನಿಸಬಹುದಾದ ಸಿನಿಮಾ ಇದು. ಬದುಕಿನಲ್ಲಿನ ಪಾತ್ರಗಳು ಥಟ್ಟನೆ ಪಕ್ಕದಲ್ಲಿಂದ ಎದ್ದು ಸ್ಕ್ರೀನಿನ ಮೇಲೆ ಹೋದಂತೆ ಭಾಸವಾಗುತ್ತದೆ. ದಾರಿ ತಪ್ಪುತ್ತಿದ್ದೇನೆ ಅಂತನ್ನಿಸುವ ಹುಡುಗರಿಗೆ ಇದೊಂಥರ ಪರ್ಸನಾಲಿಟಿ ಡೆವಲಪ್‌ಮೆಂಟ್‌ ಬುಕ್‌ ಥರಾನೂ ಅನ್ನಿಸಬಹುದು. ತಂದೆ ತಾಯಿ ಜೊತೆ ಹೇಗಿರಬೇಕು, ಪ್ರೀತಿ ಸೋತಾಗ ಹೇಗೆ ಬದುಕಬೇಕು ಅನ್ನುವ ನಾಲ್ಕು ಟಿಪ್ಸು ಕೂಡ ಇಲ್ಲಿ ಸಿಗುತ್ತದೆ. ಅಷ್ಟರ ಮಟ್ಟಿಗೆ ನಿರ್ದೇಶಕ ಶಂಕರ್‌ ಗುರು ಗೆದ್ದಿದ್ದಾರೆ. ಸೂಕ್ಷ್ಮಗಳನ್ನು ಹೆಣೆಯುವ, ದೃಶ್ಯಗಳ ಮೂಲಕ ದಾಟಿಸುವ ಜಾಣತನ ಅವರಿಗಿದೆ.

ಈ ಚಿತ್ರದ ಕಲಾವಿದರೇ ಇಲ್ಲಿನ ಶಕ್ತಿ. ಧನಂಜಯ್‌ ಇಡೀ ಸಿನಿಮಾವನ್ನು ಆವರಿಸಿದ್ದಾರೆ. ಸ್ವಾಭಿಮಾನಿ ಆಟೋ ಚಾಲಕನಾಗಿ, ಬಡವರ ಮನೆಯ ಮುಗ್ಧ ಪ್ರೇಮಿಯಾಗಿ, ಬ್ರೇಕಪ್‌ನಿಂದ ಎದೆಯಲ್ಲಿ ವಿರಹಾಗ್ನಿ ಹೊತ್ತು ಅಲೆಯುವ ದುರಂತ ನಾಯಕನಾಗಿ, ಅಪ್ಪ ಅಮ್ಮನ ಮುದ್ದಿನ ಮಗನಾಗಿ, ಸ್ನೇಹಿತರ ನಗುವಾಗಿ ಅಳುವಾಗಿ ಅವರು ಸುಲಭವಾಗಿ ಮರೆತುಹೋಗದಂತೆ ಪಾತ್ರವನ್ನು ಜೀವಿಸಿದ್ದಾರೆ. ರಂಗಾಯಣ ರಘು, ನಾಗಭೂಷಣ, ತಾರಾ ಚಿತ್ರದ ಹೆಮ್ಮೆ. ಅವರು ಸ್ಕ್ರೀನ್‌ ಬಂದಾಗೆಲ್ಲಾ ಗಂಭೀರವಾಗಿದ್ದ ಮುಖಗಳಲ್ಲೂ ನಗು ಅರಳುತ್ತದೆ.

Badava Raskal: ಧನಂಜಯ್‌ಗೆ ಯಶಸ್ಸು ಕೊಡೋ ಸಿನಿಮಾ ಇದು ಎಂದ ಶಿವಣ್ಣ

ವಾಸುಕಿ ವೈಭವ್‌ ಸಂಗೀತ ಹಿತವಾಗಿದೆ. ಪ್ರೀತಾ ಜಯರಾಮನ್‌ ಛಾಯಾಗ್ರಹಣ ಸೊಗಸಾಗಿದೆ. ಪೂರ್ಣಚಂದ್ರ ಮೈಸೂರು, ಅಮೃತಾ ಅಯ್ಯಂಗಾರ್‌, ಸ್ಪರ್ಶ ರೇಖಾ ನಟನೆ ಆಯಾಯ ಪಾತ್ರವನ್ನು ಮನಸ್ಸಲ್ಲಿ ನಿಲ್ಲಿಸುತ್ತದೆ. ಇಷ್ಟೆಲ್ಲಾ ಇದ್ದೂ ಚಿತ್ರಮಂದಿರದಿಂದ ಎದ್ದು ಆಚೆ ಬರುವ ಹೊತ್ತಿಗೆ ಅಷ್ಟುಹೊತ್ತು ಕಣ್ಣ ಮುಂದೆ ಇದ್ದ ಸುಂದರ ಮಂಜಿನ ಮನೆಯೊಂದು ಬಿದ್ದು ಮಾಯವಾದಂತೆ ಅನ್ನಿಸುವುದು ನಿರೀಕ್ಷೆಯ ಭಾರದಿಂದಲೇ ಇರಬಹುದು. ಅಲ್ಲಲ್ಲಿ ತಡೆದು ನಿಲ್ಲಿಸುವ ನಿರೂಪಣಾ ಶೈಲಿ ಚಿತ್ರಕ್ಕೆ ಶಾಪಗ್ರಸ್ತ. ಸರಳವಾದ ಕತೆ ಚಿತ್ರದ ವೇಗಕ್ಕೆ ಕಡಿವಾಣ.

ಸುಮ್ಮನೆ ನಕ್ಕು ಹಗುರಾಗಲು, ಅಲ್ಲಲ್ಲಿ ಕಣ್ಣಂಚು ಒದ್ದೆ ಮಾಡಿಕೊಳ್ಳಲು, ಪ್ರೇಮದಲ್ಲಿ ಮರುಳಾಗಲು, ಸ್ನೇಹದಲ್ಲಿ ಗೆಲುವಾಗಲು, ಚಿಂತೆಯಿಂದ ಮುಕ್ತವಾಗಲು ಅಥವಾ ಚಿಂತೆಯನ್ನೇ ಜೀವಿಸಲು ಬಡವ ರಾಸ್ಕಲ್‌ ದಾರಿಯನ್ನು ಹಿಡಿಯಬಹುದು.

"