ದೇಶಾದ್ರಿ ಹೊಸ್ಮನೆ

ಹೆಸರೇಕೆ ಬದಲಾಯಿತು?

ಕೆಲವೊಂದು ಸಂಗತಿಗಳು ಹಾಗೆಯೇ ಇದ್ದರೆ ಚೆಂದ. ಯಾಕೆಂದ್ರೆ, ಹೆಸರು ಬದಲಾವಣೆಗೇನು ಅಂತಹ ದೊಡ್ಡ ಕಾರಣ ಇಲ್ಲ. ಜತೆಗೆ ವೈಯಕ್ತಿಕ ವಿಚಾರಗಳನ್ನು ದೊಡ್ಡ ಮಟ್ಟದಲ್ಲಿ ಹೇಳಿಕೊಳ್ಳುವುದಕ್ಕೆ ನಂಗಿಷ್ಟಇಲ್ಲ. ಅಂತಹ ವಿಚಾರಗಳು ಸುದ್ದಿ ಆಗುವುದಕ್ಕಿಂತ ನಮ್ಮ ಕೆಲಸಗಳು ಮಾತನಾಡಬೇಕು ಎನ್ನುವುದು ನನ್ನ ಸ್ವಭಾವ.

ನಿಮ್ಮ ‘ಮುಂದಿನ ನಿಲ್ದಾಣ’ದ ಕತೆ ಹೇಳಿ?

ಹೊಸ ರೀತಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ತುಂಬಾ ಗ್ಯಾಪ್‌ ನಂತರ ದೊಡ್ಡ ಮಟ್ಟದ ಭರವಸೆಯೊಂದಿಗೆ ಚಿತ್ರರಂಗಕ್ಕೆ ಹಿಂತಿರುಗುವಂತೆ ಮಾಡುತ್ತಿರುವ ಸಿನಿಮಾವೂ ಹೌದು. ಕತೆಯ ವಿಚಾರದಲ್ಲೂ ಇದೊಂದು ಹೊಸ ಅಲೆಯ ಚಿತ್ರ. ಲೊಕೇಶನ್‌, ಕಲೆ, ಬಣ್ಣ, ದೃಶ್ಯ, ವಸ್ತ್ರ ವಿನ್ಯಾಸ ಎಲ್ಲದರಲ್ಲಿಯೂ ಹೊಸತನವನ್ನು ಹಿಡಿದಿಟ್ಟುಕೊಂಡ ಸಿನಿಮಾ.

ಹೆಸರು ಬದಲಾಯಿಸಿಕೊಂಡ್ರು ರಂಗಿತರಂಗ ನಟಿ ರಾಧಿಕಾ!

ನಿಮ್ಮ ಪಾತ್ರದ ಬಗ್ಗೆ ಹೇಳಿ?

ಪಾತ್ರದ ಹೆಸರು ಮೀರಾ ಶರ್ಮಾ. ವೃತ್ತಿಯಲ್ಲಿ ಆಕೆ ಆರ್ಟ್‌ ಕ್ಯುರೇಟರ್‌. ಕಲಾವಿದರ ಕೃತಿಗಳನ್ನು ಒಟ್ಟಾಗಿಸಿ ಪ್ರದರ್ಶನಕ್ಕೆ ಇಡುವಂತಹ ಹುಡುಗಿ. ಜತೆಗೆ ತನ್ನ ಬದುಕಿನ ಬಗ್ಗೆ ಬೆಟ್ಟದಷ್ಟುಕನಸು ಕಟ್ಟಿಕೊಂಡ ಹುಡುಗಿ. ಆಕೆಗೆ ಒಬ್ಬ ಸಂಗಾತಿ ಬೇಕು. ಒಳ್ಳೆಯ ಹುಡುಗನ ಹುಡುಕಾಟದಲ್ಲಿರುತ್ತಾಳೆ. ಆಕೆಯ ಮುಂದಿನ ನಿಲ್ದಾಣ ಅದೇ ಆಗಿರುತ್ತದೆ. ಹಾಗಿರುವಾಗಲೇ ಆಕೆಯ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆದು ಹೋಗುತ್ತವೆ.

ನಿಮ್ಮ ಸಿನಿ ಕರಿಯರ್‌ನಲ್ಲೇ ವಿಶೇಷವಾದ ಪಾತ್ರ, ಹೊಸ ರೀತಿಯ ಲುಕ್‌ ಅಂತ ಹೇಳಿಕೊಂಡಿದ್ದೀರಿ, ಇದು ಹೇಗೆ?

ಇದುವರೆಗೂ ನಾನು ಅಭಿನಯಿಸಿದ ಸಿನಿಮಾಗಳ ಕತೆ ಮತ್ತು ಪಾತ್ರಗಳನ್ನು ಒಮ್ಮೆ ಅವಲೋಕಿಸಿದರೆ ಅದು ಹೇಗೆ ಅನ್ನೋದು ನಿಮಗೂ ಗೊತ್ತಾಗುತ್ತೆ. ಬಹುತೇಕ ಚಿತ್ರಗಳು ಸಸ್ಪೆನ್ಸ್‌ ಥ್ರಿಲ್ಲರ್‌, ಇಲ್ಲವೇ ಹಾರರ್‌ ಥ್ರಿಲ್ಲರ್‌ ಸಿನಿಮಾಗಳೇ ಆಗಿದ್ದವು. ಅಲ್ಲಿ ನಾನು ಗೃಹಿಣಿ ಆಗಿಯೋ, ಇಲ್ಲವೇ ಕುಟುಂಬದ ಜವಾಬ್ದಾರಿಯುತ ಮಹಿಳೆಯಾಗಿಯೋ, ಹೀಗೆ ಇನ್ನೇನೋ ಆಗಿ ಕಾಣಿಸಿಕೊಂಡಿದ್ದೆ. ಆ ಬಗ್ಗೆ ಬೇಸರವೂ ಇತ್ತು. ಒಂದ್ರೀತಿ ಅದನ್ನು ಬ್ರೇಕ್‌ ಮಾಡಿದ ಪಾತ್ರ ಇದು. ಫುಲ್‌ ಮಾಡರ್ನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಗುಂಗುರು ಕೂದಲು, ಉಡುಗೆ-ತೊಡುಗೆ ಎಲ್ಲವೂ ಹೈಟೆಕ್‌. ಕತೆ ವಿಚಾರದಲ್ಲೂ ಚೇಂಜಸ್‌ ಸಿಕ್ಕಿದೆ. ಸಸ್ಪೆನ್ಸ್‌, ಥ್ರಿಲ್ಲರ್‌ ಬದಲಿಗೆ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಸಿನಿಮಾನಲ್ಲಿ ಅಭಿನಯಿಸಿದ್ದೇನೆ.

'ಮುಂದಿನ ನಿಲ್ದಾಣ'ಕ್ಕೆ 'U-ಟರ್ನ್' ತೆಗೆದುಕೊಂಡ ರಾಧಿಕಾ!

ಮುಂದಿನ ನಿಲ್ದಾಣ ಅಂದ್ರೇನು? ಇದೇನು ಜರ್ನಿಯಾ ಅಥವಾ ಜೀವನದ ಕತೆಯಾ?

ನನಗೆ ಗೊತ್ತಿರುವ ಪ್ರಕಾರ ಮುಂದಿನ ನಿಲ್ದಾಣ ಅಂದ್ರೆ ಈ ಕಾಲದ ಯುವಜನರ ಕತೆ. ಒಂಟಿ ಪಯಣದಲ್ಲಿ ತೊಡಗುವ, ಟ್ರೆಕ್ಕಿಂಗ್‌ಗೆ ಹೊರಡುವ, ನಿಂತಲ್ಲಿ ನಿಲ್ಲದೆ ಜಗತ್ತು ಸುತ್ತಾಡಬೇಕು, ಪ್ರಕೃತಿ ಜತೆ ಸ್ನೇಹ ಬೆಳೆಸಬೇಕು ಎಂದು ಹಂಬಲಿಸುವ ಪ್ರತಿಯೊಬ್ಬರ ಮನಸ್ಸಿಗೂ ಮುಟ್ಟುವ ಕತೆ. ನನ್ನ ಮನಸ್ಸಿಗೆ ತುಂಬಾ ಹತ್ತಿರವಾದ ವಿಷಯ ಇದು. ಜೀವನದಲ್ಲಿ ಏನು ಬೇಕು, ಏನು ಬೇಡ ಎನ್ನುವುದರ ಬಗ್ಗೆ ಸ್ಪಷ್ಟಅರಿವಿಲ್ಲದಿದ್ದರೆ ಬದುಕು ಏನೆಲ್ಲ ತಾಕಲಾಟದ ಭಾವನೆಗಳಿಗೆ ಸಿಲುಕಿ ಒದ್ದಾಡುತ್ತದೆ ಎನ್ನುವುದು ಚಿತ್ರದ ಒನ್‌ಲೈನ್‌ ಸ್ಟೋರಿ.

ನಿಮಗೆ ಈ ಚಿತ್ರದ ಆಫರ್‌ ಬಂದಿದ್ದು ಹೇಗೆ ?

ನಿರ್ದೇಶಕರಾದ ವಿನಯ್‌ ಭಾರದ್ವಾಜ್‌ ಹಳೇ ಸ್ನೇಹಿತರು. ಈ ಹಿಂದೆಯೇ ಅವರೊಂದಿಗೆ ಯುಟ್ಯೂಬ್‌ ಚಾನೆಲ್‌ಗೆ ಅಂಥ ಒಂದು ಮ್ಯೂಜಿಕ್‌ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದೆ. ಹಾಗೆಯೇ ಒಂದು ಟಾಕ್‌ ಶೋನಲ್ಲೂ ಭಾಗಿಯಾಗಿದ್ದೆ. ಅವರೆಡನ್ನು ವಿನಯ್‌ ಅವರೇ ಡೈರೆಕ್ಟ್ ಮಾಡಿದ್ರು. ಆದಾದ ನಂತರದ ದಿನಗಳಲ್ಲಿ ಅವರು ಈ ಸಿನಿಮಾ ಮಾಡುತ್ತಿದ್ದೇನೆ ಅಂದಾಗ ಸಿನಿಮಾದಲ್ಲಿ ನೀವು ಇರುತ್ತೀರಿ ಅಂಥ ಹೇಳಿದ್ರು. ಅದಾಗಿ ಒಂದಷ್ಟುದಿನಗಳ ನಂತರ ನಾವು ಮ್ಯೂಜಿಕ್‌ ಆಲ್ಬಂ ಮಾಡಿದ್ದೆವು. ಅದು ಈ ಸಿನಿಮಾಕ್ಕೆ ಆಡಿಷನ್‌ ಅಂಥ ಆಮೇಲೆ ಗೊತ್ತಾಯಿತು. ಚಿತ್ರದಲ್ಲಿ ಮೀರಾ ಶರ್ಮಾ ಹೆಸರಿನ ಪಾತ್ರ. ಅದರಲ್ಲಿ ನೀವೇ ಅಭಿನಯಿಸಬೇಕು ಎಂದು ಕತೆ ಹೇಳಿದ್ರು. ಪಾತ್ರ ಇಷ್ಟಆಯಿತು. ಒಪ್ಪಿಕೊಂಡೆ.

ರಾಧಿಕಾ ನಾರಾಯಣ್‌ಗ ಕ್ಲೀನ್‌ ಬೋಲ್ಡ್‌ ಆದ ದತ್ತಣ್ಣ!

‘ಮುಂದಿನ ನಿಲ್ದಾಣ’ದ ಮೂಲಕ ಚಿತ್ರರಂಗಕ್ಕೆ ಮರು ಎಂಟ್ರಿ ಅಂತ ನೀವು ಭಾವಿಸಿಕೊಂಡಿದ್ದೇಕೆ?

ಇಷ್ಟುಸ್ಟೈಲಿಶ್‌ ಆಗಿ, ಚಾರ್ಮಿಂಗ್‌ ಆಗಿ, ಮಾಡರ್ನ್‌ ಲುಕ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ನನ್ನನ್ನು ಹಾಗೂ ತೋರಿಸಲು ಸಾಧ್ಯ ಅಂತಲೋ, ಅಂತಹ ಪಾತ್ರಗಳಿಗೂ ನಾನು ಸೂಕ್ತ ಅಂತಲೋ ಕೆಲವರು ಭಾವಿಸಿಕೊಂಡಂತಿರಲಿಲ್ಲ. ಅದು ಈಗ ಇಲ್ಲಿ ಸಾಧ್ಯವಾಗಿದೆ. ಹಿರಿಯ ನಟ ದತ್ತಣ್ಣ ‘ನಾನು ನಿಮ್ಮ ಅಭಿಮಾನಿ’ ಅಂತ ಹೇಳಿಕೊಂಡಿದ್ದು ನನ್ನ ಜವಾಬ್ದಾರಿ ಹೆಚ್ಚಿಸಿದೆ.

ಚಿತ್ರದ ಮೇಕಿಂಗ್‌ ಹಾಗೂ ಚಿತ್ರೀಕರಣದ ಅನುಭವ ಬಗ್ಗೆ ಹೇಳೋದಾದ್ರೆ...

ಬಹುಕಾಲ ನೆನಪಲ್ಲಿ ಉಳಿಯುವಂತಹ ಸಿಹಿ ಅನುಭವ ಅದು. ಕೋ ಸ್ಟಾರ್‌ ಪ್ರವೀಣ್‌ ತೇಜ್‌, ಮತ್ತೋರ್ವ ನಾಯಕಿ ಅನನ್ಯ ಕಶ್ಯಪ್‌, ಹಿರಿಯ ನಟ ದತ್ತಣ್ಣ ಸೇರಿದಂತೆ ಎಲ್ಲರ ಜತೆಗೂ ಒಳ್ಳೆಯ ಒಡನಾಟ ಇತ್ತು.