Raju James Bond Film Review: ಮಧ್ಯಮ ವರ್ಗದ ಹುಡುಗನ ಹಾಡು ಪಾಡು: ಪುರ್ಸೊತ್ತಲ್ಲಿ ಪ್ರೀತಿಯ ಹುಡುಗಿ
ಮೊದಲ ಭಾಗದಲ್ಲಿ ಪ್ರೀತಿ, ಕುಟುಂಬ, ಕಷ್ಟ ಸಂಕಷ್ಟಗಳು ಎದುರಾದರೆ ದ್ವಿತೀಯಾರ್ಧದಲ್ಲಿ ಕತೆ ಬುದ್ಧಿವಂತಿಕೆಯ ಜಾಡು ಹಿಡಿಯುತ್ತದೆ. ಜಾಣ್ಮೆ ಎಷ್ಟರ ಮಟ್ಟಿಗೆ ಕೈ ಹಿಡಿಯುತ್ತದೆ ಎಂಬುದು ಈ ಕತೆಯ ಕುತೂಹಲಕರ ಅಂಶವಾಗಿದೆ.

ರಾಜ್
ಕೈತುಂಬಾ ಸಾಲ, ಮೈತುಂಬಾ ಕನಸು, ಮನಸ್ಸು ತುಂಬಾ ಪ್ರೀತಿ, ತಲೆ ತುಂಬಾ ಆಸೆ ಹೊತ್ತುಕೊಂಡಿರುವ ಒಬ್ಬ ಪಕ್ಕಾ ಮಿಡ್ಲ್ ಕ್ಲಾಸ್ ಕುಟುಂಬದ ಹುಡುಗನ ಕತೆ ಇದು. ಸಾಮಾನ್ಯ ಬದುಕು ನಡೆಸುವ ಅವನು ಅಸಾಮಾನ್ಯ ಹಾದಿಗೆ ಹೋಗುವ ಕತೆಯೇ ಈ ಸಿನಿಮಾ. ಅವನಿಗೆ ಜವಾಬ್ದಾರಿ ಇದೆ. ಹೊಟ್ಟೆಪಾಡಿಗೊಂದು ಕೆಲಸ ಇದೆ. ಇನ್ನೇನೋ ಮಾಡಬೇಕು ಎಂಬ ಹಂಬಲದಿಂದ ಬ್ಯಾಂಕ್ ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದಾನೆ. ಪುರ್ಸೊತ್ತಲ್ಲಿ ಪ್ರೀತಿಯ ಹುಡುಗಿ ಜೊತೆ ಕೈಕೈ ಹಿಡಿದು ಸಾಗುತ್ತಿದ್ದಾನೆ. ಇಂಥಾ ಹೊತ್ತಲ್ಲಿ ಬದುಕಿನಲ್ಲೊಂದು ತಿರುವು ಎದುರಾಗುತ್ತದೆ.
ಮೊದಲ ಭಾಗದಲ್ಲಿ ಪ್ರೀತಿ, ಕುಟುಂಬ, ಕಷ್ಟ ಸಂಕಷ್ಟಗಳು ಎದುರಾದರೆ ದ್ವಿತೀಯಾರ್ಧದಲ್ಲಿ ಕತೆ ಬುದ್ಧಿವಂತಿಕೆಯ ಜಾಡು ಹಿಡಿಯುತ್ತದೆ. ಜಾಣ್ಮೆ ಎಷ್ಟರ ಮಟ್ಟಿಗೆ ಕೈ ಹಿಡಿಯುತ್ತದೆ ಎಂಬುದು ಈ ಕತೆಯ ಕುತೂಹಲಕರ ಅಂಶವಾಗಿದೆ. ಆರಂಭದಲ್ಲಿ ಕೊಂಚ ಹಗುರಾಗಿ ಕತೆ ಸಾಗುತ್ತದೆ. ನಾಳೆಗಳನ್ನು ಮೊದಲೇ ಊಹಿಸಬಹುದಾದಂತೆ ಕತೆ ಮುಂದಕ್ಕೆ ಸಾಗುತ್ತದೆ. ನಂತರದ ಭಾಗದಲ್ಲಿ ತೀವ್ರತೆ ಜಾಸ್ತಿಯಾಗುತ್ತಾ ಹೋಗುತ್ತದೆ. ಅಷ್ಟರ ಮಟ್ಟಿಗೆ ಸಶಕ್ತವಾಗಿ ಚಿತ್ರಕತೆ ಹೆಣೆದಿದ್ದಾರೆ ನಿರ್ದೇಶಕರು.
ಚಿತ್ರ: ರಾಜು ಜೇಮ್ಸ್ ಬಾಂಡ್
ನಿರ್ದೇಶನ: ದೀಪಕ್ ಮಧುವನಹಳ್ಳಿ
ತಾರಾಗಣ: ಗುರುನಂದನ್, ಮೃದುಲ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ
ರೇಟಿಂಗ್: 3
ಈ ಚಿತ್ರದ ಆಸ್ತಿ ಇಲ್ಲಿನ ಕಲಾವಿದರು. ರಾಜು ಪಾತ್ರಧಾರಿ ಗುರುನಂದನ್ ಮತ್ತು ನಾಯಕಿ ಮೃದುಲ ಸೊಗಸಾಗಿ ನಟಿಸಿದ್ದಾರೆ. ಸಾಧುಕೋಕಿಲ, ಚಿಕ್ಕಣ್ಣ ನಗಿಸುತ್ತಾರೆ. ರವಿಶಂಕರ್ ಎಂದಿನಂತೆ ಗಮನ ಸೆಳೆಯುತ್ತಾರೆ. ಇದೊಂದು ಮಧ್ಯಮ ವರ್ಗದ ಹುಡುಗನು ಕಷ್ಟಗಳಿಂದ ಪಾರಾಗಲು ಭಿನ್ನ ದಾರಿಯನ್ನು ತುಳಿಯುವ ಕತೆ. ಇಲ್ಲಿ ಮಧ್ಯಮ ವರ್ಗದ ಕಷ್ಟ ಕೋಟಲೆಗಳೂ ಇವೆ, ಅವನ ರಮ್ಯವಾದ ಕನಸೂ ಇದೆ. ಅದರಿಂದಲೇ ಕತೆ ಭಿನ್ನ ಅನ್ನಿಸುತ್ತದೆ.