Tribble Riding Review: ಫನ್ನು, ಎಮೋಷನ್ನು ಮತ್ತು ಗಣೇಶ್ ಎಲಿವೇಷನ್ನು
ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ತ್ರಿಬಲ್ ರೈಡಿಂಗ್ ಸಿನಿಮಾ ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಮೇಘಾ ಶೆಟ್ಟಿ, ಅದಿತಿ ಪ್ರಭುದೇವ ಮತ್ತು ರಚನಾ ನಟಿಸಿರುವ ಈ ಸಿನಿಮಾ ಹೇಗಿದೆ?
ಆರ್ ಕೇಶವಮೂರ್ತಿ
ತೆರೆ ಮೇಲೆ ಗಣೇಶ್ ಏನು ಮಾಡಿದರೆ ಇಷ್ಟಆಗುತ್ತದೋ ಅಷ್ಟೂಅಂಶಗಳನ್ನು ಕೂಡಿಸಿ, ಗುಣಿಸಿ ಒಂದು ಪರಿಪೂರ್ಣವಾದ ಫನ್ ಎಂಟರ್‌ಟೈನ್‌ಮೆಂಟ್ ಚಿತ್ರವನ್ನು ನಿರ್ದೇಶಕ ಮಹೇಶ್ ಗೌಡ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರದಲ್ಲಿ ಹೀರೋ ಚಮಕ್ ಮಾಡೋದು ಕಾಮನ್. ಆದರೆ, ನಾಯಕನ ಜತೆಗೆ ಮೂವರು ನಟಿಯರು ಆಟ ಆಡೋದು ಚಿತ್ರದ ಹೊಸತನ.
ಸಾಕಪ್ಪ ಸಾಕು ಈ ಹುಡುಗೀರ ಸಾವಾಸ ಅಂತ ಎಚ್ಚರದಿಂದ ಇರುವ ಲಾಯರ್ ಮಗನನ್ನು ಹುಡುಗಿಯರು ಹುಡುಕಿಕೊಂಡು ಬಂದು ಪ್ರೀತಿಸಿದರೆ ಏನಾಗುತ್ತದೆ. ಅದೇ ನಿಜವಾದ ಪ್ರೀತಿ ಎಂದುಕೊಂಡ ಹೀರೋ ಪಾಲಿಗೆ ಏನೆಲ್ಲ ಅವಾಂತರಗಳು ಆಗುತ್ತವೆ ಎಂಬುದನ್ನು ತೆರೆ ಮೇಲೆ ನೋಡಿ ಖುಷಿ ಪಡುವ ವಿಚಾರ.
Tribble Riding: ನಾಲ್ಕೈದು ಸಿನಿಮಾ ನಿರ್ದೇಶಿಸೋ ಆಸೆ: ಗಣೇಶ್
ತಾರಾಗಣ: ಗಣೇಶ್, ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಶೋಭರಾಜ್, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ
ನಿರ್ದೇಶನ: ಮಹೇಶ್ ಗೌಡ
ರೇಟಿಂಗ್: 3
ಒಬ್ಬಳು ಡಾಕ್ಟರ್, ಮತ್ತೊಬ್ಬಳು ಉದ್ಯಮಿ ಮಗಳು, ಇನ್ನೊಬ್ಬಳು ಕಾಫಿ ಎಸ್ಟೇಟ್ ಹುಡುಗಿ. ಈ ಮೂವರಿಗೂ ಬೇರೆ ಬೇರೆ ಹಂತದಲ್ಲಿ ನಾಯಕನ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ನಾಯಕ ಕೂಡ ಈ ಮೂವರ ಜತೆಗೆ ಲವ್ ಆಟವಾಡುತ್ತಾನೆ. ನಾಲ್ಕು ಜನರ ನಡುವಿನ ಈ ಲವ್ ಗೇಮ್ ಕೊನೆಗೆ ಏನಾಗುತ್ತದೆ, ಇಷ್ಟಕ್ಕೂ ಯಾರ ಪ್ರೀತಿ ಗೆಲ್ಲುತ್ತದೆ, ಪ್ರೇಮದಾಟ ಹುಟ್ಟಿಕೊಳ್ಳುವುದು ಯಾಕೆ, ರಾಜಕಾರಣಿ, ಪೊಲೀಸ್, ಉದ್ಯಮಿ ನಾಯಕನನ್ನು ಹಿಂಬಾಲಿಸುವುದು ಯಾಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಸಿನಿಮಾ ನೋಡಬೇಕು.
ವಿರಾಮದ ನಂತರ ಸ್ವಾರ್ಥಿ ಹುಡುಗಿ, ಮುಗ್ಧ ಹುಡುಗನ ಪ್ರೇಮದ ಕತೆ ನೋಡುಗರಿಗೆ ಮತ್ತಷ್ಟುಹತ್ತಿರವಾಗುತ್ತದೆ. ಈ ಸಂದರ್ಭದಲ್ಲಿ ಫನ್ನು, ಎಮೋಷನ್ನು ಮತ್ತು ಗಣೇಶ್ ಎಲಿವೇಷನ್ನು ಹೈಲೆಟ್ ಆಗಿ ನಿಲ್ಲುತ್ತದೆ. ಮಾಡದ ತಪ್ಪಿಗೆ ತಲೆಮರೆಸಿಕೊಂಡು ತಿರುಗಬೇಕಾದ ಪಾತ್ರದಲ್ಲಿ ಗಣೇಶ್ ನಟನೆ ಸಕ್ಕತ್. ಮೂವರು ನಾಯಕಿಯರು ನೋಡಲು ಮುದ್ದಾಗಿದ್ದಾರೆ.
ರಂಗಾಯಣ ರಘು ಹಾಗೂ ಸಾಧುಕೋಕಿಲ ನಗಿಸುತ್ತಾರೆ. ಹಾಡುಗಳು ಚೆನ್ನಾಗಿವೆ. ಲಾಜಿಕ್‌ಗಳ ಹೊರತಾಗಿ ಮನರಂಜನೆ ಕೊಡಬೇಕೆಂಬ ಉದ್ದೇಶದಿಂದ ತಯಾರಿಸಿರುವ ಸಿನಿಮಾ ಇದು.