Sanketh Film Review: ಕುತೂಹಲಕರ ವಿಭಿನ್ನ ಕಥಾನಕದ ಸಸ್ಪೆನ್ಸ್ ಥ್ರಿಲ್ಲರ್ 'ಸಾಂಕೇತ್'
ಮಕ್ಕಳಿಲ್ಲದ ದಂಪತಿಯ ನೋವನ್ನು ಈ ದಂಪತಿ ಕಾಡುವಂತೆ ದಾಟಿಸುತ್ತಾರೆ. ಈ ನಡುವೆ ಸಿನಿಮಾದಲ್ಲಿ ‘ಸಾಂಕೇತ್ʼ ಎಂಟ್ರಿ ಆಗುತ್ತದೆ. ಸಾಂಕೇತ್ ಸೂಚಿಸುವ ಸಲಹೆಗಳು ವಿಚಿತ್ರ ಹಾಗೂ ವಿಭಿನ್ನ ಮಾರ್ಗದ್ದಾಗಿರುತ್ತದೆ.
ಸತ್ಯನಾರಾಯಣ
ಮೇಲ್ನೋಟಕ್ಕೆ ಕೌಟುಂಬಿಕ ಸಿನಿಮಾದಂತೆ ಆರಂಭವಾಗುವ ಚಿತ್ರ ನೋಡುನೋಡುತ್ತಾ ಕುತೂಹಲಕರ ದಾರಿ ಹಿಡಿಯುತ್ತದೆ. ಸಸ್ಪೆನ್ಸ್, ಥ್ರಿಲ್ಲರ್ ಗುಣವನ್ನು ಧರಿಸಿಕೊಂಡು ನೋಡುಗರಿಗೆ ಹತ್ತಿರವಾಗುತ್ತಾ ಹೋಗುತ್ತದೆ. ಆ ಗುಣವೇ ಈ ಸಿನಿಮಾದ ಹೆಚ್ಚುಗಾರಿಕೆ. ಒಂದು ಕುಟುಂಬ, ಆ ಕುಟುಂಬದಲ್ಲಿ ಸಂತಸ, ಸಂಭ್ರಮ ಎಲ್ಲವೂ ಇದೆ. ಆದರೆ ಒಂದು ತೊಂದರೆ ಇದೆ. ಆ ದಂಪತಿಗೆ ಮಕ್ಕಳಿಲ್ಲ ಎಂಬ ಒಂದೇ ಕಾರಣಕ್ಕೆ ಸಮಾಜ ಚುಚ್ಚುತ್ತಿರುತ್ತದೆ. ನೋಯಿಸುತ್ತಿರುತ್ತದೆ. ಮಾನಸಿಕ ಹಿಂಸೆ ಕೊಡುತ್ತಿರುತ್ತದೆ. ಆ ಇಬ್ಬರು ವೈದ್ಯರಾಗಿದ್ದು, ಆಸ್ತಿ ಅಂತಸ್ತು, ಬಂಗಲೆ, ಬಂಗಾರ ಎಲ್ಲವೂ ಇದ್ದರೂ ಅವರಿಗೆ ಮಕ್ಕಳಾಗಿಲ್ಲ ಎನ್ನುವುದೇ ಎಲ್ಲದಕ್ಕಿಂತ ದೊಡ್ಡ ಕೊರತೆ ಹಾಗೂ ಚಿಂತೆ.
ಮಕ್ಕಳಿಲ್ಲದ ದಂಪತಿಯ ನೋವನ್ನು ಈ ದಂಪತಿ ಕಾಡುವಂತೆ ದಾಟಿಸುತ್ತಾರೆ. ಈ ನಡುವೆ ಸಿನಿಮಾದಲ್ಲಿ ‘ಸಾಂಕೇತ್ʼ ಎಂಟ್ರಿ ಆಗುತ್ತದೆ. ಸಾಂಕೇತ್ ಸೂಚಿಸುವ ಸಲಹೆಗಳು ವಿಚಿತ್ರ ಹಾಗೂ ವಿಭಿನ್ನ ಮಾರ್ಗದ್ದಾಗಿರುತ್ತದೆ. ಇದರಿಂದ ಈ ದಂಪತಿಗೆ ಮಕ್ಕಳಾಗುತ್ತಾದೋ, ಇಲ್ಲ, ಕಷ್ಟ ಉಂಟಾಗುತ್ತದೋ ಎಂಬುದು ಕಥಾ ಹಂದರ. ಮೊದಲಾರ್ಧ ಕೊಂಚ ಗೊಂದಲವಾಗಿ, ನಿಧಾನವಾಗಿ ಸಾಗಿದರೂ ದ್ವಿತೀಯಾರ್ಧದಲ್ಲಿ ಕಥೆ ಮೊನಚಾಗಿ ಮುಂದುವರಿಯುತ್ತದೆ. ದಂಪತಿಯ ಬದುಕಲ್ಲಿ ವಿಚಿತ್ರ ತಿರುವು ಎದುರಾಗುತ್ತದೆ. ಪ್ರಧಾನ ಪಾತ್ರಧಾರಿ ಪೃಥ್ವಿ ‘ಸಾಂಕೇತ್’ ಹೇಳಿಕೊಟ್ಟ ಮಂತ್ರವನ್ನು ಹೇಳುವುದು, ಒಬ್ಬನೇ ಇರುವುದು, ಕತ್ತಲನ್ನೇ ಬೆಳಕು ಎನ್ನುವಂತೆ ಪ್ರೀತಿಸಲು ಶುರು ಮಾಡುತ್ತಾನೆ.
ಚಿತ್ರ: ಸಾಂಕೇತ್
ನಿರ್ದೇಶನ: ಜ್ಯೋತ್ಸ್ನಾ ರಾಜ್
ತಾರಾಗಣ: ಚೈತ್ರಾ ಶೆಟ್ಟಿ, ವಿಕ್ಕಿ ರಾವ್, ಮೋಹನ ಶೇಣಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ರೂಪಶ್ರೀ ವರ್ಕಾಡಿ, ಸದಾಶಿವ ಅಮೀನ್, ನಿರೀಕ್ಷಾ ರಾಣಿ, ರಜಿತ್ ಕದ್ರಿ, ಮೇಘನಾ, ರಕ್ಷಿತಾ
ರೇಟಿಂಗ್: 3
ಈ ಬದಲಾವಣೆಗೆ ಕಾರಣಗಳೇನು? ನಿಗೂಢವಾಗಿ ನಡೆಯುವ ಘಟನೆಗಳ ಹಿಂದಿರುವ ‘ಸಾಂಕೇತ್’ ಯಾರು? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹೀಗೆ ಕಥೆ ಮುಂದುವರಿಯುತ್ತಾ ಹೋದಂತೆ ‘ಸಾಂಕೇತ್’ ಯಾರು ಎಂಬುದನ್ನು ಪ್ರಸ್ತುತ ಪಡಿಸಿರುವ ರೀತಿ ಪ್ರೇಕ್ಷಕರಿಗೆ ಥ್ರಿಲ್ ಅನುಭವ ಒದಗಿಸುತ್ತದೆ. ಮಾಟ ಮಂತ್ರ, ಅಂಜಿಕೆ- ನಂಬಿಕೆ, ಅಪನಂಬಿಕೆ ಹೀಗೆ ‘ಸಾಂಕೇತ್’ ಎಲ್ಲ ಅಂಶಗಳ ಮೇಲೆ ಬೆಳಕು ಚೆಲ್ಲುವುದು ವಿಶೇಷ. ನಿರ್ದೇಶಕರಾದ ಜ್ಯೋತ್ಸಾ ರಾಜ್ ಈ ಸಿನಿಮಾದಲ್ಲಿ ಚಾತುರ್ಯ ಮೆರೆದಿದ್ದಾರೆ. ವಿಭಿನ್ನ ರೀತಿಯಲ್ಲಿ ಆಕರ್ಷಕವಾಗಿ ಕಥೆ ಹೇಳಿದ್ದಾರೆ. ಜೊತೆಗೆ ಮಹತ್ವದ ಆಲೋಚನೆ ಹುಟ್ಟುಹಾಕಲು ಯಶಸ್ವಿಯಾಗಿದ್ದಾರೆ.
ವಿಚ್ಛೇದನ ಬಯಸಿದ್ದ ಜೋಡಿ ಮತ್ತೆ ಒಂದಾದಾಗ: ದೋ ಔರ್ ದೋ ಪ್ಯಾರ್ ರಿವ್ಯೂ
ಎಲ್ಲವನ್ನೂ ಹೇಳಿ ಮುಗಿಸದೇ ಕೊನೆಗೆ ನಮ್ಮಲ್ಲೇ ಒಂದಷ್ಟು ಪ್ರಶ್ನೆಗಳನ್ನು ಉಳಿಸಿ ಅದಕ್ಕೆ ಉತ್ತರವನ್ನು ನಾವೇ ಹುಡುಕಬೇಕೆನ್ನುವ ತಂತ್ರವನ್ನು ಬಳಸಿಕೊಂಡು ಉತ್ತಮ ಕಸುಬುದಾರಿಕೆ ತೋರಿದ್ದಾರೆ. ಹಿನ್ನೆಲೆ ಸಂಗೀತ ಚಿತ್ರದಲ್ಲಿನ ಥ್ರಿಲ್ಲರ್ ಅಂಶಗಳಿಗೆ ತಕ್ಕಂತೆ ಮೂಡಿಬಂದಿದೆ. ಅಲ್ಲಲ್ಲಿ ಒಂದಷ್ಟು ಅಂಶಗಳು ಅರ್ಧದಲ್ಲೇ ಮುಗಿದು ಉತ್ತರವಿಲ್ಲದೆ ಉಳಿದು ಬಿಡುತ್ತದೆ. ಆದರೆ ಈ ಎಲ್ಲಾ ವಿಚಾರವನ್ನು ಬದಿಗಿಟ್ಟು ನೋಡಿದರೆ ‘ಸಾಂಕೇತ್’ ನೋಡಿ ಬರಲು ಅಡ್ಡಿ ಇಲ್ಲ. ಒಂದೊಳ್ಳೆ ಥ್ರಿಲ್ಲರ್ ಸಿನಿಮಾವನ್ನು ನೋಡಲು ಇಷ್ಟಪಡುವವರು ರಿವರ್ ಸ್ಟ್ರೀಮ್ ಸ್ಟುಡಿಯೋಸ್ ನಿರ್ಮಿಸಿರುವ ‘ಸಾಂಕೇತ್’ ಸಿನಿಮಾವನ್ನು ನೋಡಿ ಬರಬಹುದು.