ಉಡುಪಿಯ ಶಿವಪುರ ಅರೆ ಮಲೆನಾಡು ಅರೆ ಕರಾವಳಿ ಜಾಗದಲ್ಲಿ ಇಡೀ ಸಿನಿಮಾ ನಡೆಯುತ್ತದೆ. ಈ ಊರಿಗೆ ಡ್ಯೂಟಿ ಹಾಕಿಸಿಕೊಂಡು ಬರುವ ಸಬ್ ಇನ್ಸ್‌ಪೆಕ್ಟರ್ ಆತ್ರೇಯ.
ಪೀಕೆ
‘ಆಟಿ ಅಮಾವಾಸ್ಯೆ ದಿನ ಕುಡಿಯೋ ಹಾಲೆ ಮರದ ತೊಗಟೆಯ ಕಷಾಯ ದೇಹದ ಖಾಯಿಲೆ ವಾಸಿ ಮಾಡುತ್ತೆ, ಪರಮೇಶ್ವರನ ಪ್ರತಿನಿಧಿಯಾಗಿ ಬರುವ ಆಟಿ ಕಳೆಂಜ ಊರಿನ ಮಾರಿ ದೂರ ಮಾಡ್ತಾನೆ.’ ಇದು ತುಳುನಾಡಿನ ನಂಬಿಕೆ. ಅಧಿಪತ್ರ ಸಿನಿಮಾ ಮನುಷ್ಯನ ಮನಸ್ಸಿನೊಳಗಿನ ದುರಾಸೆ, ದುರುಳತನಕ್ಕೆ ಹಾಲೆ ಕೆತ್ತೆಯ ಕಷಾಯ ಕುಡಿಸುವ ಧೀರನ ಕಥೆ ಹೇಳುತ್ತದೆ. ಉಡುಪಿಯ ಶಿವಪುರ ಅರೆ ಮಲೆನಾಡು ಅರೆ ಕರಾವಳಿ ಜಾಗದಲ್ಲಿ ಇಡೀ ಸಿನಿಮಾ ನಡೆಯುತ್ತದೆ. ಈ ಊರಿಗೆ ಡ್ಯೂಟಿ ಹಾಕಿಸಿಕೊಂಡು ಬರುವ ಸಬ್ ಇನ್ಸ್‌ಪೆಕ್ಟರ್ ಆತ್ರೇಯ.
ಆತನಿಗೆ ಮೊದಲು ಎದುರಾಗುವ ಕೇಸ್ ಆ ಊರಿನಲ್ಲಾದ ಎರಡು ಅನುಮಾನಾಸ್ಪದ ಸಾವುಗಳದ್ದು. ಊರಿನವರ ಬ್ರಹ್ಮರಾಕ್ಷಸನ ಬಗೆಗಿನ ನಂಬಿಕೆ, ಗಗ್ಗರ ಬೆಟ್ಟ, ಅದರ ಹಿಂದೆ ಊರವರು ಹೇಳುವ ಚಿತ್ರವಿಚಿತ್ರ ಕಥೆಗಳು, ಇವೆಲ್ಲ ನಾಯಕ ಆತ್ರೇಯನನ್ನು ದಿಕ್ಕೆಡಿಸುತ್ತವೆ. ಆದರೆ ಇವೆಲ್ಲವೂ ಆತನನ್ನು ಒಂದು ಗಮ್ಯದತ್ತ ಮುನ್ನಡೆಸುತ್ತದೆ. ಆ ಗಮ್ಯ ಯಾವುದು? ಈ ಸಬ್ ಇನ್ಸ್‌ಪೆಕ್ಟರ್ ಆತ್ರೇಯ ಆ ಊರಿಗೇ ಡ್ಯೂಟಿ ಹಾಕಿಸಿಕೊಂಡು ಬಂದದ್ದರ ಉದ್ದೇಶ ಏನು? ಆ ಊರಿನ ಜನರ ಬಾಯಲ್ಲಿ ಹರಿದಾಡುವ ಕಥೆಗೂ ಆತನಿಗೂ ಸಂಬಂಧ ಇದೆಯಾ? ಎರಡು ಅನುಮಾನಾಸ್ಪದ ಸಾವುಗಳ ಹಿಂದಿನ ಕೈವಾಡ ಯಾರದ್ದು ಎಂಬೆಲ್ಲ ಅಂಶಗಳು ಸಿನಿಮಾದ ಹೈಲೈಟ್.
ಅಧಿಪತ್ರ
ತಾರಾಗಣ: ರೂಪೇಶ್ ಶೆಟ್ಟಿ, ರಘು ಪಾಂಡೇಶ್ವರ, ಜಾಹ್ನವಿ, ಎಂ ಕೆ ಮಠ, ಪ್ರಕಾಶ್ ತುಮಿನಾಡು
ನಿರ್ದೇಶನ: ಚಯನ್ ಶೆಟ್ಟಿ
ರೇಟಿಂಗ್ : 3
ಉಡುಪಿ ಜಿಲ್ಲೆಯ ತುಳುನಾಡಿನ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಕಥೆ ನಡೆಯುತ್ತದೆ. ಸೀರಿಯಸ್ ಇನ್‌ವೆಸ್ಟಿಗೇಶನ್ ಸ್ಟೋರಿ ಜೊತೆಗೆ ನಗು ತರಿಸುವ ಕಾಮಿಡಿ ಸನ್ನಿವೇಶಗಳಿವೆ. ದೀಪಕ್ ರೈ, ಪ್ರಕಾಶ್ ತುಮಿನಾಡು ಮ್ಯಾನರಿಸಂನಿಂದಲೆ ನಗು ಚಿಮ್ಮಿಸುತ್ತಾರೆ. ರೂಪೇಶ್ ಶೆಟ್ಟಿ ಪರ್ಸನಾಲಿಟಿ ಚಂದ. ನಟನೆಯಲ್ಲೂ ಅವರು ಹಿಂದೆ ಬಿದ್ದಿಲ್ಲ. ನಿರ್ದೇಶಕ ಚಯನ್ ಶೆಟ್ಟಿ ಒಳ್ಳೆ ನಿರ್ದೇಶಕರಾಗುವ ಸೂಚನೆಯನ್ನು ಈ ಸಿನಿಮಾದಲ್ಲಿ ನೀಡಿದ್ದಾರೆ. ಉಳಿದಂತೆ ನಂಬಿಕೆ ದ್ರೋಹ, ದುರಾಸೆಗೆ ಮದ್ದೆರೆಯುವ ಪ್ರತಿಕಾರದ ಕಥೆಯಾಗಿ ಅಧಿಪತ್ರ ಗಮನಸೆಳೆಯುತ್ತದೆ.
