ಚಿತ್ರವಿಮರ್ಶೆ: ವಿಷಾದ, ಬೆರಗು ಹುಟ್ಟಿಸುವ ಗಾಢ ಕತೆ ಹೆಜ್ಜಾರು
ಒಬ್ಬನ ಜೀವನದಲ್ಲಿ ನಡೆದ ಘಟನೆಗಳು ಮತ್ತೊಬ್ಬನ ಜೀವನದಲ್ಲಿಯೂ ನಡೆಯುತ್ತಾ ಹೋಗುತ್ತದೆ. ಅದಕ್ಕೊಂದು ತಾರ್ಕಿಕ ಅಂತ್ಯವನ್ನು ಕೊಡುವ ಸಿನಿಮಾ ನೋಡುಗನಲ್ಲಿ ಬೆರಗು ಮತ್ತು ವಿಷಾದ ಎರಡನ್ನೂ ಉಂಟು ಮಾಡುತ್ತದೆ. ಅದೇ ಈ ಸಿನಿಮಾದ ಹೆಚ್ಚುಗಾರಿಕೆ.
ರಾಜೇಶ್ ಶೆಟ್ಟಿ
ಅದೊಂದು ಊರು. ಅಲ್ಲೊಂದು ಆಲದ ಮರ. ಆ ಮರದ ಕೆಳಗೆ ನಡೆಯುವ ನಿಗೂಢ ಘಟನೆಗಳಿಗೂ ಈ ಸಿನಿಮಾದ ಮುಖ್ಯ ಕತೆಗೂ ಒಂದು ನಂಟಿದೆ. ಆ ನಿಗೂಢತೆ ಮತ್ತು ಲೌಕಿಕತೆ ಎರಡನ್ನೂ ಹೆಣೆದು ಸುಂದರವಾಗಿ ರೂಪಿಸಿರುವ ಒಂದು ವಿಭಿನ್ನ ಸಿನಿಮಾ ಇದು. ಒಬ್ಬನ ಜೀವನದಲ್ಲಿ ನಡೆದ ಘಟನೆಗಳು ಮತ್ತೊಬ್ಬನ ಜೀವನದಲ್ಲಿಯೂ ನಡೆಯುತ್ತಾ ಹೋಗುತ್ತದೆ. ಅದಕ್ಕೊಂದು ತಾರ್ಕಿಕ ಅಂತ್ಯವನ್ನು ಕೊಡುವ ಸಿನಿಮಾ ನೋಡುಗನಲ್ಲಿ ಬೆರಗು ಮತ್ತು ವಿಷಾದ ಎರಡನ್ನೂ ಉಂಟು ಮಾಡುತ್ತದೆ. ಅದೇ ಈ ಸಿನಿಮಾದ ಹೆಚ್ಚುಗಾರಿಕೆ.
ನಿರ್ದೇಶಕ ಹರ್ಷಪ್ರಿಯ ಸೊಗಸಾಗಿ ಚಿತ್ರಕತೆಯನ್ನು ಹೆಣೆದಿದ್ದಾರೆ. ಒಂದು ಸುಂದರವಾದ ಹಸಿರು ಊರಿನಲ್ಲಿ ಕತೆ ಹೇಳುತ್ತಾರೆ. ಅಲ್ಲೊಬ್ಬ ಆ್ಯಂಗ್ರಿ ಯಂಗ್‌ಮ್ಯಾನ್. ಅವನಿಗೊಬ್ಬಳು ಪ್ರೇಯಸಿ. ತ್ಯಾಗಮಯಿ ಅಮ್ಮ. ದುಷ್ಟ ಪಡೆ. ಜೊತೆಗೊಬ್ಬ ನಿಗೂಢ ಮನುಷ್ಯ. ಈ ಪಾತ್ರಗಳಿಂದಾಗಿ ಕತೆ ಒಂದೊಂದೇ ಹಂತಕ್ಕೆ ಮೇಲೆ ದಾಟುತ್ತಾ ಹೋಗುತ್ತದೆ. ಇಂಟರ್ವಲ್‌ನಲ್ಲಿ ಕತೆ ಮತ್ತೊಂದು ಸ್ಥರಕ್ಕೆ ಹೋಗುತ್ತದೆ. ಈ ಕತೆಯನ್ನು ಹೆಚ್ಚು ಗಾಢವಾಗಿಸುವುದು ಹಿನ್ನೆಲೆ ಸಂಗೀತ ಮತ್ತು ಕಲಾವಿದರು. ಹೊಸ ಹೀರೋ ಭಗತ್ ಆಪ್ತವಾಗುತ್ತಾ ಹೋಗುತ್ತಾರೆ. ಉತ್ತಮ ಕಲಾವಿದನ ಲಕ್ಷಣ ಹೊಂದಿದ್ದಾರೆ.
ಚಿತ್ರ: ಹೆಜ್ಜಾರು
ನಿರ್ದೇಶನ: ಹರ್ಷಪ್ರಿಯ
ತಾರಾಗಣ: ಭಗತ್ ಆಳ್ವ, ಗೋಪಾಲಕೃಷ್ಣ ದೇಶಪಾಂಡೆ, ಶ್ವೇತಾ ಡಿಸೋಜಾ, ಅರುಣಾ ಬಾಲರಾಜ್
ರೇಟಿಂಗ್: 3
ಗೋಪಾಲಕೃಷ್ಣ ದೇಶಪಾಂಡೆ ಮಂತ್ರಮುಗ್ಧಗೊಳಿಸುತ್ತಾರೆ. ನಾಯಕಿ ಶ್ವೇತಾ ಗಮನ ಸೆಳೆಯುತ್ತಾರೆ. ಆತಂಕಿತ ಅಮ್ಮನ ಪಾತ್ರದಲ್ಲಿ ಅರುಣಾ ಬಾಲರಾಜ್ ಮನಸಲ್ಲಿ ಉಳಿಯುತ್ತಾರೆ. ವಿಶಿಷ್ಟವಾದ ಕಂಟೆಂಟ್ ಜೊತೆಗೆ ಕಮರ್ಷಿಯಲ್ ಅಂಶಗಳನ್ನೂ ತಂದಿರುವುದು ನಿರ್ದೇಶಕರ ಸಿನಿಮಾ ಪ್ರೀತಿಗೆ ಸಾಕ್ಷಿಯಂತಿದೆ. ಎಲ್ಲರನ್ನೂ ಒಳಗೊಳ್ಳುವಂತೆ ಅವರು ಸಿನಿಮಾ ರೂಪಿಸಿದ್ದಾರೆ. ಹಾಗಾಗಿ ಇಲ್ಲಿ ಮೌನವೂ ಇದೆ, ಕೊಂಚ ಸದ್ದೂ ಇದೆ. ಎಲ್ಲವೂ ಸೇರಿ ಇದನ್ನು ನೋಡುವ ಮತ್ತು ಕಾಡುವ ಸಿನಿಮಾ ಆಗಿಸಿದೆ.