Pinki Elli Review: ಹುಡುಕಾಟದಲ್ಲಿ ಜೀವನ ದರ್ಶನ
ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ, ಅನೂಪ್ ಶೂನ್ಯ ನಟಿಸಿರುವ ಪಿಂಕಿ ಎಲ್ಲಿ ಸಿನಿಮಾ ರಿಲೀಸ್ ಅಗಿದೆ. ಹೇಗಿದೆ ಸಿನಿಮಾ?
ಪ್ರಿಯಾ ಕೆರ್ವಾಶೆ
ಉದ್ದೇಶ ಕಳೆದು ಹೋದ ಮಗುವಿನ ಹುಡುಕಾಟವಾದರೂ, ಕಾಣ ಸಿಗುವುದು ಹತ್ತಾರು ಸಂಗತಿಗಳು. ಅವು ಕತೆಗೆ ತಮ್ಮ ಕೊಡುಗೆ ನೀಡುತ್ತಲೇ ಪ್ರತ್ಯೇಕವಾಗಿಯೂ ಗುರುತಿಸಿಕೊಳ್ಳುವುದು ಈ ಚಿತ್ರದ ವಿಶೇಷತೆ. ಜೊತೆಗೆ ಸಹಜ ನಿರೂಪಣೆಯ ಶಕ್ತಿಯನ್ನೂ ನಿರ್ದೇಶಕ ಪೃಥ್ವಿ ಕೊಣನೂರು ''ಪಿಂಕಿ ಎಲ್ಲಿ?'' ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ.
ಗಂಡ ಮಂಜುನಾಥ್‌ನಿಂದ ಪ್ರತ್ಯೇಕವಾಗಿ ಎಂಟು ತಿಂಗಳ ಮಗಳು ಪಿಂಕಿ ಹಾಗೂ ಗೆಳೆಯ ಗಿರೀಶ್ ಜೊತೆ ಬದುಕುತ್ತಿರುವ ಹೆಣ್ಣುಮಗಳು ಬಿಂದುಶ್ರೀ. ಸಣ್ಣಮ್ಮ ಮಗುವನ್ನು ನೋಡಿಕೊಳ್ಳುವ ಸಹಾಯಕಿ. ಯಜಮಾನಿ ಕೆಲಸಕ್ಕೆ ಹೊರಟ ಮೇಲೆ ಮಗುವಿಗೆ ಹಾಲಿನ ಜೊತೆ ರಮ್ಮು ಮಿಕ್ಸ್ ಮಾಡಿ ಕುಡಿಸುತ್ತಾಳೆ. ತನ್ನ ತಂಗಿ ಅನ್ಸು ಮೂಲಕ ಭಿಕ್ಷಾಟನೆಗೆ ಹಚ್ಚುತ್ತಾಳೆ. ಭಿಕ್ಷೆಗೆ ಕೊಟ್ಟ ಮಗು ಮಿಸ್ ಆಗುವುದರೊಂದಿಗೆ ಹುಡುಕಾಟ ಶುರು. ಸಣ್ಣಮ್ಮನ ಜೀವನ, ಮಗು ಕೊಂಡೊಯ್ಯುವ ಪಾತುವಿನ ಕತ್ತಲ ಬದುಕು, ಮಣ್ಣಿಗೆ ಕೊಳಚೆ ನೀರು ಹಾಯಿಸಿ ಆ್ಯಸಿಡ್ ಮಿಕ್ಸ್ ಮಾಡಿ ಚಿನ್ನ ತೆಗೆಯುವವರ ದಿನಚರಿ ಇತ್ಯಾದಿ ಸಣ್ಣ ಡೀಟೇಲ್ ಗಳ ಜೊತೆಗೆ ತನ್ನವರ್ಯಾರು ಹೊರಗಿನವರ್ಯಾರು ಅನ್ನೋದನ್ನರಿಯದ ಬಿಂದುಶ್ರೀ, ಅವಳ ಕತೆ.. ಎಲ್ಲ ಸೇರಿ ಸಿನಿಮಾವಾಗಿದೆ. ನಿತ್ಯ ಬದುಕಿನಲ್ಲಿ ನಡೆಯುವ ಸಂಗತಿಯಷ್ಟೇ ಸಹಜವಾಗಿ ಸಿನಿಮಾ ಪ್ರೇಕ್ಷಕನನ್ನು ತಲುಪುತ್ತದೆ.
ಅಕ್ಷತಾ ಪಾಂಡವಪುರಗೆ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಶ್ರೇಷ್ಠ ನಟಿ ಪ್ರಶಸ್ತಿ
ತಾರಾಗಣ: ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ, ಅನೂಪ್ ಶೂನ್ಯ
ನಿರ್ದೇಶನ: ಪೃಥ್ವಿ ಕೋಣನೂರು
ರೇಟಿಂಗ್: 4
ಪ್ರಶಸ್ತಿ ಅವಕಾಶ ಸೃಷ್ಟಿಸುತ್ತೆ ಅನ್ನುವ ಭರವಸೆಯಿಲ್ಲ: ಅಕ್ಷತಾ ಪಾಂಡವಪುರ
ಕಲಾತ್ಮಕ ಚೌಕಟ್ಟಿನ ಗಂಭೀರ ಚಿಂತನೆಯ ಈ ಸಿನಿಮಾ ಹತ್ತಾರು ಪ್ರಶ್ನೆಗಳನ್ನೂ ಹುಟ್ಟಿಸುತ್ತದೆ. ಮನರಂಜನೆಯಷ್ಟೇ ಸಿನಿಮಾದ ಉದ್ದೇಶ ಅಲ್ಲ, ಅದರಾಚೆಗೂ ಸಿನಿಮಾಕ್ಕೆ ಅನೇಕ ಸಾಧ್ಯತೆಗಳಿವೆ ಅನ್ನೋದನ್ನು ಈ ಸಿನಿಮಾ ಮನದಟ್ಟು ಮಾಡಿಸುತ್ತದೆ. ಅಕ್ಷತಾ ಪಾಂಡವಪುರ ಪಾತ್ರವೇ ಆಗಿ ಜೀವ ತುಂಬಿದ್ದಾರೆ. ನಟನೆಯ ಯಾವ ಟ್ರೈನಿಂಗೂ ಇಲ್ಲದ ಉತ್ತರ ಕರ್ನಾಟಕದ ಹೆಣ್ಮಕ್ಕಳು, ಕೊಳೆಗೇರಿಯ ನಿವಾಸಿಗಳ ಸಹಜ ನಟನೆ ಸಿನಿಮಾದ ಜೀವಾಳ. ಸಣ್ಣ ಬ್ಯಾಗ್ರೌಂಡ್ ಸ್ಕೋರ್ ಸಹ ಇಲ್ಲದೇ ಸಹಜ ನಿರೂಪಣೆಯ ಪರಿಣಾಮ ಏನು ಅನ್ನೋದನ್ನೂ ನಿರ್ದೇಶಕ ಪೃಥ್ವಿ ಕೊಣನೂರು ಪಿಂಕಿ ಎಲ್ಲಿ ಸಿನಿಮಾ ಮೂಲಕ ತೋರಿಸಿಕೊಟ್ಟಿದ್ದಾರೆ.