ನಟ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಅಭಿನಯದ ʼಸಿಕಂದರ್ʼ‌ ಸಿನಿಮಾ ರಿಲೀಸ್‌ ಆಗಿದ್ದು, ಸಿನಿಮಾ ಹೇಗಿದೆಯಂತೆ? 

ನಟ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ ʼಸಿಕಂದರ್ʼ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಎಆರ್ ಮುರುಗದಾಸ್ ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ. 

ಚಿತ್ರದ ಕಥೆ, ತಾರಾ ಬಳಗದ ನಟನೆಯಲ್ಲಿ ಯಾವುದೇ ಹುರುಪು ಕಾಣುತ್ತಿಲ್ಲ. ಚಿತ್ರದಲ್ಲಿ ಹಲವು ನ್ಯೂನತೆಗಳಿದ್ದು, ಉತ್ತಮ ಎಡಿಟಿಂಗ್ ಮೂಲಕ ಸರಿಪಡಿಸಬಹುದಾಗಿತ್ತು. ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರ ಸಿಕಂದರ್ ಚಿತ್ರದ ಬಜೆಟ್ 200 ಕೋಟಿ ರೂಪಾಯಿ. ಇದರಲ್ಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಪ್ರತಿ ವಿಷಯದ ಬಗ್ಗೆ ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಸಲ್ಮಾನ್ ಖಾನ್ ʼಸಿಕಂದರ್ʼ ಕಥೆ ಏನು?
ʼಸಿಕಂದರ್ʼ ಚಿತ್ರದ ಕಥೆ ರಾಜಕೋಟ್‌ನ ರಾಜ ಸಂಜಯ್ ರಾಜಕೋಟ್ ಸುತ್ತ ಸುತ್ತುತ್ತದೆ, ಈ ಪಾತ್ರವನ್ನು ಸಲ್ಮಾನ್ ಖಾನ್ ನಿಭಾಯಿಸಿದ್ದಾರೆ. ರಾಜಕೋಟ್‌ನ ಜನರು ಅವರನ್ನು ದೇವರಂತೆ ಕಾಣುತ್ತಾರೆ, ಪೂಜಿಸುತ್ತಾರೆ. ಚಿತ್ರದ ಆರಂಭದಲ್ಲಿ, ಸಚಿವನ ಮಗ ಅರ್ಜುನ್ (ಪ್ರತೀಕ್ ಬಬ್ಬರ್) ವಿಮಾನದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ. ಆಗ ಸಂಜಯ್ ಸ್ಥಳಕ್ಕೆ ಆಗಮಿಸಿ ಅರ್ಜುನ್‌ಗೆ ತಕ್ಕ ಪಾಠ ಕಲಿಸುತ್ತಾನೆ. ಈ ಅವಮಾನದಿಂದ ಅರ್ಜುನ್ ಕೋಪಗೊಂಡು ಸಂಜಯ್ ಸೇಡು ತೀರಿಸಿಕೊಳ್ಳಲು ಬಯಸುತ್ತಾನೆ. ಇವೆಲ್ಲವನ್ನೂ ನೋಡಿದ ಮಂತ್ರಿ ಗೂಂಡಾಗಳು ಸಂಜಯ್‌ನನ್ನು ಹಿಂಬಾಲಿಸುತ್ತಾರೆ. ಈ ಸೇಡಿನ ಹೋರಾಟದಲ್ಲಿ ಸಂಜಯ್ ತನ್ನ ಪತ್ನಿ ಸಾಯಿಶ್ರೀಯನ್ನು ಕಳೆದುಕೊಳ್ಳುತ್ತಾನೆ, ಈ ಪಾತ್ರವನ್ನು ರಶ್ಮಿಕಾ ಮಂದಣ್ಣ ನಿರ್ವಹಿಸಿದ್ದಾರೆ. ನಂತರ ನಿಜವಾದ ಆಟ ಶುರುವಾಗುತ್ತದೆ. ಸಾಯಿಶ್ರೀ ಸಾಯುವ ಮೊದಲು ತನ್ನ ದೇಹದಾನ ಮಾಡುತ್ತಾಳೆ, ಇದರಿಂದ 3 ಬೇರೆ ಬೇರೆ ಜನರ ಜೀವ ಉಳಿಯುತ್ತದೆ. ಈ ಮೂವರ ಜೀವದ ಹಿಂದೆ ಮಂತ್ರಿಯ ಗೂಂಡಾಗಳು ಬೀಳುತ್ತಾರೆ. ಈ ಮೂವರ ಜೀವ ಉಳಿಸಲು, ತನ್ನ ಹೆಂಡತಿಯ ಸಾವಿಗೆ ಸೇಡು ತೀರಿಸಿಕೊಳ್ಳಲು ಸಿಕಂದರ್ ರಾಜಕೋಟ್‌ನಿಂದ ಮುಂಬೈಗೆ ಬರುತ್ತಾನೆ. ಅವನು ತನ್ನ ಗುರಿಯಲ್ಲಿ ಯಶಸ್ವಿಯಾಗುತ್ತಾನಾ, ಅವನು ತನ್ನ ಸೇಡನ್ನು ತೀರಿಸಿಕೊಳ್ಳುತ್ತಾನಾ? ಅವನು ಆ ಮೂವರ ಜೀವವನ್ನು ಏಕೆ ಉಳಿಸುತ್ತಾನೆ? ಇವೆಲ್ಲವನ್ನೂ ತಿಳಿಯಲು ನೀವು ಸಿನಿಮಾ ನೋಡಬೇಕು.

ಸಿಕಂದರ್ ತಾರಾ ಬಳಗದ ನಟನೆ ಹೇಗಿದೆ?
ಸಿಕಂದರ್ ಚಿತ್ರದಲ್ಲಿ ಸಂಜಯ್ ರಾಜಕೋಟ್ ಪಾತ್ರದಲ್ಲಿ ನಟಿಸಿರುವ ಸಲ್ಮಾನ್ ಖಾನ್ ಅವರ ನಟನೆಯಲ್ಲಿ ಯಾವುದೇ ಹೊಸತನವಿಲ್ಲ. ಸಲ್ಮಾನ್ ಚಿತ್ರದಲ್ಲಿ ಅದ್ಭುತವಾಗಿ ಆಕ್ಷನ್ ಮಾಡಿದ್ದಾರೆ, ಆದರೆ ಅವರ ಹಾಸ್ಯ, ಕಾಮಿಡಿ ಮತ್ತು ಡೈಲಾಗ್‌ಗಳು ಅಷ್ಟೇನೂ ಚೆನ್ನಾಗಿಲ್ಲ. ಅವರು ಭಾವನಾತ್ಮಕ ಡೈಲಾಗ್‌ಗಳನ್ನು ಸಹ ಪೂರ್ತಿ ಭಾವನೆಯಿಂದ ಹೇಳಲು ಸಾಧ್ಯವಾಗಲಿಲ್ಲ. ರಶ್ಮಿಕಾ ಮಂದಣ್ಣಗೆ ತೆರೆಯ ಮೇಲೆ ಕಾಣಿಸಿಕೊಳ್ಳಲು ಕಡಿಮೆ ಸಮಯ ಸಿಕ್ಕರೂ, ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಶರ್ಮನ್ ಜೋಶಿ ತಮ್ಮ ಪಾತ್ರಕ್ಕೆ ಯಾವುದೇ ರೀತಿಯಿಂದಲೂ ಹೊಂದಿಕೆಯಾಗುವುದಿಲ್ಲ. ಪ್ರತೀಕ್ ಬಬ್ಬರ್, ಸತ್ಯರಾಜ್ ಮತ್ತು ಕಿಶೋರ್ ಕುಮಾರ್ ತಮ್ಮ ಪಾತ್ರಕ್ಕೆ ಪೂರ್ತಿ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ, ಆದರೆ ಅವರು ಅತಿಯಾಗಿ ನಟಿಸಿದಂತೆ ಕಾಣುತ್ತಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ವೀಕ್ಷಕರು ಕಾಮೆಂಟ್‌ ಮಾಡುತ್ತಿದ್ದಾರೆ.

ʼಸಿಕಂದರ್ʼ ಚಿತ್ರದ ನಿರ್ದೇಶನ-ಸಂಗೀತ ಹೇಗಿದೆ?
ಗಜನಿಯಂತಹ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ ಬರಹಗಾರ, ನಿರ್ದೇಶಕ ಎ.ಆರ್. ಮುರುಗದಾಸ್ ಅವರ ಇದುವರೆಗಿನ ಸಿನಿಮಾಗಳಲ್ಲಿ ಇದು ಅತ್ಯಂತ ಕಳಪೆ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಥೆಯ ಆರಂಭದಿಂದ ಕೊನೆಯವರೆಗೂ ಕಥಾವಸ್ತುವಿನಲ್ಲಿ ಹಲವು ನ್ಯೂನತೆ, ದೋಷ ಇವೆ. ಚಿತ್ರಕಥೆಯಲ್ಲಿ ಹಲವು ದೋಷಗಳು ಸ್ಪಷ್ಟವಾಗಿ ಕಾಣುತ್ತವೆ. ಚಿತ್ರದಲ್ಲಿ ಹಲವು ದೃಶ್ಯಗಳನ್ನು ಕೇವಲ ಫಿಲ್ಲರ್ ಆಗಿ ಬಳಸಲಾಗಿದೆ. ಈ ದೃಶ್ಯಗಳು ಇಲ್ಲದಿದ್ದರೂ ಚಿತ್ರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಸಿನಿಮಾದಲ್ಲಿ ಭಾವನೆಗಳು, ತರ್ಕದ ಕೊರತೆಗಳಿವೆ. ಸಂಗೀತವು ಜನರನ್ನು ಮೆಚ್ಚಿಸುವಲ್ಲಿ ವಿಫಲವಾಗಿದೆ. ನೀವು ಸಲ್ಮಾನ್ ಅಭಿಮಾನಿಯಾಗಿದ್ದರೆ ಮತ್ತು ಅವರ ಆಕ್ಷನ್ ನೋಡಲು ಬಯಸಿದರೆ ಸಿನಿಮಾ ನೋಡಬಹುದು.