ಜ್ಯೋತಿ ಪೂರ್ವಜ್ ನಟನೆಯ ಕಿಲ್ಲರ್ ಸಿನಿಮಾ ಹೇಗಿದೆ? ಏಲಿಯನ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಥಾಹಂದರದ ಈ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಚಿತ್ರದ ಕಥೆ, ಅಭಿನಯ, ಪ್ಲಸ್ ಮತ್ತು ಮೈನಸ್ ಕುರಿತ ಸಂಪೂರ್ಣ ವಿಮರ್ಶೆ ಇಲ್ಲಿದೆ.
ಕಿರುತೆರೆಯಲ್ಲಿ ತಮ್ಮ ಅಭಿನಯದ ಮೂಲಕ ಗುರುತಿಸಿಕೊಂಡಿರುವ ನಟಿ ಜ್ಯೋತಿ ಪೂರ್ವಜ್ ಇದೀಗ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿರುವ ಅವರು, ‘ಕಿಲ್ಲರ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೈನ್ಸ್ ಫಿಕ್ಷನ್ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸುಕ್ಕು ಪೂರ್ವಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಏಲಿಯನ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಪರಿಕಲ್ಪನೆಯೊಂದಿಗೆ ಮೂಡಿಬಂದಿರುವ ಈ ಸಿನಿಮಾ ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ಸೆಳೆಯುತ್ತದೆ? ಒಂದು ಕೋಟಿ ರೂಪಾಯಿ ಬಹುಮಾನದ ಸ್ಪರ್ಧೆಯ ಹಿನ್ನೆಲೆ ಏನು? ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ.
ಕಥೆ ಏನು?
ರಕ್ಷಾ ರೈ (ಜ್ಯೋತಿ ಪೂರ್ವಜ್) ಎಂಬ ಸಾಮಾನ್ಯ ಯುವತಿಯ ಮೇಲೆ ಕೆಲ ದುಷ್ಕರ್ಮಿಗಳು ಭೀಕರವಾಗಿ ಹಲ್ಲೆ ನಡೆಸುತ್ತಾರೆ. ತೀವ್ರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದಿರುವ ಆಕೆಯನ್ನು ಸಹೋದರ ಕಾರ್ತಿಕ್ (ಚಂದ್ರಕಾಂತ್) ಆಸ್ಪತ್ರೆಗೆ ದಾಖಲಿಸುತ್ತಾನೆ. ಇತ್ತ ರಕ್ಷಾ ಮೇಲೆ ದಾಳಿ ನಡೆಸಿದವರನ್ನು ಪತ್ತೆಹಚ್ಚುವ ಜವಾಬ್ದಾರಿಯನ್ನು ಪೊಲೀಸ್ ಅಧಿಕಾರಿ (ಸುಕ್ಕು ಪೂರ್ವಜ್) ವಹಿಸಿಕೊಳ್ಳುತ್ತಾನೆ. ಆದರೆ ಪ್ರಕರಣದ ತನಿಖೆ ಮುಂದುವರಿದಂತೆ ರಕ್ಷಾ ಬಗ್ಗೆ ಒಂದೊಂದೇ ಅಚ್ಚರಿಯ ಸಂಗತಿಗಳು ಹೊರಬರುತ್ತವೆ. ವಿಚಾರಣೆಗೆ ಒಳಗಾದವರು ಆಕೆಯ ಬಗ್ಗೆ ವಿಭಿನ್ನ ಕಥೆಗಳನ್ನು ಹೇಳುತ್ತಾರೆ.
ಒಬ್ಬರ ಪ್ರಕಾರ ಆಕೆ ಭಯೋತ್ಪಾದಕಿ, ಮತ್ತೊಬ್ಬರ ಪ್ರಕಾರ ಗೂಢಚಾರಿ. ಇನ್ನು ಕೆಲವರು ಆಕೆಯನ್ನು ಸಿನಿಮಾ ನಟಿ ಎಂದರೆ, ಮತ್ತೆ ಕೆಲವರು ವ್ಯಾಂಪೈರ್ ಎನ್ನುತ್ತಾರೆ. ಈ ಗೊಂದಲಗಳ ನಡುವೆ ವಿಜ್ಞಾನಿಯೊಬ್ಬ ಆಕೆಯ ಮೆದುಳಿಗೆ ಕೃತಕ ಚಿಪ್ ಅಳವಡಿಸಲು ಪ್ರಯತ್ನಿಸುತ್ತಾನೆ. ಹಾಗಾದರೆ ರಕ್ಷಾ ನಿಜಕ್ಕೂ ಯಾರು? ಆಕೆಯ ಮೇಲಿನ ದಾಳಿಗೆ ಕಾರಣವೇನು? ಪ್ರಜ್ಞೆ ಮರಳಿದ ಬಳಿಕ ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಆಕೆ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ? ಈ ಕಥೆಯಲ್ಲಿ ಎಐ ಕಮಾಂಡರ್ ಪಾತ್ರವೇನು? ಇಂತಹ ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಸಿನಿಮಾದಲ್ಲಿಯೇ ಉತ್ತರ ಸಿಗಲಿದೆ.
ಚಿತ್ರಕಥೆ ಹೇಗಿದೆ?
ಎರಡು ಗಂಟೆಗಿಂತ ಕಡಿಮೆ ಅವಧಿಯ ಸಿನಿಮಾ ಇದಾಗಿರುವುದರಿಂದ ನಿರ್ದೇಶಕರು ಕಥೆಯನ್ನು ಹೆಚ್ಚು ಸಮಯ ಎಳೆಯದೆ ನೇರವಾಗಿ ಮುಖ್ಯ ವಿಷಯಕ್ಕೆ ಕರೆದೊಯ್ಯುತ್ತಾರೆ. ಆರಂಭದಿಂದಲೇ ಕುತೂಹಲಕಾರಿ ಘಟನೆಗಳು, ತಂತ್ರಜ್ಞಾನದ ವಿಚಾರಗಳು ಹಾಗೂ ಅನಿರೀಕ್ಷಿತ ತಿರುವುಗಳು ತೆರೆಮೇಲೆ ತೆರೆದುಕೊಳ್ಳುತ್ತವೆ. ಇದು ಸಾಮಾನ್ಯ ಕಮರ್ಷಿಯಲ್ ಸಿನಿಮಾವಲ್ಲ. ಕೊಂಚ ತಾಳ್ಮೆಯಿಂದ ಗಮನವಿಟ್ಟು ನೋಡಬೇಕಾದ ಸೈನ್ಸ್ ಫಿಕ್ಷನ್ ಥ್ರಿಲ್ಲರ್. ರಕ್ಷಾ ಪಾತ್ರವನ್ನು ನಾಲ್ಕು ವಿಭಿನ್ನ ಆಯಾಮಗಳಲ್ಲಿ ತೋರಿಸುವ ಮೂಲಕ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.
ಕಥೆಯಲ್ಲಿನ ಲಾಜಿಕ್ ಹಾಗೂ ಸ್ಕ್ರಿಪ್ಟ್ ವಿಚಾರದಲ್ಲಿಯೂ ಹೆಚ್ಚಿನ ಎಚ್ಚರಿಕೆ ವಹಿಸಿರುವುದು ಗಮನ ಸೆಳೆಯುತ್ತದೆ. ಆದರೆ ಮೊದಲಾರ್ಧದಲ್ಲಿ ಪೊಲೀಸ್ ಅಧಿಕಾರಿ ಪಾತ್ರದ ನಡವಳಿಕೆ ಕೊಂಚ ಅತಿರೇಕ ಎನಿಸುತ್ತದೆ. ಆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿರುವುದರಿಂದ ಕೆಲವೆಡೆ ಚಿತ್ರದ ವೇಗ ಕಡಿಮೆಯಾದಂತೆ ಭಾಸವಾಗುತ್ತದೆ. ಆ ಭಾಗವನ್ನು ಸ್ವಲ್ಪ ಮೊಟಕುಗೊಳಿಸಿದ್ದರೆ ಕಥೆ ಇನ್ನಷ್ಟು ವೇಗವಾಗಿ ಸಾಗುತ್ತಿತ್ತು. ಹೀಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ಮೊದಲಾರ್ಧ ಮುಕ್ತಾಯವಾಗುತ್ತದೆ. ದ್ವಿತೀಯಾರ್ಧದಲ್ಲಿ ಮೊದಲ ಭಾಗದಲ್ಲಿ ಮೂಡಿದ್ದ ಬಹುತೇಕ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ಸಿಗುತ್ತದೆ.
ನಾಯಕಿಯ ಹಿನ್ನೆಲೆ ಹಾಗೂ ಆಕೆಯ ನೈಜ ವ್ಯಕ್ತಿತ್ವವನ್ನು ಬಿಚ್ಚಿಡುವ ದೃಶ್ಯಗಳು ಕಥೆಗೆ ಹೊಸ ತಿರುವು ನೀಡುತ್ತವೆ. ಅದರಲ್ಲೂ ದ್ವಿತೀಯಾರ್ಧದಲ್ಲಿ ಬರುವ ಎರಡು ಪ್ರಮುಖ ಟ್ವಿಸ್ಟ್ಗಳು ಸಿನಿಮಾದ ಕುತೂಹಲವನ್ನು ಹೆಚ್ಚಿಸುತ್ತವೆ. ತಂತ್ರಜ್ಞಾನದ ಬಳಕೆ, ದೃಶ್ಯ ವೈಭವ ಹಾಗೂ ವಿಶೇಷ ಪರಿಣಾಮಗಳು ಗಮನ ಸೆಳೆಯುತ್ತವೆ. ಕೇವಲ ಮತ್ತೊಂದು ಸಾಮಾನ್ಯ ಸಿನಿಮಾ ಮಾಡಬೇಕು ಎನ್ನುವುದಕ್ಕಿಂತ ವಿಭಿನ್ನ ಪ್ರಯೋಗ ಮಾಡಬೇಕು ಎಂಬ ನಿರ್ದೇಶಕರ ಪ್ರಯತ್ನ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಮೊದಲಾರ್ಧ ಕೊಂಚ ಗೊಂದಲ ಮೂಡಿಸಿದರೂ ದ್ವಿತೀಯಾರ್ಧ ಕಥೆಯ ಮೇಲೆ ಹಿಡಿತ ಸಾಧಿಸುತ್ತದೆ. ಒಟ್ಟಿನಲ್ಲಿ ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ಇಷ್ಟಪಡುವವರಿಗೆ ‘ಕಿಲ್ಲರ್’ ಒಂದು ಉತ್ತಮ ಆಯ್ಕೆ.
ಕಲಾವಿದರ ಅಭಿನಯ ಹೇಗಿದೆ?
ಈ ಸಿನಿಮಾದಲ್ಲಿ ಜ್ಯೋತಿ ಪೂರ್ವಜ್ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಗ್ಲಾಮರ್ ಜೊತೆಗೆ ನಟನೆಯಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ವಿಭಿನ್ನ ಶೇಡ್ಗಳಿರುವ ಪಾತ್ರಗಳಿಗೆ ಅವರು ಉತ್ತಮವಾಗಿ ಜೀವ ತುಂಬಿದ್ದಾರೆ. ಒಂದೊಂದು ಪಾತ್ರದಲ್ಲೂ ತೋರಿಸಿರುವ ಅಭಿನಯದ ವೈವಿಧ್ಯತೆ ಮೆಚ್ಚುವಂತಿದೆ. ನಾಯಕಿಯ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಂದ್ರಕಾಂತ್ ಅವರಿಗೂ ಉತ್ತಮ ಅವಕಾಶ ಸಿಕ್ಕಿದೆ. ಭಾವನಾತ್ಮಕ ಸನ್ನಿವೇಶಗಳಿರಲಿ, ಫೈಟ್ ದೃಶ್ಯಗಳಿರಲಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ನಿರ್ದೇಶಕ ಸುಕ್ಕು ಪೂರ್ವಜ್ ಕೂಡ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಜ್ಞಾನಿಯ ಪಾತ್ರದಲ್ಲಿ ತಮ್ಮ ಸಹಜ ಅಭಿನಯದ ಮೂಲಕ ಗಮನ ಸೆಳೆದರೆ, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕೆಲವೆಡೆ ಕೊಂಚ ಅತಿರೇಕ ಎನಿಸುತ್ತಾರೆ. ಇನ್ನು ಮನೀಶ್, ಅರ್ಚನಾ ಸೇರಿದಂತೆ ಉಳಿದ ಕಲಾವಿದರು ತಮ್ಮ ಪಾತ್ರಗಳ ವ್ಯಾಪ್ತಿಯಲ್ಲಿ ಉತ್ತಮವಾಗಿ ನಟಿಸಿದ್ದಾರೆ.
ಸಿನಿಮಾ: ಕಿಲ್ಲರ್ (Killer)
ತಾರಾಗಣ: ಜ್ಯೋತಿ ಪೂರ್ವಜ್ (ಜ್ಯೋತಿ ರೈ), ಸುಕ್ಕು ಪೂರಾಜ್, ಮನೀಶ್ ಗಿಲಾಡ, ಚಂದ್ರಕಾಂತ್ ಕೊಲ್ಲು, ವಿಶಾಲ್ ರಾಜ್, ಅರ್ಚನಾ ಅನಂತ್, ಗೌತಮ್ ಚಕ್ರಧರ್, ದಶರಥ ಮತ್ತಿತರರು.
ನಿರ್ದೇಶನ: ಸುಕ್ಕು ಪೂರ್ವಜ್
ನಿರ್ಮಾಪಕರು: ಪೂರ್ವಜ್, ಪ್ಯಾಡಿ, ಎ. ಪದ್ಮನಾಭ ರೆಡ್ಡಿ
ತಾಂತ್ರಿಕ ವರ್ಗ ಹೇಗಿದೆ?
ತಾಂತ್ರಿಕವಾಗಿ ‘ಕಿಲ್ಲರ್’ ಸಿನಿಮಾ ಉತ್ತಮ ಪ್ರಯತ್ನ ಎನ್ನಬಹುದು. ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾಗಿದ್ದರೂ ತೆರೆಮೇಲೆ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ವಿಶೇಷವಾಗಿ ಆಶೀರ್ವಾದ್ ಮತ್ತು ಸುಮನ್ ಜೀವ ಅವರ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಜಗದೀಶ್ ಬೊಮ್ಮಿಶೆಟ್ಟಿ ಅವರ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಹಾಗೂ ಸೆಟ್ಗಳ ವಿನ್ಯಾಸ ಗಮನ ಸೆಳೆಯುತ್ತವೆ. ಸಂಕಲನ ಇನ್ನಷ್ಟು ಚುರುಕಾಗಿರಬಹುದಿತ್ತು. ಕೆಲವು ಅನಗತ್ಯ ದೃಶ್ಯಗಳನ್ನು ಕತ್ತರಿಸಿದ್ದರೆ ಸಿನಿಮಾ ಮತ್ತಷ್ಟು ವೇಗವಾಗಿ ಸಾಗುತ್ತಿತ್ತು. ಇನ್ನು ನಿರ್ಮಾಣ ಮೌಲ್ಯಗಳ ವಿಚಾರದಲ್ಲಿ ಚಿತ್ರತಂಡ ಉತ್ತಮ ಪ್ರಯತ್ನ ಮಾಡಿದೆ.
ಕೊನೆಯ ಮಾತು
ಇನ್ನು ‘ಕಿಲ್ಲರ್’ ಒಂದು ವಿಭಿನ್ನ ಸೈನ್ಸ್ ಫಿಕ್ಷನ್ ಥ್ರಿಲ್ಲರ್. ಏಲಿಯನ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ತಂತ್ರಜ್ಞಾನದ ಸುತ್ತ ಹೆಣೆದಿರುವ ಕಥೆ ಹೊಸ ಅನುಭವ ನೀಡುತ್ತದೆ. ಮೊದಲಾರ್ಧದಲ್ಲಿ ಕೊಂಚ ಗೊಂದಲವಿದ್ದರೂ ದ್ವಿತೀಯಾರ್ಧದ ತಿರುವುಗಳು ಸಿನಿಮಾವನ್ನು ಆಸಕ್ತಿಕರವಾಗಿಸುತ್ತವೆ. ಹೊಸತನದ ಕಥೆಗಳನ್ನು ಇಷ್ಟಪಡುವವರು ಒಮ್ಮೆ ಈ ಸಿನಿಮಾ ನೋಡಬಹುದು. ವಿಶೇಷವಾಗಿ ರೊಟೀನ್ ಕಥೆಗಳಿಗಿಂತ ವಿಭಿನ್ನ ಪ್ರಯೋಗ ಬಯಸುವವರಿಗೆ ‘ಕಿಲ್ಲರ್’ ಒಂದು ಡಿಫರೆಂಟ್ ಸೈನ್ಸ್ ಫಿಕ್ಷನ್ ಡ್ರಾಮಾ!






