ಅಭಿಮನ್ಯು ಪ್ರಜ್ವಲ್‌, ಅಶೋಕ್‌ ಹೆಗ್ಡೆ, ಆರ್ಯನ್‌ ಚೌಧರಿ, ಗಿರಿರಾಜ್‌ ಬಿಎಂ, ಪ್ರತೀಕ್ಷಾ ಗೌಡ, ಸುಷ್ಮಾ ಗೌಡ ಮತ್ತು ಯಮುನಾ ಶ್ರೀನಿಧಿ ಅಭಿನಯಿಸಿರುವ ಕಪಾಲ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?

ರಾಜೇಶ್‌ ಶೆಟ್ಟಿ

ತಂತ್ರ, ಮಂತ್ರ, ಪ್ರೇತ, ಹ್ರಾಂ ಹ್ರೀಂ ಇತ್ಯಾದಿ ಕತೆಯನ್ನು ಕುತೂಹಲದಿಂದ ನೋಡುವ ಮಂದಿಗೆ ಇಷ್ಟವಾಗಬಹುದಾದ ಮತ್ತು ತಾಂತ್ರಿಕವಾಗಿ ಶ್ರೀಮಂತವಾಗಿರುವ ಸಿನಿಮಾ ಕಪಾಲ. ನಿರ್ದೇಶಕರಿಗೆ ತಾನು ಮಾಡಿಕೊಂಡಿರುವ ಕತೆಯನ್ನು ಹೇಗೆ ಹೇಳಬೇಕು ಎಂದು ಅರಿವಿದೆ. ಆ ಕತೆಯಿಂದ ಆಚೀಚೆ ಹೋಗದೆ ನೋಡುಗನ ಕೈಹಿಡಿದು ಕೂರಿಸುವಂತೆ ಚಿತ್ರಕತೆ ಹೆಣೆದು, ಅದನ್ನು ಅಷ್ಟೇ ಜಾಣತನದಿಂದ ತೆರೆ ಮೇಲೆ ತಂದಿದ್ದಾರೆ.

ತಾರಾಗಣ: ಅಭಿಮನ್ಯು ಪ್ರಜ್ವಲ್‌, ಅಶೋಕ್‌ ಹೆಗ್ಡೆ, ಆರ್ಯನ್‌ ಚೌಧರಿ, ಗಿರಿರಾಜ್‌ ಬಿಎಂ, ಪ್ರತೀಕ್ಷಾ ಗೌಡ, ಸುಷ್ಮಾ ಗೌಡ, ಯಮುನಾ ಶ್ರೀನಿಧಿ

ನಿರ್ದೇಶನ: ವಿನಯ್‌ ಯದುನಂದನ್‌

ರೇಟಿಂಗ್‌: 3

ಈ ಚಿತ್ರದ ನಾಯಕನ ತಮ್ಮನಿಗೆ ಒಂದು ನಿಗೂಢ ಕ್ಯಾಮೆರಾ ಸಿಕ್ಕಿದ ಕ್ಷಣದಿಂದ ಚಿತ್ರದ ಕತೆ ಶುರುವಾಗುತ್ತದೆ. ಆ ಕ್ಯಾಮೆರಾ ಯಾರದು, ಅದರಲ್ಲಿ ಸಿಕ್ಕಿದ ಫೋಟೋ ಯಾರದು ಎಂಬ ಪ್ರಶ್ನೆಗಳನ್ನು ಹುಡುಕುತ್ತಾ ಹೋದಂತೆ ಸಿನಿಮಾ ತೆರೆದುಕೊಳ್ಳುತ್ತಾ ಹೋಗುತ್ತದೆ. ಈರುಳ್ಳಿ ಸಿಪ್ಪೆ ಸುಳಿಯುವಂತೆ ಕತೆ ಬಿಚ್ಚಿಕೊಳ್ಳುವ ತಂತ್ರದಿಂದಾಗಿ ಈ ಸಿನಿಮಾ ಕುತೂಹಲವನ್ನು ಕಾದಿರಿಸಿಕೊಳ್ಳುತ್ತದೆ. ಕಟ್ಟಕಡೆಗೆ ಇದೊಂದು ಪ್ರೀತಿಯ, ಕ್ರೌರ್ಯದ, ಅವಸಾನದ, ಪ್ರತೀಕಾರದ, ಕತೆಯಾಗಿ ಉಳಿಯುತ್ತದೆ.

Monsoon Raga Review ಒಂದೇ ದಾರಿಯಲ್ಲಿ ನಾಲ್ಕು ಪ್ರೇಮ ಕತೆಗಳು

ಕಪಾಲ ಚಿತ್ರದ ನಾಯಕರು ಯಾರೆಂದರೆ ಇಡೀ ಚಿತ್ರತಂಡ. ಹೊಸಬರೇ ಇರುವ ಈ ಚಿತ್ರದ ಶ್ರದ್ಧೆಗೆ ಈ ಸಿನಿಮಾನೇ ಪುರಾವೆ. ನಟನೆಯಿಂದ ಹಿಡಿದು ಪ್ರತೀ ಫ್ರೇಮ್‌ ಕೂಡ ಚೆನ್ನಾಗಿ ಬರಲು ನಿರ್ದೇಶಕರು ಶ್ರಮಿಸಿದ್ದಾರೆ. ಪ್ರತಿಯೊಬ್ಬ ಕಲಾವಿದರ ಕೊಡುಗೆ ಮೆಚ್ಚುಗೆ ಅರ್ಹ. ಸಂಗೀತ ನಿರ್ದೇಶಕ ಸಚಿನ್‌ ಬಸ್ರೂರು, ಛಾಯಾಗ್ರಾಹಕ ಪ್ರವೀಣ್‌ ಎಂ ಪ್ರಭು, ಸಂಕಲನಕಾರ ಶಾಂತಕುಮಾರ್‌ ಈ ಸಿನಿಮಾದ ಆಸ್ತಿಗಳು. ಅವರಿಂದಾಗಿಯೇ ಈ ಸಿನಿಮಾಗೆ ಚಂದ, ಧ್ವನಿ, ವೇಗ ದಕ್ಕಿದೆ. ತಾಂತ್ರಿಕ ಶ್ರೀಮಂತಿಕೆ ಪ್ರಾಪ್ತವಾಗಿದೆ.

PAMPA REVIEW ಕನ್ನಡ ಪ್ರೊಫೆಸರ್‌ ಹತ್ಯೆಯ ಪ್ರಸಂಗ

ಇದೊಂದು ಹಾರರ್‌ ಸಿನಿಮಾ. ಆ ವಿಷಯಕ್ಕೆ ನಿರ್ದೇಶಕರು ಬದ್ಧರಾಗಿದ್ದಾರೆ. ಅನವಶ್ಯಕ ಕಾಮಿಡಿ ಇಲ್ಲ. ಬೇಡದ ಹೊತ್ತಿನಲ್ಲಿ ಹಾಡುಗಳು ಬರುವುದಿಲ್ಲ. ಒಮ್ಮೆ ಸೀಟ್‌ಬೆಲ್ಟ್‌ ಹಾಕಿಕೊಂಡು ಹೊರಟರೆ ಪ್ರಯಾಣ ಮುಂದುವರಿಯುತ್ತಾ ಇರುತ್ತದೆ. ಈ ಕತೆಯಲ್ಲಿ ಲಾಜಿಕ್‌ ಹುಡುಕುತ್ತಾ ಹೋದರೆ ಕೆಲವು ಅಂಶಗಳಿಗೆ ಉತ್ತರ ಸಿಗದೇ ಇರಬಹುದು. ಲಾಜಿಕ್‌ ಬದಿಗಿಟ್ಟು ನೋಡಿದರೆ ಇದೊಂದು ಶ್ಲಾಘನೀಯ ಸಿನಿಮಾ.