Stolen food products: ಬಂಗಾರ, ವಜ್ರದಂತಹ ಬೆಲೆಬಾಳುವ ವಸ್ತುಗಳಿಗಿಂತಲೂ ಹೆಚ್ಚಾಗಿ ಜಗತ್ತಿನಲ್ಲಿ ಒಂದು ಆಹಾರ ಪದಾರ್ಥ ಕಳ್ಳತನವಾಗುತ್ತಿದೆ. ಕಳ್ಳರು ಅತಿ ಹೆಚ್ಚು ಕದಿಯುತ್ತಿರುವ ಆ ವಸ್ತು ಯಾವುದು? ಅದುವೇ ಚೀಸ್. ಎಷ್ಟು ಪ್ರಮಾಣದಲ್ಲಿ ಚೀಸ್ ಕಳ್ಳತನವಾಗುತ್ತಿದೆ ಗೊತ್ತಾ? ಇದರ ಹಿಂದಿನ ಕಾರಣವೇನು?
Stolen Food Products: ಜಗತ್ತಿನಲ್ಲಿ ಅತಿ ಹೆಚ್ಚು ಕಳ್ಳತನವಾಗುವ ವಸ್ತು ಯಾವುದು? ಬಂಗಾರ, ವಜ್ರ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಕಳ್ಳರ ಕಣ್ಣು ಹೆಚ್ಚಾಗಿ ಬೀಳುವುದು ಚೀಸ್ ಮೇಲೆ. ಬ್ರಿಟನ್‌ನ 'ಸೆಂಟರ್ ಫಾರ್ ರಿಟೇಲ್ ರಿಸರ್ಚ್' ನಡೆಸಿದ ಅಧ್ಯಯನದ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ಕಳ್ಳತನವಾಗುವ ವಸ್ತು ಚೀಸ್. ಅಂಗಡಿಗಳಿಗೆ ಬರುವ ಸರಕುಗಳಲ್ಲಿ ಸುಮಾರು 4% ಚೀಸ್ ಕಳ್ಳತನವಾಗುತ್ತಿದೆ ಎಂದು ಈ ವರದಿ ಹೇಳುತ್ತದೆ. ಅಂದರೆ, ಕೋಟ್ಯಂತರ ಕಿಲೋಗ್ರಾಂಗಳಷ್ಟು ಚೀಸ್ ಕಳ್ಳತನ ಈಗ ದೊಡ್ಡ ಅಂತರರಾಷ್ಟ್ರೀಯ ಸಮಸ್ಯೆಯಾಗಿದೆ.
ಯಾಕೆ ಅಷ್ಟು ಕಳ್ಳತನ ಆಗುತ್ತದೆ?
ಚೀಸ್ ಯಾಕೆ ಇಷ್ಟೊಂದು ಕಳ್ಳತನವಾಗುತ್ತಿದೆ? ಇದರ ಹಿಂದಿನ ಮುಖ್ಯ ಕಾರಣ ಅದರ ಬೆಲೆ ಮತ್ತು ಬೇಡಿಕೆ. ದಿನೇ ದಿನೇ ಹೆಚ್ಚುತ್ತಿರುವ ಚೀಸ್ ಬೆಲೆಯಿಂದಾಗಿ ಕಳ್ಳರು ಇದನ್ನು ಕದಿಯಲು ಮುಂದಾಗುತ್ತಾರೆ. ಕದ್ದ ಚೀಸ್ ಅನ್ನು ಮಾರಿ ಹಣ ಸಂಪಾದಿಸುತ್ತಾರೆ. ಇದು ಹಸಿವು ನೀಗಿಸಿಕೊಳ್ಳಲು ಮಾಡುವ ಕಳ್ಳತನವಲ್ಲ, ಇದರ ಹಿಂದೆ ಒಂದು ದೊಡ್ಡ 'ಕಪ್ಪು ಮಾರುಕಟ್ಟೆ' (ಬ್ಲ್ಯಾಕ್ ಮಾರ್ಕೆಟ್) ಕೆಲಸ ಮಾಡುತ್ತಿದೆ. ದುಬಾರಿ ಚೀಸ್ ಕದ್ದು, ರೆಸ್ಟೋರೆಂಟ್‌ಗಳಿಗೆ ಅಥವಾ ಸಣ್ಣ ಅಂಗಡಿಗಳಿಗೆ ಕಡಿಮೆ ಬೆಲೆಗೆ ಮಾರುತ್ತಾರೆ. ಚೀಸ್ ಹೆಚ್ಚು ಕಾಲ ಕೆಡದೆ ಇರುವುದು ಕೂಡ ಕಳ್ಳರಿಗೆ ಅನುಕೂಲಕರ. ಚೀಸ್ ನಂತರ, ಮಾಂಸ, ಚಾಕೊಲೇಟ್, ಮದ್ಯ, ಸಮುದ್ರಾಹಾರ ಮತ್ತು ಮಕ್ಕಳ ಹಾಲಿನ ಪುಡಿ ಅತಿ ಹೆಚ್ಚು ಕಳ್ಳತನವಾಗುವ ವಸ್ತುಗಳಾಗಿವೆ.
ಒಮ್ಮೆ ಬ್ರಿಟನ್‌ನಲ್ಲಿ, ಕಳ್ಳರು ರಾತ್ರೋರಾತ್ರಿ ಟ್ರಕ್‌ಗಳಲ್ಲಿ ಬಂದು 22 ಟನ್ ಚೀಸ್ ಕದ್ದೊಯ್ದಿದ್ದರು. ಚೀಸ್ ಕಳ್ಳತನದಿಂದಾಗಿ ರಿಟೇಲ್ ವ್ಯಾಪಾರಿಗಳು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಈ ಕಳ್ಳತನವನ್ನು ತಡೆಯಲು, ವಿಶ್ವಾದ್ಯಂತ ಸೂಪರ್‌ಮಾರ್ಕೆಟ್‌ಗಳು ಈಗ ಹೈಟೆಕ್ ತಂತ್ರಜ್ಞಾನ ಬಳಸುತ್ತಿವೆ. ಚೀಸ್ ಪ್ಯಾಕೆಟ್‌ಗಳಿಗೆ ವಿಶೇಷ 'ಸೆಕ್ಯುರಿಟಿ ಟ್ಯಾಗ್'ಗಳನ್ನು ಅಳವಡಿಸುವುದು, ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹೆಚ್ಚಿಸುವುದು ಮತ್ತು ಎಐ ಮೂಲಕ ಗ್ರಾಹಕರ ಚಲನವಲನಗಳನ್ನು ಗಮನಿಸುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಒಂದು ಚೀಸ್ ತುಂಡಿನ ಹಿಂದೆ ಇಂತಹ ದೊಡ್ಡ ಕ್ರೈಮ್ ಸ್ಟೋರಿ ಇರುವುದು ಆಶ್ಚರ್ಯಕರ.


