ಎಲ್‌ಜಿ ಕಂಪನಿ ತನ್ನ ಸ್ಮಾರ್ಟ್‌ಫೋನ್ ಉತ್ಪದನಾ ವಿಭಾಗವನ್ನು ಸ್ಥಗಿತಗೊಳಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಆಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳು ವಿಚಿತ್ರ ಆಫರ್‌ವೊಂದನ್ನು ಎಲ್‌ಜಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ನೀಡುತ್ತಿವೆ. ಏನೆಂದರೆ- ಎಲ್‌ಜಿ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಎಲ್‌ಜಿ ಫೋನ್‌ಗಳನ್ನು ಕೊಟ್ಟು ಹಣವನ್ನು ಪಡೆದುಕೊಳ್ಳಬಹುದು! ಇಲ್ಲವೇ ರಿಯಾಯ್ತಿ ದರದಲ್ಲಿ ಹೊಸ ಐಫೋನ್ ಬೇಕಾದರೂ ಪಡೆದುಕೊಳ್ಳಬಹುದು.

ಜೂನ್ 10ಕ್ಕೆ 1+ ನಾರ್ಡ್ ಸಿಇ 5G ಸ್ಮಾರ್ಟ್‌ಫೋನ್ ಬಿಡುಗಡೆ, ಏನೆಲ್ಲ ವಿಶೇಷತೆಗಳಿವೆ?

ಆದರೆ, ಈ ಆಫರ್ ಭಾರತದಲ್ಲಿ ಇಲ್ಲ!. ದಕ್ಷಿಣ ಕೊರಿಯಾದಲ್ಲಿ ಇಂಥದೊಂದು ಆಫರ್ ಅನ್ನು ಆಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳು ಎಲ್‌ಜಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ನೀಡುತ್ತಿವೆ. ಇದಕ್ಕಾಗಿ ಆಪಲ್ ಟ್ರೇಡ್ ಇನ್ ಪ್ರೋಗ್ರಾಮ್ ಅನ್ನು ಪರಿಚಯಿಸಿದ್ದು ಇದು ಸಂಪೂರ್ಣವಾಗಿ ಎಲ್‌ಜಿ ಬಳಕೆದಾರರಿಗೆ ಮಾತ್ರ ಇರಲಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಿಂದ ಎಲ್‌ಜಿ ಕಣ್ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಆಪಲ್ ಈ ತಂತ್ರವನ್ನು ಹೂಡಿದೆ.  ಎಲ್‌ಜಿ ಸ್ಮಾರ್ಟ್‌ಫೋನ್ ಬಳಕೆದಾರರು ಸ್ಯಾಮ್ಸಂಗ್‌ನತ್ತ ವಾಲುವುದನ್ನು ತಪ್ಪಿಸುವುದಕ್ಕಾಗಿ ಹೀಗೆ ಮಾಡುತ್ತಿದೆ ಎನ್ನಲಾಗುತ್ತಿದೆ.

ಟ್ರೇಡ್ ಇನ್ ಪ್ರೋಗ್ರಾಮ್ ಯಶಸ್ವಿಗೊಳಿಸಲು ಆಪಲ್ ಸ್ಥಳೀಯ ಮೊಬೈಲ್ ಮಾರಾಟಗಾರರ ಜತೆ ಕೈಜೋಡಿಸಿದ್ದು, ಎಲ್‌ಜಿ  ಹಳೆ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚುವರಿಯಾಗಿ 134 ಡಾಲರ್ ಕೂಡ ನೀಡಲಿದೆ. ಇದೇ ವೇಳೆ, ಸ್ಯಾಮ್ಸಂಗ್ ಕೂಡ ಎಲ್‌ಜಿ ಬಳಕೆದಾರರನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂಬ ಯೋನ್ಹಾಪ್ ಸುದ್ದಿ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಅನೇಕ  ಸುದ್ದಿತಾಣಗಳು ವರದಿ ಮಾಡಿವೆ.

ದಕ್ಷಿಣ ಕೊರಿಯಾದಲ್ಲಿ ಆಪಲ್ ಜಾರಿಗೆ ತಂದಿರುವ ಈ ಎಕ್ಸ್‌ಚೇಂಜ್ ಪ್ರೋಗ್ರಾಮ್ ಸೆಪ್ಟೆಂಬರ್ 25ರವರೆಗೂ ಜಾರಿಯಲ್ಲಿರಲಿದೆ. ಎಲ್‌ಜಿ ಫೋನ್ ಹೊಂದಿರುವ ಬಳಕೆದಾರರು ತಮ್ಮ ಹಳೆಯ ಫೋನ್‌ಗಳನ್ನು ನೀಡಿ ಆಪಲ್ ಕಂಪನಿಯ ಐಫೋನ್ 12 ಮತ್ತು ಐಫೋನ್ 12 ಮಿನಿ ಸ್ಮಾರ್ಟ್‌ಫೋನ್‌ಗಳನ್ನು ಪಡೆದುಕೊಳ್ಳಬಹುದು. ಇಲ್ಲಿ ಮತ್ತೊಂದು ಟ್ವಿಸ್ಟ್ ಇದೆ, ದಕ್ಷಿಣ ಕೊರಿಯಾದ ಟೆಲ್ಕೋಸ್ ಸ್ಟೋರ್‌ಗಳಲ್ಲಿ ಮಾತ್ರವೇ ಈ ಆಫರ್ ಸಿಗಲಿದೆ.

ಎಲ್‌ಜಿ ಗ್ರಾಹಕರನ್ನು ಸೆಳೆಯಲು ಸ್ಯಾಮ್ಸಂಗ್ ಕೂಡ ಹಿಂದೆ ಬಿದ್ದಿಲ್ಲ. ಅದು ಕೂಡ ಪ್ರಯತ್ನ ಮಾಡುತ್ತಿದೆ. ಆ ಮೂಲಕ ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಶೀಘ್ರವೇ ಭಾರತದಲ್ಲಿ ಪೋಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ?

ಸ್ಯಾಮ್ಸಂಗ್ ಕೂಡ ಹಳೆಯ ಎಲ್‌ಜಿ ಸ್ಮಾರ್ಟ್‌ಫೋನ್‌ಗಳನ್ನು ಪಡೆದುಕೊಂಡು ಗ್ಯಾಲಕ್ಸಿ ಎಸ್21, ಗ್ಯಾಲಕ್ಸಿ ಜೆಡ್ ಫೋಲ್ಡ್2, ಗ್ಯಾಲಕ್ಸಿ ಫ್ಲಿಪ್ 5ಜಿ ಮತ್ತು ಗ್ಯಾಲಕ್ಸಿ ನೋಟ್ 20 ಸ್ಮಾರ್ಟ್‌ಫೋನ್‌ಗಳನ್ನು ಪಡೆದುಕೊಳ್ಳಬಹುದು. ಆದರೆ, ಈ ಆಫರ್ ಜೂನ್ 30ರವರೆಗೆ ಮಾತ್ರವೇ ಇರಲಿದೆ.

ಏಪ್ರಿಲ್ ತಿಂಗಳಲ್ಲಿ ಎಲ್‌ಜಿ ಕಂಪನಿ ತನ್ನ ಮೊಬೈಲ್ ಉತ್ಪಾದನಾ ವಿಭಾಗವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ. ಅಂದರೆ, ಮಾರುಕಟ್ಟೆಯಲ್ಲಿ ನಿಮಗೆ ಎಲ್‌ಜಿ ಸ್ಮಾರ್ಟ್‌ಫೋನ್‌ಗಳು ಮಾರಾಟಕ್ಕೆ ಸಿಗುವುದಿಲ್ಲ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಿಂದ ಸಂಪೂರ್ಣವಾಗಿ ಹಿಂದೆ ಸರಿಯುತ್ತಿರುವ ಪ್ರಮುಖ ಬ್ರ್ಯಾಂಡ್ ಎಲ್‌ಜಿ ಎಂದು ಗುರುತಿಸಿಕೊಂಡಿದೆ.

ಎಲ್‌ಜಿ ಕಂಪನಿಯ ಈ ನಿರ್ಧಾರದಿಂದ ಉತ್ತರ ಅಮೆರಿಕದಲ್ಲಿ ಹೊಂದಿದ್ದ ಶೇ.10ರಷ್ಟು ಪಾಲನ್ನು ಅದು ಬಿಟ್ಟುಕೊಟ್ಟಿದೆ. ಈ ಪ್ರದೇಶದಲ್ಲಿ ಕಂಪನಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ 3ನೇ ಸ್ಥಾನದಲ್ಲಿತ್ತು. ಮೊದಲನೆ ಸ್ಥಾನದಲ್ಲಿ ಆಪಲ್ ಮತ್ತು ಎರಡನೇ ಸ್ಥಾನದಲ್ಲಿ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್‌ಗಳಿವೆ.

ಎಲ್‌ಜಿ ಎಲೆಕ್ಟ್ರಾನಿಕ್ಸ್‌ನ ಮೊಬೈಲ್ ಉತ್ಪಾದನಾ ವಿಭಾಗದವು ಕಳೆದ ಆರು ವರ್ಷಗಳಿಂದ ಸತತ ನಷ್ಟ ಅನುಭವಿಸುತ್ತಿತ್ತು.  ಅವಧಿಯಲ್ಲಿ ಕಂಪನಿ ಅಂದಾಜು 4.5 ಶತಕೋಟಿ ಡಾಲರ್‌(ಅಂದರೆ 33,000 ಕೋಟಿ ರೂಪಾಯಿ) ನಷ್ಟ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿ ತನ್ನ ಮೊಬೈಲ್ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

AI ಆಧಾರಿತ ಫೀಚರ್‌ ಇರುವ ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್ ಲಾಂಚ್

ಮೊಬೈಲ್‌ ವಿಭಾಗವನ್ನು ಸ್ಥಗಿತಗೊಳಿಸಿ ಸ್ಮಾರ್ಟ್‌ ಹೋಮ್ಸ್, ಆರ್ಟಿಫಿಷಿಯಲ್ ಇಂಟೆಲಜೆನ್ಸ್,ಕನೆಕ್ಟೆಡ್ ಡಿವೈಸ್, ರೊಬೊಟಿಕ್ಸ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಕಾಂಪೋನೆಂಟ್ಸ್‌ಗಳನ್ನು ಉತ್ಪಾದಿಸುವ ಬಗ್ಗೆ ಹೆಚ್ಚು  ಗಮನ ಕೇಂದ್ರೀಕರಿಸಲಿದೆ ಎಂದು ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.