ಗೂಗಲ್ ಹೊಸ ಅಪ್‌ಡೇಟ್: ಆ್ಯಂಡ್ರಾಯ್ಡ್ 11
- ಸದ್ದುಗದ್ದಲವಿಲ್ಲದೆ ಪ್ರಾಯೋಗಿಕ ಆವೃತ್ತಿ ಬಿಡುಗಡೆ, - ಮೆಸೆಂಜರ್ ರೀತಿ ಚಾಟ್ ನೋಟಿಫಿಕೇಷನ್ ವಿಶೇಷ, - ಪ್ರೈವಸಿಗೆ ಒತ್ತು, ಮಾಹಿತಿ ಸಂಗ್ರಹಿಸುವ ಆ್ಯಪ್‌ಗೆ ಬ್ರೇಕ್, ಆದರೆ, ಗೂಗಲ್ ಪೇ ಬಳಸೋರು ಸದ್ಯಕ್ಕೆ ಅಪ್‌ಡೇಟ್ ಮಾಡಿಕೊಳ್ಳಬಾರದೆಂಬ ಸೂಚನೆ...
ಸ್ಯಾನ್ ರೇಮನ್ (ಜೂ.12): ಬಹುತೇಕ ಭಾರತೀಯರ ಮೊಬೈಲ್‌ನಲ್ಲಿ ಬಳಕೆಯಾಗುತ್ತಿರುವ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಹೊಸ ಪ್ರಾಯೋಗಿಕ ಆವೃತ್ತಿಯಾದ ‘ಆ್ಯಂಡ್ರಾಯ್ಡ್ 11’ ಅನ್ನು ಪ್ರಖ್ಯಾತ ಮಾಹಿತಿ ತಂತ್ರಜ್ಞಾನ ಕಂಪನಿ ಗೂಗಲ್ ಸದ್ದುಗದ್ದಲವಿಲ್ಲದೆ ಬಿಡುಗಡೆ ಮಾಡಿದೆ. ಫೇಸ್‌ಬುಕ್ ಮೆಸೆಂಜರ್‌ನಲ್ಲಿರುವ ಚಾಟ್ ಬಬಲ್ ನೋಟಿಫಿಕೇಷನ್, ಒಮ್ಮೆ ಮಾತ್ರ ಮಾಹಿತಿ ಬಳಸಲು ಆ್ಯಪ್‌ಗಳಿಗೆ ಅನುಮತಿ ನೀಡುವ ಸೌಲಭ್ಯ ಇದರಲ್ಲಿದೆ.
ಆ್ಯಂಡ್ರಾಯ್ಡ್‌ನ ಹೊಸ ಆವೃತ್ತಿಗಳನ್ನು ಗೂಗಲ್ ಕಂಪನಿ ವಿಜೃಂಭಣೆಯಿಂದ ಬಿಡುಗಡೆ ಮಾಡುತ್ತದೆ. ಆದರೆ ಈ ಸಲ ಕೊರೋನಾ ಉಪಟಳ ಹಾಗೂ ಅಮೆರಿಕದಲ್ಲಿ ಕಪ್ಪು ವರ್ಣೀಯ ವ್ಯಕ್ತಿ ಜಾಜ್‌ರ್ ಫ್ಲೋಯ್ಡ್ ಸಾವಿನ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆದಿದ್ದರಿಂದ ಬ್ಲಾಗ್ ಪೋಸ್ಟ್ ಮೂಲಕ ಹೊಸ ಆ್ಯಂಡ್ರಾಯ್ಡ್ ಬಿಡುಗಡೆಯನ್ನು ಪ್ರಕಟಿಸಿದೆ.
ಪ್ರಾಯೋಗಿಕ ಆವೃತ್ತಿ ಮೊಬೈಲ್ ತಯಾರಕ ಕಂಪನಿಗಳಿಗೆ ಮಾತ್ರ ಲಭ್ಯವಿರುತ್ತದೆ. ಗೂಗಲ್ ಕಂಪನಿಯದ್ದೇ ಮೊಬೈಲ್ ಆಗಿರುವ ಪಿಕ್ಸೆಲ್ ಗ್ರಾಹಕರಿಗೆ ಇದು ಈಗಲೇ ಬಳಕೆಗೆ ಸಿಗಲಿದೆ. ಮೊಬೈಲ್ ಕಂಪನಿಗಳು ಕೆಲವು ತಿಂಗಳುಗಳ ಬಳಿಕ ಗ್ರಾಹಕರಿಗೆ ಹೊಸ ಆ್ಯಂಡ್ರಾಯ್ಡ್ ಅನ್ನು ಪರಿಚಯಿಸಲಿವೆ.
ಟ್ವಟರ್‌ನಲ್ಲೂ ಸ್ಟೇಟಸ್ ಅಪ್‌ಡೇಟ್ ಮಾಡಬಹುದು
ಆ್ಯಂಡ್ರಾಯ್ಡ್ 11ರಲ್ಲಿ ಏನೇನಿದೆ?
- ಪ್ರತಿ ಆ್ಯಪ್ ಕೂಡ ಮೊಬೈಲ್‌ನ ಮೈಕ್ರೋಫೋನ್, ಕ್ಯಾಮೆರಾ, ಲೊಕೇಷನ್ ಮತ್ತಿತರ ಮಾಹಿತಿ ಬಳಕೆಗೆ ಗ್ರಾಹಕರ ಸಮ್ಮತಿ ಕೇಳುತ್ತವೆ. ಆದರೆ ಹೊಸ ಆವೃತ್ತಿಯಲ್ಲಿ ಒಮ್ಮೆ ಮಾತ್ರ ಅನುಮತಿಸಬಹುದಾದ ಸೌಲಭ್ಯ ಇದೆ.
- ಗ್ರಾಹಕ ನಿರ್ದಿಷ್ಟಆ್ಯಪ್ ಅನ್ನು ಸುದೀರ್ಘ ಸಮಯದವರೆಗೆ ಬಳಸಿಲ್ಲ ಎಂದಾದರೆ ಆತ ನೀಡಿರುವ ಸಮ್ಮತಿಯನ್ನು ಗೂಗಲ್ ರದ್ದುಗೊಳಿಸಿಬಿಡುತ್ತದೆ. ಇದರ ಜತೆಗೆ ಎಲ್ಲ ಸಂದರ್ಭದಲ್ಲೂ ಮಾಹಿತಿಯನ್ನು ಪಡೆಯುವುದಕ್ಕೆ ಆ್ಯಪ್‌ಗೆ ಅನುಮತಿ ನೀಡುವ ಆಯ್ಕೆಯೂ ಮುಂದುವರಿಯುತ್ತದೆ.
- ವಿವಿಧ ಆ್ಯಪ್‌ಗಳ ಮೂಲಕ ಯಾರದ್ದೋ ಜತೆ ಚಾಟ್ ಮಾಡುತ್ತಿರುತ್ತೀರಿ ಅಥವಾ ಸಂದೇಶ ಬರುತ್ತಿರುತ್ತದೆ. ಅದೆಲ್ಲಾ ಇನ್ನು ಒಂದೇ ನೋಟಿಫಿಕೇಷನ್ ವಿಭಾಗದಲ್ಲಿ ಲಭ್ಯ. ಇದರಿಂದ ಎಲ್ಲ ಸಂವಹನಗಳನ್ನು ಒಂದೆ ಕಡೆ ನಿರ್ವಹಿಸಬಹುದು. ಅದರಲ್ಲಿ ಮುಖ್ಯವಾದುದನ್ನು ಮಾರ್ಕ್ ಮಾಡಿಟ್ಟುಕೊಳ್ಳಬಹುದು.
Zoom Appಗೆ ಪ್ರತಿಸ್ಪರ್ಧಿಯಾಗಿ ಭಾರತದ ನಮಸ್ತೇ ಆ್ಯಪ್
- ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಚಾಟ್ ಬಬಲ್ ಆಯ್ಕೆ ಇದೆ. ಇದರಡಿ ಬೇರೆ ಆ್ಯಪ್ ಬಳಸುತ್ತಿದ್ದಾಗಲೂ ಸಂದೇಶ ಬರುತ್ತದೆ. ಅದನ್ನು ಒತ್ತಿದರೆ ನೇರವಾಗಿ ಚಾಟ್‌ನ ಪೂರ್ಣ ಮಾಹಿತಿ ಸಿಗುತ್ತದೆ. ಹಾಲಿ ಬಳಸುತ್ತಿರುವ ಆ್ಯಪ್‌ನಿಂದ ಹಿಂದೆ ಬಂದು ಮತ್ತೊಂದನ್ನು ಓಪನ್ ಮಾಡಬೇಕಾದ ಅಗತ್ಯವಿಲ್ಲ.
ಇದುವರೆಗೂ ಗೂಗಲ್ ಮೊಬೈಲ್ ಬಳಕೆದಾರರ ವೈಯಕ್ತಿಕ ಮಾಹಿತಿ ಕದಿಯುತ್ತದೆ ಎಂಬ ಆರೋಪ ಕೇಳಿ ಬರುತ್ತಿದ್ದು. ಈ ಹಿನ್ನೆಲೆಯಲ್ಲಿ ಪ್ರೈವೇಸಿಗೆ ಹೆಚ್ಚು ಒತ್ತು ನೀಡಿರುವ ಸರ್ಚ್ ಎಂಜಿನ್ ದೈತ್ಯ, ಇನ್ನು ಮುಂಬರುವ ವರ್ಷನ್‌ನಲ್ಲಿಯೂ ವೈಯಕ್ತಿಕ ಮಾಹಿತಿ ಗೌಪ್ಯತೆಗೆ ಹೆಚ್ಚು ಒತ್ತು ನೀಡಲಿದೆ ಎಂದು ಹೇಳಿದೆ.
ಈಗಾಗಲೇ ಬೀಟಾ ವರ್ಷನ್ ಬಿಟ್ಟಿರುವ ಗೂಗಲ್, ಡೌನ್‌ಲೌಡ್ ಮಾಡಿಕೊಂಡು ಯಾವುದಾದರೂ ಬಗ್ಸ್ ಇದ್ದರೆ ಸರಿ ಪಡಿಸಲು ಮುಂದಾಗಿದೆ. ಗೂಗಲ್ ಪಿಕ್ಸೆಲ್ ಫೋನ್ ಬಳಸುತ್ತಿರುವ ಗ್ರಾಹಕರ ಇದರ ಲಾಭ ಪಡೆಯಬಹದು.
ಗೂಗಲ್‌ನಲ್ಲಿ ಕೊರೋನಾ ಹುಡುಕಾಟ ಬಿಟ್ಟಜನ!
ಕೊರೋನಾ ವೈರಸ್ ಬಗ್ಗೆಯೂ ಜನರು ಈಗ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಗೂಗಲ್ ಸಚ್‌ರ್‍ನಲ್ಲಿ ಎಪ್ರಿಲ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟಪದಗಳ ಪೈಕಿ ಒಂದೆನಿಸಿದ್ದ ಕೊರೋನಾ ವೈರಸ್, ಮೇ ತಿಂಗಳಿನಲ್ಲಿ ಬೇಡಿಕೆ ಕಳೆದುಕೊಂಡಿದೆ. ಜನರು ಕೊರೋನಾ ವೈರಸ್‌ಗಿಂತಲೂ ಹೆಚ್ಚಾಗಿ ಚಲನಚಿತ್ರ, ವಾತಾವರಣ ಮತ್ತಿತರ ವಿಷಯಗಳ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ.
ಭಾರತದಲ್ಲಿ ಮೇ ತಿಂಗಳ ಗೂಗಲ್ ಸಚ್‌ರ್ ಟ್ರೆಂಡ್‌ನ ಪ್ರಕಾರ, ಅತಿ ಹೆಚ್ಚು ಶೋಧಿಸಿದ ಪದಗಳ ಪಟ್ಟಿಯಲ್ಲಿ ಕೊರೋನಾ ವೈರಸ್ 12ನೇ ಸ್ಥಾನ ಪಡೆದುಕೊಂಡಿದೆ. ಲಾಕ್‌ಡೌನ್ 4.0, ಈದ್ ಮುಬಾರಕ್ ಅತಿ ಹೆಚ್ಚು ಶೋಧಿಸಿದ ವಿಷಯಗಳಾಗಿದೆ. ಇದೇ ವೇಳೆ ಅಂತರ್ಜಾಲ ಬಳಕೆದಾರರು, ‘ಕೊರೋನಾ ರೋಗ ಲಕ್ಷಣ ಇಲ್ಲದ ವ್ಯಕ್ತಿಗಳಿಂದ ಕೊರೋನಾ ವೈರಸ್ ಹರಡುತ್ತದೆಯೇ? ಮೇ 17ರ ಬಳಿಕ ಲಾಕ್‌ಡೌನ್ ವಿಸ್ತರಣೆ ಆಗುತ್ತದೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಗೂಗಲ್‌ನಲ್ಲಿ ಹುಡುಕಾಡಿದ್ದಾರೆ.