ಟ್ವಿಟ್ಟರ್‌ಗೂ ಬಂತು ಏಕ್ ದಿನ್ ಕಾ ಸ್ಟೋರಿ, WhatsApp Status ರೀತಿ!
ಟ್ವಿಟ್ಟರ್‌ನಲ್ಲೂ ನೀವು ಸ್ಟೋರಿ ಹೇಳ್ಕೋಬಹುದು. ಆದರೆ, ಅದಕ್ಕೆ ಹೆಸರು ಮಾತ್ರ ಬದಲಾವಣೆ ಆಗಿದೆ ಅಷ್ಟೇ. ಫ್ಲೀಟ್ ಹೆಸರಿನಲ್ಲಿರುವ ನೂತನ ಫೀಚರ್‌ನಲ್ಲಿ ತೋಚಿದ್ದನ್ನು ಗೀಚಿ ಹಾಕಿಕೊಳ್ಳಬಹುದಾಗಿದ್ದು, 24 ಗಂಟೆ ಬಳಿಕ ಅದು ಕಣ್ಮರೆಯಾಗಲಿದೆ. ಮೊದಲು ಬ್ರೆಜಿಲ್‌ನಲ್ಲಿ ಪ್ರಾಯೋಗಿಕವಾಗಿ ಈ ಫೀಚರ್ ಅನ್ನು ಪ್ರಸ್ತುತಿಪಡಿಸಿದ್ದ ಟ್ವಿಟ್ಟರ್, ಇಟಲಿ ಬಳಿಕ ಈಗ ಭಾರತದಲ್ಲಿ ಪ್ರಯೋಗಕ್ಕೆ ಮುಂದಾಗಿದೆ. ಇಲ್ಲಿನ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ಹೊರಟಿದೆ. ಕಳೆದ ತಿಂಗಳು ಘೋಷಣೆ ಮಾಡಿದ್ದನ್ನು ಈಗ ಅನುಷ್ಠಾನಕ್ಕೆ ತರಲು ಹೊರಟಿದೆ.
ಕಾಲ ಕಾಲಕ್ಕೆ ಟ್ವಿಟ್ಟರ್ ಸಹ ಅಪ್ಡೇಟ್ ಆಗುತ್ತಿದೆ. ಈಗಾಗಲೇ ಹಲವಾರು ಫೀಚರ್‌ಗಳನ್ನು ತನ್ನ ಬಳಕೆದಾರರಿಗೆ ನೀಡಿ, ಚುಟುಕು ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆಯಾಗಿದ್ದ ಟ್ವಿಟ್ಟರ್ ಈಗ ಫ್ಲೀಟ್ಸ್ ಫೀಚರ್ ಅನ್ನು ಅಳವಡಿಸಿಕೊಂಡಿದೆ. ಈ ಮೂಲಕ ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂಗಳು ಪರಿಚಯಿಸಿರುವ ಏಕ್ ದಿನ್ ಕಾ ಸ್ಟೋರಿ ಈಗ ಟ್ವಿಟ್ಟರ್‌ನಲ್ಲೂ ಲಭ್ಯವಾಗಿದೆ.
ಹೌದು, ಕೇವಲ 24 ಗಂಟೆ ಮಾತ್ರ ಜೀವಂತವಾಗಿರುವ “ಆ್ಯಡ್ ಟು ಸ್ಟೋರಿ”, “ಯುವರ್ ಸ್ಟೋರಿ’’, “ಸ್ಟೇಟಸ್’’ಗಳ ಮಾದರಿಯಲ್ಲಿ ಈಗ ಟ್ವಿಟ್ಟರ್ “ಫ್ಲೀಟ್ಸ್’’ ಅನ್ನು ಪರಿಚಯಿಸಿದೆ. ಇಲ್ಲಿ ನೀವು ನಿಮಗನ್ನಿಸಿದ್ದನ್ನು ಪೋಸ್ಟ್ ಮಾಡಬಹುದಾಗಿದ್ದು, ಇದು ಕೇವಲ ಒಂದು ದಿನ ಮಾತ್ರ ಉಳಿಯಲಿರುವುದರಿಂದ ಮಾಹಿತಿಯು ಶಾಶ್ವತವಾಗಿ ಉಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಇದಕ್ಕೆ ಅದ್ಭುತ ಪ್ರತಿಕ್ರಿಯೆಗಳು ಲಭ್ಯವಾಗುತ್ತಿವೆ. ಆದರೆ, ಅದೇ ಪ್ರಮಾಣದಲ್ಲಿ ಟೀಕೆಗಳೂ ವ್ಯಕ್ತವಾಗಿದ್ದು, ಪ್ರಕಟವಾಗುವ ವಿಷಯಗಳ ನೈಜತೆ ಬಗ್ಗೆ ಹಲವರು ತಮ್ಮ ಆತಂಕವನ್ನು ಹೊರಹಾಕುತ್ತಿದ್ದಾರೆ. ಇಷ್ಟಾದರೂ ಹೊಸತನಕ್ಕೆ ತೆರೆದುಕೊಳ್ಳುವಲ್ಲಿ ಟ್ವಿಟ್ಟರ್ ಮುಂದಡಿ ಇಡುತ್ತಲೇ ಇದೆ.
ಇದನ್ನು ಓದಿ: Zoom ವಿಡಿಯೋ ಮೀಟಿಂಗ್ ಆ್ಯಪ್‌ಗೆ ಪ್ರತಿಸ್ಪರ್ಧಿಯಾಗಿ ಬಂದಿದೆ ಭಾರತದ ನಮಸ್ತೆ ಆ್ಯಪ್!
ಈ ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಈಗ ಪರಿಚಯಿಸಲಾಗಿರುವ ಫ್ಲೀಟ್ಸ್‌ನಲ್ಲಿ ಟ್ವೀಟ್, ಫೋಟೋಗಳು, ವಿಡಿಯೋಗಳನ್ನು ಅಪ್‌ಲೋಡ್ ಮಾಡಬಹುದಾಗಿದ್ದು, 24 ಗಂಟೆಗಳ ನಂತರ ಕಣ್ಮರೆಯಾಗಲಿದೆ. ಈ ಮೂಲಕ ಕೆಲವು ಚಿಕ್ಕ ಚಿಕ್ಕ ಸಂಗತಿಗಳನ್ನು ಹಂಚಿಕೊಳ್ಳಲು ಅನುಕೂಲವಾಗುವಂತೆ ಮಾಡಿಕೊಡಲಾಗಿದೆ. ಅಂದರೆ, ನೋಡಲು, ಹೇಳಿಕೊಳ್ಳಲು ಅವು ಚಿಕ್ಕ ವಿಷಯಗಳು, ಇದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವುದು ಸರಿಯೇ ಎಂಬ ಮುಜುಗರ ಹಲವರಲ್ಲಿರುವುದರಿಂದ ಅಂಥವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಟ್ವಿಟ್ಟರ್ ಈ ಹೆಜ್ಜೆ ಇಟ್ಟಿದೆ.
ಮೊದಲು ಬ್ರೆಜಿಲ್‌ನಲ್ಲಿ ಪ್ರಯೋಗ
ಫ್ಲೀಟ್ ಮೊದಲು ಬ್ರೆಜಿಲ್‌ನಲ್ಲಿ ಆರಂಭವಾಯಿತು. ಅಲ್ಲಿನ ಪ್ರಯೋಗ ಯಶಸ್ವಿಯಾದ ಮೇಲೆ ಇಟಲಿಯಲ್ಲಿ ಬಳಕೆಗೆ ತಂದಿತು. ಇದೀಗ ಭಾರತದಲ್ಲೂ ಬಳಕೆದಾರರಿಗೆ ಹೊಸ ಫೀಚರ್ ಅನ್ನು ಪರಿಚಯಿಸುವ ಮೂಲಕ ವ್ಯಾಪ್ತಿಯನ್ನು ವಿಸ್ತಾರಗೊಳಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಉಳಿದ ದೇಶಗಳಿಗೂ ಈ ಫೀಚರ್ ಅನ್ನು ಬಳಸಲು ಅನುವು ಮಾಡಿಕೊಡುವ ಉದ್ದೇಶವನ್ನು ಟ್ವಿಟ್ಟರ್ ಹೊಂದಿದೆ. ಆದರೆ, ಈಗಿನ ಪ್ರಯೋಗದಿಂದ ಬರುವ ಪ್ರತಿಕ್ರಿಯೆಯನ್ನು ನೋಡಿಕೊಂಡು ಮುಂದಿನ ನಡೆ ಇಡುವುದಾಗಿ ಹೇಳಿಕೊಂಡಿದೆ.
ಇದನ್ನು ಓದಿ: ಭಾರತದ ಮಿತ್ರೊನ್ ಆ್ಯಪ್ ಡಿಲೀಟ್ ಮಾಡಿದ ಗೂಗಲ್ ; ಇದರ ಮೂಲ ಪಾಕಿಸ್ತಾನ!
ನೋಡಿ, ಆದ್ರೆ ನೋ ಲೈಕ್, ರೀಟ್ವೀಟ್!
ಬಹುತೇಕ ಇನ್ ಸ್ಟಾಗ್ರಾಂನಲ್ಲಿರುವಂತೆ ಫೀಚರ್ ಇದ್ದರೂ ಇಲ್ಲಿ ಲೈಕ್ ಮಾಡಲು, ರೀಟ್ವೀಟ್ ಮಾಡಲು ಇಲ್ಲವೇ ಕಮೆಂಟ್ ಹಾಕಲು ಅವಕಾಶ ಇಲ್ಲ. ಅಷ್ಟಕ್ಕೂ ನಿಮಗೆ ಖುದ್ದು ಆ ಬಗ್ಗೆ ಏನಾದರೂ ಪ್ರತಿಕ್ರಿಯೆ ನೀಡಲೇಬೇಕು ಎಂದಿದ್ದಲ್ಲಿ ಫ್ಲೀಟ್ ಮಾಡಿದವರಿಗೆ ನೇರವಾಗಿ ಮೆಸೇಜ್ ಇಲ್ಲವೇ ಇಮೋಜಿಗಳನ್ನು ರವಾನಿಸಬಹುದಾಗಿದೆ.
ಏನಿದರ ವಿಶೇಷತೆ?
ಇಲ್ಲಿ ಫ್ಲೀಟ್ ಮಾಡಿದರೆ ಯಾರು ಬೇಕಾದರೂ ನೋಡಲಾಗುವುದಿಲ್ಲ. ಇದು ಕೇವಲ ಹಿಂಬಾಲಕರಿಗೆ ಮಾತ್ರ. ಅಂದರೆ, ನೀವು ಮಾಡಿದ ಫ್ಲೀಟ್ ನಿಮ್ಮನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿದ್ದವರಿಗೆ ಮಾತ್ರ ಕಾಣುತ್ತದೆ. ನೀವು ಫಾಲೋ ಮಾಡುವವರು ನಿಮ್ಮನ್ನು ಫಾಲೋ ಮಾಡದಿದ್ದರೆ ಅವರಿಗೂ ಕಾಣಿಸದು. ಹಾಗಾಗಿ ಯಾರು ಬೇಕಾದರೂ ನೋಡಿ ಬಿಡುತ್ತಾರೆ ಎಂಬ ಭಯವೂ ಇಲ್ಲಿ ಬೇಡ.
ಇದನ್ನು ಓದಿ: ಸೋಷಿಯಲ್ ಡಿಸ್ಟೆನ್ಸ್‌ಗೆ ಗೂಗಲ್ ಆ್ಯಪ್!
ಕೇಳಿಬರುತ್ತಿರುವ ಅಪಸ್ವರಗಳು
ಟ್ವಿಟ್ಟರ್‌ಗೆ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂಬ ಅಪವಾದ ಮೊದಲಿನಿಂದಲೂ ಇದೆ. ಈಗ ಹೀಗೆ 24 ತಾಸುಗಳ ಕಾಲ ಇರುವ ಈ ಫ್ಲೀಟ್‌ನಲ್ಲಿ ಸುಳ್ಳು ಸುದ್ದಿಗಳು ಹರಡಲು ಪ್ರಾರಂಭವಾದರೆ, ಅದಕ್ಕೆ ಹೊಣೆ ಯಾರು? ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳತೊಡಗಿದ್ದಾರೆ.