ಇತ್ತೀಚೆಗೆ ಉದ್ಯಮಿಯೊಬ್ಬರ ಫೋನ್‌ ಎರಡು ಗಂಟೆಗಳ ಕಾಲ ಸಂಪರ್ಕ ಕಳಕೊಂಡಿತು. ಆ ಎರಡು ಗಂಟೆಯಲ್ಲಿ ಉದ್ಯಮಿಯ ಬ್ಯಾಂಕ್‌ ಖಾತೆಯಿಂದ ಅರ್ಧ ಕೋಟಿ ರೂಪಾಯಿ ತೆಗೆಯಲಾಗಿತ್ತು. ಆ ಅರ್ಧಗಂಟೆಯಲ್ಲಿ ಯಾರೋ ಅವರ ಫೋನ್‌ ನಂಬರನ್ನು ಬೇರೆ ಸಿಮ್‌ ಕಾರ್ಡ್‌ ಬಳಸಿ ಆಕ್ಟಿವೇಟ್‌ ಮಾಡಿದ್ದರು. ಅದರ ಮೂಲಕ ಓಟಿಪಿ ಪಡೆದು ಅವರ ಖಾತೆಯನ್ನು ದೋಚಿದ್ದರು.

ಈ ಹಿನ್ನೆಲೆಯಲ್ಲಿ ನಾವು ತೆಗೆದುಕೊಳ್ಳಬೇಕಾದ 5 ಮುನ್ನೆಚ್ಚರಿಕೆ ಯಾವುದೆಂದು ನೋಡೋಣ.

1. ಓಟೀಪಿ ಎಂಬ ಖಜಾನೆ ಕೀ:

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮೀಣ ಪ್ರದೇಶದ ಹುಡುಗನ ಸಂಬಳ 4000. ಅವನಿಗೆ ಸಂಬಳ ಬಂದ ದಿನ ಬ್ಯಾಂಕಿನ ಫೋನು ಬರುತ್ತದೆ. ನಿಮ್ಮ ಸಂಬಳ ನಿಮ್ಮ ಖಾತೆಗೆ ಬಂದಿದೆ. ಒಂದು ಓಟಿಪಿ ಕಳಿಸುತ್ತೇವೆ, ಅದನ್ನು ಹೇಳಿ ಅನ್ನುತ್ತಾರೆ. ಆತ ಓಟಿಪಿ ಹೇಳುತ್ತಾನೆ. ಕ್ಷಣಾರ್ಧದಲ್ಲಿ ಅವನ ಖಾತೆಗೆ ಜಮಾ ಆಗಿದ್ದ ಸಂಬಳ ಮಾಯವಾಗುತ್ತದೆ.

ನೀತಿ: ಯಾರೇ ಕೇಳಿದರೂ ಓಟಿಪಿ ಕೊಡಬೇಡಿ. ಓಟಿಪಿ ಕೊಡುವುದೂ ಒಂದೇ ನಿಮ್ಮ ಖಜಾನೆಯ ಕೀಲಿಕೈಯನ್ನು ಕಳ್ಳರ ಕೈಗೆ ಕೊಡುವುದೂ ಒಂದೇ. ಓಟಿಪಿ ನೀವು ಕೇಳಿದಾಗಷ್ಟೇ ಬರಬೇಕು. ಅದನ್ನು ನೀವು ಯಾತಕ್ಕೆ ಕೇಳಿದ್ದೀರೋ ಅದಕ್ಕಷ್ಟೇ ಬಳಸಬೇಕು. ನೀವಾಗಿ ಕೇಳದೇ ಯಾರೂ ಓಟಿಪಿ ಕಳಿಸುವಂತಿಲ್ಲ. ಸ್ವತಃ ಓಟಿಪಿ ಕಳಿಸಿದವರೂ ಅದನ್ನು ಕೇಳುವುದಿಲ್ಲ, ಕೇಳಿದರೆ ನೀವು ಕೊಡಬೇಕಾಗಿಲ್ಲ.

ಇದನ್ನೂ ಓದಿ | ನೀವು ಗಮನಿಸಬಹುದಾದ ಟಾಪ್‌ 5 ವೈರ್‌ಲೆಸ್‌ ಚಾರ್ಜರ್‌ಗಳು...

2. ಪೇಮೆಂಟ್‌ ಆ್ಯಪ್‌:

ಈಗ ನೂರೆಂಟು ಪೇಮೆಂಟ್‌ ಆ್ಯಪ್‌ಗಳಿವೆ. ಪ್ರತಿಯೊಬ್ಬರೂ ನಮ್ಮ ಪೇಮೆಂಟ್‌ ಆ್ಯಪ್‌ ಬಳಸಿ ಅನ್ನುವ ಒತ್ತಾಯ ಹೇರುತ್ತಾ ಹೋಗುತ್ತಾರೆ. ಅದರಿಂದ ಸಿಕ್ಕಾಪಟ್ಟೆಕ್ಯಾಶ್‌ ಬ್ಯಾಕ್‌ ಸಿಗುತ್ತದೆ ಅನ್ನುವ ಆಮಿಷವನ್ನೂ ಒಡ್ಡುತ್ತಾರೆ. ಆದರೆ ಅಂಥ ಆ್ಯಪ್‌ಗಳನ್ನು ಬಳಸುವ ಮುನ್ನ ಎಚ್ಚರಿಕೆಯಿಂದಿರಿ. ತಕ್ಷಣಕ್ಕೆ ಅವೆಲ್ಲ ತುಂಬ ಸೇಫ್‌ ಆದ ಆ್ಯಪ್‌ ಅಂತಲೇ ಅನ್ನಿಸಬಹುದು. ನಿಮ್ಮ ಎಲ್ಲಾ ಬ್ಯಾಂಕ್‌ ಖಾತೆಗಳನ್ನೂ ಆ ಆ್ಯಪ್‌ಗಳಿಗೆ ಲಿಂಕ್‌ ಮಾಡಬೇಡಿ. ಕಡಿಮೆ ಬ್ಯಾಲೆನ್ಸ್‌ ಇರುವ ಖಾತೆಯಷ್ಟೇ ಲಿಂಕ್‌ ಆಗಿರಲಿ. ಹಾಗೆಯೇ ಶಾಪಿಂಗ್‌ ಆ್ಯಪ್‌ಗಳಲ್ಲೋ ಪೇಮೆಂಟ್‌ ವ್ಯಾಲೆಟ್‌ಗಳಲ್ಲಿ ದೊಡ್ಡ ಮೊತ್ತ ಇಡಲು ಹೋಗಬೇಡಿ.

ನೀತಿ: ನಿಮ್ಮ ದುಡ್ಡನ್ನು ನೀವೇ ಮ್ಯಾನೇಜ್‌ ಮಾಡಿ. ಕ್ಯಾಶ್‌ ಬ್ಯಾಕ್‌ ಆಸೆಗೆ ಹೋದರೆ ಕೊಟ್ಟಹಣ ವಾಪಸ್ಸು ಬರದೇ ಹೋಗಬಹುದು. ಇಟ್ಟಹಣ ಮಾಯವಾಗಬಹುದು.

3.ಆನ್‌ಲೈನ್‌ ವ್ಯವಹಾರ:

ನಿಮ್ಮ ಬ್ಯಾಂಕಿನ ವ್ಯವಹಾರಗಳನ್ನು ಆನ್‌ಲೈನಲ್ಲೇ ಮಾಡಲು ಹೋಗಬೇಡಿ. ಎಲ್ಲಾ ಬ್ಯಾಂಕಿನ ಖಾತೆಗಳನ್ನೂ ಆನ್‌ಲೈನ್‌ ಆಪರೇಟ್‌ ಮಾಡಬೇಡಿ. ಆನ್‌ಲೈನ್‌ ಆಗಿ ಒಂದು ಖಾತೆಯಿದ್ದರೆ ಸಾಲದೇ? ಎಲ್ಲವೂ ಯಾಕೆ ಆನ್‌ಲೈನಲ್ಲೇ ಬೇಕು. ಅಂಥ ಆನ್‌ಲೈನ್‌ ಖಾತೆಗಳನ್ನು ನಿಮ್ಮ ಫೋನ್‌ ಬಳಸಿ ಯಾರು ಬೇಕಿದ್ದರೂ ಬಳಸಬಹುದು, ನಿಮ್ಮ ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌ ಮತ್ತೊಬ್ಬರ ಕೈಗೆ ಸಿಗಬಹುದು.

ನೀತಿ: ಬ್ಯಾಂಕಿಂಗಿನಲ್ಲಿ ಹಳೆಯ ಕ್ರಮವೇ ಅತ್ಯುತ್ತಮ. ಹೊಸತರಲ್ಲಿ ಯಾವುದು ಅಕ್ರಮ, ಯಾವುದು ಸಕ್ರಮ, ಬಲ್ಲವರು ಯಾರು?

ಇದನ್ನೂ ಓದಿ | ಮೊಬೈಲ್ ಆಯ್ತು, ಈಗ ಭಾರತದಲ್ಲಿ ಟೆಲಿಕಾಂ ಸೇವೆಗೂ ಚೀನಾ ಕಂಪನಿ ಎಂಟ್ರಿ?...

4. ನೆಟ್‌ ವರ್ಕ್ ಸೇಫ್ಟಿ:

ಉಚಿತ ವೈಫ್‌ ನಿಮ್ಮ ಮೊದಲ ಶತ್ರು ಮರೆಯದಿರಿ. ಯಾವತ್ತೂ ಪಬ್ಲಿಕ್‌ ವೈಫೈ ಬಳಸಿ ನಿಮ್ಮ ಬ್ಯಾಂಕ್‌ ಖಾತೆಗಳನ್ನು ನಿಭಾಯಿಸಲು ಹೋಗಬೇಡಿ. ಹಾಗೆ ನಿಭಾಯಿಸಲೇ ಬೇಕಾದ ಸಂದರ್ಭ ಬಂದಲ್ಲಿ ಎರಡು ಹಂತದ ಅಥೆಂಟಿಕೇಷನ್‌ ಇಟ್ಟುಕೊಳ್ಳಿ. ಸಾಮಾನ್ಯವಾಗಿ ಪಬ್ಲಿಕ್‌ ವೈಫ್‌ ಬಳಸುವಾಗಲೇ ಅತಿ ಹೆಚ್ಚಿನ ಸೈಬರ್‌ ಅಕ್ರಮ ನಡೆಯುವುದು, ನೆನಪಿರಲಿ.

ನೀತಿ: ಪಬ್ಲಿಕ್‌ ವೈಫ್‌ ಅಂದರೆ ಗುಂಪಿನಲ್ಲಿ ಪರ್ಸು ತೆಗೆದು ಹಣ ಎಣಿಸಿದಂತೆ. ಯಾರು ಬೇಕಿದ್ದರೂ ಎಗರಿಸಿಕೊಂಡು ಹೋಗಬಹುದು.

5. ಆ್ಯಪ್‌ ಸಂಕೋಚ:

ಸಿಕ್ಕ ಸಿಕ್ಕ ಆ್ಯಪ್‌ಗಳನ್ನೆಲ್ಲ ಡೌನ್‌ಲೋಡ್‌ ಮಾಡಬೇಡಿ. ನಿಮ್ಮ ಫೋನಲ್ಲಿ ಎಷ್ಟು ಕಡಿಮೆ ಆ್ಯಪ್‌ ಇರುತ್ತದೋ ಅದು ಅಷ್ಟು ಸುರಕ್ಷಿತವಾಗಿರುತ್ತದೆ. ಈಗಂತೂ ಎಲ್ಲಾ ಆ್ಯಪ್‌ಗಳೂ ಎಲ್ಲದಕ್ಕೂ ಅನುಮತಿ ಕೇಳುತ್ತವೆ. ಅನುಮತಿ ಕೊಡದೇ ಹೋದರೆ ಅವು ಕೆಲಸ ಮಾಡುವುದೇ ಇಲ್ಲ. ನಿಮ್ಮ ಕಾಂಟಾಕ್ಟ್, ಡಾಟಾ ಎಲ್ಲಕ್ಕೂ ಅನುಮತಿ ಕೇಳುವ ಆ್ಯಪ್‌ ನಿಮ್ಮ ಕಾಂಟಾಕ್ಟ್ ಡಾಟಾ, ನೋಟ್‌ ಪ್ಯಾಡ್‌ ಮಾಹಿತಿಗಳನ್ನೆಲ್ಲ ಸಂಗ್ರಹಿಸಬಹುದು. ಅಲ್ಲೆಲ್ಲಾದರೂ ನೀವು ನಿಮ್ಮ ಖಾತೆಯ ಪಾಸ್‌ ವರ್ಡ್‌ ಬರೆದಿಟ್ಟಿದ್ದರೆ ಕತೆ ಮುಗಿದಂತೆ.

ನೀತಿ: ಆ್ಯಪ್‌ಗಳು ನೀವು ಮಲಗಲಿ ಅಂತ ಮನೆಯೊಳಗೇ ಕಾಯುತ್ತಿರುವ ಕಳ್ಳರು.