ಮಂಡ್ಯ(ನ.15): ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎಲ್ಲಾ ಅನರ್ಹ ಶಾಸಕರನ್ನು ಸೋಲಿಸುವುದೇ ಜೆಡಿಎಸ್‌ ಪಕ್ಷದ ಮುಖ್ಯ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಹೇಳಿದ್ದಾರೆ.

ಕೆ. ಆರ್. ಪೇಟೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಜಾನಕೀರಾಂ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರವನ್ನು ಕೆಡವಿದ ಕೆ.ಸಿ.ನಾರಾಯಣಗೌಡರಿಗೆ ಉಪ ಚುನಾವಣೆಯಲ್ಲಿ ಕ್ಷೇತ್ರದ ಜನರು ಹೀನಾಯವಾಗಿ ಸೋಲಿಸಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಉಪಚುನಾವಣೆಯಲ್ಲಿ ಕ್ಷೇತ್ರದಾಧ್ಯಂತ ಸೈನಿಕರ ಮಾದರಿಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಶ್ರಮಿಸಬೇಕು. ಈ ಮೂಲಕ ನಿಮ್ಮ ಕುಮಾರಣ್ಣನಿಗೆ ಮೋಸ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಜಿಟಿಡಿಗೆ ಫ್ಯೂಸ್ ಹೋಗಿದೆ, ಇನ್ನೆಲ್ಲಿ ಶಾಕ್ ಹೊಡೆಯುತ್ತೆ: ಎಚ್‍ಡಿಕೆ ವ್ಯಂಗ್ಯ

ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡರಿಗೆ ಬೆಂಬಲ ನೀಡಲಾಗುವುದು. ಉಳಿದ ಎಲ್ಲಾ 14 ಕ್ಷೇತ್ರಗಳಲ್ಲಿ ಜೆಡಿಎಸ್‌ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಸಲಿದೆ. ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ಪಕ್ಷದ ಹಿರಿಯ ಮುಖಂಡ ಬಿ.ಎಲ್ ದೇವರಾಜು ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕ ವ್ಯಕ್ತಿಯಾದ ಬಿ.ಎಲ್ ದೇವರಾಜು ಗೆಲುವಿಗೆ ದುಡಿಯಬೇಕು ಎಂದಿದ್ದಾರೆ.

ನಾನು ದೇಶದ ಯಾವುದೇ ರಾಜ್ಯದಲ್ಲಿಯೂ ಮಾಡದಂತಹ ರೈತರ ಸುಮಾರು 48ಸಾವಿರ ಕೋಟಿ ಮನ್ನಾ ಮಾಡಿ ದಾಖಲೆ ನಿರ್ಮಿಸಿದ್ದೇನೆ. ಇದರಿಂದ ರಾಜ್ಯದ ಲಕ್ಷಾಂತರ ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಕೆ.ಆರ್‌ .ಪೇಟೆ ತಾಲೂಕಿಗೆ ನಾನು ಕೊಟ್ಟಸುಮಾರು 700 ಕೋಟಿ ಅನುದಾನ ಸರ್ಕಾರದ ದಾಖಲೆಗಳಲ್ಲಿ ದಾಖಲಾಗಿದೆ. ಆದರೆ, ನಾನು ಕೊಟ್ಟಅನುದಾನವನ್ನು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟಿದ್ದಾರೆ ಎಂದು ಹೇಳಿಕೊಂಡು ತಿರುಗುತ್ತಿರುವ ನಾರಾಯಣಗೌಡ ಅವರಿಗೆ ಈ ಚುನಾವಣೆಯಲ್ಲಿ ಕ್ಷೇತ್ರ ಜನರೇ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ರಂಗೇರಿದ ಉಪಸಮರ: ಅಪ್ಪನ ಶತ್ರುತ್ವ ಮರೆತು ಮಗನಿಗೆ ಬೆಂಬಲ ಘೋಷಿಸಿದ JDS

ಭಾರಿ ವಿರೋಧದ ನಡುವೆಯೂ ಪಕ್ಷದ ಟಿಕೆಚ್‌ ನೀಡಿ ಗೆಲ್ಲಿಸಿದ್ದಕ್ಕೆ ಒಳ್ಳೆಯ ಬಹುಮಾನ ನೀಡಿದ ನಾರಾಯಣಗೌಡ ಅವರ ಬಗ್ಗೆ ಈಗ ಮಾತನಾಡಲು ಹೋಗುವುದಿಲ್ಲ. ಚುನಾವಣಾ ಪ್ರಚಾರ ಸಭೆಗಳಲ್ಲಿ ನಾರಾಯಣಗೌಡ ನನ್ನ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳಿಗೆ ಸೂಕ್ತ ದಾಖಲೆಗಳೊಂದಿಗೆ ಮತದಾರರಿಗೆ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಜೆಡಿಎಸ್‌ ಅಭ್ಯರ್ಥಿ ಬಿ.ಎಲ್. ದೇವರಾಜು, ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು, ಶಾಸಕ ಸುರೇಶ್‌ ಗೌಡ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಟಿ.ಮಂಜು, ಸದಸ್ಯ ರಾಮದಾಸ್‌, ಪುರಸಭಾ ಸದಸ್ಯ ಬಸ್‌ ಸಂತೋಷ್‌ ಕುಮಾರ್‌, ಮುಖಂಡ ಎ.ಎಆರ್‌.ರಘು, ಜೆಡಿಎಸ್‌ ಉಪಾಧ್ಯಕ್ಷ ಸಂಗಾಪುರ ಪುಟ್ಟಸ್ವಾಮಿಗೌಡ, ಎಪಿಎಂಸಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್‌, ಪೂವನಹಳ್ಳಿ ರೇವಣ್ಣ, ಕೆ.ಬಿ.ನಾಗೇಶ್‌, ಹುಲ್ಲೇಗೌಡ, ಕಾಯಿ ಮಂಜೇಗೌಡ, ಎಂ.ಪಿ.ಲೋಕೇಶ್‌, ಶಶಿಧರ್‌ ಸಂಗಾಪುರ, ಚಂದ್ರಹಾಸ, ಸೋಮಸುಂದರ್‌, ಬಂಡಿಹೊಳೆ ಮಂಜೇಗೌಡ, ರಂಗರಾಜು, ವಸಂತಕುಮಾರ್‌ ಇದ್ದರು.

ಪ್ರೇಮ ವಿವಾಹವಾಗಿದ್ದ ನವ ವರನನ್ನು ಕೊಲೆ ಮಾಡಿ ನದಿಗೆಸೆದ್ರು..!

ನವೆಂಬರ್ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: