ಎರಡನೇ ಮಹಾಯುದ್ಧದ ಫ್ಲಾಶ್ಬ್ಯಾಕ್ನಲ್ಲಿ ಬಂಗಾರ ಹೊತ್ತ ರೈಲು ಹುಡುಕುವ ಥ್ರಿಲ್ಲರ್ ಕಾದಂಬರಿ 'ಹನುಕಿಯಾ'
ಐತಿಹಾಸಿಕ ಕಾದಂಬರಿ ಬರೆಯುವುದು ಸುಲಭವಲ್ಲ. ಮೂಲ ಇತಿಹಾಸದ ಘಟನಾವಳಿಗೆ ಭಂಗ ಬಾರದಂತೆ, ಕತೆ ಕಟ್ಟಬೇಕು. ಜಾಗತಿಕ ಐತಿಹಾಸಿಕ ಘಟನೆಗಳನ್ನು ಮೂಲವಾಗಿಟ್ಟುಕೊಂಡಿರುವ ಹನುಕಿಯಾ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ.
ರಜನಿ ಎಂ.ಜಿ. ಮೆಟ್ರೋ ಬ್ಯುರೋ ಹೆಡ್. ಸುವರ್ಣ ನ್ಯೂಸ್
ಎಚ್‌ಎಸ್‌ಆರ್ ಲೇಔಟ್ನಲ್ಲಿ ನಡೆದ ವೀರಲೋಕದ ಪುಸ್ತಕ ಸಂತೆಯಲ್ಲಿ ಯಾವ ಪುಸ್ತಕ ಕೊಳ್ಳೋದು ಅಂತ ಕಣ್ಣಾಡಿಸುತ್ತಿದ್ದೆ. ನಾನು ಕೇಳಿದಾಗಲೆಲ್ಲಾ ಕೇಳಿದ ಪುಸ್ತಕವನ್ನು ನನ್ನ ಕೈಗೆ ತಂದಿಡುವ ಸಾಹಿತ್ಯ ಲೋಕ ಪುಸ್ತಕ ಪ್ರಕಾಶನದ ರಘುವೀರ್ ಅಲ್ಲೇ ಮಳಿಗೆ ಹಾಕಿಕೊಂಡಿದ್ದರು. ನನ್ನ ಟೇಸ್ಟ್ ನಿಮಗೆ ಗೊತ್ತಿರತ್ತೆ. ನನಗಿಷ್ಟ ಆಗೋ ಒಂದು ಪುಸ್ತಕ ಕೊಡಿ ಎಂದೆ. ಕೂಡಲೇ ಅವರು ಕೈಗಿಟ್ಟಿದ್ದು, ವಿಠಲ್ ಶೆಣೈ ಬರೆದ ಹನುಕಿಯಾ. ಲೇಖಕರು ಯಾರೋ ಗೊತ್ತಿಲ್ಲ, ಪುಸ್ತಕದ ಬಗ್ಗೆಯೂ ಓದಿಲ್ಲ ಎಂದೆ. ನೋಡಿದ್ರೆ ರಘುವೀರ್ ಪಕ್ಕ ಕುಳಿತಿದ್ದವರೇ ವಿಠಲ್ ಶೆಣೈ. ನಾನು ಅನುಮಾನಿಸುತ್ತಲೇ ಪುಸ್ತಕ ತಂದೆ. ತಂದು ಒಂದು ತಿಂಗಳಾದರೂ ಆ ಪುಸ್ತಕ ಮುಟ್ಟಿರಲಿಲ್ಲ.
ಮೊನ್ನೆ ಕೈಗೆತ್ತಿಕೊಂಡಿದ್ದೇ ತಡ, ಪುಸ್ತಕ ಕೆಳಗಿಳಿಸಲು ಬಿಡಲಿಲ್ಲ. ಥೇಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ಓದಿಸಿಕೊಂಡು ಹೋಯಿತು. ಇಂಥ ಪುಸ್ತಕದ ಬಗ್ಗೆ ಯಾಕೆ ಎಲ್ಲೂ ಚರ್ಚೆ ಆಗಲಿಲ್ಲವೋ ಗೊತ್ತಾಗಲಿಲ್ಲ, ಐತಿಹಾಸಿಕ ಕಾದಂಬರಿ ಬರೆಯುವುದು ಸುಲಭವಲ್ಲ. ಮೂಲ ಇತಿಹಾಸದ ಘಟನಾವಳಿಗೆ ಭಂಗ ಬಾರದಂತೆ, ಕತೆ ಕಟ್ಟಬೇಕು. ಜಾಗತಿಕ ಐತಿಹಾಸಿಕ ಘಟನೆಗಳನ್ನು ಮೂಲವಾಗಿಟ್ಟುಕೊಂಡಿರುವ ಹನುಕಿಯಾ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಎರಡನೇ ವಿಶ್ವಯುದ್ಧದ ಭೀಕರತೆಯನ್ನು ಒಂದು ಕುಟುಂಬದ ಮೂಲಕ ಕಟ್ಟಿಕೊಟ್ಟ ಪುಸ್ತಕವಿದು.
ಬಿಜೆಪಿ ಧರ್ಮ ರಾಜಕೀಯಕ್ಕೆ ಜನ ಬ್ರೇಕ್ ಹಾಕ್ತಾರೆ: ಸಚಿವ ಮಧು ಬಂಗಾರಪ್ಪ
ಯಹೂದಿಗಳ ವಿರುದ್ಧದ ಜನಾಂಗೀಯ ದ್ವೇಷ, ಎರಡನೆ ಮಹಾಯುದ್ಧ, ಜೀವ ಉಳಿಸಿಕೊಳ್ಳಲು ಹೋರಾಟ, ಭಾರತದ ಸ್ವಾತಂತ್ರ್ಯ ಸಂಗ್ರಾಮದಂಥ ವಿಸ್ತಾರವಾದ ಕ್ಯಾನ್ವಾಸ್ ಮೇಲೆ ಮೂಡಿದ ಕಲಾಕೃತಿ ಈ ಪುಸ್ತಕ. ಅದರಲ್ಲೂ ಹಿಟ್ಲರ್ ನಿರ್ಮಿಸಿದ ಮೃತ್ಯುಕೂಪ ಕಾನ್ಸೆಂಟ್ರೇಷನ್ ಕ್ಯಾಂಪ್ನ ಚಿತ್ರಣ ಪ್ರತ್ಯಕ್ಷ ಅನುಭವ ನೀಡುವಂತಿದೆ. ಸಾವಿರಾರು ಜನರನ್ನು ಬಟ್ಟೆ ಬಿಚ್ಚಿ, ತಲೆ ಬೋಳಿಸಿ ಕೆಲಸ ಮಾಡಿಸುವ, ವಿಷದ ಅನಿಲ ಬಿಟ್ಟು ಸಾಮೂಹಿಕವಾಗಿ ಪ್ರಾಣ ತೆಗೆಯುವ ಚಿತ್ರಣ ನನ್ನನ್ನು ಎರಡು ದಿನ ವಿಹ್ವಲಗೊಳಿಸಿತು. ಕ್ಯಾಂಪ್ನ ಬೇರೆ ಬೇರೆ ಬ್ಲಾಕ್ನಲ್ಲಿದ್ದು ತಮ್ಮ ಕುಟುಂಬದ ಇತರ ಸದಸ್ಯರಿಗಾಗಿ ಮಿಡಿಯುವ ಸನ್ನಿವೇಶ ನನಗಂತೂ ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾ ನೆನಪಿಸಿತು.
ಹಿಟ್ಲರ್ನ ಮೃತ್ಯುಕೂಪದಿಂದ ಹೆಸರೇ ಕೇಳಿರದ ಭಾರತಕ್ಕೆ ತಪ್ಪಿಸಿಕೊಂಡು ಬರುವ ಮರಿಯಂಳ ಸಾಹಸ, ಇಲ್ಲಿಯ ಸ್ವತಂತ್ರ ಚಳವಳಿ, ವಿಶ್ವಯುದ್ಧದಲ್ಲಿ ಸೈನಿಕನಾಗಿ ಭಾಗವಹಿಸಿ ಸೇಡು ತೀರಿಸಿಕೊಳ್ಳುವ ನಾಥೆನ್.. ಹೀಗೆ ಎಲ್ಲವೂ ರೋಮಾಂಚಕ ಸನ್ನಿವೇಶಗಳೇ. ಅದರಲ್ಲೂ ಭಾರತದ ಘಟನೆಗಳಂತೂ ಹೃದ್ಯವಾಗಿ ಮೂಡಿದೆ. ಎಲ್ಲಿಯೋ ದೂರದ ಪೊಲೆಂಡ್ನ ಅನಾಥ ಮಕ್ಕಳಿಗೆ ಆಶ್ರಯ ಕೊಡುವ ಭಾರತದ ಮಹಾರಾಜ, ಆತನ ಹೃದಯ ವೈಶಾಲ್ಯತೆಯಿಂದ ಅದೆಷ್ಟೋ ನಿರಾಶ್ರಿತರ ಜೀವನವೇ ಬದಲಾಗುವ ಸನ್ನಿವೇಶಗಳಂತೂ ಮನ ಮುಟ್ಟುತ್ತದೆ. ಈ ಎಲ್ಲಾ ಫ್ಲಾಶ್ಬ್ಯಾಕ್ ಘಟನೆಗಳಿಗೆ ಥ್ರಿಲ್ಲಿಂಗ್ ಸ್ಪೀಡ್ ನೀಡುವ ಬಂಗಾರ ಹೊತ್ತ ರೈಲಿನ ಹುಡುಕಾಟ ಕ್ಲೈಮ್ಯಾಕ್ಸ್ನಲ್ಲಿ ಪುಸ್ತಕ ಕೆಳಗಿಡದಂತೆ ಮಾಡಿಬಿಡುತ್ತದೆ.
ಐತಿಹಾಸಿಕ ಘಟನೆಗಳನ್ನು ಹದವಾಗಿ ಕಲ್ಪನೆ ಬೆರೆಸಿ, ಆಧುನಿಕ ಬೆಳಕಿನಲ್ಲಿ ಚಿತ್ರ ಕಟ್ಟುವ ಈ ಪರಿ ಕೆಲವೊಮ್ಮೆ ಕೆ.ಎಂ. ಗಣೇಶಯ್ಯರವರನ್ನೂ ನೆನಪಿಸಿತು. 1939ರಿಂದ ಮೊದಲ್ಗೊಂಡು 2015ರವರೆಗೆ ಪೋಲೆಂಡ್, ಭಾರತ, ಅಮೆರಿಕ ದೇಶಗಳಲ್ಲಿ ನಡೆಯುವ ಕಥಾಹಂದರವಾದರೂ ನಮಗೆಲ್ಲೂ ಅಪರಿಚಿತ ಎನ್ನಿಸದು. ಯುರೋಪಿನಲ್ಲಿ ಅಧಿಕಾರದ ಹೆಸರಿನಲ್ಲಿ ಜನಾಂಗೀಯ ದ್ವೇಷ ಹೆಚ್ಚಿಸುತ್ತಾ ನಡೆಯುವ ಕ್ರೌರ್ಯದ ಪರಮಾವಧಿ ಹಾಗೂ ಬ್ರಿಟೀಷರ ಕ್ರೌರ್ಯದ ವಿರುದ್ಧ ನಡೆದ ಭಾರತದ ಅಹಿಂಸಾ ಚಳವಳಿಯನ್ನು ಅಕ್ಕಪಕ್ಕ ಇಟ್ಟು ನೋಡುವಾಗ ನಿಜಕ್ಕೂ ಭಾರತದ ಬಗ್ಗೆ ಹೆಮ್ಮೆಯಾಗುತ್ತದೆ.
ಹಿಂದುತ್ವ ಉಳಿವಿಗಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ: ಕೆ.ಎಸ್.ಈಶ್ವರಪ್ಪ
ಅಲ್ಲದೆ ಮರಿಯಂ ಹಾಗೂ ನಾಥೆನ್ ಒಂದೇ ಕುಟುಂಬದ, ಒಂದೇ ಸಂಸ್ಕಾರದ ಮಕ್ಕಳಾಗಿ ನಮಗೆ ಆಪ್ತರಾಗುತ್ತಾರಾದರೂ, ಭಾರತಕ್ಕೆ ಬಂದ ಮರಿಯಂ ಸಾಗುವ ದಾರಿ, ಅಮೆರಿಕಕ್ಕೆ ಹೋಗಿ ಸೇಡಿನ ಹಾದಿ ಹಿಡಿಯುವ ನಾಥೆನ್ ಮನಸ್ಥಿತಿಯ ವೈರುಧ್ಯಗಳೂ ನಮ್ಮನ್ನು ಕಾಡುತ್ತವೆ. ಪುಸ್ತಕ ಓದಿದಾಗ ವಿಶ್ವಯುದ್ಧದಲ್ಲಿ ನಿರ್ಗತಿಕರಾದ ನೂರಾರು ಅನಾಥ ಮಕ್ಕಳಿಗೆ ರಕ್ಷಣೆ ನೀಡಿ ಯುರೋಪಿನ ದೇಶಗಳಿಗೆ ಮಾದರಿಯಾಗುವ ನಮ್ಮ ಭಾರತದ ಮಹಾರಾಜರ ಬಗ್ಗೆ ನಮಗೆ ಇತಿಹಾಸದ ಪಾಠಗಳಲ್ಲಿ ಏಕೆ ಕಲಿಸಿಕೊಟ್ಟಿಲ್ಲ ಅನ್ನೋ ಪ್ರಶ್ನೆ ಓದುಗರಲ್ಲಿ ಖಂಡಿತಾ ಏಳುತ್ತದೆ. ತೇಜೋ ತುಂಗಭದ್ರ, ಪ್ರಮೇಯ, ಚೆನ್ನ ಭೈರಾದೇವಿಯಂಥ ಐತಿಹಾಸಿಕ ಕಾದಂಬರಿಗಳ ಸಾಲಿಗೆ ಖಂಡಿತವಾಗಿಯೂ ವಿಠಲ್ ಶೆಣೈರವರ ಹನುಕೀಯಾ ಸೇರುತ್ತದೆ. ಈ ಲೇಖಕರ ಇತರ ಪುಸ್ತಕಗಳನ್ನೂ ನಾನೀಗ ಓದಬೇಕಾಗಿದೆ.