ಹಿಂದುತ್ವ ಉಳಿವಿಗಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ: ಕೆ.ಎಸ್.ಈಶ್ವರಪ್ಪ
ರಾಜ್ಯದ ಹಿಂದುತ್ವದ ಹೋರಾಟಗಾರರು, ಹಿರಿಯರು ನನ್ನ ಜೊತೆ ಇರುವುದಾಗಿ ಹೇಳಿ ಆಶೀರ್ವಾದ ಮಾಡಿದ್ದಾರೆ. ಶ್ರೀ ಸಾಮಾನ್ಯ ನನಗೆ ಬೆಂಬಲವಾಗಿ ನಿಂತಿರುವುದು ಸ್ಪಷ್ಟವಾಗಿದೆ. ನನಗೆ ಇಷ್ಟೆಲ್ಲ ಬೆಂಬಲ ಸಿಕ್ಕಿರುವಾಗ ನನ್ನ ಗೆಲುವು ನೂರಕ್ಕೆ ನೂರು ಖಚಿತ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬೈಂದೂರು (ಏ.11): ರಾಜ್ಯದ ಹಿಂದುತ್ವದ ಹೋರಾಟಗಾರರು, ಹಿರಿಯರು ನನ್ನ ಜೊತೆ ಇರುವುದಾಗಿ ಹೇಳಿ ಆಶೀರ್ವಾದ ಮಾಡಿದ್ದಾರೆ. ಶ್ರೀ ಸಾಮಾನ್ಯ ನನಗೆ ಬೆಂಬಲವಾಗಿ ನಿಂತಿರುವುದು ಸ್ಪಷ್ಟವಾಗಿದೆ. ನನಗೆ ಇಷ್ಟೆಲ್ಲ ಬೆಂಬಲ ಸಿಕ್ಕಿರುವಾಗ ನನ್ನ ಗೆಲುವು ನೂರಕ್ಕೆ ನೂರು ಖಚಿತ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಹೆಮ್ಮಾಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಿಂದಾಗಿ ಕಾರ್ಯಕರ್ತರು ನೊಂದಿದ್ದಾರೆ. ಹಿಂದುತ್ವದ ಹೋರಾಟಗಾರರು ಎಲ್ಲಿದ್ದಾರೋ ಅದೆಲ್ಲಾ ನನ್ನ ಕರ್ಮಭೂಮಿ. ಹಿಂದುತ್ವ ಉಳಿವಿಗಾಗಿ ನಾನು ಸ್ಪರ್ಧೆ ಮಾಡುತ್ತಿದ್ದು, ಇದರಲ್ಲಿ ಗೆದ್ದೇ, ಗೆಲ್ಲುತ್ತೇನೆ ಎಂಬ ವಿಶ್ವಾಸ ಹೆಚ್ಚಿದೆ ಎಂದು ತಿಳಿಸಿದರು.
ಕ್ಷೇತ್ರದ ಎಲ್ಲಾ ಕಡೆ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದೇನೆ. ಬಿಜೆಪಿ ಕಾರ್ಯಕರ್ತರ ಅಷ್ಟೇ ಅಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರೂ ನನಗೆ ಬೆಂಬಲ ಕೊಡುವುದಾಗಿ ತೀರ್ಮಾನಿಸಿದ್ದಾರೆ. ಇದಕ್ಕೆ ಅವರ ಪಕ್ಷದವರು ಪ್ರಶ್ನೆ ಮಾಡಿದ್ದಾರೆ. ಇದೊಂದು ಚುನಾವಣೆ ನಮ್ಮನ್ನು ಬಿಡಿ ನಾವು ಈಶ್ವರಪ್ಪ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ. ರಾಜ್ಯದ ಹಿಂದುತ್ವದ ಹೋರಾಟಗಾರರು, ಹಿರಿಯರು ನನ್ನ ಜೊತೆ ಇರುವುದಾಗಿ ಹೇಳಿ ಆಶೀರ್ವಾದ ಮಾಡಿದ್ದಾರೆ.
ಇಷ್ಟೆಲ್ಲಾ ಬೆಂಬಲ ಪಡೆದಿರುವ ನಾನು ಈ ಬಾರಿ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸಿದಾಗ ಅಮಿತ್ ಶಾ ನಿಲ್ಲಿಸಲು ಸೂಚಿಸಿದರು. ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಿದೆ. ಕಳೆದ ಚುನಾವಣೆಯಲ್ಲಿ ಚುನಾವಣೆಯಿಂದ ಹಿಂದೆ ಸರಿಯಲು ಹೇಳಿದರು.
ತಕ್ಷಣ ಕೇಂದ್ರದವರಿಗೆ ಪತ್ರ ಬರೆದು ಹಿಂದೆ ಸರಿದೆ. ಈಗ ಲೋಕಸಭೆಯಲ್ಲಿ ಕಾಂತೇಶ್‌ಗೆ ಹಾವೇರಿಯಲ್ಲಿ ಟಿಕೆಟ್ ಕೊಡುವುದಾಗಿ ಮೋಸ ಮಾಡಿದ್ದಾರೆ. ಪಕ್ಷದಲ್ಲಿ ಹಿಂದುತ್ವ ನಾಯಕರ ಕಡೆಗಣನೆ ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ವಿವರಿಸಿದರು.