ಪೇಜಾವರ ಶ್ರೀಗಳು ಪ್ರತಿ ವರ್ಷ ಒಂದೊಂದು ಕಡೆ ಚಾತುರ್ಮಾಸ ಪೂಜೆ ಮಾಡುತ್ತಿದ್ದರು. ಇಂತಹದ್ದೊಂದು ಚಾತುರ್ಮಾಸ್ಯಕ್ಕೆ 2009 ರ ಸೆಪ್ಟಂಬರ್ ತಿಂಗಳಲ್ಲಿ ಮೈಸೂರು ಅಣಿಯಾಗಿತ್ತು. ಚಾತುರ್ಮಾಸ್ಯದ ವೇಳೆ ಪೇಜಾವರ ಶ್ರೀಗಳು ಈ ಬಾರಿ ಮೈಸೂರಿನ ದಲಿತರ ಕೇರಿಗಳಲ್ಲಿ ಪಾದಯಾತ್ರೆ ನಡೆಸಿ ಅಸ್ಪಶ್ಯತೆ ನಿವಾರಣೆಗೆ ಯತ್ನಿಸುವುದಾಗಿ ಹೇಳಿಕೆ ಕೊಟ್ಟರು.

ಈ ಹೇಳಿಕೆ ರಾಜ್ಯಾದ್ಯಂತ ಬಿಸಿ ಚರ್ಚಿಗೆ ಗ್ರಾಸ ಒದಗಿಸಿತು. ಪ್ರಗತಿಪರರೆಲ್ಲ ಮುಗಿಬಿದ್ದು ಶ್ರೀಗಳ ನಿಲುವಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಏತನ್ಮಧ್ಯೆ, ಚಿತ್ರದುರ್ಗದ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕೂಡ ಹೇಳಿಕೆ ನೀಡಿ ಪೇಜಾವರ ಶ್ರೀಗಳು ದಲಿತರ ಕೇರಿಯಲ್ಲಿ ಪಾದಯಾತ್ರೆ ಮಾಡಿದರೆ ನಮ್ಮವರು ಪಾದ ತೊಳೆದು ಪೂಜೆ ಮಾಡುತ್ತಾರೆ. ದೇವರಂತೆ ಕಂಡು ಅವರ ಪಾದವನ್ನು ಹಣೆಗೆ ಒತ್ತಿಕೊಳ್ಳುತ್ತಾರೆ.

ಪ್ರಜ್ಞೆ ಕಳೆದುಕೊಳ್ಳುವ 9 ತಾಸು ಮುನ್ನ, ಸ್ವರ್ಗ ಪ್ರಾಪ್ತಿ ಕುರಿತು ಕೊನೆ ಉಪನ್ಯಾಸ!

ದಲಿತ ಸ್ವಾಮೀಜಿಗಳು ಬ್ರಾಹ್ಮಣರ ಕೇರಿಗೆ ಹೋದರೆ ಇಂಥ ಸ್ವಾಗತ ಸಿಗಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಹರಿಯಬಿಟ್ಟರು. ಮಾದಾರ ಚೆನ್ನಯ್ಯ ಸ್ವಾಮೀಜಿಗಳ ಈ ಹೇಳಿಕೆ ಗಂಭೀರ ಸ್ವರೂಪ ತಾಳಿತು. ಪ್ರಗತಿಪರರು ಕೂಡಾ ಮಾದಾರಶ್ರೀಗಳ ಹೇಳಿಕೆ ಖಂಡಿಸಿದರು. ದಲಿತ ಸ್ವಾಮೀಜಿ ಬ್ರಾಹ್ಮಣರ ಕೇರಿಗೆ ಹೋದಾಕ್ಷಣ ಅಸ್ಪಶ್ಯತೆ ನಿವಾರಣೆ ಆಗುವುದಿಲ್ಲ. ಇಂತಹ ಸಮೀಕರಣಗಳೇ ತುಂಬಾ ಅಪಾಯಕಾರಿ ಎಂದೆಲ್ಲ ಹೇಳಿಕೆ ನೀಡಿದರು.

ಈ ಕುರಿತು ಚರ್ಚೆಗಳು ನಡೆಯುತ್ತಿರುವುದರ ನಡುವೆಯೇ ಮೈಸೂರಿನ ಬ್ರಾಹ್ಮಣ ಸಮುದಾಯ ತಮ್ಮ ಕೇರಿಗೆ ಆಗಮಿಸಿ ಪಾದಯಾತ್ರೆ ನಡೆಸುವಂತೆ ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಆಹ್ವಾನ ವಿತ್ತಿತು. ನಾವು ಕೂಡಾ ಪಾದಪೂಜೆ ಮಾಡಿ ಗೌರವದಿಂದ ಕಾಣುತ್ತೇವೆ ಎಂದಿತು. ಇದಕ್ಕೆಂದೇ ಸಾಮಾಜಿಕ ಸಾಮರಸ್ಯ ವೇದಿಕೆಯೊಂದು ರೂಪುತಾಳಿ ಅದರಡಿ ಯಲ್ಲೇ ಕಾರ್ಯಕ್ರಮ ಸಂಘಟಿಸಲಾಯಿತು. ಪ್ರಶ್ನೆ ಮಾಡಿ ನಂತರ ತಾವು ಆಡಿದ ಮಾತಿಗೆ ಬದ್ಧರಾಗಿ ನಡೆದುಕೊಳ್ಳುವುದು ಮಾದಾರಚೆನ್ನಯ್ಯ ಸ್ವಾಮೀಜಿ ಅವ ರಿಗೆ ಅನಿವಾರ್ಯವಾಯ್ತು.

ಕೊಪ್ಪಳ: ದಲಿತರ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದ ಪೇಜಾವರ ಶ್ರೀ

ಅದರಂತೆ ಒಂದೇ ದಿನ ಪೇಜಾ ವರ ಶ್ರೀ ಹಾಗೂ ಮಾದಾರಚೆನ್ನಯ್ಯ ಸ್ವಾಮೀಜಿ ಅವರ ಪಾದಯಾತ್ರೆಗೆ ಮೈಸೂರು ಸಜ್ಜಾಯಿತು. ೧೧-೮-೨೦೧೯ ರಂದು ದಲಿತರ ಕೇರಿಯಲ್ಲಿ ಪೇಜಾವರ ಶ್ರೀ, ಕೃಷ್ಣಮೂರ್ತಿ ಪುರಂ ನಲ್ಲಿ ಮಾದಾರಚೆನ್ನಯ್ಯ ಸ್ವಾಮೀಜಿ ಅವರ ಪಾದಯಾತ್ರೆ ನಡೆಯಿತು. ಪೇಜಾವರ ಶ್ರೀಗಳಿಗೆ ದಲಿತ ಮಹಿಳೆಯರು ಪಾದತೊ ಳೆದು ಪೂಜೆ ಮಾಡಿದರೆ, ಇತ್ತ ಬ್ರಾಹ್ಮಣ ಮುತ್ತೈದೆಯರು ಮಾದಾರಚೆನ್ನಯ್ಯ ಶ್ರೀಗಳ ಪಾದ ತೊಳೆದು ಗೌರವಿಸಿದರು. ಮೈಸೂರಿನ ಪಾಲಿಗೆ ಇದೊಂದು ಚಾರಿತ್ರಿಕ ಸನ್ನಿವೇಶ. ಈ ಸಂದರ್ಭದಲ್ಲಿ ಇಬ್ಬರು ಶ್ರೀಗಳು ಪ್ರತ್ಯೇಕ ಪಾದಯಾತ್ರೆ ತರುವಾಯ ಸಭಾಕಾರ್ಯಕ್ರಮದಲ್ಲಿ ಅಕ್ಕಪಕ್ಕ ಕುಳಿತು ತಮ್ಮ ಚಿಂತನೆಯನ್ನೂ ಹರಿಯಬಿಟ್ಟರು.

ಅಂದು ಮಾತನಾಡಿದ ಪೇಜಾವರ ಶ್ರೀಗಳು, ಇಂದಿಗೆ ಬ್ರಾಹ್ಮಣರಿಂದಲೇ ಜಾತಿ ನಾಶವಾಯಿತು. ನನಗೀಗ ೮೦ ವರ್ಷ. ಉಳಿದ ಆಯಸ್ಸನ್ನು ಜಾತಿ ನಾಶಕ್ಕೆ ಮೀಸಲಿಡುತ್ತೇನೆ. ದಲಿತರು ಕೂಡ ಮಾನವರೇ, ಅವರನ್ನು ಸಮಾನರಾಗಿ ಕಾಣುವಂತೆ ದೇಶಾದ್ಯಂತ ಹೋರಾಟ ನಡೆಸುತ್ತೇನೆ. ಜಾತಿ ಪದ್ಧತಿಯನ್ನು ಬುಡಸಹಿತ ಕಿತ್ತೊಗೆಯುತ್ತೇನೆ ಎಂದು ಘೋಷಿಸಿದರು. ಪ್ರಗತಿಪರರು, ಬುದ್ಧಿ ಜೀವಿಗಳಿಗೆ ಏನಾಗಿ ದೆಯೋ ಗೊತ್ತಿಲ್ಲ. ನಾನು ದಲಿತರ ಕೇರಿಗೆ ಹೋದರೂ ಆಕ್ಷೇಪಿಸುತ್ತಾರೆ, ಹೋಗದಿದ್ದರೂ ಆಕ್ಷೇಪಿಸುತ್ತಾರೆ. ನಾನು ಟೀಕೆ ಆಕ್ಷೇಪಣೆಗಳಿಗೆ ಬೆಲೆ ಕೊಡುವುದಿಲ್ಲ.

ದಲಿತರ ಮೇಲೆ ಹಲ್ಲೆಯಾದರೆ 1 ದಿನ ಉಪವಾಸ ನಡೆಸುತ್ತಿದ್ದ ಪೇಜಾವರ ಶ್ರೀಗಳು!

ಸಾಮರಸ್ಯ ಮೂಡಿಸುವ ಕಾರ್ಯಕ್ಕೆ ಬದ್ಧ. ನಾನು ಬ್ರಾಹ್ಮಣರೊಂದಿಗೂ ಸಹಪಂಕ್ತಿ ಭೋಜನ ಮಾಡುವುದಿಲ್ಲ, ಸನ್ಯಾಸಿಗೆ ತನ್ನದೇ ಆದ ಸಂಪ್ರದಾಯವಿದೆ. ಅದನ್ನು ಪಾಲಿಸಲೇಬೇಕಾಗುತ್ತದೆ ಎಂದು ಹೇಳಿದರು. ನಂತರ ಭಾವುಕರಾಗಿ ಮಾತನಾಡಿದ ಮಾದಾರಚೆನ್ನಯ್ಯ ಸ್ವಾಮೀಜಿ, ಸಾವಿರಾರು ವರ್ಷಗಳಿಂದ ಹರಿಜನರನ್ನು ಯಾರೂ ಮುಟ್ಟುತ್ತಿರಲಿಲ್ಲ. ಇಂತಹ ಕೆಟ್ಟ ಸಂಸ್ಕೃತಿಗೆ ಇಂದು ಅಂತ್ಯಬಿದ್ದಿದೆ. ಮಾದಿಗರ ಪ್ರತಿನಿಧಿಯಾದ ನನ್ನನ್ನು ತಮ್ಮ ವಠಾರಕ್ಕೆ ಕರೆದು ಬೆಳಗಿನ ಜಾವ ಬ್ರಾಹ್ಮಣ ಮುತ್ತೈದೆಯರು ಪಾದ ಪೂಜೆ ಮಾಡಿದ್ದಾರೆ. ಇಂದಿಗೆ ಅಸ್ಪಶ್ಯತೆ ನಾಶ ಶುರುವಾಗಿದೆ ಎಂದರು.

- ಚಿಕ್ಕಪ್ಪನಹಳ್ಳಿ ಷಣ್ಮುಖ