Asianet Suvarna News Asianet Suvarna News

ಪ್ರಜ್ಞೆ ಕಳೆದುಕೊಳ್ಳುವ 9 ತಾಸು ಮುನ್ನ, ಸ್ವರ್ಗ ಪ್ರಾಪ್ತಿ ಕುರಿತು ಕೊನೆ ಉಪನ್ಯಾಸ!

ಸ್ವರ್ಗ ಪ್ರಾಪ್ತಿ ಕುರಿತು ಪೇಜಾವರ ಕೊನೆ ಉಪನ್ಯಾಸ| ಪ್ರಜ್ಞೆ ಕಳೆದುಕೊಳ್ಳುವ 9 ತಾಸು ಮುನ್ನ ರಾಜಾಂಗಣದಲ್ಲಿ ಮಾತನಾಡಿದ್ದ ವಿಶ್ವೇಶ ತೀರ್ಥ| ‘ಭೂಮಿಯಲ್ಲಿ ನಮ್ಮನ್ನು ಸ್ಮರಿಸುವವರು ಇರುವ ತನಕ ಸ್ವರ್ಗದಲ್ಲಿ ಭದ್ರ ಸ್ಥಾನ ಇರುತ್ತದೆ...’

Last Preaching Of Udupi Krishna Mutt Seer Pejawar Vishwesha Teertha Was Heaven
Author
Bangalore, First Published Dec 30, 2019, 8:08 AM IST

ಉಡುಪಿ[ಡಿ.30]: ‘ಭೂಮಿಯಲ್ಲಿ ನಮ್ಮನ್ನು ಸ್ಮರಿಸುವವರು ಇರುವ ತನಕ ಸ್ವರ್ಗದಲ್ಲಿ ಭದ್ರ ಸ್ಥಾನ ಇರುತ್ತದೆ...’

ಪೇಜಾವರ ಶ್ರೀಗಳು ಅಸ್ವಸ್ಥರಾಗಿ ಪ್ರಜ್ಞಾಹೀನ ಸ್ಥಿತಿ ತಲುಪುವುದಕ್ಕೆ ಸುಮಾರು 9 ಗಂಟೆಗಳ ಮೊದಲು ಉಡುಪಿ ರಾಜಾಂಗಣದಲ್ಲಿ ನಿರರ್ಗಳವಾಗಿ ಮಾಡಿದ್ದ ಕೊನೆಯ ಉಪನ್ಯಾಸದ ಸಾಲುಗಳಿವು.

ರಾಜಾಂಗಣದಲ್ಲಿ ಮಹಾಭಾರತದ ಬಗ್ಗೆ 3 ದಿನಗಳ ಪ್ರವಚನ ಸರಣಿಯ ಮೊದಲ ಉಪನ್ಯಾಸ ನೀಡಿದ ಅವರು, ಪುಣ್ಯಸಂಪಾದನೆ ಕುರಿತು ಇಂದ್ರದ್ಯುಮ್ನ ಮಹಾರಾಜನ ದೃಷ್ಟಾಂತ ಕಥೆಯನ್ನು ಉದಾಹರಣೆಯಾಗಿ ನೀಡಿದ್ದರು.

ಇಂದ್ರದ್ಯುಮ್ನ ರಾಜ ಮರಣಾನಂತರ ಸ್ವರ್ಗದಲ್ಲಿ ಎಲ್ಲ ಸುಖ ಅನುಭವಿಸುತ್ತಾ ಇದ್ದ. ಈ ನಡುವೆ ಆತನ ಪುಣ್ಯ ಸಂಪಾದನೆ ಖರ್ಚಾಗಿದೆ, ಇನ್ನು ಆತನಿಗೆ ಸ್ವರ್ಗವಾಸ ಯೋಗ್ಯತೆಯಿಲ್ಲ ಎಂದು ನಿರ್ಧರಿಸಿದ ದೇವತೆಗಳು ಪುನಃ ಭೂಮಿಗೆ ಇಳಿಯಬೇಕು ಎಂದು ಹೇಳಿ ಮತ್ತೆ ಭೂಮಿಗೆ ಕಳುಹಿಸಿದರು. ಭೂಮಿಗಿಳಿದ ಮಹಾರಾಜ ಅಲ್ಲಿ ತನ್ನ ಪರಿಚಯ ಯಾರಿಗಾದರೂ ಇದೆಯೇ ಎಂದು ಹುಡುಕಾಡಿದ. ಅಲ್ಲಿ ಸಿಕ್ಕಿದ ಗೂಬೆಯೊಂದನ್ನು ಕೇಳಿದಾಗ ಅದು ತನಗೆ ಆತನ ಪರಿಚಯ ಇಲ್ಲ, ತನಗಿಂತ ಹಳಬನಾದ ಬಕ ಪಕ್ಷಿಯಲ್ಲಿ ಕೇಳುವಂತೆ ಹೇಳಿತು. ಬಕಪಕ್ಷಿಯ ಬಳಿಗೆ ಹೋದ. ಅದು ತನಗೂ ಆತನ ಪರಿಚಯ ಇಲ್ಲ, ಸಮೀಪದ ಸರೋವರದಲ್ಲಿರುವ ಪುರಾತನ ಆಮೆಗೆ ಇರಬಹುದು ಎಂದಿತು. ಅಲ್ಲಿ ಆತ ಆಮೆಯನ್ನು ಹುಡುಕಿ ವಿಚಾರಿಸಿದಾಗ ಸರೋವರದಿಂದ ಹೊರ ಬಂದ ಆಮೆ ಕಣ್ಣೀರು ಸುರಿಸುತ್ತಾ ಹೇಳಿತು.

‘ಈ ಸರೋವರ ಕಟ್ಟಿದ್ದೇ ನೀನು. ನಿನ್ನಿಂದಾಗಿ ಈ ಪರಿಸರದ ಮಂದಿ ಬದುಕುತ್ತಿದ್ದಾರೆ. ನಿನ್ನಿಂದಾಗಿ ಬದುಕುತ್ತಿದ್ದೇವೆ, ನಿನ್ನನ್ನು ಹೇಗೆ ತಾನೆ ಮರೆಯಲು ಸಾಧ್ಯ’ ಎಂದು. ತಕ್ಷಣ ಈತನ ಪುಣ್ಯ ಸಂಪಾದನೆ ಮುಗಿದಿಲ್ಲ ಎಂದು ತೀರ್ಮಾನಿಸಿದ ದೇವತೆಗಳು ಮತ್ತೆ ವಿಮಾನದಲ್ಲಿ ಆತನನ್ನು ಸ್ವರ್ಗಕ್ಕೆ ಕರೆದೊಯ್ದರು.

ನಾವೆಲ್ಲ ಧರ್ಮಾಚರಣೆ ಮಾಡಿ ಮುಂದಿನ ಪೀಳಿಗೆಗೆ ಅದರ ಸ್ಫುರಣೆ ಇರುವಂಥ ಕಾರ್ಯ ಮಾಡಿದರೆ ನಮಗೆಲ್ಲ ಸ್ವರ್ಗದಲ್ಲಿ ಭದ್ರ ಸ್ಥಾನ ಎಂಬಂಥ ಭರವಸೆಯನ್ನು ಇಂದ್ರದ್ಯುಮ್ನ ಮಹಾರಾಜನ ಕಥೆ ನೀಡುತ್ತಿವೆ. ನಾವೆಲ್ಲ ನಮ್ಮ ಜೀವನದಲ್ಲಿ ಹೇಗೆ ನಡೆಯಬೇಕು ಎಂಬುದಕ್ಕೆ ಇದು ಉದಾಹರಣೆ ಎಂದು ಶ್ರೀಗಳು ಹೇಳಿದ್ದು, ಅವರ ಕೊನೆಯ ಸಾರ್ವಜನಿಕ ಮಾತಾಗಿ ದಾಖಲಾಗಿದೆ. ಅವರು ಸುಮಾರು 1 ಗಂಟೆ ಕಾಲ ಈ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಸ್ವಸ್ಥರಾಗುವ ಹಿಂದಿನ ದಿನ ಹುಟ್ಟೂರಿಗೆ

ಪೇಜಾವರ ಶ್ರೀಗಳ ಹುಟ್ಟೂರು ರಾಮಕುಂಜ. ಡಿ.20ರಂದು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಶ್ರೀಗಳು, ಡಿ.19ರಂದು ತೀವ್ರ ಜ್ವರ ಇದ್ದರೂ ರಾಮಕುಂಜಕ್ಕೆ ಬಂದಿದ್ದರು. ತಾವು ಕಲಿತ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿ ಆಶೀರ್ವಚನ ನೀಡಿದ್ದರು. ಮಧ್ಯಾಹ್ನ ಪಾಜಕ ಶಾಲೆಯಲ್ಲಿ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಂಜೆ ಕೃಷ್ಣಮಠದಲ್ಲಿ ಉಪನ್ಯಾಸ ನೀಡಿ, ಬಳಿಕ ಅರ್ಧತಾಸು ಯಕ್ಷಗಾನ ವೀಕ್ಷಿಸಿದ್ದರು. ಇದಕ್ಕೂ ಮುನ್ನ ಡಿ.17ರಂದು ತಿರುಪತಿಗೆ ತೆರಳಿ ದೇವರ ದರ್ಶನ ಪಡೆದಿದ್ದರು. ಇದು ಶ್ರೀಗಳ ಹೊರರಾಜ್ಯ ಪ್ರವಾಸವಾಗಿತ್ತು.

Follow Us:
Download App:
  • android
  • ios