ಕೃಷಿ ಮಾಡಿದ್ರೆ ಇಲ್ಲ ಲಾಸ್; ಕೋಟಿ ದುಡಿದ ರೈತರು ಖುಷ್!
ಕೃಷಿಯಲ್ಲಿ ಭವಿಷ್ಯ ಇಲ್ಲ ಅಂತ ಕೃಷಿಕರು ಸಿಟಿಗೆ ಗುಳೇ ಹೋದದ್ದು ಹಳೇ ಕತೆ. ಆದರೆ ಈಗ ಅಂಥಾ ಕೃಷಿಕರನ್ನೂ ವಾಪಾಸ್ ಜಮೀನಿಗೆ ಕರೆತರುವಂಥಾ ಪ್ರಯತ್ನ ಆಗುತ್ತಿದೆ. ರಾಜ್ಯಾದ್ಯಂತ 350 ಕ್ಕೂ ಹೆಚ್ಚು ಕಂಪೆನಿ ರೈತರಿಂದ ನೇರವಾಗಿ ಬೆಳೆ ಖರೀದಿಸುತ್ತವೆ. ಈ ಮೂಲಕ ಕೃಷಿಕನೂ ಕಾಸು ನೋಡೋ ಹಾಗಾಗಿದೆ.
ಶಿವಾನಂದ ಗೊಂಬಿ
ಕೃಷಿಯನ್ನು ಉದ್ಯಮವಾಗಿ ಬೆಳೆಸಿದರೆ ಮಾತ್ರ ರೈತರ ಆದಾಯ ದುಪ್ಪಟ್ಟಾಗುತ್ತೆ ಎಂಬ ಮಾತು ಹಲವು ದಶಕಗಳಿಂದ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರದ ಎಫ್‌ಪಿಒ (ರೈತ ಉತ್ಪಾದಕರ ಸಂಸ್ಥೆ ಅಥವಾ ಕಂಪನಿ) ಎಂಬ ಕಲ್ಪನೆ ಅದನ್ನು ಪೂರೈಸುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಚಾಲ್ತಿಯಲ್ಲಿ ಈ ಯೋಜನೆಯಡಿಯಲ್ಲೀಗ ಕೃಷಿ ಅಕ್ಷರಶಃ ಉದ್ಯಮವಾಗಿ ಬೆಳೆಯುತ್ತಿದೆ. ಕೇಂದ್ರ ಸರ್ಕಾರ 2014-15ರಲ್ಲಿ ಎಫ್‌ಪಿಒ ಎಂಬ ಯೋಜನೆಯನ್ನು ಜಾರಿಗೊಳಿಸಿತ್ತು. ಎಫ್‌ಪಿಒ ಎಂದರೆ ಫಾರ್ಮರ್ಸ್ ಪ್ರೋಡೆಜರ್ ಆರ್ಗನೈಸೇಷನ್.
ಬರದ ನೆಲದಲ್ಲಿ ಸಿರಿಧಾನ್ಯ ಬೆಳೆದು ಕೈತುಂಬ ಆದಾಯ ಪಡೆದ ಚಿತ್ರದುರ್ಗದ ರೈತ!
ಕೃಷಿಯನ್ನು ಉದ್ಯಮವನ್ನಾಗಿ ಬೆಳೆಸುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ನಾಲ್ಕೈದು ವರ್ಷಗಳ ಹಿಂದೆ ಪ್ರಾರಂಭವಾಗಿರುವ ಈ ಯೋಜನೆ ಇದೀಗ ರೈತರನ್ನು ಸೆಳೆಯುತ್ತಿದೆ. ಇದರಿಂದ ರೈತರಿಗೂ ಲಾಭವಾಗುತ್ತಿದೆ. ಕಂಪನಿಯೂ ಬೆಳೆಯುತ್ತಿದೆ. - ವಿಜಯಕುಮಾರ ರಾರಯಗಿ, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಹುಬ್ಬಳ್ಳಿ
ನಿಮ್ಮೂರಲ್ಲೂ ಮಾಡಬಹುದು
ಕೃಷಿ ಇಲಾಖೆ, ತೋಟಗಾರಿಕೆ ವಿವಿಧ ಇಲಾಖೆಗಳ ಮೇಲುಸ್ತುವಾರಿಯಲ್ಲಿ ಈ ಯೋಜನೆ ಜಾರಿಗೊಳಿಸಲಾಗಿತ್ತು. 1000 ಜನ ಸಮಾನ ಮನಸ್ಕ ರೈತರನ್ನೊಳಗೊಂಡ ಸಂಸ್ಥೆಯಿದು. ಅಂದರೆ ಆಯಾ ಗ್ರಾಮದಲ್ಲಿ 10 ಅಥವಾ 20 ಜನರ ರೈತ ಉತ್ಪಾದಕರ ಸಮಾನ ಮನಸ್ಕ ರೈತರ ಗುಂಪನ್ನು ಮಾಡುವುದು. ಹೀಗೆ 100 ಹಾಗೂ 50 ಗುಂಪು ರಚಿಸುವುದು. ಪ್ರತಿಯೊಬ್ಬ ಸದಸ್ಯರಿಂದಲೂ 1100 ರೂ.ಯಂತೆ ಶೇರ್ ಸಂಗ್ರಹಿಸುವುದು. ಬಳಿಕ ಈ ಎಲ್ಲ ಗುಂಪುಗಳ ಕೆಲ ಪ್ರತಿನಿಧಿಗಳಿಂದ ಅದರಲ್ಲಿ ನಿರ್ದೇಶಕ ಮಂಡಳಿಯನ್ನು ರಚಿಸುವುದು. ನಿರ್ದೇಶಕ ಮಂಡಳಿಯಲ್ಲಿ 14 ಜನ ಸದಸ್ಯರಿರುತ್ತಾರೆ. ಅವರಲ್ಲಿ ತೋಟಗಾರಿಕೆ ಅಥವಾ ಕೃಷಿ ಇಲಾಖೆಯ ಅಧಿಕಾರಿ, ಕೃಷಿ ವಿವಿಯ ಇಬ್ಬರು ತಜ್ಞರು, ಹೀಗೆ ನಾಲ್ಕು ಜನ ಗೌರವ ಸದಸ್ಯರಿದ್ದರೆ, ಉಳಿದವರು ರೈತರ ಗುಂಪುಗಳ ಪ್ರತಿನಿಧಿಗಳಿರುತ್ತಾರೆ. ಇದನ್ನೇ ಒಂದು ಸಂಸ್ಥೆಯನ್ನಾಗಿ ರಜಿಸ್ಟಾರ್ ಮಾಡುವುದು. ಆ ಸಂಸ್ಥೆಯ ವಹಿವಾಟು ನೋಡಿಕೊಳ್ಳುವುದಕ್ಕಾಗಿ ಒಬ್ಬರನ್ನು ಕೆಲಸಕ್ಕೆಂದು ಸಿಇಒ ಒಬ್ಬರನ್ನು ನೇಮಕ ಮಾಡಿಕೊಳ್ಳುವುದು. ಅವರು ಸಂಸ್ಥೆಯ ವಹಿವಾಟು ನೋಡಿಕೊಳ್ಳುತ್ತಾರೆ.
ಹುಣಸೆ, ಲಿಂಬು ಬೆಳೆದ ರಾಮದುರ್ಗ ರೈತನ ಕೈ ಸೇರಿತು ಕೋಟಿ ಸಂಪಾದನೆ.!
ಏನೇನು ಮಾಡುತ್ತೆ ಸಂಸ್ಥೆ?
ಈ ಸಂಸ್ಥೆಯೇ ಯಾವ ಪ್ರದೇಶದಲ್ಲಿ ಯಾವ ವಾಣಿಜ್ಯ ಬೆಳೆ ಬೆಳೆದರೆ ಉತ್ತಮ ಎಂಬುದನ್ನು ನಿರ್ಧರಿಸುವುದು. ರೈತರಿಗೆ ಆ ಬೆಳೆಯನ್ನೇ ಬೆಳೆಯುವಂತೆ ಪ್ರೋತ್ಸಾಹಿಸುವುದು. ರೈತರಿಗೆ ಬೇರೆ ಎನ್‌ಜಿಒ, ತಜ್ಞರನ್ನು ಕರೆಯಿಸಿ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು. ತಮ್ಮ ಸಂಸ್ಥೆಯಡಿಯಲ್ಲಿ ಬರುವ ರೈತರಿಗೆ ಬೇಕಾಗುವ ಗೊಬ್ಬರ, ಬೀಜ, ಕೃಷಿ ಪರಿಕರಗಳನ್ನು ನೇರವಾಗಿ ಕಂಪನಿಗಳಿಂದ ತರಿಸುವುದು. ಇದರಿಂದ ಹಣ ಹಾಗೂ ಸಮಯವೂ ಉಳಿಯುತ್ತೆ. ಜತೆಗೆ ಮಧ್ಯವರ್ತಿಗಳ ಹಾವಳಿಯೂ ಇರಲ್ಲ. ಗುಣಮಟ್ಟದ ಬೆಳೆಯುವುದಕ್ಕೆ ಅಗತ್ಯ ಸಹಕಾರ ನೀಡುವುದು. ಇಳುವರಿ ಬರುವ ಮೊದಲೇ ಉತ್ಪನ್ನಗಳನ್ನು ಖರೀದಿಸುವ ಕಂಪನಿಗಳನ್ನು ನೇರವಾಗಿ ಸಂಪರ್ಕಿಸಿ ರೈತರ ಉತ್ಪನ್ನಗಳನ್ನು ಖರೀದಿಸುವಂತೆ ಮಾಡುವುದು. ಈ ಮೂಲಕ ಮಾರುಕಟ್ಟೆವ್ಯವಸ್ಥೆ ಕಲ್ಪಿಸುವುದು. ಇದರೊಂದಿಗೆ ತಾನೇ ಮಾರಾಟ ಮಳಿಗೆಯನ್ನೂ ತೆರೆಯಬಹುದಾಗಿದೆ.
ನಮ್ಮ ಸಂಸ್ಥೆಯಿಂದಲೇ ಬೀಜ, ಗೊಬ್ಬರ ಸೇರಿದಂತೆ ರೈತರಿಗೆ ಬೇಕಾಗುವಂಥ ವಸ್ತುಗಳನ್ನು ನೇರವಾಗಿ ಕಂಪನಿಗಳಿಂದಲೇ ತರಿಸುವುದರಿಂದ ಹಣ ಹಾಗೂ ಸಮಯ ಉಳಿತಾಯವಾಗುತ್ತದೆ. ಗುಣಮಟ್ಟದ ವಸ್ತುಗಳನ್ನೇ ತರಿಸಬಹುದು. ಮಾರುಕಟ್ಟೆವ್ಯವಸ್ಥೆಯನ್ನೂ ಕಲ್ಪಿಸುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ರೈತರಿಗೆ ಹೆಚ್ಚಿನ ಲಾಭವಾಗುತ್ತದೆ.- ಅಶೋಕ ದೊಡ್ಡವಾಡ, ಸಿಇಒ, ಉಳುವಾ ಯೋಗಿ ರೈತ ಉತ್ಪಾದಿತ ಸಂಸ್ಥೆ
ಸರ್ಕಾರದ ನೆರವೂ ಇದೆ
ಹೀಗೆ ಮೂರು ವರ್ಷಗಳ ಕೃಷಿ ಅಥವಾ ತೋಟಗಾರಿಕೆಯನ್ನು ಉದ್ಯಮವನ್ನಾಗಿ ಮಾಡುವ ಕೆಲಸ ಈ ಸಂಸ್ಥೆಯ ಜವಾಬ್ದಾರಿ. ಕಂಪನಿಸ್ ಆ್ಯಕ್ಟ್ನಲ್ಲೇ ಸಂಸ್ಥೆ ಅಥವಾ ಕಂಪನಿಯನ್ನು ರಜಿಸ್ಟಾರ್ ಮಾಡಬೇಕು. ಇದಕ್ಕೆ ಪ್ರಾರಂಭದ ಮೂರು ವರ್ಷಗಳ ಕಂಪನಿಯ ಕಚೇರಿ ನಡೆಸಲು, ಸಿಇಒ ಸಂಬಳ ನೀಡಲು ಸರ್ಕಾರ ನೆರವು ನೀಡುತ್ತದೆ. ಮೂರು ವರ್ಷಗಳ ಬಳಿಕ ಅಂದರೆ ರೈತ ಉತ್ಪಾದಿತ ಕಂಪನಿಯಾಗಿ ವಹಿವಾಟು ಹೆಚ್ಚಿಸಿಕೊಂಡ ಮೇಲೆ ಸರ್ಕಾರ ತನ್ನ ನೆರವು ನೀಡುವುದನ್ನು ನಿಲ್ಲಿಸುತ್ತದೆ. ಆ ಬಳಿಕ ಅಲ್ಲಿನ ನಿರ್ದೇಶಕ ಮಂಡಳಿಯೇ ಕಂಪನಿಯನ್ನು ಮುಂದುವರಿಸಿಕೊಂಡು ಹೋಗುತ್ತದೆ. ಅವರಿಗೆ ಅಗತ್ಯ ಸಲಹೆ, ಮಾರ್ಗದರ್ಶನವನ್ನು ಕೃಷಿ ಹಾಗೂ ತೋಟಗಾರಿಕೆ ಮಾಡುತ್ತದೆ.
ಪುತ್ತೂರಿನಲ್ಲಿ ಶ್ರೀಗಂಧಕ್ಕಿಂತಲೂ ಲಾಭದಾಯಕ ಈ ಅಗರ್‌ವುಡ್!
ರಾಜ್ಯದಲ್ಲಿ ಇಂತಹ ಎಫ್‌ಪಿಒ ಅಥವಾ ಎಫ್‌ಪಿಸಿ (ರೈತ ಉತ್ಪಾದಿತ ಸಂಸ್ಥೆ ಅಥವಾ ಕಂಪನಿಗಳು) ಬರೋಬ್ಬರಿ 350ಕ್ಕೂ ಹೆಚ್ಚಾಗಿವೆ. ಇವೆಲ್ಲವೂ ಇದೀಗ ಬೆಳೆದು ಹೆಮ್ಮರವಾಗುತ್ತಿವೆ. ಈ ಪೈಕಿ ಧಾರವಾಡ ಜಿಲ್ಲೆಯಲ್ಲಿ ಸದ್ಯ ನಾಲ್ಕು ಕಂಪನಿಗಳಿವೆ. ಉಳುವಾಯೋಗಿ ರೈತ ಉತ್ಪಾದಿತ ಕಂಪನಿ, ಅಮರಶಿವ ರೈತ ಉತ್ಪಾದಿತ ಕಂಪನಿ, ಕಾಯಕಯೋಗಿ ರೈತ ಉತ್ಪಾದಿತ ಕಂಪನಿ ಸೇರಿದಂತೆ ನಾಲ್ಕು ಕಂಪನಿಗಳಿವೆ.
ಮೆಣಸಿನಕಾಯಿ ಮಾರಾಟ
ಉಳುವಾಯೋಗಿ ಕಂಪನಿ ರಚನೆಯಾಗಿ ಆಗಲೇ ಮೂರು ವರ್ಷಗಳಾಗಿವೆ. ಈ ಕಂಪನಿಯೂ ತನ್ನ ವಹಿವಾಟನ್ನು ಹೆಚ್ಚಿಸಿಕೊಂಡಿದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಕಚೇರಿಯನ್ನು ಹೊಂದಿರುವ ಈ ಕಂಪನಿಯೂ ಮೆಣಸಿನಕಾಯಿ ಬೆಳೆ ಮಾರಾಟಕ್ಕೆ ಎಂಟಿಆರ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಳೆದ ವರ್ಷ ತನ್ನ ಸದಸ್ಯರು ಬೆಳೆದಿದ್ದ 40 ಟನ್ ಮೆಣಸಿನಕಾಯಿಯನ್ನು ಎಂಟಿಆರ್‌ಗೆ ಮಾರಾಟ ಮಾಡಿತ್ತು. ಆಗ ಮಾರುಕಟ್ಟೆಯಲ್ಲಿ 8 ಸಾವಿರ ರೂ.ಕ್ವಿಂಟಲ್ ಇತ್ತು. ಆದರೆ ಈ ಸಂಸ್ಥೆಯಲ್ಲಿನ ರೈತರು ಗುಣಮಟ್ಟದ ಬೆಳೆ ಬೆಳೆದಿದ್ದಕ್ಕೆ 13 ಸಾವಿರ ರೂ.ಗೆ ಕ್ವಿಂಟಲ್‌ನಂತೆ ಎಂಟಿಆರ್ ಖರೀದಿಸಿತ್ತು. ಇದರಲ್ಲಿ ಮಧ್ಯವರ್ತಿಗಳೇ ಇಲ್ಲದ ಕಾರಣ ಇಷ್ಟೊಂದು ಬೆಲೆ ನಮ್ಮ ಸಂಸ್ಥೆ ನೀಡಿದ್ದ ಬೆಳೆಗೆ ಬಂದಿತ್ತು ಎಂದು ಸಿಇಒ ಅಶೋಕ ದೊಡ್ಡವಾಡ ಹೇಳುತ್ತಾರೆ. ಈ ವರ್ಷ 200 ಟನ್ ಮೆಣಸಿನ ಕಾಯಿಯನ್ನು ಎಂಟಿಆರ್ ಕೇಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಸುಮಾರು 150 ಟನ್ ಮೆಣಸಿನಕಾಯಿಯನ್ನು ಪೂರೈಸಲಾಗುವುದು ಎಂದು ಅವರು ವಿವರಿಸುತ್ತಾರೆ.
ಇದೇ ಸಂಸ್ಥೆಯಿಂದ ಮಾವಿನ ಬೆಳೆಗಾರರು ಬೆಳೆದಿರುವ ಮಾವಿನ ಹಣ್ಣನ್ನು ನೇರವಾಗಿ ದೆಹಲಿಗೆ ಕಳುಹಿಸಲಾಗಿತ್ತು. ಹೀಗೆ ರೈತರಿಗೆ ನೇರವಾಗಿ ಮಾರುಕಟ್ಟೆವ್ಯವಸ್ಥೆ ಕಲ್ಪಿಸುವ ಮೂಲಕ ಅವರ ಆದಾಯವನ್ನು ದುಪ್ಪಟ್ಟು ಮಾಡಲಾಗುತ್ತಿದೆ.
ಹೀಗೆ ಬೆಳೆಗಾರರನ್ನೆಲ್ಲ ಸೇರಿಸಿಕೊಂಡು ಸರಿಯಾದ ಬೆಲೆ, ಮಾರುಕಟ್ಟೆವ್ಯವಸ್ಥೆ ಕಲ್ಪಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ. ಸಣ್ಣದಾಗಿ ಪ್ರಾರಂಭವಾಗಿರುವ ಈ ಸಂಸ್ಥೆಗಳಿಗೀಗ ಬೆಳೆದು ಹೆಮ್ಮರಗಳಾಗಿದ್ದು, ಕೃಷಿ ಹಾಗೂ ತೋಟಗಾರಿಕೆ ಉದ್ಯಮವಾಗಿ ಬೆಳೆಯುತ್ತಿದೆ ಎಂದರೆ ತಪ್ಪಾಗಲಾರದು.