ಸುರೇಶ ಗುದಗನವರ

ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದಾಡಿಭಾವಿ ಗ್ರಾಮದ ಸದಾಶಿವ ಅವರದು ಕೃಷಿ ಕುಟುಂಬ. ತಂದೆ ಸಂಗಪ್ಪ. ತಾಯಿ ಅನ್ನಪೂರ್ಣಾ ಕೃಷಿಯನ್ನೇ ನೆಚ್ಚಿಕೊಂಡವರು. ಸದಾಶಿವ ಅವರು ಪಿ.ಯು.ಸಿ.ವರೆಗೆ ಓದಿದ್ದು, ಕೃಷಿಯಲ್ಲಿಯ ಆಸಕ್ತಿಯಿಂದ ಶಿಕ್ಷಣಕ್ಕೆ ವಿದಾಯ ಹೇಳಿದರು. ತಂದೆಯವರ ಮಾರ್ಗದರ್ಶನದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ಪ್ರಗತಿಪರ ರೈತನಾಗಿರುವ ಸದಾಶಿವ ಅವರ ಕೃಷಿ ಸಾಧನೆಗೆ ಪ್ರೇರಣೆಯಾದವರು ಬೆಳಗಾವಿ ಜಿಲ್ಲೆಯ ಸುತಗಟ್ಟಿಯ ಕೃಷಿ ಪಂಡಿತ ಅಭಯ ಮುತಾಲಿಕ ದೇಸಾಯಿ ಅವರು. ಸಾವಯವ ಕೃಷಿ ತಜ್ಞರಾದ ಸುಭಾಷ್‌ ಪಾಳೇಕಾರ ಪ್ರಭಾವವು ಇವರ ಮೇಲೆ ಪರಿಣಾಮ ಬೀರಿದೆ. ಕಳೆದ ಹತ್ತು ವರ್ಷಗಳಿಂದ ತಮ್ಮ 15 ಎಕರೆ ಭೂಮಿಯನ್ನು ಸಂಪೂರ್ಣವಾಗಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಗೆ ಅಳವಡಿಸಿದ್ದಾರೆ.

ಹೊರರಾಜ್ಯದ ಆಡು ಸಾಕಿದರೆ ಲಕ್ಷಾಂತರ ರು. ಆದಾಯ ಪಡೆಯಬಹುದು!

ತಮ್ಮ 15 ಎಕರೆ ಜಮೀನಿನಲ್ಲಿ 5 ಎಕರೆ ಚಿಕ್ಕು, 5 ಎಕರೆ ಹುಣಸೆ ಹಾಗೂ 5 ಎಕರೆಯಲ್ಲಿ ಲಿಂಬು, ಪೇರಲ, ಶ್ರೀಗಂಧ ಮತ್ತು ನುಗ್ಗೆಯನ್ನು ಬೆಳೆದಿದ್ದಾರೆ. ಇವರ ತೋಟದಲ್ಲಿ 180 ಚಿಕ್ಕು, 180 ಹುಣಸೆ ಮತ್ತು 650 ಲಿಂಬು ಗಿಡಗಳು ಸೊಂಪಾಗಿ ಬೆಳೆದಿವೆ.

ಜಮೀನಿನ ನಡುವೆ ಅರಣ್ಯ

ಶ್ರೀಗಂಧ ಅರಣ್ಯ ಬೆಳೆ. ಇದು ಪರಾವಲಂಬಿ ಬೆಳೆಯಾಗಿರುವುದರಿಂದ ಅದರ ಸುತ್ತಮುತ್ತಲೂ ಅರಣ್ಯ ವಾತಾವರಣವನ್ನೇ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಶ್ರಿಗಂಧ ನಳಿನಳಿಸುತ್ತಾ ಬೆಳೆಯುತ್ತಿದೆ. ಇವಕ್ಕೆ ಸಾಥ್‌ ನೀಡಲು ಹಣ್ಣು ಹಾಗೂ ಇತರೆ ಗಿಡಗಳಿವೆ. ಇವರು ಪ್ರತಿ ವರ್ಷ ಒಂದಿಲ್ಲೊಂದು ಹೊಸ ಪ್ರಯೋಗಗಳನ್ನು ನಡೆಸುತ್ತಲೇ ಇದ್ದಾರೆ. ಅದರ ಫಲವಾಗಿ ಅವರ ಜಮೀನು ದಟ್ಟಅರಣ್ಯದಂತೆ ಕಾಣುತ್ತದೆ.

ಪ್ರಯೋಗದಿಂದಲೇ ಜ್ಞಾನ

ನಿಸರ್ಗದ ಬಗ್ಗೆ ಕೃಷಿ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಇವರು ಕೃಷಿ ವಿಜ್ಞಾನ ಕಲಿತವರಲ್ಲ. ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಸಾಕಷ್ಟುತಿಳಿದುಕೊಂಡವರು. ಇದರ ಫಲವಾಗಿಯೇ ಇಂದು ಇವರ ಜಮೀನನಲ್ಲಿ ತೆಂಗು, ಸೀತಾಫಲ, ಪಪ್ಪಾಯಿ, ಮಾವು ಸೇರಿದಂತೆ ಹಲವು ಬಗೆಯ ಸಸ್ಯ ಪ್ರಭೇದಗಳಿವೆ. ನೂರಾರು ಸೂಕ್ಷ್ಮ ಜೀವಿಗಳ ಇರುವಿಕೆಗೂ ಭಂಗ ಬಾರದ್ದರಿಂದ ಸುತ್ತಮುತ್ತಲಿನ ರೈತರ ಜಮೀನಿಗಿಂತ ಇವರ ತೋಟ ಹೆಚ್ಚು ಫಲವತ್ತಾಗಿದೆ.

ಬೆಳೆಗೆ ನೀರು, ಪೋಷಕಾಂಶ ಒದಗಿಸುವ ಬಯೋಚಾರ್‌ ತಯಾರಿಸೋದು ಹೇಗೆ?

ಅಗ್ನಿಹೋತ್ರ ಎಂಬ ಹೊಸ ಪ್ರಯೋಗ

ಅಗ್ನಿಹೋತ್ರವನ್ನು ಇಂದು ವೈಜ್ಞಾನಿಕವಾಗಿ ಅಭ್ಯಸಿಸುವರ ಸಂಖ್ಯೆ ಹೆಚ್ಚುತ್ತಿದೆ. ಸದಾಶಿವ ಅವರು ಪ್ರತಿನಿತ್ಯ ಸೂರ್ಯ ಉದಯವಾಗುವ ವೇಳೆಯಲ್ಲಿ ಹಸುವಿನ ಸಗಣಿಯಿಂದ ಮಾಡಿದ ಎರಡು (ಕುಳ್ಳು) ಬೆರಣಿ, ಒಂದು ಚಮಚ ಆಕಳ ತುಪ್ಪ ಹಾಗೂ ಒಂದು ಮುಷ್ಠಿ ಪಾಲಿಶ್‌ ಮಾಡದ ಅಕ್ಕಿ ಸೇರಿಸಿ ಪಿರಾಮಿಡ್‌ ಆಕಾರದ ಪಾತ್ರೆಯಲ್ಲಿ ಅಗ್ನಿ ಹಚ್ಚಿ ‘ಸೂರ್ಯಾಯ ಸ್ವಾಹಾಃ ಸೂರ್ಯಾಯ ಇದಂ ನಮಮ’ ಎಂದು ಸೂರ್ಯ ಮಂತ್ರ ಹೇಳಿ ಅರ್ಪಿಸುತ್ತಾರೆ. ಹಲವು ವರ್ಷಗಳಿಂದ ಅಗ್ನಿಹೋತ್ರ ಮಾಡಿ , ಭಸ್ಮವನ್ನು ಜಮೀನಿನಲ್ಲಿ ಹರಡುತ್ತಿದ್ದಾರೆ. ಕ್ರಿಮಿಕೀಟಗಳ ಕಾಟ ಗಣನೀಯವಾಗಿ ಇಳಿದಿದೆ. ಅಲ್ಲದೇ ಜೀವಾಮೃತ ಅಗ್ನಿ ಅಸ್ತ್ರವನ್ನು ತಯಾರಿಸಿ ಭೂಮಿಗೆ ಸಿಂಪಡಿಸುತ್ತಾರೆ. ಹೀಗೆ ಮಾಡುವುದರಿಂದ ಮಣ್ಣಿನಲ್ಲಿ ಪೋಷಕಾಂಶ ಹೆಚ್ಚಿ ಭೂಮಿ ಫಲವತ್ತಾಗುತ್ತದೆ. ಎರಡು ಬೋರ್‌ವೆಲ್‌ಗಳಿದ್ದು ಹನಿ ನೀರಾವರಿ ಮೂಲಕ ಎಲ್ಲಾ ಗಿಡಗಳಿಗೂ ನೀರು ಪೂರೈಕೆಯಾಗುತ್ತಿದೆ.

ಇದರ ಜೊತೆಗೆ ಸದ್ಯ 3 ಆಕಳು ಹಾಗೂ 2 ಎಮ್ಮೆಗಳಿವೆ. 30 ಟಗರು ಮರಿಗಳು ಮತ್ತು 12 ಆಡುಗಳಿವೆ. ಮುಂದಿನ ದಿನಗಳಲ್ಲಿ ಆಡುಗಳ ಸಾಕಾಣಿಕೆಯನ್ನು ವಿಸ್ತರಿಸುವ ಯೋಜನೆಯಿದೆ.

ನೈಸರ್ಗಿಕ ಕೃಷಿಯಿಂದ ಮಣ್ಣು ಫಲವತ್ತಾಗುತ್ತದೆ. ಇದರಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಹೀಗೆ ಮಾಡುವುದರಿಂದ ನಾವು ತಿನ್ನೋ ಪದಾರ್ಥಗಳಲ್ಲಿ ವಿಷ ಇರುವುದಿಲ್ಲ. ವಿಷ ಮುಕ್ತ ಆಹಾರ ಸೇವನೆಯಿಂದ ಆನಂದದ ಬದುಕು ಸಾಗಿಸಬಹುದು.- ಸದಾಶಿವ ಮಾತನವರ, ಪ್ರಗತಿಪರ ಕೃಷಿಕ

12 ಲಕ್ಷ ನಿವ್ವಳ ಆದಾಯ

ವಾರ್ಷಿಕವಾಗಿ ಚಿಕ್ಕುವಿನಿಂದ 2 ಲಕ್ಷ, ಹುಣಸೆಯಿಂದ 1ಲಕ್ಷ, ನಿಂಬೆಯಿಂದ 2 ಲಕ್ಷ, ವಿವಿಧ ತರಕಾರಿಗಳಿಂದ 2 ಲಕ್ಷ, ಹೀಗೆ ಎಲ್ಲಾ ಕೃಷಿಯಿಂದ ಒಟ್ಟು 10 ರಿಂದ 12 ಲಕ್ಷ ನಿವ್ವಳ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ನಿ ಪವಿತ್ರಾ ನೈಸರ್ಗಿಕ ಕೃಷಿಗೆ ಬೆಂಗಾವಲಾಗಿ ನಿಂತಿದ್ದಾರೆ. ಸದಾಶಿವ ಅವರು ತೋಟದಲ್ಲಿಯೇ ಸರಳವಾಗಿ ಮನೆ ನಿರ್ಮಿಸಿ ಸರಳ ಜೀವನವನ್ನು ನಡೆಸುತ್ತಿದ್ದಾರೆ.

ಪುತ್ತೂರಿನಲ್ಲಿ ಶ್ರೀಗಂಧಕ್ಕಿಂತಲೂ ಲಾಭದಾಯಕ ಈ ಅಗರ್‌ವುಡ್!

ನೇರ ಮಾರುಕಟ್ಟೆಗೆ ಸಂಘ ಸ್ಥಾಪನೆ

ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ನೇರವಾಗಿ ಮಾರುಕಟ್ಟೆಒದಗಿಸುವ ಸಲುವಾಗಿ ಸದಾಶಿವ ಅವರು 2017 ರಲ್ಲಿ ಲಕ್ಷ್ಮೀ ವೆಂಕಟೇಶ್ವರ ರೈತ ಉತ್ಪಾದಕ ಕಂಪನಿ ಲಿಮಿಟೆಡ್‌ ಸಂಘ ಸ್ಥಾಪಿಸಿದ್ದಾರೆ. ಇದರಲ್ಲಿ 500 ರೈತರು ಸದಸ್ಯರಾಗಿದ್ದಾರೆ. ರೈತರು ಬೆಳೆದ ಸಾವಯವ ಕೃಷಿ ಉತ್ಪನ್ನಗಳ ನೇರ ಮಾರಾಟಕ್ಕಾಗಿ ರಾಮದುರ್ಗದ ಮಾರುಕಟ್ಟೆಯಲ್ಲಿ ಕೆಲ ಮಿತ್ರರೊಂದಿಗೆ ಸೇರಿ ‘ಹಳ್ಳಿ ಅಂಗಡಿ’ ತೆರೆದಿದ್ದಾರೆ. ಸದಾಶಿವ ಮಾತನವರ ಮೊಬೈಲ್‌ ಸಂಖ್ಯೆ 9731796444.