Asianet Suvarna News Asianet Suvarna News

ಬೆಳೆಗೆ ನೀರು, ಪೋಷಕಾಂಶ ಒದಗಿಸುವ ಬಯೋಚಾರ್‌ ತಯಾರಿಸೋದು ಹೇಗೆ?

ವಿದೇಶಗಳಲ್ಲಿ ಬಹಳ ಜನಪ್ರಿಯವಾಗಿರುವ ಬಯೋಚಾರ್‌ ಬಗ್ಗೆ ನಮ್ಮ ರೈತರಿಗೆ ಅಷ್ಟಾಗಿ ತಿಳುವಳಿಕೆ ಇಲ್ಲ. ಈ ಜೈವಿಕ ಇದ್ದಿಲು ಮಣ್ಣಿಗೆ, ರೈತನಿಗೆ ಮಾಡುವ ಉಪಕಾರ ಅಷ್ಟಿಷ್ಟಲ್ಲ. ಬಯೋಚಾರ್‌ ಬಗ್ಗೆ ಡೀಟೈಲ್ಡ್‌ ಮಾಹಿತಿ ಇಲ್ಲಿದೆ.

how to prepare Biochar and its benefits
Author
Bangalore, First Published Jan 9, 2020, 1:56 PM IST
  • Facebook
  • Twitter
  • Whatsapp

ಎಸ್‌.ಕೆ ಪಾಟೀಲ್‌

ಜೈವಿಕ ವಸ್ತುಗಳನ್ನು ಮಿತವಾದ ಆಮ್ಲಜನಕದ ಪೂರೈಕೆಯಿಂದ ಕಾಯಿಸಿದಾಗ ದೊರೆಯುವ ಅತಿಹೆಚ್ಚು ಇಂಗಾಲವನ್ನೊಳಗೊಂಡ ಘನವಸ್ತುವೇ ಬಯೋಚಾರ್‌. ಅರ್ಥ ಆಗ್ಲಿಲ್ಲ ಅಲ್ವಾ? ಸಿಂಪಲ್ಲಾಗಿ ಹೇಳಬೇಕೆಂದರೆ, ಕಟ್ಟಿಗೆ-ಎಲೆ-ಕಸ-ಕಡ್ಡಿಯನ್ನು ಸುಟ್ಟು ಅದು ಬೂದಿಯಾಗುವ ಮೊದಲೇ ನೀರು ಸಿಂಪಡಿಸಿದರೆ ಉಳಿಯುವ ಕಪ್ಪು ಬಣ್ಣದ ಪದಾರ್ಥವೇ ಬಯೋಚಾರ್‌. ಜಮೀನಿಗೆ ನಾವು ಕೊಡುವ ನೀರು ಗೊಬ್ಬರವನ್ನು, ಮಣ್ಣು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳಲಾಗದು. ಗಾಳಿಯ ಹೊಡೆತಕ್ಕೆ, ಮಳೆಯ ರಭಸಕ್ಕೆ ನಾವು ಕೊಟ್ಟಗೊಬ್ಬರ ಬೆಳೆಗೆ ಲಭ್ಯವಿರದಷ್ಟುದೂರ ಹೋಗಬಹುದು ಮತ್ತು ಭೂಮಿಗೆ ಬಿದ್ದ ನೀರು ಹಾಗೇ ಜಾರಿ ಹೋಗಬಹುದು. ಇದೆಲ್ಲವನ್ನೂ ತಡೆದು ಬೆಳೆಗೆ ನೀರು ಮತ್ತು ಪೋಷಕಾಂಶ ದೊರಕುವಂತೆ ಮಾಡುವುದೇ ಈ ಬಯೋಚಾರ್‌. ತುಂಬಾ ಜನ ರೈತರಿಗೆ ಇದು ಅಪರಿಚಿತ. ಪ್ರಚಾರದ ಕೊರತೆಯಿಂದ ಇದನ್ನು ಮಾಡಿ ಬಳಸುವವರು ವಿರಳ. ಆದರೆ ಮಣ್ಣಿನ ಪಾಲಿಗೆ ಇದು ನಿಜಕ್ಕೂ ಅದ್ಭುತ ಪದಾರ್ಥ.

ಪುತ್ತೂರಿನಲ್ಲಿ ಶ್ರೀಗಂಧಕ್ಕಿಂತಲೂ ಲಾಭದಾಯಕ ಈ ಅಗರ್‌ವುಡ್!

ಒಂದೊಂದು ಗ್ರಾಂ. ಬಯೋಚಾರ್‌ನಲ್ಲೂ ಅಸಂಖ್ಯಾತ ಸೂಕ್ಷ್ಮರಂಧ್ರಗಳಿರುತ್ತವೆ. ಈ ರಂದ್ರಗಳೇ ನಮಗೆ ವರದಾನ. ಭೂಮಿಗೆ ಬಿದ್ದ ನೀರನ್ನೆಲ್ಲ ಹಿಡಿದಿಟ್ಟುಕೊಳ್ಳುವ

ಸಾಮರ್ಥ್ಯವಿರುವ ಈ ರಂಧ್ರಗಳು ಕೋಟ್ಯಂತರ ರೈತಸ್ನೇಹಿ ಸೂಕ್ಷ್ಮಜೀವಿಗಳಿಗೆ ಆವಾಸ ಸ್ಥಾನ ಕೂಡ ಹೌದು. ಮಣ್ಣಿನ ಆಮ್ಲೀಯತೆಯನ್ನು ಕಡಿಮೆ ಮಾಡುವ ಇದರ ವಿಶೇಷ ಏನೆಂದರೆ ಇದನ್ನು ಒಮ್ಮೆ ನಮ್ಮ ಜಮೀನಿನ ಮಣ್ಣಿಗೆ ಸೇರಿಸಿದರೆ ಸಾವಿರಾರು ವರ್ಷ ಅಲ್ಲಿಯೇ ಇರುತ್ತದೆ ಮತ್ತು ತನ್ನ ಕೆಲಸ ಮಾಡುತ್ತಲೇ ಇರುತ್ತದೆ.

ಮೇಲಿನ ಎಲ್ಲ ಅನುಕೂಲಗಳ ಜೊತೆಗೆ ಬಯೋಚಾರ್‌ ಅನ್ನು ಮಣ್ಣಿಗೆ ಸೇರಿಸಿದರೆ ಬೆಳೆಗೆ ಕಡಿಮೆ ನೀರು ಕೊಡಬಹುದು. ವಾತಾವರಣದಲ್ಲಿನ ತೇವಾಂಶವನ್ನು ಹೀರಿಕೊಂಡು ಬೆಳೆಗೆ ಒದಗಿಸುವ ವಿಶಿಷ್ಟಗುಣ ಈ ಬಯೋಚಾರ್‌ ಅಥವಾ ಜೈವಿಕ ಇದ್ದಿಲಿನದು. ನೀರಿನ ಕೊರತೆ ಇರುವ ರೈತರು ಅವಶ್ಯವಾಗಿ ಬಯೋಚಾರ್‌ ಬಳಸಬೇಕು. ನಮ್ಮ ಸುತ್ತಮುತ್ತ ಇರುವ ಕಟ್ಟಿಗೆ, ಒಣ ಹುಲ್ಲು, ತರಗೆಲೆ, ಭತ್ತದ ಹೊಟ್ಟು, ಅಡಕೆ ಸಿಪ್ಪೆ, ತೆಂಗಿನ ತ್ಯಾಜ್ಯ ಮುಂತಾದ ಇಂಥ ಯಾವುದೇ ವಸ್ತುಗಳಿಂದ ಬಯೋಚಾರ್‌ಮಾಡಿಕೊಳ್ಳಬಹುದು. ಸಾಧ್ಯವಾದಷ್ಟುಗಟ್ಟಿಪದಾರ್ಥವಿದ್ದರೆ ಬಯೋಚಾರ್‌ ಗುಣಮಟ್ಟಅಧಿಕಗೊಳ್ಳುತ್ತದೆ. ಮೇಲಿನ ವಸ್ತುಗಳನ್ನು ಬಹಳ ಮಿತವಾದ ಗಾಳಿ (ಆಮ್ಲಜನಕ) ಪೂರೈಸಿ ಸುಡಬೇಕು. ಇವುಗಳನ್ನು ಸುಡುವಾಗ ಹೆಚ್ಚು ಗಾಳಿ ದೊರೆತರೆ ಅವೆಲ್ಲಾ ಸುಟ್ಟು ಬೂದಿಯಾಗಿ ಬಿಡುತ್ತದೆ. ಗಾಳಿ ಮಿತವಾಗಿದ್ದಲ್ಲಿ ಮಾತ್ರ ನಮಗೆ ಬಯೋಚಾರ್‌ದೊರೆಯುತ್ತದೆ.

ಅತ್ಯಂತ ಕಡಿಮೆ ನೀರು ಬಳಸಿ ಬಂಪರ್ ಭತ್ತ ಪಡೆದ ಮೈಸೂರು ರೈತ!

ಸತತವಾಗಿ ರಾಸಾಯನಿಕ ಉಂಡು ಸತ್ವವಿಲ್ಲದೆ ಹಾಳಾಗಿರುವ ಜಮೀನಿನಲ್ಲಿ ಸಾವಯವ ಇಂಗಾಲದ ಪ್ರಮಾಣ 1%ಗಿಂತಲೂ ಕಡಿಮೆ ಇರುತ್ತದೆ. ಕೊಟ್ಟಿಗೆ ಗೊಬ್ಬರ ಬಳಸಿದರೆ ಇದು ಹೆಚ್ಚಾಗುತ್ತದೆ. ಇನ್ನೂ ವೇಗವಾಗಿ ಹೆಚ್ಚಾಗಬೇಕೆಂದರೆ ಬಯೋಚಾರ್‌ ಬಳಸಬೇಕು. ಆ ಪ್ರಮಾಣ 2%-3%-4% ಹೀಗೆ ಹೆಚ್ಚಾದಷ್ಟೂಇಳುವರಿ ಹೆಚ್ಚುತ್ತದೆ. ಪ್ರಮುಖ ವಿಷಯ ಏನೆಂದರೆ, ಈ ಬಯೋಚಾರ್‌ ನಲ್ಲಿ ಆಕರ್ಷಿಸುವ ಹಾಗೂ ಹೀರಿಕೊಳ್ಳುವ ಗುಣವಿರುವುದರಿಂದ ಇದನ್ನು ಬಳಸುವ ಮೊದಲು ಸಗಣಿ ಬಗ್ಗಡ, ಸ್ಲರಿ, ಗೋಮೂತ್ರ, ಜೀವಾಮೃತ, ಪಂಚಗವ್ಯ ಮುಂತಾದ ಯಾವುದಾದರೂ ಒಂದು ದ್ರವರೂಪಿ ಗೊಬ್ಬರದಲ್ಲಿ 2 ದಿನ ನೆನೆ ಇಡಬೇಕು, ನಂತರವೇ ಬಳಸಬೇಕು. ತಯಾರಿಸಿ ಹಾಗೇ ಬಳಸಿದರೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು.

ತಯಾರಿಸುವುದು ಹೇಗೆ : 200 ಲೀಟರ್‌ಸಾಮರ್ಥ್ಯದ ತಗಡಿನ ಡ್ರಮ್‌ ತಗೆದುಕೊಂಡು ಅದರ ಕೆಳಭಾಗದಲ್ಲಿ ಕೆಲವು ರಂಧ್ರಗಳನ್ನು ಮಾಡಬೇಕು. ಡ್ರಮ್‌ನ ಮೇಲ್ಭಾಗವನ್ನು ಕತ್ತರಿಸಿ ಮುಚ್ಚಳವಾಗಿ ಮಾಡಿಕೊಳ್ಳಬೇಕು. ಈ ಕತ್ತರಿಸಿದ ತಗಡಿನ ನಡುವೆ 8 ಇಂಚು ಅಗಲದ ಒಂದು ರಂಧ್ರಕೊರೆದು ಅದಕ್ಕೆ 3 ಅಡಿ ಉದ್ದದ ತಗಡಿನಿಂದಲೇ ಮಾಡಿದ ಕೊಳವೆಯನ್ನು ಫಿಟ್‌ ಮಾಡಬೇಕು.

ನಂತರ ಗಾಳಿ ಹೋಗಲು ಅನುಕೂಲವಾಗುವಂತೆ ಡ್ರಮ್‌ ಅನ್ನು ಭೂಮಿಯಿಂದ ಒಂದು ಅಡಿ ಎತ್ತರದಲ್ಲಿ ಕಲ್ಲು ಇಟ್ಟು ಅದರ ಮೇಲೆ ಇಡಬೇಕು. ಡ್ರಮ್‌ ತುಂಬ ತುಂಡು ಮಾಡಿದ ದಪ್ಪ ಕಟ್ಟಿಗೆ, ನಂತರ ತೆಳುವಾದ ಕಟ್ಟಿಗೆ, ಕಡ್ಡಿ, ದಂಟು, ತೆಂಗಿನ ಸಿಪ್ಪೆ, ತರಗೆಲೆ, ಅಡಿಕೆ ಸಿಪ್ಪೆ, ಸೋಗೆ ಹೀಗೆ ಎಲ್ಲವನ್ನೂ ತುಂಬಬೇಕು. ನಂತರ ಡ್ರಮ್‌ ಮೇಲೆ ಅಂದರೆ ಮುಚ್ಚಳದ ಭಾಗಕ್ಕೆ ಬೆಂಕಿ ಹಾಕಬೇಕು. ಬೆಂಕಿ ಹೊತ್ತಿಕೊಂಡ ನಂತರ ಡ್ರಮ್‌ ಮೇಲೆ ಎರಡು ಪೈಪ್‌ ಇಟ್ಟು ಅದರ ಮೇಲೆ ಚಿಮಣಿ ಇರುವ ಮುಚ್ಚಳವನ್ನಿಡಬೇಕು. ಡ್ರಮ್‌ ಮೇಲ್ಭಾಗಕ್ಕೆ ಪೈಪು ಜೋಡಿಸುವುದರಿಂದ ಮುಚ್ಚಳ ಮತ್ತು ಡ್ರಮ್‌ ನಡುವೆ ಇರುವ ಜಾಗದಲ್ಲಿ ಗಾಳಿ ಸರಿದು ಒಳಗಿನ ವಸ್ತು ಉರಿಯಲು ಸಹಕಾರಿಯಾಗುತ್ತದೆ.

ಅಡಿಕೆ ತೋಟದಲ್ಲೂ ಬತ್ತದ ಕೃಷಿ; ಹೊಸ ಪ್ರಯೋಗಕ್ಕೆ ಕೈ ಹಾಕಿದ ರೈತ!

ಡ್ರಮ್‌ ಮೇಲ್ಭಾಗದಿಂದ ಕೆಳಗಿನವರೆಗೆ ಒಂದೇ ಪ್ರಮಾಣದಲ್ಲಿ ಬೆಂಕಿ ಉರಿಯುತ್ತಾ ಹೋಗುತ್ತದೆ. ಕೊನೆಗೆ ಡ್ರಮ್‌ ತಳಭಾಗಕ್ಕೆ ಕೈನಿಂದ ನೀರು ಚಿಮುಕಿಸಿದಾಗ ಆ ನೀರು ಒಮ್ಮೆಲೇ ದೋಸೆ ತವಾದ ಮೇಲೆ ನೀರು ಬಿದ್ದಾಗ ಆಗುವ ಹಾಗೆ ಆವಿಯಾದರೆ ಬಯೋಚಾರ್‌ ಸಿದ್ಧವಾಗಿದೆ ಎಂದರ್ಥ. ಆಮೇಲೆ ಮುಚ್ಚಳ ತೆಗೆದು ಒಳಭಾಗಕ್ಕೆ ಸಾಕಷ್ಟುನೀರು ಹಾಕಿ ಆರಿಸಿ. ತಯಾರಾದ ಬಯೋಚಾರನ್ನು ಮೊದಲು ತಿಳಿಸಿದ ಯಾವುದಾದರೂ ಒಂದು ದ್ರವರೂಪಿ ಗೊಬ್ಬರಕ್ಕೆ ಸೇರಿಸಬೇಕು. ನಂತರ ಚಿಕ್ಕದಾಗಿ ಪುಡಿ ಮಾಡಿ ಮಣ್ಣಿನಲ್ಲಿ ಸೇರಿಸಬೇಕು.

ಕಡಿಮೆ ಖರ್ಚು ಅಧಿಕ ಲಾಭ

ಮೊದಲು ಡ್ರಮ್‌, ಕಬ್ಬಿಣದ ಪೈಪು, ಚಿಮಣಿ ಎಲ್ಲಾ ಸೇರಿ ಎರಡು ಸಾವಿರ ರೂಪಾಯಿವರೆಗೆ ಖರ್ಚು ಬರುತ್ತದೆ. ನಂತರ ಮತ್ತೇನೂ ಖರ್ಚಿಲ್ಲ. ಎರಡೇ ತಾಸಿನಲ್ಲಿ ತಯಾರಿಸಿ ಎರಡು ದಿನ ನೆನೆಹಾಕಿ ಬಳಸಬಹುದು. ನಮ್ಮ ಜಮೀನು ಹಾಗೂ ಸುತ್ತಮುತ್ತ ಸಿಗುವ ನಿರುಪಯುಕ್ತ ಸಾವಯವ ಪದಾರ್ಥ ಬಳಸಿ ಏನೂ ಖರ್ಚಿಲ್ಲದೇ ಮಾಡುವ ಈ ಜೈವಿಕ ಇದ್ದಿಲು ವಾತಾವರಣದಿಂದ ತೇವಾಂಶ ಹೀರಿಕೊಂಡು ನಮ್ಮ ಬೆಳೆಗಳಿಗೆ ಉಣಿಸುವುದಲ್ಲದೇ, ಸೂಕ್ಷ್ಮಜೀವಿಗಳಿಗೆ ಆಹಾರ ಒದಗಿಸುತ್ತಾ ಅವುಗಳನ್ನು ಪೋಷಿಸಿ ವೃದ್ಧಿಸುತ್ತದೆ.-ಶ್ರೀಕಾಂತ ಕುಂಬಾರ

ಸಾಕಷ್ಟುಅಧ್ಯಯನ ಮಾಡಿ ಬಯೋಚಾರ್‌ ಬಳಸತೊಡಗಿದೆ

ಇಪ್ಪತ್ತು ವರ್ಷದಿಂದ ಸಾವಯವ ಕೃಷಿ ಮಾಡುತ್ತಾ ಬರುತ್ತಿರುವ ನನಗೆ ರಾಸಾಯನಿಕದಿಂದ ಸಾವಯವಕ್ಕೆ ಮರಳಿದಾಗ ಜಮೀನು ಫಲವತ್ತುಗೊಳಿಸುವುದು, ಇಳುವರಿ ಹೆಚ್ಚಿಸುವುದು ಸುಲಭದ ಕೆಲಸ ಆಗಿರಲಿಲ್ಲ. ಆದರೆ ನನ್ನ ಜಮೀನು ಬೇಗ ಉತ್ತಮ ಸ್ಥಿತಿಗೆ ಬಂದಿತು. ಇದಕ್ಕೆ ಪ್ರಮುಖ ಕಾರಣ ಬಯೋಚಾರ್‌. ಇಂಟರ್‌ನೆಟ್‌ನಲ್ಲಿ ಸಾಕಷ್ಟುಅಧ್ಯಯನ ಮಾಡಿ ಹೊಸದಾಗಿ ಈ ಡ್ರಮ್‌ ಮೂಲಕ ಬಯೋಚಾರ್‌ ಮಾಡುವ ವಿಧಾನ ಅಳವಡಿಸಿಕೊಂಡೆ. ಬಯೋಚಾರನ್ನು ಮರಳಿನಷ್ಟುಸಣ್ಣದಾಗಿ ಪುಡಿ ಮಾಡಿ ತೋಟದ ಮರಗಳ ಬುಡದ ಸುತ್ತ ಒಂದು ಅಡಿ ಆಳದ ತಗ್ಗು ಮಾಡಿ ಬಯೋಚಾರ್‌ ತುಂಬಬಹುದು. ಗೊಬ್ಬರದ ಜೊತೆ ಬೆರೆಸಿ ಮಣ್ಣಿಗೆ ಕೊಡಬಹುದು. ಒಟ್ಟಿನಲ್ಲಿ ಇದು ನಮ್ಮ ಜಮೀನಿಗೆ ಸೇರಿದರೆ ಸಾಕು. ಇದನ್ನು ನರ್ಸರಿಗಳಲ್ಲೂ (ಶೇ.2) ಉಪಯೋಗಿಸಬಹುದಾಗಿದೆ. ಈಗ ಸುತ್ತಮುತ್ತಲಿನ ರೈತರಲ್ಲದೇ ಸಾವಯವ ಗೊಬ್ಬರ ತಯಾರಿಸುವ ಘಟಕದವರು ಕೂಡ ನನ್ನಲ್ಲಿ ಬಂದು ಸಲಹೆ ಪಡೆದು ಅವರ ಕಾಂಪೋಸ್ಟ್‌ ತಯಾರಿಕೆಯಲ್ಲಿ ಬಯೋಚಾರ್‌ ಬಳಸುತ್ತಿದ್ದಾರೆ. ಪ್ರತಿಯೊಬ್ಬ ರೈತರು ಇದನ್ನು ತಯಾರಿಸಿ ಬಳಸಬೇಕು. -​ಗಜಾನನ ವಝೆ

Follow Us:
Download App:
  • android
  • ios