'ಪುನರ್ವಸು' ಕಾದಂಬರಿ ಲೋಕಾರ್ಪಣೆಯ ಸಾರ್ಥಕ ಕ್ಷಣ
ಶರಾವತಿ ಬರೀ ನದಿಯಲ್ಲ. ಜೋಗದಲ್ಲಿ ಧುಮ್ಮಿಕ್ಕುವ ರಾಜ ರಾಣಿ ರೋಜ ರಾಕೆಟ್ ಸ್ಫುರಿಸುವುದು ಮನಮೋಹಕ ದೃಶ್ಯ ಮಾತ್ರವಲ್ಲ, ನದಿಯ ಒಡಲಲ್ಲಿ ಹುದುಗಿರುವ ಕಣ್ಣೀರ ಕತೆಗಳೇ ಅವು. ಹೌದು, ಕರಾಳ ಇತಿಹಾಸಕ್ಕೆ ಕಾದಂಬರಿ ಕೌದಿ ಹೊದಿಸಿದ ಮನೋಜ್ಞ ಕೃತಿ ಗಜಾನನ ಶರ್ಮರ "ಪುನರ್ವಸು". ಕೃತಿ ಬಿಡುಗಡೆಯ ಸಂಭ್ರಮ ಇಲ್ಲಿದೆ. ಕಾದಂಬರಿಯಲ್ಲಿ ಇತಿಹಾಸ ಸುರಿಸುವ ಕಂಬನಿಗಳಿವೆ. ತಿಳಿದಿರಲಿ - ಸಂಪಾದಕ
-ಗಜಾನನ ಶರ್ಮ, ಬೆಂಗಳೂರು
ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣವೇ ಬಹಳ ಚಿಕ್ಕದೆನ್ನಿಸಿತು! ಕುಳಿತುಕೊಳ್ಳುವುದಿರಲಿ, ಹೊರಗೆ ನಿಲ್ಲಲೂ ಸ್ಥಳವಿಲ್ಲದಷ್ಟು ಜನ ಕಿಕ್ಕಿರಿದು ತುಂಬಿದ್ದರು. ಸಾಹಿತ್ಯಾಭಿಮಾನಿಗಳು, ಸ್ನೇಹಿತರು, ಬಂಧುಗಳು, ಇಲಾಖೆಯ ಮಿತ್ರರು, ಜೋಗವನ್ನು ಪ್ರೀತಿಸುವವರು, ಜೋಗ್ ಯೋಜನೆಯಿಂದ ಸಂತ್ರಸ್ಥರಾದವರು, ಶ್ರೀಮಠದ ಬಂಧುಗಳು, ಸಿ ವಿ ಹಾಸ್ಟೆಲ್ ಸ್ನೇಹಿತರು, ಜೋಗ್ ಕ್ಲಾಸ್ ಮೇಟ್ಸ್, ಕಥಾಕೂಟದ ಬಂಧುಗಳು..... ಓಹ್ ಯಾರೆಲ್ಲ!?
ಜೋಗದಿಂದ, ಹುಬ್ಬಳ್ಳಿಯಿಂದ, ಮೈಸೂರಿನಿಂದ, ಶಿವಮೊಗ್ಗ ಸಾಗರ ಮತ್ತು ನಮ್ಮೂರಿನಿಂದ... ಹೀಗೆ ಹಲವೆಡೆಯಿಂದ ಪ್ರೀತಿಯ ಪೂರ ಹರಿದುಬಂದಿತ್ತು...... ಸಭಾಂಗಣ ಪ್ರೀತಿಯ ಸಮುದ್ರವಾಗಿತ್ತು.
ಜೋಗದ ಆಸಕ್ತಿ, ಮುಳುಗಡೆಯ ನೋವು, ಕಾದಂಬರಿಯ ವಸ್ತುವಿನ ಕುರಿತ ಕುತೂಹಲ, ಕೃತಿಕಾರನ ಸ್ನೇಹ.... ಶುಭ ಕೋರುವ, ಒಳಿತನ್ನು ಹಾರೈಸುವ, ಆಶೀರ್ವದಿಸುವ, ಮೆಚ್ಚುಗೆ ವ್ಯಕ್ತಪಡಿಸುವ, ಸಂಭ್ರಮವನ್ನು ಹಂಚಿಕೊಳ್ಳುವ...... ಬಗೆ ಬಗೆಯ ಇರಾದೆಗಳು.
ಲೋಕಾ ಪೇದೆ ಬರೆದ ಪುಸ್ತಕ ಲೋಕಾಯುಕ್ತರಿಂದ ಬಿಡುಗಡೆ
ನನಗಾದರೂ ಅಷ್ಟೆ. ಅದೆಷ್ಟು ಸಾರ್ಥಕ ಭಾವ!? ಅದೆಂತಹ ಅಮೃತಗಳಿಗೆ! ಇದೊಂದು ಕಾದಂಬರಿ ಎಂಬ ಭಾವಕ್ಕಿಂತ ಬಾಲ್ಯದಿಂದಲೂ ಭಾವಕೋಶವನ್ನು ಭರಿಸುತ್ತ ಬಂದಿದ್ದ ಭಾವಗಳಿಗೆ ಅಕ್ಷರರೂಪ ಕೊಡುವ ಪ್ರಯತ್ನ ಕೈಗೂಡಿದ ಶುಭ ಸಂದರ್ಭ. ಹೇಳಬೇಕೆಂದಿದ್ದುದನ್ನು ಹೇಳಿದ ಸಂದರ್ಭ.
ನನ್ನವರ ಪ್ರೀತಿ,ಆದರ,ಅಭಿಮಾನಗಳಿಂದ ಪುಳಕಿತನಾಗುವ ರೋಮಾಂಚಕ ಕ್ಷಣ. ಶ್ರೀಕಂಠ ಕೂಡಿಗೆ ಬಿಡುಗಡೆಗೊಳಿಸಿ ಮಾತನಾಡಿದರೆ ಕೆ. ಸತ್ಯನಾರಾಯಣ ಕೃತಿಯ ಕುರಿತು ನಾಲ್ಕು ಒಳ್ಳೆಯ ಮಾತಾಡಿದರು. ಇತರ ಕೃತಿಗಳೂ ಇದ್ದವು. ಅವುಗಳ ಕುರಿತೂ ಮಾತನಾಡಿದರು.
ನನಗೆ ಅತ್ಯಂತ ಸಂತಸ ನೀಡಿದ ಕ್ಷಣ ವಟ್ಟಕ್ಕಿ ಮನೆತನದ ಕುಡಿಗಳನ್ನು ಕರೆದು ಪುಸ್ತಕ ನೀಡಿ ಗೌರವಿಸಿದ ಸಂದರ್ಭ. ವಟ್ಟಕ್ಕಿ ಮನೆತನವೆಂದರೆ ಜೋಗದ ಕೊತವಾಲರಾಗಿದ್ದ ಕುಟುಂಬ. ಜೋಗದ ಬ್ರಿಟಿಷ್ ಮತ್ತು ಮೈಸೂರು ಬಂಗ್ಲೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮನೆತನ. ಇಂದಿನ ಲಿಂಗನಮಕ್ಕಿ ಮತ್ತು ತಲಕಳಲೆ ಎರಡೂ ಅಣೆಕಟ್ಟೆ ಕಟ್ಟಿದ ಜಾಗ ಅವರದಾಗಿತ್ತು. ಅದು ಗೇರುಸೊಪ್ಪೆಯ ಅರಸುವಂಶದ ಕೊತವಾಲರಾಗಿದ್ದ ಮನೆತನ.
ನನ್ನ ಬದುಕು ಸರಳ, ಹಾಗಾಗಿ ನಾನು ಆತ್ಮಕಥೆ ಬರೆಯಲ್ಲ: ಡಾ. ಸುಧಾಮೂರ್ತಿ
ಜೋಗದಲ್ಲಿ ನಾವೆಲ್ಲ ಜಲಪಾತವನ್ನು ವೀಕ್ಷಿಸುವ ವ್ಯಾಟ್ಕಿನ್ ಪ್ಲಾಟಫಾರ್ಮ್ ಗೆ ಹೆಸರು ಬರಲು ಕಾರಣವಾದ ವಂಶ. ದುರದೃಷ್ಟವೆಂದರೆ ಯೋಜನಾ ಪ್ರದೇಶದಲ್ಲಾಗಲೀ, ಜಲಪಾತದ ಸಮೀಪದಲ್ಲಾಗಲೀ ಅವರ ಕುರಿತು ಒಂದು ವಾಕ್ಯದ ಪರಿಚಯವೂ ಇಲ್ಲ, ಹೆಚ್ಚೇಕೆ ಒಂದು ಚಕಾರವಿಲ್ಲ. ಅಯ್ಯೋ!
ಅಂಕಿತ ಪ್ರಕಾಶನ ಪ್ರಕಟಿಸಿರುವ "ಶರಾವತಿ" ಕಾದಂಬರಿ ವಟ್ಟಕ್ಕಿ ಕುಟುಂಬದ ಇತಿಹಾಸವನ್ನೂ ಹೇಳುತ್ತದೆ. ಆ ಕಗ್ಗಾಡು ಕಣಿವೆಯ ಆಳದಲ್ಲಿ ಹುದುಗಿರುವ ವಟ್ಟಕ್ಕಿಯ ಈ ಕುಟುಂಬವನ್ನು ನೆನಪು ಮಾಡಿಕೊಂಡ ಕ್ಷಣ ನಿಜವಾಗಿಯೂ ಸಾರ್ಥಕ ಕ್ಷಣ.