ನನ್ನ ಬದುಕು ಸರಳ, ಹಾಗಾಗಿ ನಾನು ಆತ್ಮಕಥೆ ಬರೆಯಲ್ಲ: ಡಾ. ಸುಧಾಮೂರ್ತಿ

ನನ್ನ ಬದುಕು ತೀರಾ ಸಾಧಾರಣವಾದುದು, ಹಾಗೂ ವಿಶೇಷವಾದುದೇನೂ ಇಲ್ಲದಿರುವುದರಿಂದ ಆತ್ಮಕಥೆ ಬರೆಯುವುದಿಲ್ಲ ಎಂದು ಲೇಖಕಿ ಹಾಗೂ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಹೇಳಿದ್ದಾರೆ.

My Life Is Simple I Dont Write My Auto Biography Says  Chairperson of Infosys Dr Sudha Murthy

ಬೆಂಗಳೂರು[ನ.15]: ತಮ್ಮ ಬದುಕು ತೀರಾ ಸಾಧಾರಣವಾದುದು, ಹಾಗೂ ವಿಶೇಷವಾದುದೇನೂ ಇಲ್ಲದಿರುವುದರಿಂದ ಆತ್ಮಕಥೆ ಬರೆಯುವುದಿಲ್ಲ ಎಂದು ಲೇಖಕಿ ಹಾಗೂ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಅವರು ಹೇಳಿದ್ದಾರೆ.

ಕ್ರಾಸ್‌ವರ್ಡ್‌ ಬುಕ್‌ ಸ್ಟೋರ್‌ ಬುಧವಾರ ಮಂತ್ರಿ ಸ್ಕ್ವೇರ್‌ನಲ್ಲಿ ಹಮ್ಮಿಕೊಂಡಿದ್ದ ಸ್ವರಚಿತ ‘ದಿ ಅಪ್‌ಸೈಡ್‌ ಡೌನ್‌ ಕಿಂಗ್‌’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ಆತ್ಮಕಥೆ ಯಾಕೆ ಬರೆಯಬಾರದು ಎಂಬ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಬರವಣಿಗೆಯನ್ನು ತಾವು ಆಯ್ದುಕೊಳ್ಳಲಿಲ್ಲ. ಬರವಣಿಗೆಯೇ ನನ್ನನ್ನು ಆರಿಸಿಕೊಂಡಿತು. ಬರೆಯುವ ಮೂಲಕ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ. ತಾವೆಂದಿಗೂ ಬರಹಗಾರಳಾಗುತ್ತೇನೆಂದು ಅಂದುಕೊಂಡಿರಲಿಲ್ಲ. ಕಾದಂಬರಿಯೊಂದನ್ನು ಬರೆಯಲು ಎರಡರಿಂದ ಮೂರು ವರ್ಷ ತೆಗೆದುಕೊಳ್ಳುತ್ತೇನೆ. ಮೊದಲು ಪಾತ್ರಗಳು ಒಳಗೆ ಒಡಮೂಡುತ್ತವೆ. ಆನಂತರ ಬರೆಯಲು ಆರಂಭಿಸುತ್ತೇನೆ. ನಾವು ಓದುಗರನ್ನು ಎಂದಿಗೂ ವಂಚಿಸಬಾರದು. ಲೇಖಕರು ಓದುಗರಿಗೆ ನಿಷ್ಠರಾಗಿರಬೇಕು. ಅಗತ್ಯವಿರುವಷ್ಟುಮಾತ್ರ ಬರೆಯಬೇಕು ಎಂದಿದ್ದಾರೆ.

ವಾಲ್ಮೀಕಿ ಮತ್ತು ವ್ಯಾಸ ಕೊಟ್ಟಿರುವ ರೂಪುರೇಷೆಗಳಿಗೆ ಅನುಗುಣವಾಗಿ ಸರಳವಾಗಿ ಪುಸ್ತಕ ಬರೆದಿದ್ದೇನೆ. ಮಕ್ಕಳಿಗಾಗಿ ಬರೆಯುವಾಗ ಅವರಿಗೆ ಉತ್ತಮ ವಿಚಾರಗಳನ್ನು ಹೇಳಲು ಆದ್ಯತೆ ನೀಡುತ್ತೇನೆ. ಮಕ್ಕಳಿಗೆ ಕಪಟತನ ಪರಿಚಯಿಸಲು ಮುಂದಾಗುವುದಿಲ್ಲ. ಮಕ್ಕಳು ಪೋಷಕರ ಚಲನವಲನಗಳನ್ನು ಮಕ್ಕಳು ಗಮನಿಸುತ್ತಿರುತ್ತಾರೆ. ತಂದೆ ತಾಯಿ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡಿದ್ದರೆ ಮಕ್ಕಳೂ ಪುಸ್ತಕ ಸ್ನೇಹ ಬೆಳೆಸಿಕೊಳ್ಳುತ್ತಾರೆ. ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ಮಹತ್ತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೇಳಿದ್ದಾರೆ.

ಬರವಣಿಗೆ ನಮ್ಮಲ್ಲಿ ಹೊಸ ಚೈತನ್ಯಕ್ಕೆ ಎಡೆಮಾಡಿಕೊಡುತ್ತದೆ. ತಾವು ಯಾವುದೇ ಕೃತಿ ರಚಿಸಬೇಕಾದರೂ ಖುಷಿಯಿಂದ ಬರೆಯುತ್ತೇನೆ. ಯಾವುದೇ ಒಬ್ಬ ಬರಹಗಾರ ಒಂದು ಕೃತಿ ರಚಿಸುವ ಮೊದಲು ಆಳವಾದ ಅಧ್ಯಯನ, ಸಂಶೋಧನೆ ಕೈಗೊಂಡು ಬರೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಹುತೇಕರು ಅಕ್ರಮವಾಗಿ ಹಣ ಸಂಪಾದನೆ ಮಾರ್ಗ ಹಿಡಿದಿದ್ದಾರೆ. ತಪ್ಪು ದಾರಿ ಹಿಡಿದು ಅಕ್ರಮ ಹಣ ಮಾಡಲು ಮುಂದಾದರೆ ಅವರಿಗೆ ಎಂತಹ ಗತಿ ಬರುತ್ತದೆ ಎಂಬುದನ್ನು ನಾವು ದಿನನಿತ್ಯ ಮಾಧ್ಯಮಗಳಲ್ಲೂ ನೋಡುತ್ತಿದ್ದೇವೆ. ಆ ರೀತಿಯ ಆಡಂಬರದ ಜೀವನ ಬೇಕಿಲ್ಲ. ಸರಳವಾದ, ನೆಮ್ಮದಿಯ ಹಾಗೂ ಪ್ರಾಮಾಣಿಕ ಜೀವನ ಸಾಗಿಸಬೇಕು. ನಮ್ಮ ದುಡಿತದಲ್ಲಿ ಒಂದಷ್ಟನ್ನು ಇತರರಿಗೆ ದಾನ ಮಾಡಬೇಕು. ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಲೇಖಕ ಡಾ.ವಿಕ್ರಂ ಸಂಪತ್‌ ಅವರು ಸುಧಾಮೂರ್ತಿ ಅವರೊಂದಿಗೆ ಸಂವಾದವನ್ನು ನಡೆಸಿಕೊಟ್ಟಿದ್ದಾರೆ .

Latest Videos
Follow Us:
Download App:
  • android
  • ios