ನಿರ್ದೇಶಕ ಗೋವಿಂದ ನಿಹಲಾನಿ ಒಮ್ಮೆ ಜಯಾ ಬಚ್ಚನ್‌ಗೆ 'ನಿನ್ನ ಮಗ ಅಭಿಷೇಕ್ ಸತ್ತಿದ್ದಾನೆಂದು ಭಾವಿಸು' ಎಂದು ಹೇಳಿದರಂತೆ. ಜಯಾಗೆ ಹೇಗಾಗಿರಬೇಡ? ಹಾಗ್ಯಾಕೆ ಹೇಳಿದರು ಅವರು? 

ಯಾವುದಾದರೂ ತಾಯಿಗೆ ʼನಿನ್ನ ಮಗ ಅಲ್ಲಿ ಹೆಣವಾಗಿ ಮಲಗಿದ್ದಾನೆ ಎಂದು ಭಾವಿಸುʼ ಎಂದು ಯಾರಾದರೂ ಹೇಳಿದರೆ ಏನನಿಸುತ್ತದೆ? ಅಂಥವರ ಕಪಾಳಕ್ಕೆ ಹೊಡೆಯಬೇಕು ಅನಿಸಬಹುದು. ಆದರೆ ಈ ಘಟನೆಯನ್ನು ಇದನ್ನು ಹೇಳಿದವರೂ ಹೇಳಿಸಿಕೊಂಡವರೂ ಸಾಮಾನ್ಯರಲ್ಲ. ಹೇಳಿಸಿಕೊಂಡ ಸನ್ನಿವೇಶವೂ ಸಾಮಾನ್ಯದ್ದಲ್ಲ. ʼಅಭಿಷೇಕ್‌ ಬಚ್ಚನ್‌ ಅಲ್ಲಿ ಹೆಣವಾಗಿ ಮಲಗಿದ್ದಾನೆ ಎಂದು ಭಾವಿಸುʼ ಎಂದು ಆತನ ತಾಯಿ ಜಯಾ ಬಚ್ಚನ್‌ಗೆ ಹೇಳಲಾಯಿತಂತೆ. ಅದು ಯಾಕಾಯಿತು ಹೇಗಾಯಿತು ಎಂಬುದನ್ನಿಲ್ಲಿ ನೋಡೋಣ.

ಜಯಾ ಬಚ್ಚನ್ ಅವರನ್ನು ಸಾಮಾನ್ಯವಾಗಿ ಕಠಿಣ ಕೆಲಸಗಾರ್ತಿ ಅಥವಾ ತುಂಬಾ ಬಲಿಷ್ಠ ಮಹಿಳೆ ಎಂದು ಗ್ರಹಿಸಲಾಗುತ್ತದೆ. ತಮಾಷೆಯಾಗಿಯೂ ಹೀಗೆ ಹೇಳುವುದುಂಟು. ಆದರೆ ಆಳವಾಗಿ ಹೇಳುವುದಾದರೆ, ನಟಿ ಜಯಾ ಸಾಕಷ್ಟು ಸೂಕ್ಷ್ಮ ಪ್ರವೃತ್ತಿಯ ವ್ಯಕ್ತಿಯೂ ಹೌದು. ಹಿಂದೆ ಒಮ್ಮೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಭಿಷೇಕ್ ಬಚ್ಚನ್ ತಮ್ಮ ತಾಯಿ ಒಂದು ಚಿತ್ರೀಕರಣದಲ್ಲಿ ಎದುರಿಸಿದ ಘಟನೆಯನ್ನು ಹಂಚಿಕೊಂಡಿದ್ದಾರೆ. ನಟಿಸುವಾಗ, ಪಾತ್ರವೇ ಆಗಿಬಿಡಬೇಕಾದಾಗ, ನಟರು ಭಾವನಾತ್ಮಕವಾಗಿ ಏನನ್ನು ಎದುರಿಸುತ್ತಾರೆ ಎಂಬುದರ ಕುರಿತು ಮಾತನಾಡುತ್ತಾ ಅವರು ಈ ವೈಯಕ್ತಿಕ ಕಥೆಯನ್ನು ಹಂಚಿಕೊಂಡಿದ್ದರು.

"ನಾನು ನಿಮಗೆ ತುಂಬಾ ವೈಯಕ್ತಿಕ ಕಥೆಯನ್ನು ಹೇಳುತ್ತೇನೆ. ಹಲವು ವರ್ಷಗಳ ಕಾಲ ಕ್ಯಾಮೆರಾದಿಂದ ದೂರವಿದ್ದ ನಂತರ, ನನ್ನ ತಾಯಿ 90ರ ದಶಕದಲ್ಲಿ ಗೋವಿಂದ್ ನಿಹಲಾನಿ ಅವರೊಂದಿಗೆ 'ಹಜಾರ್ ಚೌರಾಸಿ ಕಿ ಮಾ' ಎಂಬ ಚಿತ್ರವನ್ನು ಮಾಡಿದರು. ಚಿತ್ರೀಕರಣ ಮುಗಿಸಿ ಮನೆಗೆ ಮರಳಿದಾಗ ಅವರು ತುಂಬಾ ಡಿಸ್ಟರ್ಬ್‌ಡ್‌ ಆಗಿದ್ದರು. ನಾನು ಅವರನ್ನು ಏನಾಯಿತು ಎಂದು ಕೇಳಿದೆ. ಅವರು ಹೇಳಿದರು, 'ನಾನು ಹೋಗಿ ನನ್ನ ಮಗನ ಮೃತ ದೇಹವನ್ನು ಗುರುತಿಸಬೇಕಾದ ದೃಶ್ಯವನ್ನು ಮಾಡಬೇಕಾಗಿತ್ತು. ನನಗೆ ಮಾಡಲು ಸಾಧ್ಯವಾಗಲಿಲ್ಲ. ಆಗ ಗೋವಿಂದ್‌ ನಿಹಲಾನಿ, ಒಂದು ಇಂಟರೆಸ್ಟಿಂಗ್‌ ಡೈರೆಕ್ಷನ್‌ ನೀಡಿದರು. ಅವರು ಹೇಳಿದರು, 'ಅಭಿಷೇಕ್ ಅಲ್ಲಿ ಮಲಗಿದ್ದಾನೆಂದು ಊಹಿಸು'. ಇದು ನಿಜವಾಗಿಯೂ ತುಂಬಾ ಕಠಿಣ. ಆದರೆ ನಟರು ಪ್ರತಿಸಲ ಇಂಥ ಸನ್ನಿವೇಶವನ್ನೇ ಎದುರಿಸುತ್ತಾರೆ. ಅವರು ಹಾಗೆ ಹೇಳದಿದ್ದರೂ ಸಹ, ಪಾತ್ರದ ಆ ಭಾವನೆಯನ್ನು ನಿಜವಾಗಿಸಲು ಅವಳು ಅದನ್ನೇ ಊಹಿಸಿಕೊಳ್ಳುವವಳಿದ್ದಳು. ನಮ್ಮ ಬಹಳಷ್ಟು ವೈಯಕ್ತಿಕ ಭಾವಗಳನ್ನು ನಮ್ಮ ಕೆಲಸದಲ್ಲಿ ತರಬೇಕಾಗುತ್ತದೆ."

ಇತ್ತೀಚೆಗಷ್ಟೆ ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ತಮ್ಮ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಅಭಿಷೇಕ್ ಬಚ್ಚನ್ ಅವರ ರೂಪ, ಕಂಠ, ಹೆಸರು, ಹಾವ-ಭಾವದ ನಕಲುಗಳನ್ನು ಯಾರೂ ಸಹ ಅನುಮತಿ ಇಲ್ಲದೆ ಬಳಸುವಂತಿಲ್ಲ. ಅಭಿಷೇಕ್ ಬಚ್ಚನ್ ಅವರು ‘ಬಾಲಿವುಡ್ ಟಿ-ಶಾಪ್’ ಹೆಸರಿನ ವೆಬ್​​ಸೈಟ್ ಒಂದರ ಮೇಲೆ ದಾವೆ ಹೂಡಿದ್ದು ತಮ್ಮ ಅನುಮತಿ ಇಲ್ಲದೆ, ತಮ್ಮ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಟಿ-ಶರ್ಟ್​ಗಳ ಮೇಲೆ, ಕಾಫಿ ಕಪ್​​ಗಳ ಮೇಲೆ ಇನ್ನೂ ಹಲವೆಡೆ ತಮ್ಮ ಚಿತ್ರಗಳನ್ನು ಅನುಮತಿ ಇಲ್ಲದೆ ಬಳಸಲಾಗಿರುವುದಾಗಿ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಯೂಟ್ಯೂಬ್ ಚಾನೆಲ್‌ನಲ್ಲಿ ಸೆಲೆಬ್ರೆಟಿ ಜೋಡಿಗಳ ವಿರುದ್ಧ ಇಲ್ಲ ಸಲ್ಲದ ಸುಳ್ಳು ಮಾಹಿತಿಗಳನ್ನು ನೀಡಲಾಗಿದೆ ಎಂದು ದೂರು ನೀಡಲಾಗಿದೆ. ಎಐ ಮೂಲಕ ವಿಡಿಯೋ, ಫೋಟೋ ಸೃಷ್ಟಿಸಲಾಗಿದೆ, ಆಡಿಯೋಗಳನ್ನು ಸೃಷ್ಟಿಸಿ ತಪ್ಪು ಮಾಹಿತಿ ನೀಡಲಾಗಿದೆ. ಈ ಮೂಲಕ ಸೆಲೆಬ್ರೆಟಿಗಳ ತೇಜೋವಧೆ ಮಾಡಲಾಗಿದೆ. ಹೀಗಾಗಿ 4 ಕೋಟಿ ರೂಪಾಯಿ ಮಾನನಷ್ಟವಾಗಿ ನೀಡುವಂತೆ ಅರ್ಜಿಯಲ್ಲಿ ಕೋರಿದ್ದಾರೆ.

ನಟ ಅಮಿತಾಬ್ ಬಚ್ಚನ್ ಅವರ ಧ್ವನಿಯ ನಕಲನ್ನು ಕೂಡ ಅನುಮತಿ ಇಲ್ಲದೆ ಜಾಹೀರಾತುಗಳಿಗೆ ಬಳಸುವುದು, ಅಮಿತಾಬ್ ಬಚ್ಚನ್​​​ರಂತೆ ಉಡುಗೆ, ಮೇಕಪ್ ಧರಿಸಿ ಶೋ ಮಾಡುವುದು ಇವೆಲ್ಲವೂ ವ್ಯಕ್ತಿತ್ವ ಹಕ್ಕಿನ ಉಲ್ಲಂಘನೆ ಆಗಿದ್ದು, ಇವುಗಳ ವಿರುದ್ಧ ಅಮಿತಾಬ್ ಬಚ್ಚನ್ ಕೂಡ ನ್ಯಾಯಾಲಯದ ಮೂಲಕ ರಕ್ಷಣೆ ಪಡೆದಿದ್ದಾರೆ.