ಹೊಸ ತಲೆಮಾರಿಗೆ ಸ್ಫೂರ್ತಿಯಾಗಿರುವ ಜೈಪುರ ಲಿಟ್ ಫೆಸ್ಟ್‌ ಪ್ರತಿ ವರ್ಷ ಜನವರಿ ಮೂರನೇ ವಾರ ನಡೆಯುತ್ತದೆ. ಅದರಂತೆ ಈ ವರ್ಷದ ಜೈಪುರ ಲಿಟ್ ಫೆಸ್ಟ್ 13 ನೇ ಆವೃತ್ತಿ ಜನವರಿ 23 ರಿಂದ 27 ರವರೆಗೆ ನಡೆಯಲಿದೆ. ಅಲ್ಲಿನ ಕೆಲವು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ನೋಡಿ!

ಪ್ರಸಂಗ-1

ಈಗ ಪ್ರಶ್ನೋತ್ತರದ ಸಮಯ. ಮೊದಲ ಆದ್ಯತೆ ಮೂವತ್ತು ವರ್ಷಕ್ಕಿಂತ ಕೆಳಗಿನವರಿಗೆ. ತರುಣ ತರುಣಿಯರು ಪ್ರಶ್ನೆ ಕೇಳಿ!

ಹಾಗಂತ ನಿರೂಪಕಿ ಘೋಷಿಸಿದಳು. ಪ್ರಶ್ನೆ ಕೇಳಲೆಂದು ಎದ್ದು ನಿಂತಿದ್ದ ಹಿರಿಯರು ಮುಖ ಸಪ್ಪಗೆ ಮಾಡಿಕೊಂಡು ಕೂತರು. ಮತ್ತೆ ಅವರು ಪ್ರಶ್ನೆ ಕೇಳಲಿಲ್ಲ. ತರುಣಿಯೊಬ್ಬಳು ಪ್ರಶ್ನೆ ಕೇಳಿದಳು.

ಪ್ರಸಂಗ-2

ಆಕೆಯ ಕೈಲಿ ಮೈಕ್‌ ಇತ್ತು. ಆಕೆ ಇನ್ನೇನು ಪ್ರಶ್ನೆ ಕೇಳಬೇಕು ಅನ್ನುವಷ್ಟರಲ್ಲಿ ನಿರೂಪಕಿ ಇದೇ ಕೊನೆಯ ಪ್ರಶ್ನೆ ಅಂದುಬಿಟ್ಟಳು. ಆಕೆಯ ಮುಂದಿನ ಸೀಟಲ್ಲಿ ತರುಣಿಯೊಬ್ಬಳು ಪ್ರಶ್ನೆ ಕೇಳಲು ಕಾಯುತ್ತಿದ್ದಳು. ಕೈಲಿ ಮೈಕ್‌ ಹಿಡಕೊಂಡಿದ್ದ ನಡುವಯಸ್ಸಿನ ಮಹಿಳೆ, ಹಾಗಿದ್ದರೆ ಆ ತರುಣಿಗೆ ಅವಕಾಶ ಕೊಡುವೆ ಎಂದು ಮೈಕನ್ನು ಆಕೆಯ ಕೈಗೆ ದಾಟಿಸಿದರು.

ಪ್ರಸಂಗ 3

ಸಂಯುಕ್ತ ಸಂಸ್ಥಾನದ ಬಹುಮುಖ್ಯ ಪ್ರಶಸ್ತಿಯೊಂದರ ಹೆಸರು ಡಿಲಾನ್‌ ಥಾಮಸ್‌ ಪ್ರೈಜ್‌. ಇದರ ಬಹುಮಾನದ ಮೊತ್ತ 30,000 ಪೌಂಡ್‌, ಸರಿಸುಮಾರು ಮೂವತ್ತು ಲಕ್ಷ ರೂಪಾಯಿ. ಈ ಪ್ರಶಸ್ತಿಯನ್ನು ಕೇವಲ 39ಕ್ಕಿಂತ ಕಡಿಮೆ ವಯಸ್ಸಿನ ಲೇಖಕರಿಗೆ ಮಾತ್ರ ಕೊಡಲಾಗುತ್ತದೆ. ಕವಿತೆ, ಕಥೆ, ಕಾದಂಬರಿ, ನಾಟಕ- ಈ ಯಾವ ಕ್ಷೇತ್ರದಲ್ಲಾದರೂ ಸರಿಯೇ, ತರುಣ ಲೇಖಕರಿಗೆ ಮಾತ್ರ ಅವಕಾಶ..

ಜೈಪುರ ಲಿಟ್‌ ಫೆಸ್ಟ್‌: ಸ್ವಾರಸ್ಯಕರ ಸಂಗತಿಗಳಿವು..!

ಸಾಹಿತ್ಯ ಜಗತ್ತು ತರುಣರತ್ತ ಮುಖ ಮಾಡುತ್ತಿದೆ. ತಾರುಣ್ಯ ಹೊಮ್ಮುವ, ಯೌವನ ಸೂಸುವ, ಬರೀ ಗೊಡ್ಡು ವೇದಾಂತ ಮತ್ತು ತತ್ವಜ್ಞಾನದಿಂದ ಹೊರತಾದ, ಕ್ರಿಯೆಯಲ್ಲಿ ನಿಜವಾಗುವ ಸಾಹಿತ್ಯದ ಹುಡುಕಾಟದಲ್ಲಿದೆ ಅಂತ ಕೆಲವರಿಗಾದರೂ ಅನ್ನಿಸುವಂತೆ ಜೈಪುರ ಸಾಹಿತ್ಯ ಸಮ್ಮೇಳನ ರೂಪಿತಗೊಂಡಿದೆ. ಇಲ್ಲಿ ಗೋಷ್ಠಿಗಳಲ್ಲಿ ಮಾತಾಡುವವರಿಂದ ಹಿಡಿದು, ಭಾಗವಹಿಸುವ ಪ್ರೇಕ್ಷಕರ ತನಕ ಬಹುತೇಕರು ತರುಣರೇ. ಅವರು ಬರೆಯುತ್ತಿರುವುದು ಈ ತಲೆಮಾರಿನ ತಲ್ಲಣಗಳ ಕುರಿತೇ.

ಅವರ ಬರಹಗಳಲ್ಲಿ ಪ್ರಧಾನವಾಗಿ ಕಾಣಿಸುವುದು ವಿಸ್ತಾರವಾದ ಜೀವನ ದರ್ಶನ ಅಲ್ಲ, ತಾವು ಕಂಡ ಬದುಕಿನ ಚಿತ್ರ. ತಮ್ಮ ಸಂಕಟ, ಭಗ್ನಪ್ರೇಮ, ನೋವು, ಜೀವನ್ಮರಣದ ಹೋರಾಟ, ರಾಜಕೀಯ ನಿಲುವು, ಪ್ರಭುತ್ವದ ಮೇಲಿನ ಸಿಟ್ಟು, ಶೂನ್ಯ, ವಿಸ್ತಾರಗಳನ್ನು ಅವರು ತಮ್ಮ ಹಸಿಹಸಿ ಮಾತುಗಳಲ್ಲಿ ಹೇಳಿಕೊಳ್ಳಬೇಕು. ಅದು ಹಾಡಾಗಿ ಬರಬೇಕು. ನಾಟಕವಾಗಬೇಕು, ಕಾದಂಬರಿಯಾಗಬೇಕು. ಕತೆಯಾಗಿ ಮೂಡಬೇಕು.

ಜೈಪುರ ಸಾಹಿತ್ಯೋತ್ಸವ ಮಾತ್ರವಲ್ಲ, ಜೈಪುರವನ್ನೇ ಮಾದರಿಯಾಗಿಟ್ಟುಕೊಂಡ ಸುಮಾರು 300 ಸಾಹಿತ್ಯೋತ್ಸವಗಳ ಕತೆಯೂ ಇದೇ. ಎಲ್ಲದರಲ್ಲೂ ಹೊಸ ಹುಡುಗರದ್ದೇ ಸುದ್ದಿ. ಜೇ ಬರ್ನಾರ್ಡ್‌ ಎಂಬ 32 ವರ್ಷದ ಬ್ರಿಟಿಷ್‌ ಹುಡುಗನ ಕಾವ್ಯ, ಚೈನೀಸ್‌-ಬ್ರಿಟಿಷ್‌ ಕವಿ 30ರ ಹರೆಯದ ಮೇರಿ ಜೀನ್‌ ಚಾನ್‌, ಚೆನ್ನೈಯ ಕವಿ 36ರ ಮೀನಾ ಕಂದಸ್ವಾಮಿ, ಈಗಷ್ಟೇ 36ಕ್ಕೆ ಕಾಲಿಟ್ಟಸ್ಕಾಟ್ಲೆಂಡಿನ ಕವಿ ಕ್ರಿಸ್ಟಿಲೋಗಾನ್‌, 35ರ ಅಂಚಲ್ಲಿರುವ ಬ್ರಿಟಿಷ್‌ ಕಾದಂಬರಿಗಾರ್ತಿ ಹೆಲೆನ್‌ ಮಾರ್ಟ್‌, ಉಕ್ರೇನಿನ ಯೆಲೀನಾ ಮಾಸ್ಕೋವಿಚ್‌, ಸರ್ಬಿಯಾದ ಕಾದಂಬರಿಗಾರ್ತಿ ಟಿಯಾ ಓಬ್ರೆಟ್‌, ಬ್ರೆಜಿಲ್‌ ಯಾರಾ ರೋಡ್ರಿಗಸ್‌ ಫೌಲರ್‌, ಐರ್ಲೆಂಡಿನ ಸ್ಟೀಫನ್‌ ಸೆಕ್ಸನ್, ಬೆಂಗಳೂರಲ್ಲಿ ಹುಟ್ಟಿ, ಈಗ ಹವಾಯಿಯಲ್ಲಿ ವಾಸಿಸುತ್ತಿರುವ ಮಾಧುರಿ ವಿಜಯ್‌, ವಿಯೆಟ್ನಾಮಿನ ಓಷಿಯನ್‌ ವೋಂಗ್‌, ನ್ಯೂಯಾರ್ಕಿನ ಬ್ರಿಯಾನ್‌ ವಾಷಿಂಗ್ಟನ್‌- ಎಲ್ಲರೂ ಮೂವತ್ತರ ಆಸುಪಾಸಿನಲ್ಲಿರುವವರೇ.

ಇವರೆಲ್ಲರೂ ಹೊಸದಾಗಿ ಬರೆಯುತ್ತಾರೆ, ಹೊಸ ಕಾಲದ್ದನ್ನೇ ಬರೆಯುತ್ತಾರೆ ಅಂತೇನಲ್ಲ. ಸ್ಟೀಫನ್‌ ಸೆಕ್ಸ$್ಟನ್‌ ತನಗಿಂತ ದಶಕಗಳ ಹಿಂದೆ ಬರೆದ ಷೀಮಸ್‌ ಹೀನಿಯ ಕಾವ್ಯಕ್ಕೆ ಉತ್ತರ ಕೊಡುತ್ತಾನೆ. ಕ್ರಿಸ್ಟಿಲೋಗಾನ್‌ 16ನೆಯ ಶತಮಾನದ ಪ್ರಸಂಗವೊಂದನ್ನು ತನ್ನ ಬರಹದಲ್ಲಿ ತರುತ್ತಾಳೆ, ಹಳೆಯ ಚಿನ್ನವನ್ನು ಕರಗಿಸಿ, ತಮಗೊಪ್ಪುವ ಹೊಸ ಒಡವೆ ಮಾಡಿಸುವಂತೆ ಎಂದು ಕನ್ನಡದ ಕವಿ ಹೇಳಿದ ಮಾತನ್ನು ಇವರೆಲ್ಲರೂ ಸಾಕ್ಷಾತ್ಕರಿಸುತ್ತಿದ್ದಾರೆ.

ಜೈಪುರ ಲಿಟ್‌ ಫೆಸ್ಟ್: ಕಂಡ, ಕೇಳಿಸಿಕೊಂಡ ಸಣ್ಣ ಕತೆಗಳು

ಇವು ಕೆಲವು ಹೆಸರುಗಳು ಮಾತ್ರ. ವಿಶ್ವ ಸಾಹಿತ್ಯದ ಸಮಕಾಲಿನ ಪುಟಗಳನ್ನು ತೆರೆದರೆ ಇಂಥ ನೂರಾರು ಹೆಸರುಗಳು, ಅವರು ಬರೆದ, ಬರೆಯುತ್ತಿರುವ ಕವಿತೆಗಳು, ಸಂಭ್ರಮಿಸುತ್ತಿರುವ ನಾಟಕ, ಓದುತ್ತಿರುವ ಕಾದಂಬರಿ, ಎದುರಾಗುತ್ತಿರುವ ಸಣ್ಣಕತೆ, ಮುಖಾಮುಖಿಯಾಗುತ್ತಿರುವ ರಾಜಕಾರಣಕ್ಕೆ ಅವರು ಸ್ಪಂದಿಸಿದ ರೀತಿ ಎಲ್ಲವೂ ಕಣ್ಣಿಗೆ ಬೀಳುತ್ತಾ ಹೋಗುತ್ತದೆ. ಕಾವ್ಯವೆಂಬುದು ಅವರಿಗೆ ಕಬ್ಬಿಣದ ಕಡಲೆಯಲ್ಲ, ಭಾಷೆಯೆಂಬುದು ಮಾತಿಗೋಸ್ಕರ ಬಳಸಿ ಎಸೆಯುವ ಪೇಪರ್‌ ನ್ಯಾಪ್‌ಕಿನ್‌ ಅಲ್ಲ, ಕಾದಂಬರಿಯೆಂಬುದು ನಿನ್ನೆ ನಾಳೆಗಳ ಕತೆಯಲ್ಲ. ಬದುಕು ಈ ಕತೆ, ಕವಿತೆ, ನಾಟಕಗಳ ಮೂಲಕವೇ ಜರಗುವ ಪವಾಡ ಎನ್ನುವುವನ್ನು ಅವರೆಲ್ಲ ಅನುಭವಿಸಿದವರಂತೆ ಕಾಣುತ್ತಾರೆ.

ಈ ಹೊಳಪು ಕಣ್ಣುಗಳ, ಹೊಸ ನುಡಿಗಟ್ಟಿನ, ನಿಶ್ಯಂಕೆಯ ನುಡಿಯ, ಗಾಢ ನಂಬುಗೆಯ ಬರಹಗಾರರಿಗೆ ಭಾಷೆಯ ಬಗ್ಗೆ ಅನುಮಾನವಿಲ್ಲ, ಭಾಷೆಯ ಮಿತಿಯೂ ಇಲ್ಲ. ಅವರು ತಮಗೆ ಗೊತ್ತಿರುವ ಭಾಷೆಯಲ್ಲಿ ಬರೆಯುತ್ತಾರೆ, ಸರಳವಾಗಿ ಬರೆಯುತ್ತಾರೆ, ದಾಟುವಂತೆ ಬರೆಯುತ್ತಾರೆ. ಅವರಿಗೆ ಪ್ರಕಾಂಡ ಪಾಂಡಿತ್ಯದಲ್ಲಿ ನಂಬಿಕೆಯಿಲ್ಲ, ವಿಮರ್ಶೆಯ ಹಂಗೂ ಇದ್ದಂತೆ ಕಾಣುವುದಿಲ್ಲ, ಕವಿತೆ ತಾನು ಮಾಡಬೇಕಾದ ಪರಿಣಾಮ ಮಾಡಿದರೆ ಸಾಕು, ಕಾದಂಬರಿ ಯಾರನ್ನು ಮುಟ್ಟಬೇಕೋ ಅವರನ್ನು ಮುಟ್ಟಿದರೆ ಸಾಕು, ಯಾರನ್ನೂ ತಲುಪದೇ ಹೋದರೂ ಪರವಾಗಿಲ್ಲ, ತನ್ನೊಳಗೆ ತರಬೇಕಾದ ಬದಲಾವಣೆಯನ್ನು ತಂದರೆ ಸಾಕು ಎಂಬ ನಿಲುವಿನಿಂದ ಬರೆಯುವ ಈ ತರುಣರಿಗೆ ಅದಮ್ಯ ಆತ್ಮವಿಶ್ವಾಸ ಮತ್ತು ಅನಿರ್ವಚನೀಯ ಭರವಸೆ.

ಈ ಸಲದ ಜೈಪುರ ಲಿಟರರಿ ಫೆಸ್ಟ್‌ ಒಂದು ಅರ್ಥದಲ್ಲಿ ಜಗತ್ತಿನ ಯಂಗೆಸ್ಟ್‌ ಲಿಟರರಿ ಫೆಸ್ಟ್‌ ಅಂತ ಕರೆಸಿಕೊಳ್ಳುವುದಕ್ಕೆ ಅರ್ಹವಾಗಿದೆ. ಪ್ರೌಢಶಾಲಾ ಮಕ್ಕಳು, ಕಾಲೇಜು ಹುಡುಗರು, ಆಗಷ್ಟೇ ಕೆಲಸಕ್ಕೆ ಸೇರಿದವರು, ಈಗಷ್ಟೇ ಬರೆಯಲು ಆರಂಭಿಸಿದವರು, ಬೇರೆ ಬೇರೆ ಊರು, ರಾಜ್ಯ, ದೇಶಗಳ ಹುಡುಗ ಹುಡುಗಿಯರು ಮಸಾಲ ಟೀ ಕುಡಿಯುತ್ತಾ, ಕವಿತೆ ಓದುತ್ತಾ, ದೂರದಲ್ಲೆಲ್ಲೋ ಬಿಸಿಲು ಕಾಯಿಸುತ್ತಾ, ಗುಂಪು ಕಟ್ಟುತ್ತಾ, ಕೇಕೆ ಹಾಕುತ್ತಾ ಇರುವ ದೃಶ್ಯ ಕಣ್ಣಿಗೆ ಕಟ್ಟುತ್ತದೆ.

ಸಂಜೆ ಮಾತಿಗೆ ಸಿಕ್ಕ ಹಿಂದಿ ಲೇಖಕ ಅಶೋಕ್‌ ವಾಜಪೇಯಿ ಪ್ರಾಸಂಗಿಕವಾಗಿ ಹೇಳಿದರು; ‘ನಮಗೆಲ್ಲ ವಯಸ್ಸಾಯಿತು ಬಿಡ್ರೀ, ನಮ್ಮನ್ನು ಕೇಳೋರೇ ಇಲ್ಲ, ಮಾತಾಡಿಸೋರೂ ಇಲ್ಲ. ಒಂದು ಫೋಟೋ ತಗಳ್ಳೋದಕ್ಕೂ ಯಾರೂ ಬರೋಲ್ಲ,’

ಅದು ಪೂರ್ತಿ ನಿಜವಲ್ಲ, ಪೂರ್ತಿ ಸುಳ್ಳೂ ಅಲ್ಲ. ಅಶೋಕ್‌ ವಾಜಪೇಯಿ ತಾರುಣ್ಯದಲ್ಲಿ ಏನು ಮಾಡಿದ್ದರೋ ಅದನ್ನು ಈಗಿನ ಹುಡುಗರು ಮಾಡುತ್ತಿದ್ದಾರೆ ಅನ್ನುವುದನ್ನು ಮಾತ್ರ ಮರೆಯುವಂತಿಲ್ಲ.

- ಜೋಗಿ