Asianet Suvarna News Asianet Suvarna News

ಜೈಪುರ ಲಿಟ್‌ ಫೆಸ್ಟ್‌: ಸ್ವಾರಸ್ಯಕರ ಸಂಗತಿಗಳಿವು..!

ಹೊಸ ತಲೆಮಾರಿಗೆ ಸ್ಪೂರ್ತಿಯಾಗಿರುವ ಜೈಪುರ ಲಿಟ್‌ ಫೆಸ್ಟ್‌ ಪ್ರತಿ ವರ್ಷ ಜನವರಿ ಮೂರನೇ ವಾರ ನಡೆಯುತ್ತದೆ. ಅದರಂತೆ ಈ ವರ್ಷದ ಜೈಪುರ ಲಿಟರರಿ ಫೆಸ್ಟಿವಲ್‌ನ 13 ಆವೃತ್ತಿಯು ಜನವರಿ 23ರಂದು ಆರಂಭವಾಗಿ ಜನವರಿ 27ರ ವರೆಗೆ ನಡೆಯಲಿದೆ. ರಾಜಸ್ಥಾನ ಹೆಮ್ಮೆಯ ಲಿಟ್‌ ಫೆಸ್ಟ್‌ನ ಮೊದಲ ದಿನದ ಸ್ವಾರಸ್ಯಗಳು ಹೀಗಿವೆ.

First Day Interesting fact of Jaipur Literature Festival 2020
Author
Bengaluru, First Published Jan 24, 2020, 5:11 PM IST

ಹೊಸ ತಲೆಮಾರಿಗೆ ಸ್ಪೂರ್ತಿಯಾಗಿರುವ ಜೈಪುರ ಲಿಟ್‌ ಫೆಸ್ಟ್‌ ಪ್ರತಿ ವರ್ಷ ಜನವರಿ ಮೂರನೇ ವಾರ ನಡೆಯುತ್ತದೆ. ಅದರಂತೆ ಈ ವರ್ಷದ ಜೈಪುರ ಲಿಟರರಿ ಫೆಸ್ಟಿವಲ್‌ನ 13 ಆವೃತ್ತಿಯು ಜನವರಿ 23ರಂದು ಆರಂಭವಾಗಿ ಜನವರಿ 27ರ ವರೆಗೆ ನಡೆಯಲಿದೆ. ರಾಜಸ್ಥಾನ ಹೆಮ್ಮೆಯ ಲಿಟ್‌ ಫೆಸ್ಟ್‌ನ ಮೊದಲ ದಿನದ ಸ್ವಾರಸ್ಯಗಳು ಹೀಗಿವೆ.

ಮಾತು-ಗೀತೆಯ ಮಧ್ಯೆ

ಬೆಳ್‌ಬೆಳಗ್ಗೆ ಫೈಜ್‌ ಅಹ್ಮದ್‌ ಫೈಜ್‌ರನ್ನು ತುಂಬ ಮೆಚ್ಚುವ ನಿರಾಲಿ ಕಾರ್ತಿಕ್‌ ಸಂಗೀತವಿತ್ತು. ಅವರು ಅಲಾಪನೆ ಮಾಡುತ್ತಿದ್ದರೆ, ಎದುರಿಗೆ ಮಂದಿ ಓಡಾಡುತ್ತಾ ಗದ್ದಲ ಮಾಡುತ್ತಿದ್ದರು. ಅದು ತೀರಾ ಅತಿಯಾದಾಗ, ನಿರಾಲಿ ಹಾಡು ನಿಲ್ಲಿಸಿ, ದಯವಿಟ್ಟು ಬೇರೆಲ್ಲಾದರೂ ಹೋಗಿ ಮಾತಾಡಿಕೊಳ್ಳಿ, ನಿಮ್ಮಿಂದ ನನಗೆ ತೊಂದರೆಯಾಗುತ್ತಿದೆ ಎಂದು ಕೈ ಮುಗಿದು ಕೇಳಿಕೊಂಡರು. ಅವರ ಮಾತಿಗೆ ಹಿಂದಿನ ಸಾಲುಗಳಲ್ಲಿ ಕುಳಿತು ಸಂಗೀತ ಕೇಳುತ್ತಿದ್ದ ಮಂದಿ ಚಪ್ಪಾಳೆ ತಟ್ಟಿದರು. ಮುಂದಿನ ಸಾಲುಗಳಲ್ಲಿ ನಿಂತು ಮಾತಾಡುತ್ತಿದ್ದವರು ಅರೆಕ್ಷಣ ಮಾತು ನಿಲ್ಲಿಸಿ, ಗೌರವ ಸೂಚಿಸಿ, ಮತ್ತೆ ಮಾತು ಆರಂಭಿಸಿದರು. ನಿರಾಲಿ ಆಲಾಪ ಶುರುಮಾಡಿದರು.

ಜೈಪುರದ ಅರಮನೆ ಪ್ರವಾಸಿಗರಿಗೆ ಮುಕ್ತ, ನೀವೂ ಆಗಿ ಏಕ್ ದಿನ್ ಕಾ ಸುಲ್ತಾನ್

ಚರಿತ್ರೆಯ ಪುಸ್ತಕಗಳಿಗೆ ಬೇಡಿಕೆ

ಈ ಸಲದ ಫೆಸ್ಟಿವಲ್ ಅಂಗಳದಲ್ಲಿ ಅನೇಕ ಲೇಖಕರು ಚರಿತ್ರೆಯ ಘಟನೆಗಳನ್ನಿಟ್ಟುಕೊಂಡು ಕಾದಂಬರಿ ರಚಿಸಿದ್ದು ಕಂಡುಬಂತು. ಹಿಂದಿನ ವರ್ಷ ಪುರಾಣಗಳನ್ನು ಹಿಂದಿಟ್ಟುಕೊಂಡು ಬಂದ ಕಾದಂಬರಿಗಳ ಸುರಿಮಳೆಯಿತ್ತು. ಈ ವರ್ಷದ ಬೆಳೆ ಇತಿಹಾಸದಿಂದ ಹೆಕ್ಕಿದ್ದಾಗಿತ್ತು. ಮಣಿಮುಗ್ಧ ಶರ್ಮ ಮೊಘಲರ ಕುರಿತು ಬರೆದ ಅಲ್ಲಾಹು ಅಕ್ಬರ್‌ ಕೃತಿ ಕಾದಂಬರಿಯಲ್ಲದೇ ಹೋದರೂ ಕಾದಂಬರಿಯಂತೆ ಓದಿಸಿಕೊಳ್ಳುವ ಕೃತಿ. ಅಕ್ಬರ್‌ ಹೇಗೆ ಹಿಂದುಪರವಾಗಿದ್ದ, ಹಿಂದು ಧರ್ಮಕ್ಕೆ ಸೇರಿದ ಹೆಣ್ಣನ್ನು ಮದುವೆಯಾದ ನಂತರ ಸೂರ್ಯನ ಆರಾಧನೆ ಮಾಡುತ್ತಿದ್ದ, ಸಂಸ್ಕೃತ ಶ್ಲೋಕ ಪಠಿಸುತ್ತಿದ್ದ, ಧರ್ಮಾತೀತನಾಗಿದ್ದ ಮುಂತಾದ ಅಂಶಗಳನ್ನೆಲ್ಲಾ ಬಿಸಿಬಿಸಿ ಚರ್ಚೆಯಲ್ಲಿ ಶ್ರೋತೃಗಳು ಕೇಳಿಸಿಕೊಂಡರು. ಅಂಥ ಮಾತುಕತೆಗೆ ಹೆಸರಾದ ವಿಲಿಯಂ ಡಾರ್ಲಿಂಪಲ… ಮತ್ತು ಸುಪ್ರಿಯಾ ಗಾಂಧಿ ಚರ್ಚಿಸಿದರು.

ಗಾಳಿಯಲ್ಲಿ ಗುಂಡು ಮದ್ದು

ಸಂವಾದ ವೇದಿಕೆಯಿಂದ ಗುಂಡಿನ ಸದ್ದು ಕೇಳಿಬರುತ್ತಲೇ ಇತ್ತು. ವಿಶಾಲ್ ಭಾರದ್ವಾಜ್‌ ಸಿನಿಮಾಗಳ ಹಾಗೆ ತುಂಬ ಒರಟೊರಟಾದ ಮಾತುಗಳು ಕೇಳಿ ಬರುತ್ತಿದ್ದವು. ಈ ಜಗತ್ತಿನಲ್ಲಿ ಹತ್ತು ಶೇಕಡಾ ಸಂಪತ್ತು ತೊಂಬತ್ತೊಂಬತ್ತು ಶೇಕಡಾ ಮಂದಿಯ ಬಳಿಯಿದೆ. ತೊಂಬತ್ತು ಪರ್ಸೆಂಟ್‌ ಸಂಪತ್ತು ಒಂದು ಶೇಕಡಾ ಮಂದಿಯ ಕೈಲಿದೆ. ಅವರು ಹೇಗೋ ಮಾಡಿ ಅದನ್ನು ಉಳಿಸಿಕೊಳ್ಳುತ್ತಿರುತ್ತಾರೆ ಅನ್ನುವ ಮಾತುಗಳು ಬರುತ್ತಿದ್ದವು.

ಅಂಥ ಮಾತಾಡಿದವರು ಆಟೋ ಡ್ರೈವರ್‌, ಮಾಜಿ ನಕ್ಸಲೈಟ್‌, ಬಾಂಗ್ಲಾದೇಶದ ನಿರ್ವಸಿತ, ಸಮಾಜೋ-ರಾಜಕೀಯ ಹೋರಾಟಗಾರ, ನೆಲಕ್ಕೆ ಬಿದ್ದವರ ಭರವಸೆಯ ದನಿ ಮನೋರಂಜನ್‌ ಬೈಪಾರಿ. 24ನೇ ವರ್ಷಕ್ಕೆ ಜೈಲಿನಲ್ಲಿದ್ದಾಗ ಬರೆಯಲು ಕಲಿತ ಬೈಪಾರಿ, ಬೆಂಗಾಲಿಯ ಬಹುಜನಪ್ರಿಯ ದಲಿತ ಲೇಖಕ. ಗಾಳಿಯಲ್ಲಿ ಗನ್‌ ಪೌಡರ್‌ ಇದೆ ಕಾದಂಬರಿಗೆ ಬೈಪಾರಿ ಅನೇಕ ಪ್ರಶಸ್ತಿ ಪಡಕೊಂಡಿದ್ದಾರೆ. ಹಾಗಂತ ಅವರ ಗೋಷ್ಠಿಯೇನೂ ತುಂಬಿ ತುಳುಕುತ್ತಿರಲಿಲ್ಲ. ಅಲ್ಲಿ ತರುಣ ತರುಣಿಯರ ಸಂಖ್ಯೆಯೇ ಹೆಚ್ಚಿತ್ತು.

ಮಕ್ಕಳ ಸಾಹಿತ್ಯ ಸಂಭ್ರಮ

ಸಮ್ಮೇಳನದ ತುಂಬ ಎಂಟರಿಂದ ಹನ್ನೆರಡು ವರ್ಷದ ಅಸಂಖ್ಯಾತ ಮಕ್ಕಳು ದಾರಿತಪ್ಪಿದಂತೆ ಅಲೆದಾಡುತ್ತಿದ್ದರೆ, ಅವರನ್ನು ಸ್ಕೂಲುಗಳಿಂದ ಕರೆದುಕೊಂಡ ಬಂದ ಶಿಕ್ಷಕ-ಶಿಕ್ಷಕಿಯರು ಅವರಿಗೆ ದಾರಿ ತೋರಿಸಲು ಹೆಣಗಾಡುತ್ತಿದ್ದರು. ಸಾಲಾಗಿ ನಿಲ್ಲಿಸಿ, ಅವರನ್ನು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ರೈಲಿನಂತೆ ಒಯ್ಯುತ್ತಿದ್ದರು. ಈ ಮಕ್ಕಳನ್ನು ಯಾಕೆ ಕರೆದುಕೊಂಡು ಬಂದಿರುವಿರಿ ಎಂಬ ಪ್ರಶ್ನೆಗೆ ಶಿಕ್ಷಕರೊಬ್ಬರು ಹೇಳಿದ್ದು ಹೀಗೆ: ಮಕ್ಕಳು ಓದುವುದನ್ನಂತೂ ಬಿಟ್ಟಿದ್ದಾರೆ. ಅವರ ತಲೆಗೆ ನಾವು ಪಠ್ಯ ಪುಸ್ತಕ ತುಂಬುತ್ತಿದ್ದೇವೆ. ಇಂಥ ಜಾಗಗಳಿಗೆ ಆಗಾಗ ಬಂದರೆ ಅವರ ಕಿವಿಗೆ ನಾಲ್ಕಾರು ಲೇಖಕರ ಹೆಸರಾದರೂ ಬೀಳುತ್ತದೆ. ಇಂಥದ್ದೊಂದು ಜಗತ್ತು ಇದೆ ಅಂತ ಗೊತ್ತಾಗುತ್ತದೆ. ಹೀಗಾಗಿ ವರ್ಷಕ್ಕೊಮ್ಮೆ ನಮ್ಮದೇ ಖರ್ಚಲ್ಲಿ ಒಂದೈವತ್ತು ಮಕ್ಕಳನ್ನು ಕರೆದುಕೊಂಡು ಬರುತ್ತಲೇ ಇದ್ದೇನೆ. ಇದು ಹದಿಮೂರನೇ ವರ್ಷ. ಮಕ್ಕಳು ಲಿಟ್‌ ಫೆಸ್ಟಿನ ಉದ್ದಕ್ಕೂ ರೈಲು ಬಿಡುತ್ತಲೇ ಇದ್ದರು. ಅನೇಕ ಲೇಖಕರು ಬಿಡುವ ರೈಲಿಗಿಂತ ಅದು ಚೆನ್ನಾಗಿತ್ತು!

ಮೊಬೈಲ್‌ ಸಾಹಿತ್ಯದ ಮಾಯೆ

ಎಂಥಾ ಗಂಭೀರ ಗೋಷ್ಠಿಗಳಿದ್ದರೂ ಹಾಸ್ಯದ ಹೊನಲಿದ್ದರೂ ಮೊಬೈಲು ಹಿಡಕೊಂಡವರ ಸಾಹಿತ್ಯವೇ ಬೇರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೆಟ್‌ವರ್ಕ್ ಚೆನ್ನಾಗಿತ್ತು, ಮೊಬೈಲ… ಬಳಕೆಯೂ ಅತಿಯಾಗಿತ್ತು. ಭಾಷಣದ ಉದ್ದಕ್ಕೂ ಫೋಟೋ ತೆಗೆಯುವ, ರೆಕಾರ್ಡ್‌ ಮಾಡಿಕೊಳ್ಳುವ, ಸೆಲ್ಫೀ ತೆಗೆಯುವವರ ಸಂಖ್ಯೆಯೇ ಹೆಚ್ಚಿತ್ತು. ಭಾಷಣಕಾರರಿಗೂ ಅದರ ಬಗ್ಗೆ ಯಾವ ತಕರಾರೂ ಇದ್ದಂತಿರಲಿಲ್ಲ. ಕೇಳಿದರೆ ಕೇಳಿ, ಬಿಟ್ಟರೆ ಬಿಡಿ ಎಂಬಂತೆ ಅವರು ತಾವು ಹೇಳಬೇಕಾದ್ದನ್ನು ಹೇಳುತ್ತಿದ್ದರು. ಯಾವ ಗೋಷ್ಠಿಯಲ್ಲಿ ಯಾರೊಬ್ಬರೂ ಮೊಬೈಲ್‌ ಬಳಕೆಯಿಂದ ಸಾಹಿತ್ಯದ ಓದಿಗೆ ಕುಂದುಂಟಾಗಿದೆ ಅಂತ ಹೇಳಲಿಲ್ಲ.

ಜೈಪುರ ಸಾಹಿತ್ಯ ಸಮ್ಮೇಳನದ ವಿಶೇಷತೆಗಳಿವು

ಖಾಲಿ ಕುರ್ಚಿ, ಭಾಷಣ ಭರ್ತಿ

ಇಲ್ಲೂ ಖಾಲಿ ಕುರ್ಚಿ, ಭರ್ಜರಿ ಮಾತುಗಳಿಗೆ ಬರವಿರಲಿಲ್ಲ. ಕೆಲವೊಂದು ಗೋಷ್ಠಿಗಳಿಗೆ ಪ್ರೇಕ್ಷಕರೇ ಇರಲಿಲ್ಲ. ಕೆಲವು ಅತ್ಯಂತ ಆಸಕ್ತಿಕರ ಗೋಷ್ಠಿಗಳು ಕೂಡ ಜನಾಕರ್ಷಣೆಯಿಲ್ಲದೆ ಮಂಕಾದವು. ಎಲ್ಲೆಲ್ಲಿ ವಿವಾದವಾಗುತ್ತದೆ ಎನ್ನುವ ನಿರೀಕ್ಷೆಯಿತ್ತೋ ಅಲ್ಲಿ ಕಿಕ್ಕಿರಿದು ಸೇರಿದ್ದ ಮಂದಿ, ಅಂಥದ್ದೇನೂ ನಡೆಯದೇ ಇದ್ದಾಗ ನಿರಾಶೆಯಿಂದ ಎದ್ದು ಬರುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಜೈಪುರ ಲಿಟ್‌ ಫೆಸ್ಟ್‌ ವಿವಾದಗಳಿಂದ ದೂರ ಉಳಿಯಲು ನಿರ್ಧರಿಸಿದಂತಿದೆ. ಮಾತಿನ ಮಧ್ಯೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಮನ್‌ ಕೀ ಬಾತ್‌ ಅಲ್ಲ, ಕಾಮ… ಕೀ ಬಾತ್‌ ಮುಖ್ಯ ಅಂತ ಹೇಳಿದ್ದು ಬಿಟ್ಟರೆ, ಮತ್ಯಾವುದೋ ಭರ್ಚಿಯಂಥ ಹೇಳಿಕೆಗಳು ಬರಲಿಲ್ಲ.

ತಿಂಡಿಪೋತರ ಸ್ವರ್ಗ ಈ ಫೆಸ್ಟ್‌

ಲಿಟ್‌ ಫೆಸ್ಟ್‌ ಅಂಗಳದ ತುಂಬ ಜೈಪುರದ ಸ್ಪೆಷಲ್ ಚಹಾದಿಂದ ಹಿಡಿದು ಚಾಟ್‌ಗಳ ತನಕ ವಿವಿಧ ತಿಂಡಿಗಳ ಅಂಗಡಿಗಳಿದ್ದವು. ಆ ಅಂಗಡಿಗಳನ್ನು ಕೂಡ ಕಲಾತ್ಮಕವಾಗಿ ಹಾಕಿದ್ದರಿಂದ ಸಮ್ಮೇಳನದ ವೇದಿಕೆಯ ಪಕ್ಕದಲ್ಲಿದ್ದರೂ ಅವರಿಂದ ಯಾವ ತೊಂದರೆಯೂ ಆಗಲಿಲ್ಲ. ಭಾಷಣಕ್ಕಿಂತ ಹೆಚ್ಚು ಮಂದಿ ಟೀ ಅಂಗಡಿಗಳ ಮುಂದೆಯೇ ಸೇರಿ ಚಾಯ್ ಪೆ ಚರ್ಚಾ ನಡೆಸುತ್ತಿದ್ದರು.

ಕ್ಯಾಷ್‌ಲೆಸ್‌ ವಹಿವಾಟನ್ನು ಜೈಪುರ ಲಿಟ್‌ ಫೆಸ್ಟ್‌ ಅಂಗಳ ಅಕ್ಷರಶಃ ಜಾರಿಗೆ ತಂದಂತಿತ್ತು. ಹೀಗಾಗಿ ಇಲ್ಲಿ ಪ್ರತಿಯೊಂದು ವಸ್ತುವಿಗೂ ಕಾರ್ಡ್‌ ಅಥವಾ ಫೋನ್‌ ಪೇ ಮಾತ್ರ ಖರೀದಿ ವಿಧಾನವಾಗಿತ್ತು. ದುಡ್ಡು ತಂದವರಿಗೆ ಬ್ರೆಡ್ಡು ಸಿಗುವುದಿಲ್ಲ ಅನ್ನುವ ಗಾದೆ ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಲಿಟ್‌ ಫೆಸ್ಟ್‌ ಪಣತೊಟ್ಟಂತಿತ್ತು. ಹೀಗಾಗಿ ಕಾರ್ಡಿಲ್ಲದ ಬಡವರು, ದುಡ್ಡು ಹಿಡಕೊಂಡು ಅಲ್ಲಿಂದಿಲ್ಲಿಗೆ ಅಲೆಯುತ್ತಿದ್ದರು. ನಿಧಾನಕ್ಕೆ ಕಾಸನ್ನು ಕಾರ್ಡು ಮಾಡಿಕೊಡುವ ವಿಭಾಗವೂ ತೆರೆದುಕೊಂಡಿತು.

ಜೈಪುರ ಸಮ್ಮೇಳನದಲ್ಲಿ ಮೋಡಿ ಮಾಡಿದ ಕನ್ನಡಿಗ

ಆ ಬೇಂದ್ರೆ ಈ ಬೇಂದ್ರೆ!

ಕನ್ನಡದಲ್ಲಿ ಪ್ರೀತ್ಸೇ ಚಿತ್ರದಲ್ಲಿ ನಟಿಸಿ, ಯಾರಿಟ್ಟರೀ ಚುಕ್ಕಿ ಹಾಡಿನಿಂದ ಪ್ರಸಿದ್ಧರಾದ ಸೋನಾಲಿ ಬೇಂದ್ರೆ ಈಗ ಲೇಖಕಿ ಕೂಡ ಹೌದು. ಮಕ್ಕಳನ್ನು ಬೆಳೆಸುವುದು ಹೇಗೆ ಅನ್ನುವ ಪುಸ್ತಕ ಬರೆದು ರಾತ್ರೋರಾತ್ರಿ ಪ್ರಸಿದ್ಧರಾದ ಸೋನಾಲಿ, ತಮ್ಮದೇ ಒಂದು ಆನ್‌ಲೈನ್‌ ಬುಕ್‌ ಕ್ಲಬ್‌ ಕೂಡ ಆರಂಭಿಸಿದ್ದಾರೆ. ಸೋನಾಲಿ ಬುಕ್‌ ಕ್ಲಬ್‌ ಎಂದೇ ಹೆಸರಾಗಿರುವ ಆ ಕ್ಲಬ್ಬಿನ ಸದಸ್ಯರಿಗೆ ಯಾವ ಪುಸ್ತಕ ಓದಬೇಕು ಅನ್ನುವುದನ್ನು ಸೋನಾಲಿ ಬೇಂದ್ರೆ ಸೂಚಿಸುತ್ತಾರೆ.

ನಟನೆಯಿಂದ ಇದ್ದಕ್ಕಿದ್ದಂತೆ ಪುಸ್ತಕದ ಸಹವಾಸಕ್ಕೆ ಸೋನಾಲಿ ಬೇಂದ್ರೆ ಬಿದ್ದಿದ್ದಕ್ಕೂ ಕಾರಣಗಳಿವೆ. ಸೋನಾಲಿಗೆ ಕ್ಯಾನ್ಸರ್‌ ಅಂತ ಅವರ ವೈದ್ಯರು ಹೇಳಿದಾಗ, ಮುಂದೇನು ಅಂತ ಚಿಂತೆ ಮಾಡದೇ, ಬಂದಿದ್ದೆಲ್ಲ ಬರಲಿ ಅಂತ ದಿಟ್ಟವಾಗಿ ಅದನ್ನು ಎದುರಿಸಿದ ಸೋನಾಲಿ, ಪುಸ್ತಕಗಳ ಮೊರೆ ಹೋಗುತ್ತಾರೆ. ಮತ್ತೆ ಓದಲು ಶುರುಮಾಡುತ್ತಾರೆ.

ತಮ್ಮ ಹಾಗೆಯೇ ಅನೇಕರು ಇದ್ದಾರೆ, ಅವರು ಒಂಟಿಯಾಗಿದ್ದಾರೆ ಅಂತ ಗೊತ್ತಾಗಿ ಅವರಿಗೂ ಪುಸ್ತಕ ಓದಿಸಲು ಶುರುಮಾಡುತ್ತಾರೆ. ‘ನಾನು ಮೂಲತಃ ಓದುಗಳು. ಸಿನಿಮಾ ಸೆಟ್ಟಿಗೆ ಪುಸ್ತಕ ತಂದು ಓದುತ್ತಿದ್ದೆ. ಆದರೆ ನಾನು ಓದುತ್ತಿದ್ದೆ ಅಂತ ಯಾವ ಪತ್ರಕರ್ತರೂ ಬರೆಯುತ್ತಿರಲಿಲ್ಲ. ನಮ್ಮ ಅಫೇರುಗಳ ಬಗ್ಗೆ ಮಾತ್ರ ಮಾಧ್ಯಮಗಳಿಗೆ ಆಸಕ್ತಿ. ಓದು ಅವರಿಗೆ ಹೆಡ್‌ಲೈನ್‌ ಅಲ್ಲ’ ಅನ್ನುವ ಸೋನಾಲಿ ಇನ್ನೊಂದಷ್ಟುಪುಸ್ತಕ ಬರೆಯುವ ಹುರುಪಲ್ಲಿದ್ದಾರೆ.

ನಂದಿತಾ ದಾಸ್‌ ಕ್ಯಾಪಿಟಲ್‌

ಲಿಟ್‌ ಫೆಸ್ಟ್‌ ಕೊನೆಯ ಗೋಷ್ಠಿಯಲ್ಲಿ ಮಾತಾಡಿದ್ದು ನಂದಿತಾ ದಾಸ್‌. ಮಾಂಟೋ ಬಗ್ಗೆ ಸಿನಿಮಾ ಮಾಡಿದ ನಂದಿತಾ ಅದರ ಕುರಿತು ಮಾತಾಡುತ್ತಲೇ, ನಮ್ಮನ್ನು ಒಡೆಯುತ್ತಿರುವ ಶಕ್ತಿಗಳ ವಿರುದ್ಧ ಸಿಟ್ಟಾದರು. ನಂದಿತಾ ಹೇಳಿದ್ದಿಷ್ಟು:

1.ನಾನು ಸಿಟ್ಟು ಕಡಿಮೆ ಮಾಡಿಕೊಂಡಿದ್ದೇನೆ. ಅದರ ಅರ್ಥ ನನ್ನ ಹೋರಾಟ ಕಮ್ಮಿಯಾಗಿದೆ ಅಂತ ಅಲ್ಲ.

2. ಸೆನ್ಸಾರ್‌ ಅಪಾಯಕಾರಿ. ಅದಕ್ಕಿಂತ ನಮ್ಮನ್ನು ನಾವೇ ಸೆನ್ಸಾರ್‌ ಮಾಡುವುದು ಮತ್ತಷ್ಟುಅಪಾಯಕಾರಿ. ಎಷ್ಟೋ ಸಲ ಯಾರೇನು ಅನ್ನುತ್ತಾರೋ, ಮುಂದೇನಾಗುತ್ತದೋ ಅಂತ ನಾವು ಹೇಳಬೇಕಾದ್ದನ್ನು ಹೇಳೋದಿಲ್ಲ. ಅದು ಸರ್ಕಾರದ ಸೆನ್ಸಾರಿಗಿಂತ ಭಯಾನಕ.

3.ನಮಗೆ ಸ್ಪಷ್ಟತೆ ಮತ್ತು ಧೈರ್ಯ ಇದ್ದರೆ ಮಾತಾಡಲೇಬೇಕು. ಧೈರ್ಯದಿಂದ ಧೈರ್ಯವೇ ಹುಟ್ಟುತ್ತದೆ.

4. ಕಲೆಯನ್ನು ಮೂಲಭೂತವಾದಿಗಳು ವಿರೋಧಿಸುತ್ತಾರೆ. ಹಾಗೆ ವಿರೋಧಿಸುವ ಮೂಲಕ ಕಲೆ ಎಷ್ಟುಮುಖ್ಯವಾದದ್ದು ಎನ್ನುವುದನ್ನು ಅವರೇ ಜಗತ್ತಿಗೆ ಹೇಳುತ್ತಾ ಇದ್ದಾರೆ.

5. ನೀವೊಂದು ಸಿನಿಮಾ ನೋಡುತ್ತೀರಿ ಅಂತಿಟ್ಟುಕೊಳ್ಳಿ. ಏನನ್ನಿಸಿತು ಅಂತ ಕೇಳಿದರೆ ಸಿನಿಮಾ ಬಗ್ಗೆ ಹೇಳುವುದಕ್ಕಿಂತ ಹೆಚ್ಚಾಗಿ ನಿಮ್ಮ ಕುರಿತೇ ಹೇಳುತ್ತೀರಿ. ಅಂದರೆ ಕಲೆ ಸಾಹಿತ್ಯ ನಮ್ಮ ಬಗ್ಗೆ ನಾವು ಯೋಚಿಸುವಂತೆ ಮಾಡುತ್ತವೆ.

- ಜೋಗಿ 

Follow Us:
Download App:
  • android
  • ios