Asianet Suvarna News Asianet Suvarna News

ಪಿಟೀಲು ಚೌಡಯ್ಯನವರ ರಸಪ್ರಸಂಗಗಳು!

ಟಿ. ಚೌಡಯ್ಯನವರ 125ನೇ ಜಯಂತಿ ಮಹೋತ್ಸವದ ಸಂದರ್ಭದಲ್ಲಿ ಡಾ. ಟಿ.ಸಿ. ಪೂರ್ಣಿಮಾ ಅವರು ತಮ್ಮ ದೊಡ್ಡಪ್ಪನ ಸಾಧನೆಯ ಕತೆಯನ್ನು ದಾಖಲಿಸಿದ್ದಾರೆ. ನಾದನಕ್ಷತ್ರ ಕನ್ನಡನಾಡಿನ ಅಪೂರ್ವ ಸಂಗೀತರತ್ನ ಪಿಟೀಲು ಟಿ. ಚೌಡಯ್ಯನವರ ಚರಿತೆಯನ್ನು ಸೊಗಸಾಗಿ ಕಟ್ಟಿಕೊಟ್ಟಿದೆ. ಅದರಿಂದ ಆಯ್ದ ಕೆಲವು ಸ್ವಾರಸ್ಯಕರ ಪ್ರಸಂಗಗಳು ಇಲ್ಲಿವೆ.

Interesting Facts About Violin Maestro Pitilu Chowdiah vcs
Author
Bangalore, First Published Apr 11, 2021, 9:23 AM IST

ಹತ್ತು ಶಾಲು ಕೊಡ್ತೀನಿ ಬಾ

ಚೌಡಯ್ಯನವರು ದೂರಪ್ರಯಾಣ ಹೊರಟಿದ್ದರು. ಅದೇ ಹಳೆ ಕಾರು ಮತ್ತು ಜೊತೆಗೆ ಶಿಷ್ಯ ಸುಂದರರಾಜ ಅಯ್ಯಂಗಾರ್‌. ಜನರಹಿತ ಪ್ರದೇಶದಲ್ಲಿ ಕಾರಿಗೆ ಸುಸ್ತಾಯಿತು. ಮೊಂಡು ಹಿಡಿದು ನಿಂತಿತು.

ಚೌಡಯ್ಯನವರೇ ಬ್ಯಾನೆಟ್‌ ಎತ್ತಿ ಏನೇನೋ ನೋಡಿದರು. ಮೈ ಕೈ ಮಸಿ ಮಾಡಿಕೊಂಡು ತಿಣುಕಿದ ಮೇಲೆ ಕಾರ್ಬೊರೇಟರ್‌ಗೆ ಪೆಟ್ರೋಲ್‌ ತಲುಪುತ್ತಿಲ್ಲ ಎಂದು ದೋಷ ಹುಡುಕಿದರು. ಸರಿ. ಈಗೇನು ಮಾಡಬೇಕು? ಹೇಗಾದರೂ ಸರಿ ಕಾರ್ಬೊರೇಟರ್‌ಗೆ ಪೆಟ್ರೋಲ್‌ ಕಾಣಿಸಬೇಕು.

ಅತ್ತಿತ್ತ ನೋಡಿದರು. ಪೆಟ್ರೋಲನ್ನು ತೆಗೆದು ಕಾರ್ಬೊರೇಟರ್‌ ಮೇಲೆ ಸುರಿಯುವಂಥದ್ದು ಏನೂ ಕಾಣಿಸಲಿಲ್ಲ. ಶಿಷ್ಯನತ್ತ ನೋಡಿದರು. ’ಐಯ್ಯಂಗಾರಿ, ಬಾ ಇಲ್ಲಿ’ ಎಂದು ಕರೆದರು. ’ಎಲ್ಲಿ ನಿನ್ನ ಶಾಲು ಕೊಡು ಇಲ್ಲಿ’ ಅಂದರು. ಶಿಷ್ಯನಿಗೆ ಯಾಕೆಂದು ಗೊತ್ತಾಗಲಿಲ್ಲ, ಅವರ ಮಸಿ ಮೆತ್ತಿದ ಕೈಗೆ ತಮ್ಮ ತೆಂಗಿನ ಹೋಳಿನಷ್ಟುಶುಭ್ರವಾದ ಶಾಲು ಕೊಡಲು ಸ್ವಲ್ಪ ಅಸಮಾಧಾನವೂ ಆಯಿತು. ಆದರೂ ಕೊಟ್ಟರು.

ಚೌಡಯ್ಯನವರು ಅದನ್ನು ಟ್ಯಾಂಕ್‌ನಲ್ಲಿದ್ದ ಪೆಟ್ರೋಲ್‌ಗೆ ಅದ್ದಿ ನೆನೆಸಿಕೊಂಡು ಕಾರ್ಬೊರೇಟರ್‌ ಮೇಲೆ ಹಿಂಡಿ ಅದನ್ನೂ ನೆನೆಸಿದರು. ಕಾರು ಚಲಾಯಿಸಿದರು. ಅದು ಒಂದಿಷ್ಟುದೂರ ಸಾಗಿ ನಿಂತಿತು. ಮತ್ತೆ ಶಾಲು, ಪೆಟ್ರೋಲು, ಸಾಗಾಟ, ನಿಲುಗಡೆ. ಹೀಗೆ ಇಷ್ಟಿಷ್ಟೇ ದೂರ, ಅದೇ ಶಾಲು ಹಿಂಡುವ ಪ್ರಕ್ರಿಯೆ. ಕಾರನ್ನು ಸಾಗಿಸಿಕೊಂಡು ಕಛೇರಿ ಸ್ಥಳ ತಲುಪಿ, ಶಾಲುವನ್ನು ಶಿಷ್ಯನ ಕೈಗೆ ಕೊಟ್ಟರು. ತನ್ನ ಶಾಲಿಗಾಗಿರುವ ಅನ್ಯಾಯ ನೋಡಿ ಶಿಷ್ಯನಿಗೆ ಹೇಳಿಕೊಳ್ಳಲಾರದ ದುಃಖವಾಯಿತು. ಗುರುವಿನ ಮುಖ ನೋಡಿದರು. ಅದರ ಆಳವನ್ನರಿತ ಗುರು’ಇರಲಿ ಬಾರಯ್ಯಾ, ಮೈಸೂರಿಗೆ ಹೋದ ಮೇಲೆ ಇಂಥ ಹತ್ತು ಶಾಲು ಕೊಡ್ತೀನಿ ಬಾ. ಕಛೇರಿಗೆ ಹೊತ್ತಾಯ್ತು’ ಎಂದು ಬೆನ್ನು ತಟ್ಟಿಮುನ್ನಡೆದರು.

'ಭರವಸೆ' ಕರ್ನಾಟಕದ  ಭಿನ್ನ ಭಿನ್ನ ಕನ್ನಡ ಒಂದೇ ಹಾಡಿನಲ್ಲಿ! 

ಹಿತ್ತಾಳೆ ಕಿವಿ ಮತ್ತು ಮರುಗುವ ಮನಸ್ಸು

1946-47ರ ಸಮಯ. ಎಂ ಎಂ ಅಂಡ್‌ ಸನ್ಸ್‌ನ ಪ್ರಸಿದ್ಧ ವ್ಯಾಪಾರಿ ಮುನಿವೆಂಕಟಪ್ಪನವರ ಮನೆಯಲ್ಲೊಂದು ಮದುವೆ ಸಮಾರಂಭ. ಆರತಕ್ಷತೆಗೆ ವಿ.ಶಡಗೋಪನ್‌ ಕಛೇರಿ. ಚೌಡಯ್ಯನವರ ಪಿಟೀಲು, ಮೃದಂಗದಲ್ಲಿ ವೀರಭದ್ರಯ್ಯ. ಆಗಷ್ಟೇ ಬೆಳಕಿಗೆ ಬರುತ್ತಿದ್ದ ಮಂಜುನಾಥ್‌ ಅವರಿಗೆ ಚೌಡಯ್ಯನವರ ಜೊತೆ ಘಟ ನುಡಿಸುವ ಅದಮ್ಯ ಆಸೆ.

ಚೌಡಯ್ಯನವರದು ಗೊತ್ತಲ್ಲ, ಹಿತ್ತಾಳೆ ಕಿವಿ ಅದನ್ನು ಬಳಸಿಕೊಂಡು ಮಂಜುನಾಥನ ವಿರುದ್ಧ ಯಾರೊ ಅವರ ಕಿವಿ ಊದಿಬಿಟ್ಟಿದ್ದರು. ಮಂಜುನಾಥ್‌ ಹೆಸರು ಕೇಳಿದರೂ ಇವರು ಕನಲಿ ಹೋಗುವಂತೆ ಮಾಡಿಬಿಟ್ಟಿದ್ದರು.

ಇದೇ ಸಂದರ್ಭದಲ್ಲಿ ಮಂಜುನಾಥ್‌ ಎಂಪೈರ್‌ ಫೋಟೋ ಸ್ಟೂಡಿಯೋದ ಗುರಪ್ಪನವರ ಹತ್ತಿರ ತಮ್ಮ ಮನದಾಸೆ ಹೇಳಿಕೊಂಡರು. ’ಸಂಜೆ ಆರೂವರೆಗೆ ಕಛೇರಿ ಇದೆ. ತಾವು ಚೌಡಯ್ಯನವರೊಂದಿಗೆ ನುಡಿಸುವಂತೆ ಮಾಡಿ’ ಎಂದು ಕೇಳಿಕೊಂಡÜರು.

ಗುರಪ್ಪನವರು ಚೌಡಯ್ಯನವರ ತಂಗುದಾಣವಾಗಿದ್ದ ಮಲಬಾರ್‌ ಲಾಡ್ಜ್‌ಗೆ ತೆರಳಿ ತಮಗೆ ಪರಿಚಯವಿರುವ ಅನಾರೋಗ್ಯ ಪೀಡಿತರಾದ ಹಿರಿಯರೊಬ್ಬರು ಕಛೇರಿಗೆ ಬರುತ್ತಿದ್ದಾರೆ. ಅವರು ಘಟವಾದ್ಯವನ್ನು ಕೇಳುವ ಬಯಕೆ ವ್ಯಕ್ತಪಡಿಸುತ್ತಿದ್ದಾರೆ. ತಾವು ಮನಸ್ಸು ಮಾಡಿದರೆ ಅದು ನೆರವೇರೀತು ಎಂದು ಬಿನ್ನವಿಸಿದರು.

ಚೌಡಯ್ಯನವರಿಗೆ ಆಶ್ಚರ‍್ಯಕ್ಕಿಂತ ಹೆಚ್ಚಾಗಿ ಆ ಹಿರಿಯ ಜೀವದ ಬಗ್ಗೆ ಅಯ್ಯೋ ಅನ್ನಿಸಿತು. ಆ ಹಿರಿಯರಿಗೆ ಘಟ ವಾದ್ಯವನ್ನು ಕೇಳಿಸುವುದಕ್ಕೆ ತಾವೇನು ಮಾಡಬಹುದು? ಎಂದು ಚಿಂತೆಗಿಟ್ಟುಕೊಂಡರು.

ಇಷ್ಟುಸಾಕಾಗಿತ್ತು ಗುರಪ್ಪನವರಿಗೆ. ಇದಕ್ಕಾಗಿ ಘಟಂ ವಿದ್ವಾಂಸರನ್ನು ಹೊರಗಡೆಯಿಂದ ಕರೆಸಲು ತಡವಾಗುತ್ತದೆ, ನೀವು ಮನಸ್ಸು ಮಾಡಿದರೆ ಇಲ್ಲೇ ಇರುವ ಮಂಜುನಾಥನನ್ನು ಜೊತೆಗೆ ಹಾಕಿಕೊಳ್ಳಬಹುದಲ್ಲವೇ? ಅವರನ್ನು ಕೇಳೋಣವೇ? ಎಂದರು.

ಈಗ ಚೌಡಯ್ಯನವರಿಗೆ ಇಕ್ಕಟ್ಟು. ಹಿರಿಯ ಜೀವವೊಂದರ ತೃಪ್ತಿಗಾಗಿ ಸರಿ ಎಂದರು. ಒಳ್ಳೆಯದೇ ಆಯಿತು. ಈ ಘಟನೆಯ ಬಳಿಕ ಮಂಜುನಾಥ್‌ ಚೌಡಯ್ಯನವರ ಬಹುತೇಕ ಕಛೇರಿಗಳಲ್ಲಿ ಮತ್ತೇ ಕಾಣಿಸಿಕೊಂಡರು, ಅವರ ಪ್ರೀತಿಪಾತ್ರರೂ ಆದರು.

ಹಳ್ಳಿಯಲ್ಲಿ ಮ್ಯೂಸಿಕ್ ಆ್ಯಂಡ್ ಮೂವೀಸ್‌ ಸ್ಟುಡಿಯೋ ಕಟ್ಟಿದ ಸಂಗೀತ ನಿರ್ದೇಶಕ ರವಿ ಬಸ್ರೂರು! 

ಕಲೆಗೆ ತಕ್ಕ ಬೆಲೆ ಬೇಕು

ಮದ್ರಾಸಿನಲ್ಲಿ ಚೌಡಯ್ಯನವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಂಗೀತ ಸಮ್ಮೇಳನ. ವಿದ್ವಾನ್‌ ಮೈಸೂರು ವಾಸುದೇವಾಚಾರ್ಯರ ಅಪರೂಪದ ರಚನೆಗಳ ಗಾಯನ ಸಮಾರಂಭ. ವಾಸುದೇವಾಚಾರ್ಯರೂ ಉಪಸ್ಥಿತ ರಿದ್ದ ಸಭೆ. ಮದ್ರಾಸಿನ ರಸಿಕವೃಂದ ವಾಸುದೇವಾಚಾರ್ಯರನ್ನು ಶ್ಲಾಘಿಸಿ ’ಅಭಿನವ ತ್ಯಾಗರಾಜ’ ಎಂದು ಕೊಂಡಾಡಿತು. ಚೌಡಯ್ಯನವರು ಹೃದಯ ತುಂಬಿದವರಾಗಿ ಆನಂದಾಶ್ರುಗಳನ್ನು ಒರೆಸಿಕೊಂಡು ವಾಸುದೇವಾಚಾರ್ಯರ ಪಾದಗಳಿಗೆ ನಮಿಸಿದರು. ಸರಿ, ಅಧ್ಯಕ್ಷರ ಭಾಷಣ. ಎದ್ದು ನಿಂತವರೇ ಚೌಡಯ್ಯನವರು ಮದ್ರಾಸಿನ ಜನರ ಅದೃಷ್ಟಕ್ಕೆ ಏನೆಂದು ಹೇಳೋಣ, ನಮ್ಮ ಮೈಸೂರಿಗರ ದುರದೃಷ್ಟಕ್ಕೆ ಎಷ್ಟೆಂದು ಮರುಗೋಣ? ಆಚಾರ್ಯರು ಒಂದು ಅಮೃತಕಲಶ. ಅವರನ್ನು ಹುಟ್ಟೂರನ್ನು ಬಿಟ್ಟು ನೆರೆಯೂರಿನಲ್ಲಿ ಅರಿತು ಸನ್ಮಾನಿಸುವಂತಾಗಿದೆ. ಇದು ಮೈಸೂರಿನ ನಷ್ಟಮದ್ರಾಸಿನ ಲಾಭ ಎಂದರು. ಎಲ್ಲರಿಗೂ ಎದೆಬಡಿತ ಹೆಚ್ಚಾಯಿತು, ಯಾರು ಏನೆಂದು ಕೊಳ್ಳುತ್ತಾರೋ ಎಂದು. ಆದರೆ ಚೌಡಯ್ಯನವರ ಎದೆಯಲ್ಲಿ ಯಾವುದೇ ದಿಗಿಲಿರಲಿಲ್ಲ.

ಭಾಷಣ ಮುಗಿಸಿ ಆಸನದಲ್ಲಿ ಕುಳಿತರು. ಆಚಾರ್ಯರು ಕಿವಿಯಲ್ಲಿ ಕೇಳಿದರು ’ಮಾತು ಸ್ವಲ್ಪ ಚುರುಕಾಯಿತಲ್ಲವೇ?’ ಚೌಡಯ್ಯನವರ ನೇರ ಸ್ಪಷ್ಟಉತ್ತರ.ಆಚಾರ್ಯರೇ, ನಾನೇನು ಸುಳ್ಳು ಹೇಳಿದೆನೇ? ನೇರವಾಗಿ ಹೇಳಿದ್ದೇನೆ ಅಷ್ಟೆ. ನನ್ನ ಜನ ಇದನ್ನು ಸರಿಪಡಿಸಿಕೊಳ್ಳಲಿ, ಘನ ವಿದ್ವಾಂಸರನ್ನು ಉಳಿಸಿಕೊಳ್ಳಲಿ, ಕಲೆಯನ್ನು ಗೌರವಿಸಲಿ ಎಂಬುದು ನನ್ನ ಮಾತಿನ ಅರ್ಥವಾಗಿದೆಯೇ ಹೊರತು ಯಾರನ್ನೂ ದೂಷಿಸುವುದಲ್ಲ, ದ್ವೇಷಿಸುವುದಲ್ಲ. ಇಷ್ಟಾದರೂ ನನ್ನ ಮಾತಿಗೆ ಸವಾಲು ಒಡ್ಡುವವರು ಯಾರಾದರೂ ಇದ್ದರೆ ಮುಂದೆ ಬರಲಿ. ಅರ್ಥ ಮಾಡಿಸುತ್ತೇನೆ.

ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಅವರ ಕಲೆಗೆ ತಮಿಳುನಾಡಿನಲ್ಲಿ ಸಿಕ್ಕಷ್ಟುಪ್ರಾಶಸ್ತ್ಯ ಮೈಸೂರಿನಲ್ಲಿ ಸಿಗುತ್ತಿರಲಿಲ್ಲ ಎಂಬ ಕೊರಗು ಚೌಡಯ್ಯ ನವರಿಗೆ ಇದ್ದೇ ಇತ್ತು.

ಘಟಂ ತಾಳವಾದ್ಯ ಕಲಾವಿದ ಗಿರಿಧರ್ ಉಡುಪ ಸಂಗೀತ ವಿಡಿಯೋ ಬಿಡುಗಡೆ

https://kannada.asianetnews.com/video/news-entertainment/giridhar-udupa-new-musical-video-released-hls-qq7urc

ಲೋಕ ಪ್ರಸಿದ್ಧ ವಿದ್ವಾಂಸ ಔಷಧಿ ನೀಡಿದರೆ ಏನಾಗುತ್ತೆ?

ಅದೇಕೋ ಗೊತ್ತಿಲ್ಲ, ಯಾರಾದರೂ ದೇಹಾರೋಗ್ಯ ಸರಿಯಿಲ್ಲ ಎಂದು ಹೇಳಿದರೆ ಸಾಕು ಚೌಡಯ್ಯವರಿಗೆ ಔಷಧಗಳನ್ನು ನೀಡುವ ಆಸೆ. ಅವರಿಗೆ ಅವರ ವೈದ್ಯಗಾರಿಕೆಯ ಮೇಲೆ ವಿಪರೀತ ನಂಬಿಕೆ ಕೂಡ. ಆದರೆ, ಅವರಿಂದ ಔಷಧ ಪಡೆದ ರೋಗಿಯ ಪಾಡು ಮಾತ್ರ ಇನ್ನಾರಿಗೂ ಬೇಡ ಅನ್ನುವಷ್ಟರ ಮಟ್ಟಿಗೆ ಇರುತ್ತಿತ್ತು.

ಸೀತಾರಾಮ ಶಾಸ್ತ್ರಿ ಚೌಡಯ್ಯನವರ ಶಿಷ್ಯ. ಸ್ವಲ್ಪ ಸ್ಥೂಲ ದೇಹದ ವ್ಯಕ್ತಿ. ಏನಯ್ಯಾ ಶಾಸ್ತ್ರಿ, ಈ ಪಾಟಿ ಮೈ ಹೊತ್ತುಕೊಂಡು ಲವಲವಿಕೆಯಿಂದ ಇರುವುದು ಹೇಗೆ ಸಾಧ್ಯವಯ್ಯಾ? ಸ್ವಲ್ಪ ಮೈ ಇಳಿಸು. ಮೈ ಕರಗಿಸೋಕ್ಕೆ ಬೇಕಾದ ಒಂದು ದಿÊೌ್ಯಷಧ ನನ್ನ ಬಳಿ ಇದೆ. ಮೂರು ದಿನ ತಗೋ ಸಾಕು. ಒಳ್ಳೇ ರೇಸ್‌ ಹಾರ್ಸ್‌ ಥರಾ ಚಿಮ್ಮುತ್ತಾ ಹೋಗ್ತೀಯಂತೆ. ಕೊಡ್ಲಾ?ಎಂದು ಬಾಯಿಮಾತಿಗೆ ಕೇಳಿ ಕೊಟ್ಟೂಬಿಟ್ಟರು. ಎಷ್ಟುತೆಗೆದುಕೊಳ್ಳಬೇಕು, ಪಥ್ಯ ಏನು ಎಂದೆಲ್ಲ ವೈದ್ಯರನ್ನೂ ನಾಚಿಸುವಂತೆ ಹೇಳಿಕೊಟ್ಟರು.

ಎರಡು ಡೋಸ್‌ ತೆಗೆದುಕೊಂಡಿರಬೇಕು ಶಾಸ್ತ್ರಿ ಸ್ಥಿತಿ ದುರ್ಬರವಾಯಿತು. ಯಾರ ಬಳಿ ತೆಗೆದುಕೊಂಡಿರಿ ಈ ಔಷಧಾನಾ? ಎಂದು ಹೆಂಡತಿ ಕೇಳತೊಡಗಿದರು. ಸಂಜೆ ಚೌಡಯ್ಯನವರು ಶಿಷÜ್ಯನನ್ನು, ಅಲ್ಲ ತಮ್ಮ ಪೇಷಂಟನ್ನು ನೋಡಲು ಬಂದರು. ಶಾಸ್ತ್ರೀಗೆ ಉಸಿರೇ ಏಳುತ್ತಿಲ್ಲ.

ಅದಕ್ಕೂ ತಲೆ ಕೆಡಿಸಿಕೊಳ್ಳದ ಚೌಡಯ್ಯನವರು ಆಗಬೇಕಾದ್ದು ಸರಿಯಾಗಿಯೇ ಆಗುತ್ತಿದೆ. ಸುಮ್ಮಸುಮ್ಮನೆ ಮೈ ಕರಗಿ ಹೋಗು ಎಂದರೆ ಹೋಗುತ್ತದೆಯೇ? ಹೆದರಬೇಡ ಕಣಯ್ಯಾ, ನಾನು ಹೇಳಿದಂತೆ ಬಿಡದೆ ಔಷಧಿ ತೆಗೆದುಕೊಳ್ಳುತ್ತಾ ಬಾ ಎಂದು ಹೇಳಿ ಹೊರಟುಹೋದರು. ಮತ್ತೊಂದು ದಿನಕ್ಕೆ ಶಾಸ್ತ್ರಿ ಇನ್ನಷ್ಟುಕುಸಿದುಹೋದರು. ಲೋಕ ಪ್ರಸಿದ್ಧ ಪಿಟೀಲು ವಾದಕರು ಸರಿ, ಇದೆಲ್ಲಿ ಕಲಿತರೂರೀ ಈ ವೈದ್ಯಾನಾ ಎಂದು ಶಾಸ್ತ್ರೀಯವರ ಶ್ರೀಮತಿ ಬೊಬ್ಬೆಯಿಟ್ಟರು ಹಾಗೂ ಗುರುವಾಕ್ಯ ಪರಿಪಾಲಕನಂತೆ ಶಾಸ್ತ್ರಿ ಔಷಧ ಮುಂದುವರಿಸಿದರು. ಮೂರನೇ ರಾತ್ರಿ ಹೊತ್ತಿಗೆ ಜೀವಂತ ಶವವೇ ಆಗಿಹೋದರು.

ಚೌಡಯ್ಯನವರು ನೋಡಲು ಬಂದರು. ಶಾಸ್ತ್ರಿ, ಇದು ಫಸ್ಟ್‌ ಕ್ಲಾಸ್‌ ಔಷಧೀನೇ ಕಣಯ್ಯಾ. ಇದರಲ್ಲೇನೂ ದೋಷವಿಲ್ಲ. ಎಲ್ಲೋ ನಿನ್ನ ದೇಹಕ್ಕೆ ಹಿಡಿಯಲಿಲ್ಲ ಅಂತ ಕಾಣಿಸುತ್ತೆ ಎಂದು ನುಣುಚಿಕೊಂಡರು.

ಮತ್ತೆ ಒಂದು ತಿಂಗಳ ಕಾಲ ಹಣ್ಣು ಹಾಲು ಟಾನಿಕ್‌ ಒದಗಿಸಿ ಒಣಗಿಹೋಗಿದ್ದ ತಮ್ಮ ಶಿಷ್ಯನಿಗೆ ರಾಜೋಪಚಾರ ಮಾಡುವಲ್ಲಿ ಮಾತ್ರ ಅವರ ಹೆಂಗರುಳು ನುಣುಚಿಕೊಳ್ಳಲಿಲ್ಲ.

Follow Us:
Download App:
  • android
  • ios