- ಗೀತಾ ಕುಂದಾಪುರ

ಬಾಗಿಲು ತೆಗೆದು ಹೊರಗಡಿಯಿಡಲು ಸಾಧ್ಯವಾಗದಿದ್ದರೇನಂತೆ ಹಲವರ ಒಳ್ಳೆಯ ಹವ್ಯಾಸಗಳು ಜಗಜ್ಜಾಹೀರಾಗಿ, ಇತರರಿಗೆ ಮಾದರಿಯಾದವು. ಎಲೆಯ ಮರೆಯ ಕಾಯಿಯಂತಿದ್ದ ಪ್ರತಿಭೆಗಳು ಬೆಳಕಿಗೆ ಬಂದು ಲಕ್ಷಾಂತರ ಜನರನ್ನು ಆಕರ್ಷಿಸಿದರು. ಹೊಸ ಬ್ಯೂಸೆನೆಸ್‌ ಶುರುವಾಯಿತು. ಎಲ್ಲದಕ್ಕೂ ಫೇಸ್ಬುಕ್‌, ವಾಟ್ಸಾಪ್‌ನಂತಹ ಜಾಲತಾಣಗಳು ಹೆಗಲು ಕೊಟ್ಟವು. ಬಹುಶಃ ಕರೋನಾ ಸಮಯದಲ್ಲೇ ಫೇಸ್ಬುಕ್‌, ವಾಟ್ಸಾಪ್‌ಅನ್ನು ಅತಿ ಹೆಚ್ಚು ಸಕರಾತ್ಮಕವಾಗಿ ಉಪಯೋಗಿಸಲಾಯಿತು.

ತರುಣ ತರುಣಿಯರು ಏನು ಓದುತ್ತಾರೆ ಗೊತ್ತೇ! 

ಇತ್ತೀಚಿನವರೆಗೂ ಫೇಸ್ಬುಕ್‌, ವಾಟ್ಸಾಪ್‌ಗಳಲ್ಲಿ ಫೋಟೋಗಳ ಜಾತ್ರೆ ನಡೆಯುತ್ತಿತ್ತು. ಎಲ್ಲೆಲ್ಲೂ ಪಾರ್ಟಿ, ಟೂರ್‌, ಹೊಸ ಬಟ್ಟೆಹಾಕಿದ ಫೋಟೋಗಳು, ಅಲ್ಲದೇ ಇವು ಹುಟ್ಟಿದ ಹಬ್ಬದ ಶುಭಾಶಯಗಳು, ಗುಡ್‌ ಮಾರ್ನಿಂಗ್‌, ಗುಡ್‌ ನೈಟ್‌ ಮೆಸೇಜುಗಳು ಮತ್ತು ಫಾರ್ವರ್ಡ್‌ ಮೆಸೇಜುಗಳ ಉಗ್ರಾಣವಾಗಿತ್ತು. ಇತ್ತೀಚಿನವರೆಗೂ ಮನುಷ್ಯನ ಕ್ರಿಯಾಶೀಲತೆಯನ್ನು ಕಸಿದುಕೊಂಡು ಸೋಮಾರಿಯನ್ನಾಗಿಸುವ ಫೇಸ್ಬುಕ್‌, ವಾಟ್ಸಾಪ್‌ಗಳ ಬಗ್ಗೆ ಮೂಗು ಮುರಿಯುತ್ತಿದ್ದದ್ದಲ್ಲದೆ, ಇದರಿಂದ ದೂರವಿರುವಂತೆ ಸಾಕಷ್ಟುಲೇಖನಗಳು ಹರಿದಾಡಿದ್ದವು. ನೋಡು ನೋಡುತ್ತಿದ್ದಂತೆ ಕಾಲ ಬದಲಾಯಿತು, ಈಗ ಫೇಸ್ಬುಕ್ಕಿನ ಫೇಸ್‌ ಚೇಂಜ್‌ ಆಗಿದೆ ಎನ್ನಬಹುದು. ಲೈವ್‌ ಕ್ಲಾಸಿಕಲ್‌ ಡಾನ್ಸುಗಳು, ಕತೆ, ಕವನ ವಾಚನಗಳಿಗೆ ವೇದಿಕೆಯಾಗಿದೆ. ಅಭಿನಯ, ಯೋಗ, ಯಕ್ಷಗಾನದ ಕ್ಲಾಸುಗಳೂ ನಡೆಯುತ್ತಿವೆ. ವಾಟ್ಸಾಪ್‌ನಲ್ಲಿ ಸಮಾನ ಅಭಿರುಚಿಯ ಗುಂಪುಗಳು ಕಾವ್ಯ ವಾಚನ, ಅಂತಾಕ್ಷರಿ, ಡಾನ್ಸ್‌, ಸ್ಕಿಟ್ಟಿನ ವಿಡಿಯೋಗಳನ್ನು ಹರಿಯಬಿಟ್ಟು ತಮ್ಮ ತಮ್ಮ ಟ್ಯಾಲೆಂಟುಗಳನ್ನು ತೋರಿಸುತ್ತಿದ್ದಾರೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಾ ದೂರವಾಗಬೇಕಿದ್ದ ಜಗತ್ತು ಒಂದರ್ಥದಲ್ಲಿ ಹತ್ತಿರವಾಗುತ್ತಿದೆ, ಜನರಲ್ಲಿ ಉತ್ತಮ ಅಭಿರುಚಿಯನ್ನ ಬೆಳೆಸುವಲ್ಲಿ ಸಫಲವಾಗಿದೆ.

ಬೊಟ್ಟು ಮಾಡಿ ತೋರಿಸಬಹುದಾದ ಇತ್ತೀಚಿನ ಬೆಳವಣಿಗೆ, ಫೇಸ್‌ಬುಕ್‌ನಲ್ಲಿ ಮಹಿಳೆಯರಿಂದ, ಮಹಿಳೆಯರಿಗಾಗಿ ಶುರುವಾದ ‘ಮಹಿಳಾ ಮಾರುಕಟ್ಟೆ’ ಕೆಲವೇ ವಾರಗಳಲ್ಲಿ ಲಕ್ಷಾಂತರ ರುಪಾಯಿಗಳ ವಹಿವಾಟು ನಡೆಸಿತು. ಗ್ರಾಹಕರು, ಮಾರಾಟಗಾರರಿಬ್ಬರೂ ನಮ್ಮ, ನಿಮ್ಮಂತಹ ಮಾಧ್ಯಮ ವರ್ಗದ ಮಹಿಳೆಯರು. ಇಲ್ಲಿ ಮಾರಾಟವಾಗುತ್ತಿರುವ ಹೆಚ್ಚಿನ ವಸ್ತುಗಳು ಮನೆಯಲ್ಲೇ, ಇಲ್ಲ ಮನೆಯವರಿಂದಲೇ ತಯಾರಾದವು. ಮಲೆನಾಡಿನ ಸಾಗರದಿಂದ ಬಂದ ಜೇನುತುಪ್ಪ, ಕಾಡು ಉತ್ಪನ್ನಗಳು, ಚಿಪ್ಸು, ಸುಕೇಳೆ, ತೊಡೆದೇವು, ಬಾಳಕದ ರುಚಿ, ಬಿಜಾಪುರದಲ್ಲಿ ಮನೆಯಲ್ಲೇ ತಯಾರಿಸಿದ ಮೆಣಸಿನ ಪುಡಿ, ಚಟ್ನಿಪುಡಿ, ಖಾರದಪುಡಿ, ಚನ್ನಪಟ್ಟಣದ ಉಪ್ಪಿನಕಾಯಿಯ ರುಚಿ ರಾಜ್ಯದ ತುಂಬ ಹರಿದಾಡುತ್ತಿದೆ. ಮುಂಬೈಯಿಂದ ‘ಹ್ಯಾಂಡ್‌ ಮೇಡ್‌’ ಆರೋಗ್ಯಕರ ಸೋಪು ಕರ್ನಾಟಕಕ್ಕೆ ಬರಲು ಹೊರಟಿದೆ. ಅಷ್ಟೇ ಅಲ್ಲ ಹಲಸಿನ ಹಣ್ಣಿನ ಪೆರಟಿ, ಹಪ್ಪಳ, ಸಂಡಿಗೆಗಳು ಈ ಜಾಲತಾಣದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇತ್ತೀಚಿನವರೆಗೂ ಈ ವಸ್ತುಗಳು ಸ್ನೇಹಿತರಿಗೆ, ಅಲ್ಲೇ ನಾಲ್ಕಾರು ಬೀದಿಗಳಲ್ಲಿ, ಅಕ್ಕ,ಪಕ್ಕದ ಊರುಗಳಿಗೆ ಮಾತ್ರ ತಲುಪುತಿತ್ತು. ಈಗ ಅಂತರ್‌ ರಾಜ್ಯ ಮಟ್ಟಕ್ಕೂ ಬೆಳೆಯುತ್ತಿದೆ. ತಿಂಡಿ ತಿನಿಸುಗಳಲ್ಲದೆ ಬಟ್ಟೆ, ಕ್ರೋಶ, ಡೆಕೊರೇಶನ್‌ ಐಟಮ್‌, ಹಿತ್ತಾಳೆ ದೀಪಗಳೂ ಕೂಡ ಭರದಿಂದ ಮಾರಾಟವಾಗುತ್ತಿದೆ. ಸಿಕ್ಕಿದ ದೊಡ್ಡ ಆರ್ಡರ್‌ಅನ್ನು ಹಂಚಿಕೊಂಡವರಿದ್ದಾರೆ. ಭಾಷಾಂತರ ಮಾಡುವ ಕೆಲಸವೂ ಸಿಕ್ಕಿತು. ನಿನ್ನೆಯವರೆಗೂ ಅಪರಿಚಿತರಾದವರು ಸ್ನೇಹಿತೆಯರಾದರು, ವಸ್ತುಗಳು ಮಾರಾಟವಾದವು, ಕೊಂಡವರಿಗೂ ಸಂತೋಷ, ಮಾರಾಟ ಮಾಡಿದವರಿಗೂ ಸಂತೋಷ. ಜಾಹಿರಾತಿಗಾಗಿ ನಯಾ ಪೈಸೆ ಖರ್ಚು ಮಾಡುವ ಅಗತ್ಯ ಬರಲಿಲ್ಲ, ತೆರಿಗೆಯ ಭಾರವಿಲ್ಲ, ರುಚಿ, ಶುಚಿಯ ಗ್ಯಾರೆಂಟಿ. ಸ್ನೇಹಿತೆಯೊಬ್ಬಳು ಹಲವು ಬಣ್ಣದ ನೈದಿಲೆ ಹೂವನ್ನು ಬೆಳೆಸುತ್ತಿದ್ದವಳು, ಫೇಸ್‌ಬುಕ್‌ನ ಈ ಗುಂಪಿನಲ್ಲಿ ಮಾರಾಟಕ್ಕೆ ತೊಡಗಿದಳು. ನೈದಿಲೆ ಹೂವಿನ, ಗಿಡದ ಚಿತ್ರ ಹಾಕಿದ 10 ನಿಮಿಷದಲ್ಲಿ 50-60 ಜನರ ಬೇಡಿಕೆಗಳು ಬಂತು. ಅಚ್ಚುಕಟ್ಟಾಗಿ ಅಡಿಗೆ ಮಾಡುವ ಕೈಗಳು ಕೇಟರಿಂಗನ್ನೂ ಶುರು ಮಾಡಿದವು. ಬದುಕಿಗಾಗಿ ಹೂ ಬತ್ತಿ, ಗೆಜ್ಜೆ ವಸ್ತ್ರ, ಹತ್ತಿಯ ಹಾರ ಮಾಡಿ ಮಾರುತ್ತಿದ್ದವರೂ ಗ್ರೂಪಿಗೆ ಸೇರಿಕೊಂಡರು. ಅಂಗಡಿಯ ಬಾಗಿಲು ತೆಗೆಯಲಿಲ್ಲ, ಮಾರಾಟವಾಗದೆ ವಸ್ತುಗಳು ಉಳಿದು ಹೋದವು ಎಂಬ ಅಳಲು ಸ್ವಲ್ಪ ಮಟ್ಟಿಗಾದರೂ ಇದರಿಂದ ದೂರವಾದಂತಾಯಿತು.

ಇಂತಹ ಮಾರಾಟದಲ್ಲಿ ಎಲ್ಲವೂ ಸುಲಭ ಎಂದಲ್ಲ, ವ್ಯವಹಾರಗಳು ಕೊರಿಯರ್‌ ಕಂಪೆನಿಯ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿ, ಹೆಚ್ಚಿನ ಕಂಪೆನಿಗಳು ವಿಪರೀತ ಕೊರಿಯರ್‌ ಚಾಜ್‌ರ್‍ ಮಾಡುತ್ತಿದ್ದು ವಸ್ತುವಿನಷ್ಟೇ ಕೊರಿಯರ್‌ ಚಾರ್ಜಸ್‌ ಒದಗುವ ಸಂದರ್ಭ ಎದುರಾಯಿತು. ಇನ್ನು ಕೆಲವು ಕೊರಿಯರ್‌ ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಸಾಗಿಸಿದರೂ ಹಲವು ಜಾಗಗಳಿಗೆ ತಲುಪಿಸದೆ, ಸರಿಯಾಗಿ ಪ್ಯಾಕೂ ಮಾಡದೆ ತಲೆನೋವು ತಂದೊಡ್ಡಿದವು. ಕೆಲವರ ಕೆಲವು ವಸ್ತುಗಳ ಬೆಲೆಯೂ ಅಧಿಕ ಎಂಬ ದೂರು ಕೇಳಿ ಬಂತು. ಅಂತೂ ಮಾರ್ಗವೂ ಇದೆ, ಅದರೊಂದಿಗೆ ಅಡೆತಡೆಯೂ ಇದೆ ಎಂಬ ಪರಿಸ್ಥಿತಿ.

ಮಕ್ಕಳಿಗೆ ಸ್ಕೂಲು ಮನೇಲಲ್ವೇ ಅಲ್ಲ; ಸ್ಕೂಲು ಶುರುಮಾಡಿ, ಹೆತ್ತವರನ್ನು ಕಾಪಾಡಿ! 

ಲಾಕ್‌ಡೌನ್‌ನಿಂದಾಗಿ ಮಂಗಳೂರಿನಲ್ಲಿ ಮಾರಾಟವಾಗದೇ ಉಳಿದ ಕ್ವಿಂಟಾಲುಗಟ್ಟಲೆ ಕುಂಬಳಕಾಯಿ, ಬೆಳೆಗಾರನ ಅಳಲು ವಾಟ್ಸಾಪ್‌ನಲ್ಲಿ ಹರಿದಾಡತೊಡಗಿತು. ಇದಾಗಿ ಅರ್ಧಗಂಟೆಯಲ್ಲಿ ಹಿತೈಷಿಯೊಬ್ಬರ ಸಹಕಾರದಿಂದ ಕೇರಳ ಸರಕಾರ ಈ ಕುಂಬಳಕಾಯಿಗಳನ್ನು ಖರೀದಿಸಿತು. ಉಡುಪಿಯ ಹತ್ತಿರದ ಅಲೆಮನೆಯಲ್ಲಿ ಉಳಿದು ಹೋದ ಬೆಲ್ಲವೂ ಹೀಗೆ ಮಾರಾಟವಾಯಿತು. ಪುಸ್ತಕ ಬಿಡುಗಡೆಯ ಸಮಾರಂಭವಿಲ್ಲದಿದ್ದರೇನಾಯಿತು, ಆನ್‌ ಲೈನಿನಲ್ಲಿ ಪುಸ್ತಕ ಬಿಡುಗಡೆಯಾಯಿತು. ಬರೆಯುವವರು ಬರವಣಿಗೆಯನ್ನು ನಿಲ್ಲಿಸಲಿಲ್ಲ, ಹೆಚ್ಚು ಹೆಚ್ಚು ಜನರು ಇ ಪುಸ್ತಕವನ್ನು ತೆರೆದರು. ಮದುವೆ, ಮುಂಜಿಯ ಸಂಖ್ಯೆ ಕಡಿಮೆಯಾದರೂ ಅಲ್ಲೊಂದು, ಇಲ್ಲೊಂದು ಸಮಾರಂಭಗಳು ನಡೆದವು. ಕೆಲವರು ಝೂಮ್‌ ಮೂಲಕವೋ, ಗೂಗಲ್‌ ಆ್ಯಪ್‌ ಮೂಲಕವೋ ಸಮಾರಂಭದಲ್ಲಿ ಭಾಗವಹಿಸಿದರು.

ಕೊರೋನದಿಂದ ಮಾರ್ಗಗಳು ಮುಚ್ಚಿದಾಗ ಹೊಸ ಹೊಸ ಮಾರ್ಗವು ತೆರೆದುಕೊಂಡ ಉದಾಹರಣೆಗಳಿವು. ಹೊಸ ಮಾರ್ಗವನ್ನು ಹುಡುಕಲು, ಹೊಸ ಮಾರ್ಗದತ್ತ ನಮ್ಮನ್ನು ನಾವು ತೆರೆದುಕೊಳ್ಳಲು ಮನಸ್ಸು ಮಾಡಬೇಕಷ್ಟೇ.