ಮಕ್ಕಳಿಗೆ ಸ್ಕೂಲು ಮನೇಲಲ್ವೇ ಅಲ್ಲ; ಸ್ಕೂಲು ಶುರುಮಾಡಿ, ಹೆತ್ತವರನ್ನು ಕಾಪಾಡಿ!
ಸ್ಕೂಲು ಎಂಬುದು ನಮ್ಮನ್ನು ಕಾಪಾಡುತ್ತಿರುವ, ನಮ್ಮ ಸ್ವಾತಂತ್ರ್ಯವನ್ನು ನಮಗೆ ದಯಪಾಲಿಸಿರುವ, ನಮಗೆ ಅಲ್ಪಸ್ವಲ್ಪ ಬಿಡುಗಡೆಯನ್ನು ನೀಡಿರುವಂಥ ಮಹಾನ್ ತಾಣ. ಅದೇನಾದರೂ ಇಲ್ಲದೇ ಹೋದರೆ ನಾವು ಎರಡು ಕಡೆಯಿಂದ ಅದುಮಲ್ಪಟ್ಟು ಥೇಟ್ ಸ್ಯಾಂಡ್‌ವಿಚ್‌ಗಳ ಥರ ಆಗಿಬಿಡ್ತೀವಿ
ಜಯರಾಮ
ಮೊನ್ನೆ ಗೆಳೆಯರೊಬ್ಬರು ಫೋನ್ ಮಾಡಿ ‘ಸ್ಕೂಲುಗಳು ಫೀಸು ಕಟ್ಟುವಂತೆ ಹೇಳುತ್ತಿವೆ. ಮುಂದಿನ ತಿಂಗಳಿಂದ ತರಗತಿಗಳು ಆರಂಭವಾಗುತ್ತವಂತೆ. ಸ್ಕೂಲಿಗೆ ಮಕ್ಕಳನ್ನು ಕಳಿಸುವುದು ಸುರಕ್ಷಿತವೋ’ ಎಂದು ಕೇಳಿದರು. ಈ ವಿಚಾರದಲ್ಲಿ ನಿಮಗೆ ಏನನ್ನಿಸುತ್ತಿದೆ ಎಂದು ಕೇಳಿದ್ದಕ್ಕೆ, ‘ನನಗೇನೂ ಗೊತ್ತಾಗುತ್ತಿಲ್ಲ. ಮಕ್ಕಳು ಮನೆಯಲ್ಲೇ ಇದ್ದರೆ ಸೋಮಾರಿಗಳಾಗುತ್ತವೆ. ಇಡೀ ದಿನ ಫೋನು, ಇಂಟರ್‌ನೆಟ್, ಸಿನಿಮಾ ನೋಡಿಕೊಂಡು ಕೂತಿರುತ್ತವೆ. ಇಷ್ಟುವರ್ಷ ಕಲಿತದ್ದನ್ನೆಲ್ಲ ಈ ಆರು ತಿಂಗಳಲ್ಲಿ ಕಳೆದುಕೊಂಡು ಬಿಡುತ್ತವೆ ಅನ್ನುವ ಭಯ’ ಎಂದು ಗಾಬರಿ ವ್ಯಕ್ತಪಡಿಸಿದರು. ಅಷ್ಟಾದ ಮೇಲೆ ಸಣ್ಣ ದನಿಯಲ್ಲಿ ‘ಈ ರಗಳೆಯಿಂದಾಗಿ ದಿನವೂ ನನಗೂ ನನ್ನ ಹೆಂಡತಿಗೂ ಜಗಳ ಆಗುತ್ತಿದೆ. ಮಕ್ಕಳಿಗೆ ಒಳ್ಳೇ ಬುದ್ಧಿ ಕಲಿಸಿ, ಇಂಟರ್‌ನೆಟ್ ನೋಡಬೇಡ ಅಂತ ಹೇಳಿ’ ಅಂತ ಹೆಂಡ್ತಿ ಒಂದೇ ಸಮ ಬೈತಾಳೆ. ಮಕ್ಕಳು ನನ್ನ ಮಾತು ಕೇಳುವುದಿಲ್ಲ. ಅವಳ ಮಾತೂ ಕೇಳುವುದಿಲ್ಲ. ಒಟ್ಟಾರೆ ಜೀವನದಲ್ಲಿ ಮೊದಲ ಸಲ ಸೋತು ಹೋಗಿದ್ದೇನೆ’ ಅಂತ ಮನಸ್ಸು ಒದ್ದೆ ಮಾಡಿಕೊಂಡರು.
ಹೇಗಾದರೂ ಮಾಡಿ ಮಕ್ಕಳನ್ನು ಶಾಲೆಗೆ ಕಲಿಸಬೇಕು, ಅದು ಸಾಧ್ಯವಾಗದೇ ಹೋದರೆ ಅವು ತಮ್ಮ ತಂಟೆಗೆ ಬರದಷ್ಟಾದರೂ ಬಿಜಿಯಾಗಿ ಇಡಬೇಕು ಅನ್ನುವುದು ಬಹುತೇಕ ತಂದೆ ತಾಯಿಯರ ಆಶೆ. ಶಾಲೆಗೆ ಕಳಿಸುವುದು, ಮಕ್ಕಳಿಂದ ಪಾರಾಗಲು ಅತ್ಯಂತ ಸರಳವಾದ, ಸುಲಭವಾದ ಮತ್ತು ಯೋಗ್ಯವಾದ ಉಪಾಯವಾಗಿತ್ತು. ಬೆಳಗ್ಗೆ ಎದ್ದು ಮಕ್ಕಳನ್ನು ಸ್ಕೂಲಿಗೆ ಕಳುಹಿಸಿದರೆ ಸಂಜೆಯ ತನಕ ಹೆತ್ತವರ ಪಾಲಿಗೆ ಅದೇ ಇಂಡಿಪೆಂಡೆನ್ಸ್ ಡೇ. ಸ್ಕೂಲಿಂದ ಬರುವ ಹೊತ್ತಿಗೆ ಮಕ್ಕಳ ಉತ್ಸಾಹ ಅರ್ಧ ಕುಂದಿರುತ್ತದೆ. ಅದಾದ ನಂತರ ಮೂರು ನಾಲ್ಕು ಗಂಟೆಗಳಷ್ಟುಹೋಮ್‌ವರ್ಕ್ ಕೊಟ್ಟಿರುತ್ತಾರೆ. ಆಮೇಲೆ ಸಂಗೀತ, ನೃತ್ಯ, ಸ್ವಿಮಿಂಗ್, ಬ್ಯಾಡ್ಮಿಂಟನ್, ಕೋಚಿಂಗ್ ಅಂತ ಒಂದೆರಡು ಗಂಟೆ ಕಳೆದರೆ ಮಕ್ಕಳ ಕೈಯಿಂದ ಆ ದಿನ ಬಚಾವ್!
ಶಾಲಾ-ಕಾಲೇಜು ಪ್ರಾರಂಭ ಯಾವಾಗ? ದಿನಾಂಕ ಪ್ರಕಟಿಸಿದ ಕೇಂದ್ರ ಸಚಿವ ...
ಇದೀಗ ಕೊರೋನಾದಿಂದಾಗಿ ಶಾಲೆ ಆರಂಭಿಸಬೇಕೋ ಬೇಡವೋ ಎಂಬ ಚರ್ಚೆಗಿಂತ ಮಕ್ಕಳನ್ನೇನು ಮಾಡಬೇಕು ಎಂಬುದು ಬಹುದೊಡ್ಡ ತಲೆನೋವಾಗಿ ಪರಿಣಮಿಸಿದಂತಿದೆ. ವರ್ಷಕ್ಕೆ ಐವತ್ತು ಸಾವಿರ ಕೊಟ್ಟರೆ ಮಕ್ಕಳಿಗೆ ಬೇಕು ಬೇಕಾದ ಪಾಠ ಕಲಿಸಿ, ಅವರನ್ನು ದಿನಕ್ಕೆಂಟು ಗಂಟೆಗಳ ಕಾಲ ಶಿಸ್ತಾಗಿ ನೋಡಿಕೊಂಡು, ಅವರ ತಂಟೆ ತರಲೆಗಳನ್ನು ಸಹಿಸಿಕೊಳ್ಳುವ ಮತ್ತೊಂದು ವ್ಯವಸ್ಥೆ ಬೇರೆ ಯಾವುದು ಸಿಗಲಿಕ್ಕೆ ಸಾಧ್ಯ? ಗಂಗೆ ತನ್ನ ಎಂಟನೇ ಮಗನಾದ ಭೀಷ್ಮನನ್ನು ತಾನೇ ವಿದ್ಯಾಭ್ಯಾಸ ಕಲಿಸಿ, ಮರಳಿಸುತ್ತೇನೆ ಎಂದು ಶಂತನುವಿಗೆ ಮಾತು ಕೊಟ್ಟಂತೆ ಸ್ಕೂಲುಗಳು ಮಕ್ಕಳಿಗೆ ‘ಇದ್ಯಾಬುದ್ದಿ’ ಕಲಿಸುವುದಕ್ಕೆ ಎಷ್ಟುಕೊಟ್ಟರೂ ಕಡಿಮೆಯೇ!
ತಾಯಿಯೇ ಮೊದಲ ಗುರು ಅನ್ನುವ ಮಾತು ಈಗ ಹಳೆಯದಾಗಿದೆ. ತಾಯಿಗೆ ಹೊಸ ಹೊಸ ವಿದ್ಯೆಗಳನ್ನು ಕಲಿಯುವುದಕ್ಕೇ ಪುರುಸೊತ್ತಿಲ್ಲ. ಒಂದು ಕಡೆ ಆಫೀಸು, ತಪ್ಪಿದರೆ ಹೋಮ್ ಆಫೀಸು, ಅದಿಲ್ಲದವರಿಗೆ ಫೇಸ್ ಬುಕ್ ಆಫೀಸು, ಅದ್ಯಾವುದೋ ಇಲ್ಲದವರಿಗೆ ಟೆಲಿವಿಷನ್ ಆಫೀಸು. ಅಪ್ಪನಿಗೆ ಮನೆಯೇ ಮಂತ್ರಾಲಯ. ಬೆಳಗ್ಗೆ ಅವಸರಕ್ಕೊಂದಷ್ಟುಉಪ್ಪಿಟ್ಟು ಮಾಡಿ, ಮಧ್ಯಾಹ್ನಕ್ಕೆ ಪುಳಿಯೋಗರೆ ಮಿಕ್ಸ್ ಮಾಡಿ ಕಳಿಸಿಕೊಟ್ಟರೆ ಮೂರು ಹೊತ್ತಿನ ಊಟದ ಚಿಂತೆ ಮುಗಿದಂತೆ. ಮಕ್ಕಳು ಮನೆಯಲ್ಲಿದ್ದರೆ ಗಂಟೆಗೊಂದು ಸ್ನಾ್ಯಕ್ಸು, ಪೂರಿ, ಪಾನಿಪೂರಿ, ಪತ್ರೊಡೆ, ಮಸಾಲೆದೋಸೆ, ಫಿಂಗರ್‌ಚಿಪ್ಸುಗಳ ಸಮಾರಾಧನೆ ಮಾಡುತ್ತಾ, ಮನೆಯಲ್ಲೇ ಇರುವ ಡಿಯರ್ ಫಾದರ್‌ಗೆ ಆಗೀಗ ಕಾಫಿ, ಜತೆಗೆ ಮಸಾಲೆ ವಡೆ, ಸಂಜೆಹೊತ್ತಿಗೆ ಪೂರಿ ಮಾಡಿಕೊಡುತ್ತಾ ಕೊರೋನಾದ ಅತಿಭೀಕರ ಅನಾಹುತಗಳಿಗೆ ಬಲಿಯಾದವಳು ಗೃಹಿಣಿ ಎಂಬುದನ್ನು ಯಾವ ಟೀವಿ ಚಾನಲ್ಲೂ ಬ್ರೇಕಿಂಗ್ ನ್ಯೂಸ್ ಮಾಡುತ್ತಿಲ್ಲವಲ್ಲ ಎಂದುಕೊಳ್ಳುತ್ತಿರುವಾದ ಮಕ್ಕಲಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಅನ್ನುವ ಹಳೇ ನುಡಿಗಟ್ಟು ಯಾರಿಗೆ ತಾನೇ ಪ್ರಿಯವಾದೀತು!
ಮನೆಯಲ್ಲಿ ಎಲ್ಲರೂ ಜೊತೆಗಿದ್ದಷ್ಟೂದಿನ ಜೊತೆಗಿರುವ ಹಿತಾನುಭವ ಅನುಭವಿಸಬಹುದು. ಎಲ್ಲರೂ ಜೊತೆಗೇ ಊಟ ಮಾಡ‚ಬಹುದು. ಮತ್ತೆ ಕೌಟುಂಬಿಕ ಮೌಲ್ಯಗಳು ಮರಳುವಂತೆ ಮಾಡಲಿಕ್ಕೆ ಇದು ಸಕಾಲ ಅನ್ನುವುದೆಲ್ಲ ಒಳ್ಳೆಯ ಲೇಖನವಾಗಬಲ್ಲ, ಫೇಸ್‌ಬುಕ್ ಸ್ಟೋರಿ ಆಗಬಲ್ಲ ವಸ್ತುವೇ ಹೊರತು, ಮನೆಯಲ್ಲಿದ್ದವರಿಗೆ ನಿಜವಾದ ಪರಿಸ್ಥಿತಿ ಗೊತ್ತಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಹೊತ್ತಿಗೆ ಹಸಿವಾಗುತ್ತದೆ. ದೊಡ್ಡ ಮಗ ಎಂಟು ಗಂಟೆಗೆ ಏಳುತ್ತಾನೆ, ಬಿಸಿಬಿಸಿ ದೋಸೆ ತಿನ್ನುತ್ತಾನೆ. ಎರಡನೆಯ ಮಗಳಿಗೆ ಬೆಳಗಾಗುವುದು ಹತ್ತು ಗಂಟೆಗೆ, ಆಕೆಗೆ ಆಮ್ಲೆಟ್ ಮತ್ತು ಬ್ರೆಡ್. ಶುಗರ್ ಇದ್ದವರಿಗೆ ಏಳೂವರೆಗೇ ತಿಂಡಿ. ಯಾರದ್ದು ಯಾವಾಗಲೋ ಸ್ನಾನ, ಇಡೀ ವ್ಯವಸ್ಥೆಯೇ ಅಧ್ವಾನ. ತಾಯಿಯೊಬ್ಬಳಿಗೆ ಬಿಟ್ಟು ಮಿಕ್ಕವರಿಗೆಲ್ಲ ಬೇಕು ಬೇಕಾದಾಗೆಲ್ಲ ನಿದ್ದೆ. ಮೇಡ್ ಇಲ್ಲದ ಕಾರಣ ಪಾತ್ರೆ ತೊಳೆಯುವುದೂ ಕೂಡ ಮೇಡ್ ಇನ್ ಇಂಡಿಯಾ ಅಮ್ಮನದೇ ಕೈಂಕರ್ಯ!
ಸೌಧಕ್ಕೆ ಹೊರಟ ಸುರೇಶ್ ಕುಮಾರ್ ತಡೆದು ನಿಲ್ಲಿಸಿದ ಯಂಗ್ ಫ್ರೆಂಡ್!
ಇಷ್ಟಾದ ಮೇಲೆ ಶಿಕ್ಷಣ ತಜ್ಞರಿಂದ ಉಪದೇಶಗಳ ಸುರಿಮಳೆ. ಮಕ್ಕಳಿಗೆ ತಾಯಿಯೇ ಪಾಠ ಹೇಳಲಿ, ಸ್ಕೂಲು ಈಗಲೇ ಬೇಡ. ಕೊರೋನಾ ಇನ್ನೂ ಚಾಲ್ತಿಯಲ್ಲಿದೆ. ಸಾಮಾಜಿಕ ಅಂತರವೇ ಬದುಕಿನ ಗುರಿಯಾಗಲಿ ಎಂಬಿತ್ಯಾದಿ ಗೀತೋಪದೇಶ. ಕಾಸು ಕೊಟ್ಟರೂ ತ್ರಾಸ ತಪ್ಪಿದ್ದಲ್ಲ ಅನ್ನುವುದಕ್ಕಿಂತ ದೊಡ್ಡ ಕರ್ಮ ಮತ್ತೇನಿದೆ!
ಸ್ಕೂಲು ಎಂಬುದು ನಮ್ಮನ್ನು ಕಾಪಾಡುತ್ತಿರುವ, ನಮ್ಮ ಸ್ವಾತಂತ್ರ್ಯವನ್ನು ನಮಗೆ ದಯಪಾಲಿಸಿರುವ, ನಮಗೆ ಅಲ್ಪಸ್ವಲ್ಪ ಬಿಡುಗಡೆಯನ್ನು ನೀಡಿರುವಂಥ ಮಹಾನ್ ತಾಣ. ಅದೇನಾದರೂ ಇಲ್ಲದೇ ಹೋದರೆ ನಾವು ಎರಡು ಕಡೆಯಿಂದ ಅದುಮಲ್ಪಟ್ಟು ಥೇಟ್ ಸ್ಯಾಂಡ್‌ವಿಚ್‌ಗಳ ಥರ ಆಗಿಬಿಡ್ತೀವಿ. ಹಾಸ್ಟೆಲ್ಲಿನಲ್ಲಿ ಓದುತ್ತಿದ್ದ ಇಬ್ಬರು ಮಕ್ಕಳೂ ಮನೆಗೆ ಬಂದು ಬಿಟ್ಟಿದ್ದಾರೆ. ವಾಪಸ್ಸು ಯಾವಾಗ ಹೋಗ್ತಾರೆ ಅಂತ ಕಾಯ್ತಿದ್ದೀನಿ. ಮಕ್ಕಳು ಹಾಸ್ಟೆಲಿನಲ್ಲಿರುವ ತನಕ ಅವರ ಮೇಲೆ ಭಯಂಕರ ಅಕ್ಕರೆ, ಮಮತೆ, ವಾತ್ಸಲ್ಯ, ಪ್ರೀತಿ ಎಲ್ಲವೂ ಇತ್ತು. ಅವರು ಮನೆಗೆ ಬಂದಾಗಿನಿಂದ ದಿನೇ ದಿನೇ ಆ ಪ್ರೀತಿ ಕರಗುತ್ತಾ ಇದೆ. ಯಾವಾಗ ಅವರನ್ನು ದ್ವೇಷಿಸಲಿಕ್ಕೆ ಶುರುಮಾಡ್ತೀನೋ ಅಂತ ಭಯವಾಗ್ತಿದೆ ಅಂತ ತಾಯೊಬ್ಬರು ತಮಾಷೆಯಾಗಿ ಹೇಳಿದ್ದು ಪೂರ್ತಿ ತಮಾಷೆಯೇನೂ ಅಲ್ಲ!
ಮಕ್ಕಳಿಸ್ಕೂಲು ಮನೇಲಲ್ವೇ ಅಂತ ಕೈಲಾಸಂ ಕೇಳಿದರು. ತಾಯಂದಿರೆಲ್ಲ ಒಕ್ಕೊರಲಿಂದ ಹೇಳುತ್ತಿದ್ದಾರೆ ‘ಅಲ್ವೇ ಅಲ್ಲ!’