Asianet Suvarna News Asianet Suvarna News

ಅಳೆಯುವವರ ಕಥೆ ಬೆಳಕಿಗೆ ತರುತ್ತಿರುವೆ : ಗಜಾನನ ಶರ್ಮಾ

ಗಜಾನನ ಶರ್ಮಾ ಅವರ ಹೊಸ ಕಾದಂಬರಿ ‘ಪ್ರಮೇಯ’ ಇಂದು ಬಿಡುಗಡೆಯಾಗುತ್ತಿದೆ. ಬ್ರಿಟಿಷರು ನಡೆಸಿದ ಟ್ರಿಗ್ನಾಮೆಟ್ರಿಕ್‌ ಸರ್ವೆಯೆಂಬ ವೈಜ್ಞಾನಿಕ ಸಾಹಸವನ್ನು ಆಧರಿಸಿದ ಕೃತಿಯಿದು. ಹೊಸ ಪುಸ್ತಕದ ಬಗ್ಗೆ, ಸಮಕಾಲೀನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಗಜಾನನ ಶರ್ಮಾ ಮಾತಾಡಿದ್ದಾರೆ.

Gajanana Sharma interview on his new book Prameya skr
Author
First Published Jan 28, 2024, 11:01 AM IST | Last Updated Jan 28, 2024, 11:01 AM IST

ಪ್ರಿಯಾ ಕೆರ್ವಾಶೆ

- ನಮ್ಮ ನೆಲದ, ನಮ್ಮ ಜನರ ಕಥೆ ಹೇಳ್ತಾ ಬಂದವರು ನೀವು. ಈಗ ಭಾರತದ ಕಥನಕ್ಕೆ ಚಾಚಿಕೊಂಡಿದ್ದೀರಿ. ಈ ಭಿನ್ನ ಪ್ರಯತ್ನದ ಹಿಂದಿನ ಸಂಗತಿಗಳು?

ವಿಚಿತ್ರ ಅಂದರೆ ಗ್ರೇಟ್‌ ಟ್ರಿಗ್ನಾಮೆಟ್ರಿಕ್‌ ಸರ್ವೆ ಆಫ್‌ ಇಂಡಿಯಾ ಇದು ಆರಂಭವಾಗಿದ್ದು ನಮ್ಮ ನೆಲದಿಂದಲೇ. 1799 ರಲ್ಲಿ ಟಿಪ್ಪು ಸುಲ್ತಾನ್‌ ಸಾವಿನ ನಂತರ ಆತನ ಒಡೆತನದಲ್ಲಿದ್ದ ಶೇ.70 ರಷ್ಟುದಕ್ಷಿಣ ಭಾರತದ ನೆಲವನ್ನು ಬ್ರಿಟೀಷರು ನಿಜಾಮರ ಜೊತೆ ಹಂಚಿಕೊಳ್ಳಬೇಕಿತ್ತು. ಆದರೆ ಆಗ ಅವರಿಗೆ ದಕ್ಷಿಣ ಭಾರತದ ಜಿಯೋಗ್ರಫಿ ಗೊತ್ತಿಲ್ಲ. ಈ ನೆಲದ ಮೇಲೆ ಹಿಡಿತ ಸಾಧಿಸಲು ಇಲ್ಲಿನ ಭೌಗೋಳಿಕತೆಯ ಪರಿಚಯ ಇರಬೇಕು ಅನ್ನುವ ಉದ್ದೇಶದಿಂದ ಅವರು ಮೂರು ಸರ್ವೆಗಳನ್ನು ಮಾಡುತ್ತಾರೆ. ಅವು ಕರ್ನಾಟಕಕ್ಕೆ ಮುಖ್ಯವಾದದ್ದು. ಅದರಲ್ಲಿ ಮೊದಲನೆಯದು ಫ್ರಾನ್ಸಿಸ್‌ ಬುಕಾನನ್‌ನದು. ಎರಡನೆಯ ಕರ್ನಲ್‌ ಮೆಕಂಜಿಯದು. ಮೂರನೆಯದು ಕರ್ನಲ್‌ ಲ್ಯಾಂಪ್ಟನ್‌ ಮಾಡಿದ್ದು. ಇದು ಮಹತ್ವದ್ದು. ಈತನ ಸರ್ವೆಯ ಪ್ರಾಯೋಗಿಕ ಆರಂಭ ಬೆಂಗಳೂರಿನಲ್ಲೇ. ಆಮೇಲೆ ಇಡೀ ಭಾರತವನ್ನು ಅಳೆಯುತ್ತಾರೆ. ಅಂದು ಮಾಡಿದ ಆಗ ಕೆಲಸ ಇವತ್ತಿಗೂ ಪ್ರಸ್ತುತ. ನಾವೆಲ್ಲ ಬಳಸೋ ಗೂಗಲ್‌ ಲೊಕೇಶನ್‌ ಹಿಂದಿರೋದು ಸ್ಯಾಟಲೈಟ್‌ ಆದರೂ ಅದು ಆಧರಿಸೋದು ಈ ಅಕ್ಷಾಂಶ ರೇಖಾಂಶವನ್ನೊಳಗೊಂಡ ಸರ್ವೆಯನ್ನೇ. ಆ ಕಾಲದಲ್ಲಿ 78 ಡಿಗ್ರಿಯಲ್ಲಿ ಕನ್ಯಾಕುಮಾರಿಯಿಂದ ಮಸ್ಸೂರಿಯ ಮೇಲ್ಭಾಗದವರೆಗೆ ರೇಖಾಂಶವನ್ನು ಅಳೆಯುತ್ತಾ ಹೋಗುತ್ತಾರೆ. ಇಷ್ಟುವಿಸ್ತಾರವಾದ ಸರ್ವೆ ಮತ್ತೆಲ್ಲೂ ನಡೆದಿರಲಿಲ್ಲ. ಹೀಗಾಗಿ ಇದರ ಬಗ್ಗೆ ವಿಶೇಷ ಆಸಕ್ತಿ ಬಂತು.

- ಈ ಸಬ್ಜೆಕ್ಟ್ ನಿಮಗೆ ಕನೆಕ್ಟ್ ಆದ ಸನ್ನಿವೇಶ?

‘ಥ್ರೆಸ್‌ ಪಾಸರ್ಸ್‌ ಆನ್‌ದ ರೂಫ್‌ ಆಫ್‌ ದ ವಲ್ಡ್‌ರ್‍’ ಅನ್ನೋ ಪುಸ್ತಕ ಓದಿದ್ದೆ. ಟಿಬೆಟ್‌ಗೆ ಅನ್ಯರ ಪ್ರವೇಶ ನಿಷಿದ್ಧವಾಗಿದ್ದಾಗ ವೇಷ ಮರೆಸಿ ಮಿಶನರಿಗಳು, ಇತರರು ಅಲ್ಲಿಗೆ ಹೋದ ಸಂಗತಿ ಇದರಲ್ಲಿತ್ತು. ಅದರಲ್ಲಿ ನಮ್ಮ ದೇಶದ ಒಬ್ಬನನ್ನು ಟಿಬೆಟ್‌ ಸಂತನ ವೇಷದಲ್ಲಿ ಟಿಬೆಟಿಗೆ ಕಳಿಸ್ತಾರೆ. ಆತ ತನ್ನ ಹೆಜ್ಜೆಯನ್ನು ಅಳೆಯುತ್ತಾ ಡೆಹ್ರಾಡೂನ್‌ನಿಂದ ಲ್ಹಾಸಾವರೆಗೆ ಹೋಗಿ ಬರುತ್ತಾನೆ. ಈ ಪ್ರಯಾಣ ಅದ್ಭುತ ಅಷ್ಟೇ ಅಪಾಯಕಾರಿ. ಸರ್ವೆಗೆ ಇಷ್ಟೆಲ್ಲ ಕಷ್ಟಪಟ್ಟಿದ್ದಾರಲ್ಲಾ ಅಂತ ಕುತೂಹಲ ಬೆಳೆಯಿತು. ಥಾಮಸ್‌ ಮಾಂಟ್‌ಗೊಮೆರಿ ಎಂಬಾತ ಕಾಶ್ಮೀರದಲ್ಲಿ ಒಂದು ಸರ್ವೆ ಆರಂಭ ಮಾಡ್ತಾನೆ. ಅವನು ಆರಂಭ ಮಾಡಿದ ಜಾಗ ಶ್ರೀನಗರ ಸಮೀಪದ ಹರ್ಮುಖ್‌ ಮೌಂಟೇನ್‌. 16,000 ಅಡಿ ಎತ್ತರದ್ದು. ಆ ಸರ್ವೆ ಮಾಡುವಾಗ ಆತನಿಗೆ ಪರ್ವತಗಳಲ್ಲಿ ಎಲೆಕ್ಟ್ರಿಕ್ಯೂಶನ್‌ ಅಂದರೆ ವಿದ್ಯುದಾಘಾತವಾಗುತ್ತದೆ. ಆತ ನಂದಕೋಲ್‌ ಸರೋವರದ ತಟದಲ್ಲಿ ಕ್ಯಾಂಪ್‌ ಮಾಡುತ್ತಾನೆ. ಈ ಕಥೆ ಕೇಳಿದ ನನಗೆ ಆ ಜಾಗವನ್ನು ನೋಡಬೇಕು ಅಂತ ಆಸೆ ಆಗುತ್ತೆ. ಕಾಶ್ಮೀರಕ್ಕೆ ಹೊರಟೆ. ಆಗ ನನ್ನ ಸಹಾಯಕ್ಕೆ ಬಂದಿದ್ದು ರಕ್ಷಿತ್‌ ಗೌಡ ಎಂಬ ಹುಡುಗ. ಆತ ನಮ್ಮನ್ನು ಆ ಜಾಗಕ್ಕೆ ಕರೆದುಕೊಂಡು ಹೋಗಿ ಆ ಜಾಗದಲ್ಲೇ ಟೆಂಟ್‌ ಹಾಕಿ ಒಂದು ರಾತ್ರಿ ಅಲ್ಲಿ ಉಳಿಯಲೂ ವ್ಯವಸ್ಥೆ ಮಾಡಿದ್ದ. ಉತ್ತರ ಕಾಶಿಯಲ್ಲಿ ನಡೆದ ಅವಲಾಂಚೆಯಲ್ಲಿ ಆತ ತೀರಿಕೊಂಡ. ನನ್ನ ಈ ಕೃತಿ ಆತನಿಗೆ ಅರ್ಪಣೆ. ಅಲ್ಲಿಗೆ ಹೋದಾಗ ಇದನ್ನು ನಾನಿದರ ಬಗ್ಗೆ ಬರೆಯಲೇ ಬೇಕು ಅನ್ನೋದು ಗಟ್ಟಿಯಾಯ್ತು. ಅಲ್ಲಿಂದಲೇ ಈ ಕಥನ ಆರಂಭವಾಗುತ್ತದೆ. ಮಾಂಟ್‌ಗೊಮೆರಿಗೆ ಏಟು ಬಿದ್ದ ಸಂಗತಿಯನ್ನೇ ಎಳೆಯಾಗಿಟ್ಟುಕೊಂಡು ಟ್ರಿಗ್ನಾಮೆಟ್ರಿಕ್‌ ಸರ್ವೆಯ ಕಥೆ ಶುರು ಮಾಡಿದ್ದೇನೆ. 75 ವರ್ಷಗಳಿಗಿಂತ ನಡೆಯುವ ಈ ಸರ್ವೆಯಲ್ಲಿ ಇಡೀ ದೇಶವನ್ನು ಅಳೆಯುತ್ತಾರೆ. ಇದೊಂಥರ ದುರುದ್ದೇಶದಿಂದ ಶುರುವಾದ ಸದುದ್ದೇಶದ ಕೆಲಸ. ಇಡೀ ಭಾರತ ಆಕ್ರಮಿಸಲು ಬೇಕಾಗಿ ಮಾಡಿದ್ದು. ಆದರೆ ಆ ಕೆಲಸದಿಂದ ಆದ ಪ್ರಯೋಜನಗಳನ್ನು ಇಂದೂ ಅನುಭವಿಸುತ್ತಿದ್ದೇವೆ. ಇದನ್ನಿಟ್ಟು ಬರೆಯುತ್ತಾ ಹೋದೆ.

- ಇಂಥಾ ಸರ್ವೆಗಳಲ್ಲಿ ಸ್ಥಳೀಯ ಜ್ಞಾನ ಮುಖ್ಯವಾಗುತ್ತೆ. ಆದರೆ ಅದು ತೆರೆಮರೆಯಲ್ಲೇ ಉಳಿಯುತ್ತೆ. ಈ ಕೃತಿಯಲ್ಲಿ ಅಂಥ ಸಂಗತಿಗಳನ್ನು ಸ್ಪರ್ಶಿಸೋ ಪ್ರಯತ್ನ?

ಒಂದು ಮಟ್ಟಿಗೆ ಸ್ಥಳೀಯರನ್ನು ಕೃತಿಯೊಳಗೆ ತಂದಿದ್ದೇನೆ. ಆದರೆ ಬ್ರಿಟೀಷರು ಒಂದು ದೊಡ್ಡ ತಪ್ಪು ಮಾಡಿದ್ದರು. ಇಂಥಾ ಸರ್ವೆಗಳಿಂದ ಭಾರತೀಯರನ್ನು ಪ್ರಜ್ಞಾಪೂರ್ವಕವಾಗಿ ಹೊರಗಿಟ್ಟಿದ್ದರು. ಕೇವಲ ಕೂಲಿ ಕೆಲಸಕ್ಕೆ ಮಾತ್ರ ಬಳಸಿಕೊಂಡಿದ್ದರು. ಭಾರತೀಯರು ಈ ವಿವರಗಳನ್ನು ಎಲ್ಲಿ ವಿದೇಶಿಯರ ಜೊತೆ ಹಂಚಿಕೊಂಡು ಬಿಡುತ್ತಾರೋ ಅನ್ನೋ ಭಯ ಇದಕ್ಕೆ ಕಾರಣ. ಕೊನೆಗೆ ಅನಿವಾರ್ಯವಾಗಿ ಭಾರತೀಯರನ್ನು ಬಳಸಬೇಕಾಗಿ ಬಂದಿತ್ತು. ನಮ್ಮವರು ಬ್ರಿಟೀಷರು ಊಹಿಸಲಾಗದ ಯಶಸ್ಸನ್ನು ತಂದುಕೊಟ್ಟರು. ಇಷ್ಟಾದರೂ ಬ್ರಿಟಿಷರು ಈ ಸರ್ವೆಯಲ್ಲಿ ತೋರಿರುವ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಅದ್ವಿತೀಯ. ನಮ್ಮ ದೇಶವನ್ನು ಅತ್ಯಂತ ನಿಖರವಾಗಿ ಮಾಡಿದ ಈ ಸರ್ವೆಯ ಮೂಲಕ ನಮಗೆ ದೊಡ್ಡ ಪಾಠ ಕಲಿಸಿಹೋಗಿದ್ದಾರೆ.

- ತಮ್ಮ ಕೃತಿಗಳಲ್ಲಿ ಇತಿಹಾಸದ ವಸ್ತುವನ್ನು ನಿಮ್ಮದಾಗಿಸಿ ಶೋಧನೆಗಿಳಿಯುತ್ತೀರಿ. ಆ ಪ್ರಕ್ರಿಯೆ ಬಗ್ಗೆ ಕುತೂಹಲವಿದೆ..

‘ಪ್ರಮೇಯ’ ಬರೆಯೋ ಮೊದಲು ಟ್ರಿಗ್ನಾಮೆಟ್ರಿಕ್‌ ಸರ್ವೆ ಬಗ್ಗೆ 60ಕ್ಕೂ ಹೆಚ್ಚು ಇಂಗ್ಲೀಷ್‌ ಕೃತಿ ಓದಿದ್ದೆ. ಇದರಿಂದ ಹೊಸ ಜಗತ್ತನ್ನು ಪ್ರವೇಶಿಸಲು ಅವಕಾಶವಾಯಿತು. ಒಂದಿಷ್ಟುಸಂಗತಿಗಳು ನನಗೆ ಹೊಳೆದವು. ಅದನ್ನು ದಾಖಲಿಸುತ್ತ ಹೋದೆ. ಇದು ವೈಜ್ಞಾನಿಕ, ತಾಂತ್ರಿಕ ಇತಿಹಾಸ. ನಮಗೆ ಅವಶ್ಯಕತೆ ಅನಿಸಿತು. ಆಳಿದವರ ಕಥೆ ಹೇಗೋ ತಿಳ್ಕೊಂಡು ಬಿಡ್ತೇವೆ. ಆದರೆ ಈ ಅಳೆಯುವ ಕಥೆ ಬೆಳಕಿಗೆ ಬರಲ್ಲ.

ಗಲಾಟೆ ಸಂಸದರಿಗೆ ಮೋದಿ ಚಾಟಿ: ನಿಯಮ ಉಲ್ಲಂಘಿಸುವ ಸಂಸದರಿಗೆ ಬೆಂಬಲ ಸರಿಯೇ? ವಿಪಕ್ಷಗಳಿಗೆ ಟಾಂಗ್

- ಇತಿಹಾಸದ ವಸ್ತುವನ್ನು ಕಥನಕ್ಕೆ ಆರಿಸಿದಾಗ ಅದಕ್ಕಿರುವ ಬಹು ಮಗ್ಗಲುಗಳನ್ನು ಸ್ಪರ್ಶಿಸೋದಕ್ಕಾಗಲ್ಲ ಅನ್ನೋ ಮಾತಿದೆ. ಇಂಥವನ್ನು ಹೇಗೆ ಟ್ರೀಟ್‌ ಮಾಡ್ತೀವಿ?

ನೋಟಗಳು ಬದಲಾಗುತ್ತವೆ. ಅದು ಬದಲಾಗಬೇಕು. ನನ್ನ ಚೆನ್ನಭೈರಾದೇವಿ ಕೃತಿಯಲ್ಲಿ ಅನೇಕಾಂತ ಅನ್ನುವ ವಿಚಾರ ಬರುತ್ತದೆ. ಸತ್ಯದ ಒಂದು ಮಗ್ಗುಲನ್ನಷ್ಟೇ ನೋಡಿ ಇದು ಸರಿ ಅನ್ನೋದು ಏಕಾಂತವಾದ. ಸತ್ಯವನ್ನು ಹಲವು ಮಗ್ಗುಲುಗಳನ್ನು ಅನೇಕ ವಾದ ಮುಂದಿಟ್ಟು ನೋಡುವುದು ಅನೇಕಾಂತವಾದ. ಇತಿಹಾಸದ ಕಥೆ ಹೇಳುವಾಗ ಈ ಟೆಕ್ನಿಕ್‌ ಬೆಸ್ಟುಅಂತ ನನಗನಿಸೋದು. ಡೆಹ್ರಾಡೂನ್‌ ಸರ್ವೆ ಮಾಡುವವರೆಗೆ ನಮ್ಮವರಿಗೆ ಎವರೆಸ್ಟುಇದೆ ಅನ್ನೋದು ಗೊತ್ತೇ ಇರಲಿಲ್ಲ. ಕಾಣಿಸಲಿಲ್ಲ ಅಂದರೆ ಎವರೆಸ್ಟ್‌ ಇರಲಿಲ್ಲ ಅನ್ನೋದು ಸತ್ಯ ಅಲ್ಲವಲ್ಲ. ಈ ಕಾದಂಬರಿಯಲ್ಲಿ ಇದರಲ್ಲಿ ಬ್ರಿಟಿಷರ ಹುಳುಕುಗಳನ್ನೂ ಹೇಳಿದ್ದೀನಿ, ಒಳ್ಳೆತನವನ್ನೂ ಹೇಳಿದ್ದೀನಿ. ಆದರೂ ಈಗಿನ ಕಾಲಘಟ್ಟದಲ್ಲಿ ನಿಂತು ಒಂದು ಬೆಂಕಿ ಪೊಟ್ಟಣದ ಆವಿಷ್ಕಾರವೂ ಆಗಿರದ ಆ ಕಾಲದ ಕಥೆ ಹೇಳೋದು ಸವಾಲೇ.

- ವಿವಾದವನ್ನು ನೀವು ನೋಡುವ ಬಗೆ ಹೇಗೆ?

ನನ್ನ ಹಾಡಿನ ಒಂದು ಸಾಲಿದೆ. ‘ದಯಾಮರಣ ನೀಡೊ ಗುರುವೆ ನನ್ನೊಳಗಿನ ನನಗೆ/ ನನ್ನ ಗೃಹಿಕೆ ಮಾತ್ರ ಜಗದ ಸತ್ಯ ಎಂಬ ಭ್ರಮೆಗೆ’. ನಿಮ್ಮ ಈ ಪ್ರಶ್ನೆಗೆ ನನ್ನ ಈ ಸಾಲುಗಳೆ ಉತ್ತರ. ಇಬ್ಬರ ನಡುವೆ ಸಂವಾದ ಇದ್ದಾಗ ನಮ್ಮ ಪರ ವಿರೋಧಗಳನ್ನು ನೇರವಾಗಿ ಹೇಳಬಹುದು. ಆದರೆ ಸೋಷಿಯಲ್‌ ಮೀಡಿಯಾ ಮೂಲಕ ನಿಮ್ಮ ವೈಯುಕ್ತಿಕತೆ, ಹುಟ್ಟು, ಲಿಂಗ, ಜಾತಿಗಳನ್ನೆಲ್ಲ ಎಳೆದು ತಂದು ನಿಮ್ಮನ್ನು ವಿರೋಧಿಸುವುದಕ್ಕೆ ಇದು ಕಾರಣ ಅಂತೆಲ್ಲ ಹೇಳೋದು ಅರ್ಥಹೀನ. ಸೋಷಿಯಲ್‌ ಮೀಡಿಯಾದಲ್ಲಿ ಆಗುವ ಜಗಳಕ್ಕೆ ರೆಕಾರ್ಡ್‌ ಇರುತ್ತೆ. ಅದು ಜಗಳವನ್ನು ಮುಂದುವರಿಸುತ್ತೆ. ಈಗ ಅದೇ ಆಗಿರೋದು.

- ಒಂದು ವಯೋಮಾನದವರೆಗೆ ಪ್ರಶಸ್ತಿ ಬಂದಾಗ ಗ್ರಹಿಸೋ ರೀತಿ ಬೇರೆ ಇರುತ್ತೆ. ನೀವು ನಿವೃತ್ತಿಯ ಬಳಿಕ ಬರೆಯಲು ಶುರು ಮಾಡಿದವರು. ನೀವು ಪ್ರಶಸ್ತಿಯನ್ನು ಹೇಗೆ ಸ್ವೀಕರಿಸುತ್ತೀರಿ?

ಖುಷಿ ಆಗುತ್ತೆ. ಆದರೆ ಅದೇ ಮೈಲುಗಲ್ಲ, ಸಾಧನೆಯ ಪ್ರತಿಬಿಂಬ ಅಂತೆಲ್ಲ ನಾನು ಯೋಚಿಸೋದಿಲ್ಲ. ಪ್ರಶಸ್ತಿಯ ಬೆನ್ನು ಹತ್ತುವುದು ಅಸಹ್ಯ ತರಿಸುತ್ತೆ. ಪ್ರಶಸ್ತಿ ಅಹಂಕಾರ ಆಗಬಾರದು.

- ಕೃತಿಯೊಂದು ಯಶಸ್ವಿ ಆಗೋದು ಯಾವಾಗ?

ಕೃತಿ ತನ್ನ ವ್ಯಾಪ್ತಿಯನ್ನು ಮೀರಿ ಜನರನ್ನು ತಲುಪೋದು ಯಶಸ್ಸು. ನನ್ನ ಚೆನ್ನಭೈರಾದೇವಿ ಕೃತಿ ಮಲೆನಾಡಿನ ಪರಿಸರದ ಕಥನ. ಮಲೆನಾಡು, ಕರಾವಳಿಯರಿಗೆ ಹೆಚ್ಚು ಆಪ್ತ ಅನಿಸುತ್ತೆ. ಆದರೆ ಗುಲ್ಬರ್ಗಾದ ಓದುಗರೊಬ್ಬರು ಇದನ್ನು ಓದಿ ಮೆಚ್ಚಿಕೊಂಡಾಗ, ಅಪರಿಚಿತರು ಕೃತಿ ಸ್ವೀಕರಿಸಿದಾಗ ಅದು ಯಶಸ್ಸು.

ರಸ್ತೆ ಬದಿ ಕೂತು 2 ತಾಸು ಪ್ರತಿಭಟಿಸಿದ ರಾಜ್ಯಪಾಲ! ಕಪ್ಪು ಪಟ್ಟಿ ತೋರಿದ SFIಗೆ ತರಾಟೆ ಬೆನ್ನಲ್ಲೇ ಕೇರಳ ಗೌರ್ನರ್‌ಗೆ Z+ ಭದ್ರತೆ

ನಾನು ‘ಇನ್ನಷ್ಟುಬೇಕೆನ್ನ ಹೃದಯಕ್ಕೆ ರಾಮ’ ಹಾಡು ಬರೆದೆನಲ್ಲಾ, ನನಗೆ ಆ ಮಟ್ಟಿನ ಭಕ್ತಿ ಇದೆಯಾ ಅಂದರೆ ಖಂಡಿತಾ ಇಲ್ಲ. ಆದರೆ ಅದನ್ನು ಭಾವಿಸುತ್ತಾರಲ್ಲ ಅವರ ಭಕ್ತಿ ದೊಡ್ಡದು. ಕೆಲ ಸಮಯದ ಹಿಂದೆ ಆದ ಒಂದು ಅನುಭವ. ಗಂಡನನ್ನು ಕಳೆದುಕೊಂಡ ಒಬ್ಬಾಕೆಯ ಮಗನೂ ದುಶ್ಚಟದ ದಾಸನಾಗ್ತಾನೆ. ಆಕೆಗೆ ಬಹಳ ಬೇಸರವಾಗಿ ಆತ್ಮಹತ್ಯೆಯ ಯೋಚನೆಗೆ ಬೀಳುತ್ತಾಳೆ. ಅವಳು ಒಮ್ಮೆ ಒಮ್ಮೆ ದೇವರ ಮನೆಯಲ್ಲಿ ಕೂತು ‘ರಾಮ..’ ಹಾಡು ಕೇಳುತ್ತಿದ್ದಳಂತೆ. ಒಂದು ಹೊತ್ತಲ್ಲಿ ಆಕೆಗನಿಸಿತು, ಇದ್ದು ಮಾಡೋದೇನಿಲ್ಲ ಸರಿ, ಸತ್ತು ಮಾಡೋದೇನಿದೆ? ಸತ್ತ ಮೇಲೆ ಏನಾಗುತ್ತೆ ಅನ್ನೋದೇ ಗೊತ್ತಿಲ್ಲ. ಅದರ ಬದಲು ಕೈಲಾದ ಸೇವೆ ಮಾಡುತ್ತಾ ಇದ್ದು ಬಿಡೋಣ.. ಆಕೆ ಇದನ್ನು ನನಗೆ ಹೇಳಿದಾಗ ಇದು ಈ ಹಾಡಿನ ಯಶಸ್ಸು ಅಂತ ನನಗನಿಸಿತು.

Latest Videos
Follow Us:
Download App:
  • android
  • ios