Asianet Suvarna News Asianet Suvarna News

ರಸ್ತೆ ಬದಿ ಕೂತು 2 ತಾಸು ಪ್ರತಿಭಟಿಸಿದ ರಾಜ್ಯಪಾಲ! ಕಪ್ಪು ಪಟ್ಟಿ ತೋರಿದ SFIಗೆ ತರಾಟೆ ಬೆನ್ನಲ್ಲೇ ಕೇರಳ ಗೌರ್ನರ್‌ಗೆ Z+ ಭದ್ರತೆ

ಎಸ್‌ಎಫ್‌ಐ ಕಾರ್ಯಕರ್ತರು ಕಪ್ಪು ಪಟ್ಟಿ ತೋರಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಸಿಟ್ಟಾದ ಆರೀಫ್‌ ಅವರು, ಕಾರಿನಿಂದ ಇಳಿದು ರಸ್ತೆ ಬದಿ 2 ತಾಸು ಕೂತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಕೇಸ್‌ ದಾಖಲಿಸಲು ತಾಕೀತು ಮಾಡಿ, ಎಫ್‌ಐಆರ್ ಪ್ರತಿಯನ್ನು ತಂದು ತೋರಿಸಿದ ಬಳಿಕವೇ ಅಲ್ಲಿಂದ ಹೊರಟಿದ್ದಾರೆ.

kerala governor given Z+ security after faceoff with student activists ash
Author
First Published Jan 28, 2024, 8:49 AM IST

ಕೊಲ್ಲಂ (ಕೇರಳ) (ಜನವರಿ 28, 2024): ಕೇರಳದ ಎಡರಂಗ ಸರ್ಕಾರ ಹಾಗೂ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ನಡುವಣ ಕಿತ್ತಾಟ ಶನಿವಾರ ಮತ್ತೊಂದು ಮಜಲು ತಲುಪಿದೆ. ಕಾರ್ಯಕ್ರಮವೊಂದಕ್ಕೆ ರಾಜ್ಯಪಾಲರು ತೆರಳುತ್ತಿದ್ದಾಗ ಎಸ್‌ಎಫ್‌ಐ ಕಾರ್ಯಕರ್ತರು ಕಪ್ಪು ಪಟ್ಟಿ ತೋರಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಸಿಟ್ಟಾದ ಆರೀಫ್‌ ಅವರು, ಕಾರಿನಿಂದ ಇಳಿದು ರಸ್ತೆ ಬದಿ 2 ತಾಸು ಕೂತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಕೇಸ್‌ ದಾಖಲಿಸಲು ತಾಕೀತು ಮಾಡಿ, ಎಫ್‌ಐಆರ್ ಪ್ರತಿಯನ್ನು ತಂದು ತೋರಿಸಿದ ಬಳಿಕವೇ ಅಲ್ಲಿಂದ ಹೊರಟಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ರಾಜ್ಯಪಾಲರು ಈ ರೀತಿ ಪ್ರತಿಭಟಿಸಿ ಸಂವಿಧಾನದ ಮೌಲ್ಯ ಹಾಗೂ ಕಾನೂನನ್ನು ಗಾಳಿಗೆ ತೂರುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಈ ಘಟನೆ ಬೆನ್ನಲ್ಲೇ, ಕೇಂದ್ರ ಗೃಹ ಸಚಿವಾಲಯ ಆರೀಫ್‌ ಮೊಹಮ್ಮದ್‌ ಖಾನ್‌ ಅವರಿಗೆ ಝಡ್‌ ಪ್ಲಸ್‌ ಭದ್ರತೆ ನೀಡಿ ಆದೇಶ ಹೊರಡಿಸಿದೆ.

ಕೇರಳ ರಾಜ್ಯಪಾಲರಿಗೆ ಕಪ್ಪುಬಾವುಟ ಪ್ರದರ್ಶಿಸಿದ SFI, ರಸ್ತೆಯಲ್ಲೇ ಧರಣಿ ಕುಳಿತ ಆರೀಫ್ ಮೊಹಮ್ಮದ್!

ಆಗಿದ್ದೇನು?:
ರಾಜ್ಯಪಾಲರು ಕಾರಿನಲ್ಲಿ ತೆರಳುತ್ತಿದ್ದಾಗ ಕೊಟ್ಟರಾಕ್ಕರ ಎಂಬಲ್ಲಿ ಎಸ್‌ಎಫ್‌ಐ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿ ‘ಸಂಘೀ ಕುಲಾಧಿಪತಿಗಳೇ ವಾಪಸ್‌ ಹೋಗಿ’ ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಿದರು. ಇದರಿಂದ ಕೋಪಗೊಂಡ ಗೌರ್ನರ್‌, ಕಾರು ನಿಲ್ಲಿಸಿ, ‘ಬನ್ನಿ ಬನ್ನಿ’ ಎನ್ನುತ್ತಾ ಎಸ್‌ಎಫ್‌ಐ ಪ್ರತಿಭಟನಾಕಾರರತ್ತ ಹೆಜ್ಜೆ ಹಾಕಿದರು. ತಕ್ಷಣವೇ ಪೊಲೀಸರು ಪ್ರತಿಭಟನಾಕಾರರು ಹಾಗೂ ಗೌರ್ನರ್‌ ನಡುವೆ ತಡೆಗೋಡೆಯಾಗಿ ನಿಂತರು. ಪ್ರತಿಭಟನಾಕಾರರನ್ನು ತೆರವುಗೊಳಿಸಿದರು.

ಆದರೂ ಶಮನಗೊಳ್ಳದ ರಾಜ್ಯಪಾಲರು ಪಕ್ಕದ ಅಂಗಡಿಯೊಂದರಿಂದ ಕುರ್ಚಿ ಪಡೆದು ರಸ್ತೆ ಬದಿಯಲ್ಲೇ ಹಾಕಿಕೊಂಡು ಕೂತುಬಿಟ್ಟರು. ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದು ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ನೀವು ಹೊರಡಿ’ ಎಂದು ಪೊಲೀಸರು ಎಷ್ಟೇ ಬೇಡಿಕೊಂಡರೂ ಅವರು ಮಣಿಯಲಿಲ್ಲ. 

ನನ್ನ ಮೇಲೆ ದಾಳಿಗೆ ಸಿಎಂ ಪಿಣರಾಯಿ ಸಂಚು: ಕೇರಳ ರಾಜ್ಯಪಾಲ ಗಂಭೀರ ಆರೋಪ

‘ಪ್ರತಿಭಟನಾಕಾರರಿಗೇ ರಕ್ಷಣೆ ನೀಡುತ್ತಿದ್ದೀರಿ, ನಾನು ಹೋಗುವುದಿಲ್ಲ’ ಎಂದು ತಿರುಗೇಟು ನೀಡಿದರು. 17 ಎಸ್‌ಎಫ್‌ಐ ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪ್ರತಿಯನ್ನು ಪೊಲೀಸರು ತೋರಿಸಿದ ಬಳಿಕವಷ್ಟೇ ರಾಜ್ಯಪಾಲರು ಅಲ್ಲಿಂದ ಹೊರಟರು. ಒಟ್ಟು 2 ತಾಸು ಅವರು ರಸ್ತೆ ಬದಿ ಕುಳಿತಿದ್ದರು.

Follow Us:
Download App:
  • android
  • ios