Asianet Suvarna News Asianet Suvarna News

'ಪ್ರಬಂಧ ಓದಿಯೇ ಬಹುಮಾನ ಕೊಟ್ಟಿದ್ದರು ಸ್ವಾಮೀಜಿ' ಜೋಗಿ ನೆನಪು

ವಿಶ್ವಸಂತ ಪೇಜಾವರ ಸ್ವಾಮೀಜಿ ಅಸ್ತಂಗತ| ಸ್ವಾಮೀಜಿ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಜೋಗಿ| ರಾಜಕಾರಣ-ಧರ್ಮದ ನಡುವಿನ ಬಂಧ ತೆರೆದಿಟ್ಟ ಜೋಗಿ

A Literary Tribute To Udupi Pejawar Shri By Jogi Girish Rao Hatwar
Author
Bengaluru, First Published Dec 30, 2019, 5:30 PM IST
  • Facebook
  • Twitter
  • Whatsapp

ಇಹಪರದ ನಡುವಿನ ಸುವರ್ಣ ಸೇತುವೆಯಂತೆ ಬದುಕಿದವರು ಪೇಜಾವರ ವಿಶ್ವೇಶ ತೀರ್ಥರು. ಅವರು ಮುಳ್ಳುಕಂಟಿಯ ಮೇಲೆ ಬಿದ್ದ ಪೀತಾಂಬರದಂತೆ ಇದ್ದವರು. ಅವರ ಸುತ್ತಲಿನ ಮಂದಿ ಅವರನ್ನು ಅರ್ಥ ಮಾಡಿಕೊಳ್ಳಲಿಲ್ಲ. ಅವರಿಂದ ದೂರವಿದ್ದವರಿಗೂ ಅವರ ಉದಾತ್ತತೆ ಅರ್ಥವಾಗಿರಲಿಲ್ಲ. ಧರ್ಮ ಮತ್ತು ರಾಜಕಾರಣ ಎರಡನ್ನೂ ಎಷ್ಟು ದೂರ ಇಡಬೇಕೋ ಅಷ್ಟು ದೂರ ಇಟ್ಟಿದ್ದ ಪೇಜಾವರರನ್ನು ಅವೆರಡು ಹತ್ತಿರ ಬಿಟ್ಟುಕೊಳ್ಳಲು ಹೆಣಗಾಡುತ್ತಿದ್ದವು. ಅವರು ಧರ್ಮವನ್ನು ಆಚರಿಸಿದರೆ ರಾಜಕಾರಣ ಕೆರಳುತ್ತಿತ್ತು.
ರಾಜಕಾರಣವನ್ನು ಮುಟ್ಟಲು ಹೋದರೆ ಧರ್ಮ ಬುಸುಗುಡುತ್ತಿತ್ತು.

ಹರಿಜನರ ಕೇರಿಗಳಿಗೆ ಭೇಟಿ ಕೊಟ್ಟದ್ದು, ಸಹಪಂಕ್ತಿ ಭೋಜನಕ್ಕೆ ಮುಂದಾದದ್ದು, ಮಾನವೀಯವಾಗಲು ಹವಣಿಸಿದ್ದು, ಮಾತಾಡಿ ಪರಿಹರಿಸಿಕೊಳ್ಳುವ ಔದಾರ್ಯದ ಹಾದಿ ಇಬ್ಬರದ್ದೂ ಆಗಲಿ ಎಂದದ್ದು, ನನ್ನನ್ನು ಮತ್ತೆ ಮತ್ತೆ ನಿಮ್ಮ ದಾರಿಗೆ ಎಳೆಯಬೇಡಿ ಅಂತ ಮನವಿ ಮಾಡಿಕೊಳ್ಳುತ್ತಿದ್ದದ್ದು, ನಾವೆಲ್ಲರೂ ಸೇರಿ ಮತ್ತೊಂದು ಎತ್ತರಕ್ಕೆ ಏರೋಣ, ಮನುಷ್ಯರಾಗೋಣ ಅಂದದ್ದು- ಅನೇಕರಿಗೆ ಕೇಳಿಸಲಿಲ್ಲ.

ಬ್ರಾಹ್ಮಣರಿಂದ ದಲಿತ ಸ್ವಾಮೀಜಿಗೆ ಪಾದಪೂಜೆ ಮಾಡಿಸಿದ್ದ ಸ್ವಾಮೀಜಿ

ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟು, ಮುಷ್ಟಿ ಉಣಿಸು, ಹಿಡಿ ಉಸಿರು, ಗುಟುಕು ನೀರು. ಅದಕ್ಕಿಂತ ಹೆಚ್ಚಿಗೇನನ್ನೂ ಮುಟ್ಟದವರು ಅವರು. ಇವತ್ತು ಬರಿಗೈಯಲ್ಲಿ ಹೊರಟಿರುವ ಹೊತ್ತಲ್ಲಿ ಅವರನ್ನು ಭೇಟಿಯಾದ ಮೂರು ಸಂದರ್ಭಗಳು ನೆನಪಾಗುತ್ತಿವೆ. ನಾನು ಬಿಕಾಂ ಓದುತ್ತಿದ್ದಾಗ ಉಡುಪಿಯ ಸಂಸ್ಥೆಯ ಪ್ರಬಂಧ ಸ್ಪರ್ಧೆ ಬಹುಮಾನ ಗೆದ್ದಿದ್ದೆ. ಅವರು ಪ್ರಬಂಧ ತರಿಸಿಕೊಂಡು ಓದಿಯೇ ಬಹುಮಾನ ವಿತರಣೆಗೆ ಬಂದಿದ್ದರು. ನಾನು ದೇವರ ಹುಚ್ಚು ಕಾದಂಬರಿ ಬರೆದಾಗ ಅದನ್ನು ಓದಿ ಫೋನ್ ಮಾಡಿದ್ದರು. ವರುಷಗಳ ಹಿಂದೆ ರಾಮಕುಂಜದ ಶಾಲೆಯ ಆಡಳಿತ ಅಧಿಕಾರಿಗಳಾದ ರಾಧಾಕೃಷ್ಣರ ಜತೆಗೆ ಹೋದಾಗ ಅವರು ನನ್ನನ್ನು ಮತ್ತೊಮ್ಮೆ ಪರಿಚಯ ಮಾಡಿಕೊಟ್ಟಿದ್ದರು. ಆಗ ಬರೀ ಮುಗುಳು ನಕ್ಕಿದ್ದರು.

ಪೇಜಾವರರ ಕಣ್ಮರೆ ಅನೇಕರ ಪಾಲಿಗೆ ಮಹತ್ವದ ಘಟನೆ ಅನ್ನಿಸಲಿಕ್ಕಿಲ್ಲ. ಅವರನ್ನು ಟೀಕಿಸುವ ಹಂಗಿಸುವ ಅನೇಕ ಮಿತ್ರರು ನನಗಿದ್ದಾರೆ. ಆದರೆ ಅವರೆಲ್ಲರಿಗಿಂತ ಪೇಜಾವರರು ದೂರದಲ್ಲಿದ್ದೇ ಆತ್ಮಬಂಧುವಿನಂತೆ ಇದ್ದರು. ಮಹಾಕವಿಯಂತೆ ಸಂತ ಕೂಡ ಜನರ ಪ್ರೀತಿಗೆ ಮತ್ತು ದ್ವೇಷಕ್ಕೆ ಪಕ್ಕಾಗುತ್ತಾನೆ. ಪ್ರೀತಿ ಮತ್ತು ದ್ವೇಷ ಎರಡೂ ಮಾನವೀಯ ನೆಲೆಯದ್ದಾಗಿದ್ದಾಗ ಆಗಿದ್ದಾಗ ಅರ್ಥ ಪಡೆದುಕೊಳ್ಳುತ್ತವೆ. ಇಲ್ಲದೇ ಹೋದರೆ ಧರ್ಮಕಾರಣವಾಗುತ್ತದೆ.

ನನ್ನಂಥ ನಾಸ್ತಿಕನಿಗೆ ಕೂಡ ಅವರು ದೇವರಿದ್ದರೂ ಇರಬಹುದು ಎಂಬ ಸಣ್ಣ ಭರವಸೆ ಹುಟ್ಟಿಸಬಲ್ಲವರಾಗಿದ್ದರು. ಈಗ ನಿರ್ವಿಣ್ಣನಾಗಿದ್ದೇನೆ. ಅದಕ್ಕೆ ಧರ್ಮವೂ ಕಾರಣವಲ್ಲ, ರಾಜಕಾರಣವೂ ಅಲ್ಲ. ಮನಸು ಕಾರಣ.

ರಾಜಗುರು ಪೇಜಾವರ:

"

ಜೋಗಿ

Follow Us:
Download App:
  • android
  • ios