ಬೆಂಗಳೂರು (ಜ. 04): ಕರ್ನಾಟಕ ಚಿತ್ರಕಲಾ ಪರಿಷತ್ತು ನಡೆಸುವ ಚಿತ್ರಸಂತೆಯನ್ನು ನೋಡಬೇಕು, ಅಲ್ಲಿಗೆ ಹೋಗಿ ಒಂದಷ್ಟು ಕಲಾಕೃತಿಗಳನ್ನು ಕೊಳ್ಳಬೇಕು, ಪ್ರದರ್ಶನಕ್ಕಿಟ್ಟ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಹಂಬಲ ಸಾಕಷ್ಟು ಮಂದಿಗೆ ಇರುತ್ತದೆ. ಇದು ಈಗ ಜ. 5 ರಂದು 17 ನೇ ಚಿತ್ರಸಂತೆಯ ಮೂಲಕ ಈಡೇರುತ್ತಿದೆ. ಹಲವು ಹೊಸತನಗಳು, ಕಲಾವಿದರು ಮತ್ತು ಕಲಾ ರಸಿಕರಿಗೆ ಸೂಕ್ತ ವ್ಯವಸ್ಥೆ, ನಾಡಿನ ರೈತರಿಗೆ ಇಡೀ ಚಿತ್ರಸಂತೆಯ ಅರ್ಪಣೆ... ಹೀಗೆ ವಿಶೇಷತೆಗಳಿಂದ ಕೂಡಿರುವ ಚಿತ್ರ ಸಂತೆಯ ಹೈಲೇಟ್ಸ್ ಇಲ್ಲಿದೆ.

- ಈ ಬಾರಿಯ ಚಿತ್ರಸಂತೆ ರೈತರಿಗೆ ಅರ್ಪಿತ. ಹಾಗಾಗಿ ಇಡೀ ಚಿತ್ರಕಲಾ ಪರಿಷತ್ತಿನ ಆವರಣ ಹಳ್ಳಿಗಾಡಿನ ಸೊಬಗನ್ನು ಮೈತುಂಬಿಕೊಂಡಿದೆ. ಎತ್ತಿನ ಗಾಡಿಯನ್ನೇ ಪ್ರಧಾನ ವೇದಿಕೆ ಮಾಡಿ, ನೇಗಿಲು, ರೈತರು ಉಪಯೋಗಿಸುವ ವಸ್ತುಗಳ ಪ್ರತಿಕೃತಿಗಳನ್ನು ಅಲ್ಲಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿ ರೈತಾಪಿ ಬದುಕಿನ ಅನಾವರಣ ಇಲ್ಲಾಗಲಿದೆ.

- 1400 ಮಂದಿ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟ ಕಾಣುತ್ತಿವೆ. 50 ರು. ನಿಂದ ಪ್ರಾರಂಭವಾಗಿ ಲಕ್ಷ ರುಪಾಯಿ ವರೆಗಿನ ಕಲಾಕೃತಿಗಳು ಇಲ್ಲಿರಲಿವೆ. ನೋಡುಗರಿಗೆ, ಕೊಳ್ಳುವವರಿಗೆ ಇದು ಅಪಾರ ಅವಕಾಶಗಳ ಲೋಕ.

- ರೈತರನ್ನು ಪ್ರಧಾನವಾಗಿ ಇಟ್ಟ ಮೇಲೆ ಅಲ್ಲಿ ಆಹಾರಕ್ಕೆ ಪ್ರಾಧಾನ್ಯತೆ ಇದ್ದೇ ಇರುತ್ತದೆ. ಈ ಬಾರಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆದು ನಾಡಿನ ಎಲ್ಲಾ ಭಾಗಗಳ ಆಹಾರ ಶೈಲಿಗಳು ಇರುವಂತೆ ನೋಡಿಕೊಳ್ಳಲಾಗಿದೆ. ಹಾಗಾಗಿ ಕಣ್ತುಂಬ ಚಿತ್ರದ ಜೊತೆಗೆ ಬಗೆ ಬಗೆಯ ಆಹಾರವೂ ಲಭ್ಯ.

ಚಿತ್ರಸಂತೆ: ಕುಂಚದಿಂದ ಸೌಂದರ್ಯಕ್ಕೆ ಜೀವ ಕೊಟ್ಟ ಕಲಾವಿದರು!

- ಗಾಂಧಿ ಕುಠೀರದಲ್ಲಿ ಗ್ರಾಮ ಸ್ವರಾಜ್ಯ ಎನ್ನುವ ಹೆಸರಿನಲ್ಲಿ ರೈತರು ಬಳಕೆ ಮಾಡುವ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇಲ್ಲಿ ಇಂದು ಬಳಕೆ ತಪ್ಪಿರುವ, ಪ್ರಾಚೀನವಾದ ವಸ್ತುಗಳು ನೋಡಲು ಲಭ್ಯ. ಮಕ್ಕಳಿಗೆ, ಕೃಷಿ ಬದುಕನ್ನು ಹತ್ತಿರದಿಂದ ಕಾಣದೇ ಇದ್ದವರಿಗೆ ಇದು ಕಲಿಕೆಯ ಹೊಸ ಸಾಧ್ಯತೆ.  

- ರುಮಾಲೆ ಚೆನ್ನಬಸವಯ್ಯ ಅವರಿಗೆ ಅರ್ಪಿಸಲಾಗಿರುವ ಬೆಂಗಳೂರು ಲ್ಯಾಂಡ್‌ಸ್ಕೇಪ್ ಬಗೆಗಿನ ಕಲಾಕೃತಿಗಳ ಪ್ರದರ್ಶನವೂ ಇಲ್ಲಿರಲಿದೆ. ವೇಗವಾಗಿ ಬದಲಾಗುತ್ತಿರುವ ಬೆಂಗಳೂರಿನ ಮಾಹಿತಿಯನ್ನು ಕಲೆಯ ಮೂಲಕ ತೋರಿಸಲಾಗಿದೆ.

- 3 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸೇರುವ ಸಾಧ್ಯತೆ ಇರುವುದರಿಂದ ಸೂಕ್ತ ತಯಾರಿ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆವರೆಗೆ ಸಾರ್ವಜನಿಕರಿಗೆ ಪ್ರದರ್ಶನ ಮುಕ್ತ. ಸುತ್ತಲೂ ಸಿಸಿ ಟಿವಿ ಕ್ಯಾಮರಾ, ಸಹಾಯಕ್ಕೆ ೪೦೦ಕ್ಕೂ ಹೆಚ್ಚು ಸ್ವಯಂ ಸೇವಕರು ಇರಲಿದ್ದಾರೆ.

ಜ.5ಕ್ಕೆ ಬೆಂಗಳೂರು ಚಿತ್ರ ಸಂತೆ : ರೈತರಿಗೆ ಸಮರ್ಪಣೆ

-  ಜ. 4 (ಇಂದು) ಚಿತ್ರಕಲಾ ಸಮ್ಮಾನ್ ಎನ್ನುವ ಕಾರ್ಯಕ್ರಮ ಇರಲಿದ್ದು, ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐದು ಮಂದಿಗೆ ವಿವಿಧ ಪ್ರಶಸ್ತಿಗಳ ಪ್ರದಾನ ನಡೆಯಲಿದೆ. ಹಾಗಾಗಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮ.

ಪರಿಷತ್ತಿನ ಆವರಣಕ್ಕೆ ಪ್ರವೇಶ ಪಡೆಯುವಾಗಲೇ ಗುಡಿಸಲಿಗೆ ಹೊಕ್ಕಂತೆ ಅನ್ನಿಸುತ್ತದೆ. ಅಲ್ಲದೇ ಇಡೀ ಆವರಣ ಗ್ರಾಮೀಣ ಬದುಕನ್ನು ತೆರೆದಿಡುತ್ತದೆ. ಒಂದು ದಿನ ಪೂರ್ತಿ ಇಲ್ಲಿ ಆರಾಮವಾಗಿ ಸುತ್ತಾಡಿ ಬರಲು ಅಡ್ಡಿ ಇಲ್ಲ.