ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವಂತೆಯೇ ಹಲವು ಸುದ್ದಿ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳ ಚುನಾವಣಾ ಪೂರ್ವ ಸಮೀಕ್ಷೆಗಳ ಭರಾಟೆ ಜೋರಾಗಿಯೇ ಇದೆ. ಏತನ್ಮಧ್ಯೆ, ಜಾಗತಿಕ ಸುದ್ದಿ ವಾಹಿನಿ ಬಿಬಿಸಿ ಸಹ ಚುನಾವಣಾ ಪೂರ್ವ ಸಮೀಕ್ಷೆಯೊಂದನ್ನು ಮಾಡಿದ್ದು, ದೇಶದ 543 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಎಂದರೂ 323 ಕ್ಷೇತ್ರಗಳು ಹಾಗೂ ಗರಿಷ್ಠ ಎಂದರೆ 380 ಕ್ಷೇತ್ರಗಳು ಬಿಜೆಪಿಗೆ ದಕ್ಕಲಿದೆ ಎಂದು ಭವಿಷ್ಯ ನುಡಿದಿದೆ.

 

ಈ ಕುರಿತಾದ ಅಂಶಗಳು ಫೇಸ್‌ಬುಕ್‌, ವಾಟ್ಸಪ್‌ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಅಮೆರಿಕದ ಸಿಐಎ ಮತ್ತು ಪಾಕಿಸ್ತಾನದ ಐಎಸ್‌ಐ ಬೇಹುಗಾರಿಕೆ ಸಂಸ್ಥೆಗಳು ಸಹ ಈ ಬಾರಿ ಬಿಜೆಪಿ ಭಾರೀ ಬಹುಮತ ಗಳಿಸಲಿದೆ ಎಂದು ಹೇಳಿವೆ ಎಂದು ವರದಿಯಾಗಿದೆ.

ಆದರೆ, ವಾಸ್ತವ ಸಂಗತಿಯೆಂದರೆ, ಬಿಬಿಸಿ ಇಂಥ ಯಾವುದೇ ಸಮೀಕ್ಷೆಯನ್ನೇ ಮಾಡಿಲ್ಲ. ಅಲ್ಲದೆ, ಭಾರತದಲ್ಲಿ ಇಂಥ ಯಾವುದೇ ಸಮೀಕ್ಷೆಗಳನ್ನು ನಾವು ಮಾಡುವುದಿಲ್ಲ ಎಂದು ಬಿಬಿಸಿ ವಾಹಿನಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ ಎಂದು ಆಲ್ಟ್‌ ನ್ಯೂಸ್‌ ವರದಿ ಮಾಡಿದೆ.