ಭೋಪಾಲ್[ಮೇ.26]: ಮಧ್ಯಪ್ರದೇಶದ ಹಳ್ಳಿಗಾಡಿನಲ್ಲಿರುವ ಶಾಲಾ ಮಕ್ಕಳಿಗೆ ಈವರೆಗೆ ವಿದ್ಯುತ್ ಇಲ್ಲದೇ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಇತ್ತು. ಆದರೆ ಲೋಕಸಭಾ ಚುನಾವಣೆಗಾಗಿ ನಿರ್ಮಿಸಿದ ಮತದಾನ ಕೇಂದ್ರಗಳಿಂದಾಗಿ ಶಾಲೆಗಳಿಗೆ ವಿದ್ಯುತ್, ನೀರಿನಂತಹ ಮೂಲಭೂತ ಸೌಕರ್ಯಗಳು ಸಿಕ್ಕಿವೆ. 

ಲಭ್ಯವಾದ ಮಾಹಿತಿ ಅನ್ವಯ ದೂರದೂರುಗಳಲ್ಲಿರುವ 15 ಸಾವಿರ ಪ್ರಾಥಮಿಕ ಪಾಠ ಶಾಲೆಗಳಲ್ಲಿ ಚುನಾವಣೆಯ ಸಂದರ್ಭದಲ್ಲಿ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ. ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಈ ಕುರಿತಾಗಿ ಮಾಹಿತಿ ನೀಡುತ್ತಾ 'ಚುನಾವಣಾ ಮತಗಟ್ಟೆ ಸ್ಥಾಪಿಸಿದ್ದ ಯಾವೆಲ್ಲಾ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲವೋ, ಆ ಎಲ್ಲಾ ಶಾಲೆಗಳಲ್ಲಿ ಇನ್ಮುಂದೆ ವಿದ್ಯುತ್ ಇರಲಿದೆ. ಕೆಲವೊಂದು ಕಾರಣಗಳಿಂದ ಈ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಆದರೆ ಮತದಾನ ಮಾಡುವ ಇವಿಎಂ ಸೇರಿದಂತೆ ಇನ್ನಿತರ ಉಪಕರಣಗಳಿಗೆ ವಿದ್ಯುತ್ ಅತ್ಯಗತ್ಯ. ಹೀಗಾಗಿ ಈ ಸಮಸ್ಯೆ ನಿವಾರಣೆ ಆಗಿದೆ' ಎಂದಿದ್ದಾರೆ.

ವರದಿಯನ್ವಯ ಮಧ್ಯಪ್ರದೇಶದ ಝಾಬುವಾ, ರತ್ಲಾಮ್, ಬೈತೂಲ್ ಹಾಗೂ ಬಿಂಡ್ ಸೇರಿದಂತೆ ಇನ್ನಿತರ ಹಿಂದುಳಿದ ಪ್ರದೇಶಗಳ ಹಳ್ಳಿಗಳಲ್ಲಿ ಕೆಲ ಶಾಲೆಗಳನ್ನು ಇದೇ ಮೊದಲ ಬಾರಿ ಮತದಾನ ಕೇಂದ್ರವನ್ನಾಗಿ ಮಾಡಲಾಗಿತ್ತು. ಹೀಗಿರುವಾಗ ವಿದ್ಯುತ್ ಸಂಪರ್ಕ ಅತ್ಯಗತ್ಯ, ಬೇರೆ ವಿಧಿ ಇಲ್ಲದ ಸರ್ಕಾರ ಶಾಲೆಗಳಿಗೆ ವಿದ್ಯುತ್ ಸಂಪರ್ಕ ಕೊಡಲೇಬೇಕಿತ್ತು. ಇನ್ನು ಬಿಹಾರ ಕೆಲ ಶಾಲೆಗಳಿಗೂ ಇದೇ ರೀತಿ ವಿದ್ಯುತ್ ಸಂಪರ್ಕ ದೊರಕಿದೆ.