ರಾಮಮಂದಿರ ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ರಾಯ್‌ ಡಿಸೆಂಬರ್ 15ಕ್ಕೆ ರಾಮ ವಿಗ್ರಹ ಅಂತಿಮ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ವಿಶೇಷ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದರು.

ಅಯೋಧ್ಯೆ (ಡಿಸೆಂಬರ್ 15, 2023): ಇಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮಮಂದಿರದಲ್ಲಿ ಪ್ರತಿಷ್ಠಾಪನೆಗಾಗಿ ಮೂವರು ಶಿಲ್ಪಿಗಳು ರಾಮನ ವಿಗ್ರಹ ಸಿದ್ಧಪಡಿಸುತ್ತಿದ್ದು, ಈ ಪೈಕಿ ಮುಖ್ಯ ವಿಗ್ರಹ ಯಾವುದಾಗಬಹುದೆಂಬ ಕುರಿತ ಡಿಸೆಂಬರ್ 15ರ ಶುಕ್ರವಾರ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮೂವರು ಶಿಲ್ಪಿಗಳ ಪೈಕಿ ಕರ್ನಾಟಕದ ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಮತ್ತು ಉತ್ತರ ಕನ್ನಡದ ಗಣೇಶ್‌ ಭಟ್‌ ಕೂಡಾ ಸೇರಿದ್ದಾರೆ. ಹೀಗಾಗಿ ಇವರು ಕೆತ್ತಿರುವ ಸುಂದರ ಶಿಲ್ಪ ಆಗಬಹುದೇ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

ಕೆಲ ದಿನಗಳ ಹಿಂದೆ ಈ ಕುರಿತ ಮಾತನಾಡಿದ್ದ ರಾಮಮಂದಿರ ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ರಾಯ್‌ ಡಿಸೆಂಬರ್ 15ಕ್ಕೆ ರಾಮ ವಿಗ್ರಹ ಅಂತಿಮ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ವಿಶೇಷ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದರು. ಮೂರು ವಿಗ್ರಹಗಳ ಪೈಕಿ ಒಂದನ್ನು ಮುಖ್ಯ ವಿಗ್ರಹವಾಗಿ ಉಳಿದ ಎರಡನ್ನು ದೇಗುಲ ಸಂಕೀರ್ಣದ ಇತರ ಕಡೆ ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ.

ರಾಮಲಲ್ಲನ ವಿಗ್ರಹವನ್ನು ಕರ್ನಾಟಕ ಹಾಗೂ ರಾಜಸ್ಥಾನದಿಂದ ತಂದಂತಹ ಶಿಲೆಗಳಲ್ಲಿ ಕೆತ್ತಲಾಗುತ್ತಿದ್ದು, ಕರ್ನಾಟಕದ ಅರುಣ್‌ ಯೋಗಿರಾಜ್‌ ಹಾಗೂ ಗಣೇಶ್‌ ಭಟ್‌ ಸಹ ಒಂದೊಂದು ಶಿಲೆಗೆ ಮೂರ್ತಿ ರೂಪ ಕೊಡುತ್ತಿದ್ದಾರೆ. ಇದರಲ್ಲಿ ಯಾವುದು ಪ್ರತಿಷ್ಠಾಪನೆಗೆ ಆಯ್ಕೆಯಾಗುತ್ತದೆ ಎಂಬುದನ್ನು ಟ್ರಸ್ಟ್‌ನ ಧಾರ್ಮಿಕ ಮಂಡಳಿ ಆಯ್ಕೆ ಮಾಡುತ್ತದೆ ಎಂದು ಚಂಪತ್‌ ರಾಯ್‌ ಹೇಳಿದ್ದಾರೆ.

ಇದನ್ನು ಓದಿ: ರಾಮಮಂದಿರ ಉದ್ಘಾಟನೆಗೆ 250 ಕನ್ನಡಿಗರಿಗೆ ಆಹ್ವಾನ..!

ಅರುಣ್‌ ಯೋಗಿರಾಜ್‌, ಗಣೇಶ್‌ ಭಟ್‌ ಕರ್ನಾಟಕದ ಕಾರ್ಕಳದ ಶಿಲೆಯಲ್ಲಿ ಮೂರ್ತಿ ಕೆತ್ತಿದ್ದರೆ, ರಾಜಸ್ಥಾನದ ಸತ್ಯನಾರಾಯಣ ಪಾಂಡೆ ರಾಜಸ್ಥಾನದ ಬಿಳಿಯ ಶಿಲೆಯಲ್ಲಿ ಮೂರ್ತಿ ಕೆತ್ತಿದ್ದಾರೆ.

7000 ಗಣ್ಯರಿಗೆ ಆಹ್ವಾನ
ರಾಮ ಮಂದಿರ ಉದ್ಘಾಟನೆಗೆ ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ದೇಶದ 7000 ಗಣ್ಯರಿಗೆ ಆಹ್ವಾನಿಸಲಾಗಿದೆ. ಇದರಲ್ಲಿ 4000 ಸಾಧು ಸಂತರಿಗೆ ಆಹ್ವಾನ ನೀಡಲಾಗಿದೆ ಎಂದು ಟ್ರಸ್ಟ್‌ ತಿಳಿಸಿದೆ. 

ಇವರೊಂದಿಗೆ ಉದ್ಯಮಿ ರತನ್ ಟಾಟಾ, ಮುಕೇಶ್‌ ಅಂಬಾನಿ, ಗೌತಮ್‌ ಅದಾನಿ ಸೇರಿದಂತೆ ಅನೇಕ ಉದ್ಯಮಿಗಳು, ಕರಸೇವೆಯಲ್ಲಿ ಬಲಿದಾನ ಮಾಡಿದವರ ಕುಟುಂಬ ಹಾಗೂ ರಾಮಾಯಣ ಧಾರಾವಾಹಿಯಲ್ಲಿ ಪಾತ್ರವಹಿಸಿದ ಅರುಣ್‌ ಗೋವಿಲ್‌ ಹಾಗೂ ದೀಪಿಕಾ ಚಿಕ್ಲಿಯಾ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ಚಂಪತ್‌ ರಾಯ್‌ ತಿಳಿಸಿದರು.

ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ಧಾರ್ಮಿಕ ಸಾಮರಸ್ಯ,ಮುಸ್ಲಿಂ ಶಿಲ್ಪಿಗಳಿಂದ ಅಯೋಧ್ಯೆ ದೇವಸ್ಥಾನಕ್ಕೆ ರಾಮನ ಪ್ರತಿಮೆ