ರಾಮಮಂದಿರ ಉದ್ಘಾಟನೆಗೆ 250 ಕನ್ನಡಿಗರಿಗೆ ಆಹ್ವಾನ..!
ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಆಗಿರುವ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಪ್ರಧಾನ ಅಧ್ವರ್ಯದಲ್ಲಿ 2024ರ ಜನವರಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರ್ನಾಟಕದ ಸ್ವಾಮೀಜಿಗಳ ಸಹಿತ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ.
ಆತ್ಮಭೂಷಣ್
ಮಂಗಳೂರು(ಡಿ.15): ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಲು ದೇಶಾದ್ಯಂತದಿಂದ ಪಾಲ್ಗೊಳ್ಳಲಿರುವ 8 ಸಾವಿರ ಮಂದಿ ಪೈಕಿ ಕರ್ನಾಟಕದಿಂದ 250 ಮಂದಿ ಗಣ್ಯರು ಹಾಗೂ ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗುತ್ತಿದೆ. ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾರ್ಗದರ್ಶನದಲ್ಲಿ ವಿಶ್ವಹಿಂದು ಪರಿಷತ್ ಸಂಘಟನೆ ಆಹ್ವಾನಿಸುವ ಜವಾಬ್ದಾರಿ ವಹಿಸಿಕೊಂಡಿದೆ.
ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಆಗಿರುವ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಪ್ರಧಾನ ಅಧ್ವರ್ಯದಲ್ಲಿ 2024ರ ಜನವರಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರ್ನಾಟಕದ ಸ್ವಾಮೀಜಿಗಳ ಸಹಿತ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಧಾರ್ಮಿಕ ಸಾಮರಸ್ಯ,ಮುಸ್ಲಿಂ ಶಿಲ್ಪಿಗಳಿಂದ ಅಯೋಧ್ಯೆ ದೇವಸ್ಥಾನಕ್ಕೆ ರಾಮನ ಪ್ರತಿಮೆ
ವಿಹಿಂಪ ಮೂಲಗಳ ಪ್ರಕಾರ ಶೃಂಗೇರಿಯ ಶ್ರೀವಿಭುಶೇಖರ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಶ್ರೀನಿರ್ಮಲಾನಂದ ಸ್ವಾಮೀಜಿ, ಸಿದ್ಧಗಂಗಾ, ಸುತ್ತೂರು, ಪುತ್ತಿಗೆ, ಅದಮಾರು, ಶ್ರವಣಬೆಳಗೊಳ, ಮಾದಾರ, ಬೇಲಿಮಠ, ರಂಭಾಪುರಿ, ಸೇರಿದಂತೆ ನಾಡಿನ 50ಕ್ಕೂ ಅಧಿಕ ಮಠಗಳ ಸ್ವಾಮೀಜಿಗಳು, ಆಧ್ಯಾತ್ಮಿಕ ಗುರುಗಳಾದ ರವಿಶಂಕರ ಗುರೂಜಿ, ಇಸ್ಕಾನ್ ಮಧುಪಂಡಿತದಾಸ ಮತ್ತಿತರರನ್ನು ಆಹ್ವಾನಿಸಲಾಗುತ್ತಿದೆ. ಅಲ್ಲದೆ ರಾಜ್ಯಸಭಾ ಸದಸ್ಯರೂ ಆಗಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೂ ಆಹ್ವಾನ ಇರಲಿದೆ. ವಿಶ್ವಹಿಂದು ಪರಿಷತ್‌ನಿಂದ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇವರಲ್ಲದೆ ಸಂಘಪರಿವಾರ ಸಂಘಟನೆಗಳ ಪ್ರಮುಖರಿಗೆ ಆಹ್ವಾನ ನೀಡಲಾಗುತ್ತದೆ.
ಜ.16ರಿಂದ ಪ್ರತಿಷ್ಠಾನ ಪೂರ್ವ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಆರು ದಿನಗಳ ಕಾಲ ಹೋಮ, ಹವನಗಳು ನಡೆಯಲಿದ್ದು, 22ರಂದು ಪೂರ್ಣಾಹುತಿ ನೆರವೇರಲಿದೆ. ಈ ಕಾರ್ಯಕ್ರಮಗಳಲ್ಲಿ ಕರಾವಳಿಯ ಮಂದಿಗೂ ಪಾಲ್ಗೊಳ್ಳುವ ಅವಕಾಶ ಇದೆ. ಹೋಮ, ಹವನಗಳಲ್ಲಿ ಕರ್ತೃಗಳಾಗಿ ಪಾಲ್ಗೊಳ್ಳುವ ದಂಪತಿಗಳನ್ನು ಇನ್ನಷ್ಟೆ ಅಂತಿಮಗೊಳಿಸಬೇಕಾಗಿದೆ.
ಡೇರೆಯಲ್ಲಿ ವಾಸ್ತವ್ಯ:
ಸ್ವಾಮೀಜಿ ಹಾಗೂ ಗಣ್ಯರಿಗೆ ಅಯೋಧ್ಯೆ ಸುತ್ತಮುತ್ತ ಪರಿಸರದಲ್ಲಿ ವಿಶಾಲ ಜಾಗದಲ್ಲಿ ಕುಂಭ ಮೇಳ ಮಾದರಿಯಲ್ಲಿ ಡೇರೆ ನಿರ್ಮಿಸಲಾಗುತ್ತಿದ್ದು, ಅದರಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಗಣ್ಯರು ತಂಗುವ ಡೇರೆಗಳಿಗೆ ಬಿಗು ಭದ್ರತೆ ವ್ಯವಸ್ಥೆ ಮಾಡಲಾಗುತ್ತದೆ. ಕರ್ನಾಟಕದ ಗಣ್ಯರಿಗೆ ಕರ್ನಾಟಕದ ಸ್ವಯಂ ಸೇವಕರೇ ಆತಿಥ್ಯದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಜ.22ರಂದು ಬೆಳಗ್ಗೆ ಅಭಿಜಿತ್ ಲಗ್ನದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದ್ದು, ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಎರಡು ಗಂಟೆ ಅವಧಿಯ ಸಭಾ ಕಾರ್ಯಕ್ರಮ ನಡೆಯಲಿದೆ. ಇವೆಲ್ಲ ಕಾರ್ಯಕ್ರಮಗಳಲ್ಲಿ ಆಯ್ದ 8 ಸಾವಿರ ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಉಳಿದ ಮಂದಿ ಮಾ.22ರ ವರೆಗೆ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ದೇಶದ ಎಲ್ಲ ರಾಜ್ಯಗಳ ಕರಸೇವಕರಿಗೆ ಬ್ರಹ್ಮಕಲಶೋತ್ಸವ ಸಡಗರದಲ್ಲಿ ಭಾಗವಹಿಸಲು ಅನುಕೂಲವಾಗಲು ಪ್ರತ್ಯೇಕ ದಿನಾಂಕಗಳನ್ನು ನಿಗದಿಪಡಿಸಲಾಗುತ್ತಿದೆ. ಕರ್ನಾಟಕ ಮಂದಿಗೆ ಫೆ.19ರಂದು ಅಯೋಧ್ಯೆ ರಾಮನ ದರ್ಶನ ಭೇಟಿಗೆ ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ. ಅಂದು 3 ಸಾವಿರ ಮಂದಿಗೆ ಕರಸೇವಕರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.
ಮುಂಡರಗಿಯ ಯುವ ಶಿಲ್ಪಿಗೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಹ್ವಾನ
ಮೂರು ಸ್ತರದ ಮಂದಿರ:
ಅಯೋಧ್ಯೆ ಶ್ರೀರಾಮನ ಮಂದಿರ ಮೂರು ಸ್ತರದಲ್ಲಿ ಭಕ್ತರ ಕಣ್ಮನ ಸೆಳೆಯಲಿದೆ. ಮೊದಲ ಅಂತಸ್ತಿನಲ್ಲಿ ಶ್ರೀರಾಮ ಲಲ್ಲಾನ ಮೂರ್ತಿ, ಇಲ್ಲೇ ಮುಖ್ಯ ಮೂರ್ತಿ ಹಾಗೂ ಬಾಲಾಲಯ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಎರಡನೇ ಮಹಡಿಯಲ್ಲಿ ರಾಮ, ಲಕ್ಷ್ಮಣ, ಹನುಮಾನ್ ಮೂರ್ತಿ ಇರಲಿದೆ. ಮೂರನೇ ಅಂತಸ್ತಿನಲ್ಲಿ ರಾಮ ದರ್ಬಾರ್ ಇರಲಿದೆ. ಲಭ್ಯ ಮಾಹಿತಿ ಪ್ರಕಾರ, ಮೂರು ಶಿಲೆಗಳ ಪೈಕಿ ಕರ್ನಾಟಕ ಕರಾವಳಿಯ ಶಿಲೆಯಿಂದ ಮೈತಳೆದ ಶ್ರೀರಾಮ ಮೂರ್ತಿ ಅಂತಿಮಗೊಳ್ಳುವ ಸಾಧ್ಯತೆಯನ್ನು ಹೇಳಲಾಗಿದೆ.
ಶ್ರೀರಾಮನಿಗೆ 3 ಹೊತ್ತು ಮಂಗಳಾರತಿ
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿದಿನ ಮೂರು ಹೊತ್ತು ಮಂಗಳಾರತಿ ಮಹಾಪೂಜೆ ನೆರವೇರಲಿದೆ. ಬೆಳಗ್ಗೆ 7 ಗಂಟೆಗೆ ಮಂಗಳಾರತಿ, ರಾತ್ರಿ 7.15ಕ್ಕೆ ಸಂಧ್ಯಾರತಿ ಹಾಗೂ ರಾತ್ರಿ 8.30ಕ್ಕೆ ಶಯನಾರತಿ ನಡೆಯಲಿದೆ. ಈ ಮೂರು ಮಹಾಪೂಜೆ ಅಲ್ಲದೆ, ಶ್ರೀರಾಮನಿಗೆ ಆರತಿಗೆ ಅವಕಾಶ ಇದೆ. ಇದನ್ನು ಹೊರತುಪಡಿಸಿದರೆ, ಬೇರೆ ಯಾವುದೇ ಸೇವೆ ಇರುವುದಿಲ್ಲ. ಶ್ರೀರಾಮನ ದರ್ಶನ ಪಡೆದ ಪ್ರತಿಯೊಬ್ಬರಿಗೂ ನೈವೇದ್ಯ ಪ್ರಸಾದ ವಿತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.