ಯೋಗದಲ್ಲಿ ವಿಶ್ವ ದಾಖಲೆ ಮಾಡಿದ ಕೊಡಗಿನ ಕುವರ

World Record in Yoga By Kodagu Boy
Highlights

ರಾಘವೇಂದ್ರ ಪೈ ಅವರ ಮಾರ್ಗದರ್ಶನದ  ಮೇರೆಗೆ ವಿಯೆಟ್ನಾಂನಲ್ಲಿನ ಯೋಗ ಸಂಸ್ಥೆಯೊಂದರಲ್ಲಿ ಒಂದು ತಿಂಗಳು ಕೆಲಸ ಮಾಡಿದ್ದ ಸಂತೋಷ್ ಅವರು ನಂತರ ಅಲ್ಲಿಯೇ ಸ್ಥಳೀಯರ ಪ್ರೋತ್ಸಾಹದಿಂದ ‘ಓಂ ಯೋಗ ಮತ್ತು ವೆಲ್ನೆಸ್ ಹಬ್’ ಸಂಸ್ಥೆಯನ್ನು ಆರಂಭಿಸಿ, ಈಗ ಐದು ಶಾಖೆಗಳ ಮೂಲಕ ಉತ್ತರ ಕನ್ನಡ, ಕೊಡಗಿನ ೧೨ ಮಂದಿ ಹಾಗೂ ವಿಯೆಟ್ನಾನ ಸ್ಥಳೀಯರನ್ನು ಸೇರಿಸಿಕೊಂಡು ಸಂಸ್ಥೆ ನಡೆಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಸ್ವತಃ ವಿಯೆಟ್ನಾಂನ  ಪ್ರಧಾನಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷ.

ಆಕಸ್ಮಿಕವಾಗಿ ಆದ ಅಪಘಾತ ವ್ಯಕ್ತಿಯನ್ನು ವಿಶ್ವದಾಖಲೆಯ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದರೆ ನೀವು ನಂಬಲೇಬೇಕು. ಯಾಕೆಂದರೆ ಅದಕ್ಕೆ ಜೀವಂತ ಉದಾಹರಣೆಯಾಗಿ ಕೊಡಗಿನ ಸಂತೋಷ್ ಚೆರಿಯಮನೆ ಇದ್ದಾರೆ.

ಕಂಪನಿಯೊಂದರಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷ್  ಒಂದು ದಿನ ಎತ್ತರದಿಂದ ಬಿದ್ದರು. ಇದರಿಂದ ಬಲಗೈ ತೀವ್ರ ಗಾಯವಾಯಿತು. ಅದಕ್ಕಾಗಿ ಚಿಕಿತ್ಸೆ ಪಡೆಯುವಾಗ, ಕೆಲವರು ಬೇಗ ಗುಣವಾಗಲು ಯೋಗ  ಮಾಡಬೇಕೆಂದು ಸಲಹೆ ನೀಡಿದ್ದರಿಂದ ಜೊತೆಗೆ ತಮಗೂ ಯೋಗದ ಬಗ್ಗೆ ಸ್ವಲ್ಪ  ತಿಳಿದಿದ್ದರಿಂದ ಮೈಸೂರಿನ ವೇದ ಗುರು ರಾಘವೇಂದ್ರ ಪೈ ಬಳಿ ಯೋಗಾಭ್ಯಾಸ ಕಲಿತರು. ಕಲಿಯುತ್ತಾ ಕಲಿಯುತ್ತಾ ಆಸಕ್ತಿ ಹೆಚ್ಚಾಗಿ ಯೋಗದಲ್ಲೇ ಸಾಧನೆ ಮಾಡಬೇಕೆಂಬ ಕನಸು ಕಂಡು ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸವನ್ನು ತೊರೆದು ಯೋಗ ಶಿಕ್ಷಕರಾಗಲು ಮುಂದಾದರು.

ವಿಯೆಟ್ನಾಂ ಪ್ರಧಾನಿಯಿಂದ ಮೆಚ್ಚುಗೆ: ರಾಘವೇಂದ್ರ ಪೈ ಅವರ ಮಾರ್ಗದರ್ಶನದ ಮೇರೆಗೆ ವಿಯೆಟ್ನಾಂನಲ್ಲಿನ ಯೋಗ ಸಂಸ್ಥೆಯೊಂದರಲ್ಲಿ ಒಂದು ತಿಂಗಳು ಕೆಲಸ ಮಾಡಿದ್ದ ಸಂತೋಷ್ ಅವರು ನಂತರ ಅಲ್ಲಿಯೇ ಸ್ಥಳೀಯರ ಪ್ರೋತ್ಸಾಹದಿಂದ ‘ಓಂ ಯೋಗ ಮತ್ತು ವೆಲ್ನೆಸ್ ಹಬ್’ ಸಂಸ್ಥೆಯನ್ನು ಆರಂಭಿಸಿ, ಈಗ ಐದು ಶಾಖೆಗಳ ಮೂಲಕ ಉತ್ತರ ಕನ್ನಡ, ಕೊಡಗಿನ 12 ಮಂದಿ ಹಾಗೂ ವಿಯೆಟ್ನಾನ ಸ್ಥಳೀಯರನ್ನು ಸೇರಿಸಿಕೊಂಡು ಸಂಸ್ಥೆ ನಡೆಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಸ್ವತಃ ವಿಯೆಟ್ನಾಂನ ಪ್ರಧಾನಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷ.

ಯೋಗದಲ್ಲಿ ವಿಶ್ವದಾಖಲೆ ಕೀರ್ತಿ:

2017 ರಲ್ಲಿ ವಿಯೆಟ್ನಾಂನಲ್ಲಿ ಸುಮಾರು 7,777 ಆವರ್ತ ಸೂರ್ಯ ನಮಸ್ಕಾರಗಳನ್ನು ಮಾಡುವ ಮೂಲಕ ಸಂತೋಷ್ ವಿಶ್ವ ದಾಖಲೆ ಮಾಡಿದ್ದಾರೆ. ಪ್ರತಿ ಆವರ್ತದಲ್ಲಿ ೧೦ ಯೋಗಾಸನದಂತೆ ಒಟ್ಟು 77,770 ಆಸನಗಳನ್ನು ನಿರಂತರವಾಗಿ 60 ಗಂಟೆ 6 ನಿಮಿಷ, 6 ಸೆಕೆಂಡ್ ಮಾಡುವ ಮೂಲಕ ದಾಖಲೆ ನಿರ್ಮಿಸಿ ಈ ಹಿಂದೆ ಭಾರತದ ಯೋಗರಾಜ್ ಸತತ 40 ಗಂಟೆ 15 ನಿಮಿಷಗಳ ಯೋಗಾಸನದ ದಾಖಲೆ, ನೇಪಾಳದ ಯೋಗ ಶಿಕ್ಷಕ ಉತ್ತಮ್ ಯೋಗಿ ಅವರ 50 ಗಂಟೆ 15 ನಿಮಿಷಗಳ ಕಾಲ ಯೋಗ ದಾಖಲೆಯನ್ನು ಮುರಿದಿದ್ದರು. ಅಲ್ಲದೇ 24 ಗಂಟೆಯಲ್ಲಿ 80 ವಿದ್ಯಾರ್ಥಿಗಳೊಂದಿಗೆ ವೇಗವಾಗಿ ಸೂರ್ಯ ನಮಸ್ಕಾರ ಮಾಡಿ ವಿಯೆಟ್ನಾಂನ ದಾಖಲೆ ಪುಸ್ತಕ ಸೇರಿದ್ದಾರೆ.

ಇದಕ್ಕಾಗಿ ವಿಯೆಟ್ನಾಂ ಸರಕಾರ ಗೋಲ್ಡನ್ ಬ್ರಾಂಡ್ ಇನ್ ವಿಯೆಟ್ನಾಂ ಪ್ರಶಸ್ತಿ ನೀಡಿ ಗೌರವಿಸಿದೆ. ‘ಯೋಗದ ಅವಶ್ಯಕತೆ ಹಾಗೂ ಇದರಿಂದ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ಜನರಿಗೆ ಇನ್ನಷ್ಟು ಅರಿವು ಮೂಡಿಸಬೇಕಿದೆ. ಹಲವಾರು ಮಂದಿ ಯೋಗದಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂದುಕೊಂಡಿದ್ದಾರೆ. ಇಲ್ಲಿ ಸಾಧನೆ, ಆರೋಗ್ಯ, ಹಣ ಎಲ್ಲವೂ ಸಿಕ್ಕುತ್ತದೆ. ನನ್ನ ಆಸೆ ಎಲ್ಲರೂ ಯೋಗ ಮಾಡಿ ಆರೋಗ್ಯವಂತರಾಗಬೇಕು ಎನ್ನುವುದು’ ಎನ್ನುತ್ತಾರೆ ಡಾ. ಸಂತೋಷ್ ಚೆರಿಯಮನೆ. 

loader